ರಾಜೇಶ್ಮೂರ್ತಿ ಅವರ ನಿರ್ದೇಶನದ ಬಹುತೇಕ ಚಿತ್ರಗಳಲ್ಲಿ ಬಾಲಿವುಡ್ ಖ್ಯಾತ ನಿರ್ದೇಶಕ ಮಹೇಶ್ಭಟ್ ರವರ ಸಿನಿಮಾಗಳ ಛಾಯೆ ಎದ್ದು ಕಾಣುತ್ತದೆ. ಈ ವಿಷಯವನ್ನು ಅವರೂ ಕೂಡ ಒಪ್ಪಿಕೊಳ್ಳುತ್ತಾರೆ. ನಾನು ಎರೋಟಿಕ್ ಥ್ರಿಲ್ಲರ್ ಜಾನರ್ ಸಿನಿಮಾಗಳನ್ನು ನಿರ್ದೇಶಿಸಲು ನನಗೆ ಮಹೇಶ್ಭಟ್ ಅವರೇ ಸ್ಪೂರ್ತಿ. ಅವರು ೮೦ರ ದಶಕದಲ್ಲೇ ಆರ್ಟಿಸ್ಟಿಕ್ ಹಾಗೂ ಕಲರ್ಫುಲ್ ಆಗಿ ಚಿತ್ರಗಳನ್ನು ತೆರೆಯ ಮೇಲೆ ಮೂಡಿಸಿದ್ದರು.
ಅವರ ಮರ್ಡರ್ ಚಿತ್ರದ ಮೂಲಕ ನಟಿ ಮಲ್ಲಿಕಾಶೆರಾವತ್ ಜಿಸಂ ಮೂಲಕ ಬಿಪಾಷಾ ಬಸು, ಅಲ್ಲದೆ ಜಿಸಂ-೨ ಮೂಲಕ ಸನ್ನಿಲಿಯೋನ್ರನ್ನು ಬೆಳಕಿಗೆ ತಂದಿದ್ದರು. ಅವರೆಲ್ಲಾ ಸ್ಟಾರ್ ನಟಿಯರಾಗಿ ಗುರುತಿಸಿಕೊಂಡಿದ್ದು ಮಹೇಶ್ಭಟ್ ಸಿನಿಮಾಗಳ ಮೂಲಕವೇ. ಗ್ಲಾಮರ್ ಇಟ್ಟುಕೊಂಡು ಕಥೆ ಹೇಳುವ ಅವರ ಶೈಲಿಯೇ ನನಗೆ ಕನ್ನಡದಲ್ಲೂ ಏಕೆ ಇಂತಹ ಪ್ರಯತ್ನ ಮಾಡಬಾರದು ಎನಿಸಿತು. ಅಂತಹ ಪ್ರಯೋಗದಲ್ಲಿ ಮೂಡಿಬಂದ ಚಿತ್ರಗಳೇ ರೆಡ್, ಬ್ಲೂ ಐಸ್ ಆ ಚಿತ್ರಗಳನ್ನು ಬಹುತೇಕ ಪ್ರೇಕ್ಷಕರು ಮೆಚ್ಚಿಕೊಂಡರು. ಈಗಾಗಲೇ ಸುರೇಶ್ ಹುಬ್ಳೀಕರ್ ಅವರ ಕಾಡಿನ ಬೆಂಕಿ, ಕಾಶಿನಾಥ್ ಅವರ ಅನಂತನ ಅವಾಂತರದಂತ ಸಿನಿಮಾಗಳು ಯಾವ ಮಟ್ಟದ ಯಶಸ್ಸು ತಂದುಕೊಟ್ಟವೆಂದು ನಿಮಗೆಲ್ಲಾ ಗೊತ್ತೇ ಇದೆ.
ಅದೇ ನಿಟ್ಟಿನಲ್ಲಿ ಈಗ ಡೆಡ್ಲಿ ಅಫೇರ್ ಎಂಬ ಚಿತ್ರವನ್ನು ಮಾಡಿದ್ದೇನೆ. ವಿವಾಹೇತರ ಸಂಬಂಧಗಳ ಕುರಿತು ಕೆಡುಕುಗಳನ್ನು ಈ ಚಿತ್ರದ ಮೂಲಕ ಹೇಳಲು ಪ್ರಯತ್ನಿಸಿದ್ದೇನೆ ಎಂದು ಹೇಳಿದ್ದಾರೆ. ಗಂಡಸರ ಒಳ್ಳೆಯತನವನ್ನು ಈಗಿನ ಹುಡುಗಿಯರು ಹೇಗೆ ದುರುಪಯೋಗ ಮಾಡಿಕೊಳ್ಳುತ್ತಾರೆ ಎನ್ನುವುದು ಈ ಚಿತ್ರದಲ್ಲಿದೆ. ಚಿತ್ರಕ್ಕೆ ಈಗಾಗಲೇ ಸೆನ್ಸಾರ್ ಮುಗಿದಿದ್ದು, ಮುಂದಿನ ತಿಂಗಳಲ್ಲಿ ಬಿಡುಗಡೆ ಮಾಡುವುದಾಗಿ ತಿಳಿಸಿದ್ದಾರೆ. ರಾಜೇಶ್ ಮೂರ್ತಿಯವರೇ ಕಥೆ-ಚಿತ್ರಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರದಲ್ಲಿ ಗುಂಜನ್ ಅರಸ್ ನಾಯಕಿಯಾಗಿ ಸ್ವಪನ್ ಕೃಷ್ಣ ನಾಯಕನಾಗಿ ಅಭಿನಯಿಸಿದ್ದು, ರಾಹುಲ್ ಸೋಮಣ್ಣ, ಮಾಸ್ಟರ್ ಮಿಶ್ರುತ ಇನ್ನು ಮುಂತಾದವರು ತಾರಾಬಳಗದಲ್ಲಿದ್ದಾರೆ.