ಸಾಮಾನ್ಯವಾಗಿ ಸೆಲೆಬ್ರೆಟಿಗಳ ಮೊದಲ, ಇಪ್ಪತ್ತೈದನೆಯ, ಐವತ್ತನೆಯ, ನೂರನೇ ಸಿನಿಮಾ ಬಹಳಷ್ಟು ವಿಶೇಷತೆಯಿಂದ ಕೂಡಿರುತ್ತದೆ. ಅಲ್ಲದೇ ವೃತ್ತಿಜೀವನದಲ್ಲಿ ಅವೆಲ್ಲವೂ ಮಹತ್ವದ ಘಟ್ಟವೂ ಹೌದು. ಸದ್ಯ ಹರಿಪ್ರಿಯಾ ಕೂಡ ಅದೇ ದಾರಿಯಲ್ಲಿದ್ದು, ತನ್ನ 25ನೇ ಸಿನಿಮಾ ಡಾಟರ್ ಆಫ್ ಪಾರ್ವತಮ್ಮ ಸಿನಿಮಾದ ಬಿಡುಗಡೆಗಾಗಿ ಕಾಯುತ್ತಿದ್ದಾರೆ. ಪಾರ್ವತಮ್ಮ ಒಂದು ರೀತಿಯ ಕೌತುಕತೆಯನ್ನು ಹುಟ್ಟಿಸುವ ಕಥೆಯಾಗಿದ್ದು, ಪಾರ್ವತಮ್ಮನಾಗಿ ಸುಮಲತಾ ಹಾಗೂ ಮಗಳು ವೈದೇಹಿಯಾಗಿ ಹರಿಪ್ರಿಯ ಅಭಿನಯಿಸಿದ್ದಾರೆ. ಇನ್ನು ಸಿನಿಮಾದಲ್ಲಿ ಹರಿಪ್ರಿಯಾ ಅವರಿಗೆ ನಿರ್ದೇಶಕ ರಿಷಬ್ ಶೆಟ್ಟಿ ಅವರ ಪತ್ನಿ ಪ್ರಗತಿ ಶೆಟ್ಟಿ ಉಡುಗೆ ವಿನ್ಯಾಸವನ್ನು ಮಾಡಿರುವುದು ವಿಶೇಷವಾಗಿದೆ. ತಾರಾಂಗಣದಲ್ಲಿ ಸೂರಜ್ ಗೌಡ, ಪ್ರಭು, ತರಂಗ ವಿಶ್ವ, ಅಭಿನಯಿಸಿದ್ದಾರೆ. ತಾಯಿ ಮತ್ತು ಮಗಳ ನಡುವಿನ ಬಾಂಡಿಂಗ್, ಸಂಬಂಧಗಳ ಸೆಳೆತ ಮಿಳಿತಗಳ ವಿಚಾರಗಳನ್ನಿಟ್ಟುಕೊಂಡು ಜೆ ಶಂಕರ್ ಪಾರ್ವತಮ್ಮನನ್ನು ರೂಪಿಸಿದ್ದಾರೆ. ಈ ಹಿಂದೆ ಸುಮಲತಾ ತಾಯಿ ಮತ್ತು ಮಗನ ನಡುವಿನ ಸಂಬಂಧವವನ್ನು ಸಾರುವ ತಾಯಿಗೆ ತಕ್ಕ ಮಗ ಸಿನಿಮಾದಲ್ಲಿ ನಟಿಸಿ ಸೈ ಎನ್ನಿಸಿಕೊಂಡಿದ್ದರು.
ಇನ್ನು ಪಾರ್ವತಮ್ಮನಿಗೆ ಡಾಲಿ ಧನಂಜಯ್ ಜೀವಕ್ಕಿಂತ ಜೀವ ಎನ್ನುವ ಸಾಲಿನ ಗೀತೆಯನ್ನು ರಚಿಸಿದ್ದಾರೆ. ಕಿರಣ್ ಕಾವೇರಪ್ಪ ನೀಲಿ ಬಾನಲಿ ಎಂಬ ಹಾಡನ್ನು ಬರೆದಿದ್ದಾರೆ. ಮಿದುನ್ ಮುಕುಂದನ್ ಚಿತ್ರಕ್ಕೆ ಸಂಗೀತ ಸಂಯೋಜನೆಯನ್ನು ಮಾಡಿದ್ದಾರೆ. ದಿಶಾ ಎಂಟರ್ ಟೈನ್ ಮೆಂಟ್ ಅಡಿಯಲ್ಲಿ ಕೆ.ಎಂ. ಶಶಿಧರ್, ಎಂ. ವಿಜಯಲಕ್ಷ್ಮೀ, ಸಂದೀಪ್ ಶಿವಮೊಗ್ಗ, ಶ್ವೇತಾ ಮಧುಸೂದನ್, ಕೃಷ್ಣೇಗೌಡ ಸೇರಿ ಪಾರ್ವತಮ್ಮನಿಗೆ ಬಂಡವಾಳ ಹೂಡಿದ್ದಾರೆ. ಕೆ ಅರುಳ್ ಸೋಮ ಸುಂದರನ್ ಛಾಯಾಗ್ರಹಣ, ಸುರೇಶ್ ಅರ್ಮುಗಮ್ ಸಂಕಲನ ಈ ಚಿತ್ರಕ್ಕಿದೆ.
Comments