ಕೆಲವೇ ವರ್ಷಗಳ ಹಿಂದೆ ಓದುವ ಕಾರಣಕ್ಕೆ ದೂರದ ಶಿರಸಿಯಿಂದ ಬೆಂಗಳೂರು ಸೇರಿದವರು ದೀಪಕ್ ಗಂಗಾಧರ್. ಎಂಬಿಎ ಓದು ಮುಗಿಸಿದ ತಕ್ಷಣ ಬೇರೆ ಯಾರೇ ಆದರೂ ತಾವು ಕಲಿತ ಕೋರ್ಸಿಗೆ ತಕ್ಕಂತಾ ಕೆಲಸ ಹುಡುಕಿಕೊಳ್ಳುತ್ತಿದ್ದರು. ಎಷ್ಟು ಸಂಬಳ ಬರುತ್ತದೆ? ಎಷ್ಟು ಬೇಗ ಬದುಕು ಕಟ್ಟಿಕೊಳ್ಳಬಹುದು? ಅಂತೆಲ್ಲಾ ಲೆಕ್ಕಾ ಹಾಕುತ್ತಿದ್ದರು. ದೀಪಕ್ ಹಾಗೆ ಮಾಡಲಿಲ್ಲ. ಅಷ್ಟರಲ್ಲಾಗಲೇ ದೀಪಕ್ ತಲೆಯಲ್ಲಿ ಸಿನಿಮಾದ ಬಣ್ಣಗಳು ತುಂಬಿಕೊಂಡಿದ್ದವು. ಚಿತ್ರರಂಗದಲ್ಲಿ ಏನಾದರೂ ಸಾಧಿಸಲೇಬೇಕು ಎನ್ನುವ ತೀವ್ರತೆ ಹೆಚ್ಚಾಗಿತ್ತು.
ಈ ಕಾರಣದಿಂದ ಸಹಾಯಕ ನಿರ್ದೇಶಕನಾಗಿ ಸಿನಿಮಾ ಬೀದಿಗೆ ಕಾಲಿಟ್ಟ ದೀಪಕ್ ಎಂ.ಡಿ. ಶ್ರೀಧರ್ ಮತ್ತು ಕವಿರಾಜ್ ಮುಂತಾದವರೊಂದಿಗೆ ಸಹ ನಿರ್ದೇಶಕರಾಗಿ ಕೆಲಸ ಮಾಡಿದರು. ಅಷ್ಟರಲ್ಲಾಗಲೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ ಡಿಸ್ಟ್ರಿಬ್ಯೂಟರ್ ಸಂಸ್ಥೆಯ ವಿತರಣಾ ಕಾರ್ಯದ ಪೂರ್ತಿ ಜವಾಬ್ದಾರಿ ವಹಿಸಿದ್ದರು. ಅದನ್ನು ಯಶಸ್ವಿಯಾಗಿ ನಿಭಾಯಿಸಿದ ದೀಪಕ್, ನಂತರ ತಮ್ಮದೇ ದೀಪಕ್ ಗಂಗಾಧರ್ ಮೂವೀಸ್ ಅನ್ನು ಆರಂಭಿಸಿ ಸಾಕಷ್ಟು ಸಿನಿಮಾಗಳನ್ನು ವಿತರಣೆ ಮಾಡಿದರು. ವಿತರಕರಾಗಿ ಯಜಮಾನ, ಅಮರ್, ಸೈರಾ ನರಸಿಂಹ ರೆಡ್ಡಿ, ಕಾಳಿದಾಸ ಕನ್ನಡ ಮೇಸ್ಟ್ರು, ನನ್ನ ಪ್ರಕಾರ ಸೇರಿದಂತೆ ನೂರಕ್ಕೂ ಹೆಚ್ಚು ಚಲನಚಿತ್ರಗಳನ್ನು ದೀಪಕ್ ಈವರೆಗೆ ವಿತರಣೆ ಮಾಡಿದ್ದಾರೆ. ಬರಹಗಾರರಾಗಿ, ಚಿತ್ರಸಾಹಿತಿ ಯಾಗಿ ಜೊತೆಗೆ ಸಹ ನಿರ್ಮಾಪಕರಾಗಿ ನವೋದಯ ಡೇಸ್ ಚಿತ್ರವನ್ನು ಹೊರತಂದರು.
ನಿರ್ದೇಶಕರಾಗಲು ಬಂದವರು ನಿರ್ಮಾಪಕರಾಗುವುದು, ಹೀರೋ ಆಗಲು ಬಂದವರು ಡೈರೆಕ್ಟರ್ ಆಗುವುದು ಈ ಚಿತ್ರರಂಗದಲ್ಲಿ ಇದ್ದಿದ್ದೇ. ಒಮ್ಮೆ ಗೆಲುವು ದಕ್ಕಿದ ತಕ್ಷಣ ಅಲ್ಲೇ ಪರ್ಮನೆಂಟಾಗಿ ನೆಲೆಸುವ, ಕಂಫರ್ಟ್ ಜ಼ೋನಿನಲ್ಲಿದ್ದುಬಿಡುವ ಮನಸ್ಸು ಸಾಕಷ್ಟು ಜನರದ್ದಿರುತ್ತದೆ. ದೀಪಕ್ ವಿತರಕರಾಗಿ ಗೆದ್ದ ಕೂಡಲೇ ಇದೊಂದನ್ನೇ ಮುಂದುವರೆಸಿಕೊಂಡು ಬರಬಹುದಿತ್ತು. ಆದರೆ ದೀಪಕ್ ಅವರ ಒಳಗಿರುವ ಕ್ರಿಯಾಶೀಲ ಮನಸ್ಸು ಬರೀ ವ್ಯಾಪಾರ, ವ್ಯವಹಾರ, ಸಂಪಾದನೆ ಅಂತಾ ಇರಲು ಬಿಟ್ಟಿಲ್ಲ. ಈ ಕಾರಣದಿಂದ ಈಗ ದೀಪಕ್ ಗಂಗಾಧರ್ ಸ್ವತಂತ್ರವಾಗಿ ನಿರ್ದೇಶನವನ್ನು ಆರಂಭಿಸುತ್ತಿದ್ದಾರೆ.
ಡಾರ್ಲಿಂಗ್ ಕೃಷ್ಣ ಅಭಿನಯದ ಚಿತ್ರದ ಮೂಲಕ ನಿರ್ದೇಶನಕ್ಕೆ ಪಾದಾರ್ಪಣೆ ಮಾಡುತ್ತಿರುವ ದೀಪಕ್ ಲವ್, ಡಿವೋರ್ಸ್, ಸೆಂಟಿಮೆಂಟ್ ಸೇರಿದಂತೆ ಈವತ್ತಿನ ಕಾಲಕ್ಕೆ ಬೇಕಿರುವ ಎಲ್ಲ ಅಂಶಗಳನ್ನು ಸಿದ್ದಪಡಿಸಿಕೊಂಡು ಈಗ ಚಿತ್ರೀಕರಣಕ್ಕೆ ಅಣಿಯಾಗುತ್ತಿದ್ದಾರೆ. ಮದನ್ ಕುಮಾರ್ ಮತ್ತು ಲಕ್ಷ್ಮಿ ನಾರಾಯಣ ರಾಜು ಅರಸ್ ನಿರ್ಮಿಸುತ್ತಿರುವ ಈ ಚಿತ್ರಕ್ಕೆ, ಶ್ರೀಧರ್ ವಿ ಸಂಭ್ರಮ್ ಸಂಗೀತ, ಕೆ.ಎಂ.ಪ್ರಕಾಶ್ ಸಂಕಲನ, ಹೆಸರಾಂತ ಸ್ಟಾರ್ ನಟಿ ನಾಯಕಿಯಾಗಲಿದ್ದು ಆದಷ್ಟು ಬೇಗ ಆರಂಭಗೊಳ್ಳಲಿದೆ.
No Comment! Be the first one.