ಒಂದಲ್ಲಾ ಒಂದು ಕಾರಣಕ್ಕೆ ಆಗಾಗ ಸುದ್ದಿ ಮಾಡುತ್ತಿರುವ ಸಿನಿಮಾ ಡೆಮೊ ಪೀಸ್!
ಇನ್ನೇನು ತೆರೆಗೆ ಬರಲು ರೆಡಿಯಾಗಿರುವ ಡೆಮೊ ಪೀಸ್ ಚಿತ್ರದ ಬ್ಯೂಟಿಫುಲ್ ಟ್ರೇಲರ್ ಈಗ ಲೋಕಾರ್ಪಣೆಗೊಂಡಿದೆ. ಹುಡುಗಿಯನ್ನು ಪಟಾಯಿಸಲು ನಿಂತ ಹುಡುಗ. ಎದುರು ನಿಂತ ಹುಡುಗನಿಗೆ ಮಾತಿನಲ್ಲೇ ದೃಷ್ಟಿ ತೆಗೆಯುವ ಹುಡುಗಿ, ಅದಕ್ಕೆ ಪ್ರತಿಯಾಗಿ ಉದುರುವ ಆತನ ನುಡಿಮುತ್ತುಗಳು, ಮುದ್ದುಮುದ್ದಾದ ಜೋಡಿಯ ಸುಂದರ ಕಿತ್ತಾಟ – ಇವೆಲ್ಲವನ್ನೂ ಟ್ರೇಲರಿನಲ್ಲಿ ನೋಡಿದರೇನೆ ಮನಸ್ಸಿಗೆ ಹಿತವೆನಿಸುವಂತಿದೆ. ಇನ್ನು, ಚಿತ್ರದಲ್ಲಿ ಏನೆಲ್ಲಾ ಇದೆಯೋ ನೋಡಲೇಬೇಕು ಅನಿಸೋದು ಗ್ಯಾರೆಂಟಿ.
“ಕನಸಲ್ಲೂ ಕನ್ನಡ ಸಿನಿಮಾ ನೋಡುವ, ಕಾವೇರಿ ನೀರನ್ನು ಮಾತ್ರ ಕುಡಿಯೋನು” ಅನ್ನೋ ಡೈಲಾಗೊಂದು ಸಾಕು ಪಕ್ಕಾ ಇದು ಡೆಮೊ ಪೀಸ್ ಅನ್ನಿಸಿಕೊಳ್ಳಲು. ಪಂಚತಂತ್ರದ ಹುಡುಗಿ ಸೋನಲ್ ಮಂಟೆರೋ ಮತ್ತೆ ಮತ್ತೆ ಸೆಳೆಯುವಷ್ಟು ಚೆಂದಗೆ ಕಾಣಿಸಿದ್ದಾರೆ. ಭ್ರಹ್ಮಗಂಟು ಧಾರಾವಾಹಿಯ ಮುಖ್ಯ ಪಾತ್ರದಲ್ಲಿ ನಟಿಸುತ್ತಿರುವ ಭರತ್ ಈ ಚಿತ್ರದ ಮೂಲಕ ನಾಯಕನಟನಾಗಿ ಲಾಂಚ್ ಆಗುತ್ತಿದ್ದಾರೆ. ಲವರ್ ಬಾಯ್ ಆಗಿ ಮಾತ್ರವಲ್ಲದೆ, ಆಕ್ಷನ್ ದೃಶ್ಯಗಳಲ್ಲೂ ಅಬ್ಬರಿಸಿದ್ದಾರೆ ಎನ್ನುವ ಕುರುಹು ಟ್ರೇಲರಿನಲ್ಲೇ ಜಾಹೀರಾಗಿದೆ.
ಈ ಚಿತ್ರವನ್ನು ನಿರ್ಮಿಸಿರುವುದು ನಟಿ ಸ್ಪರ್ಶ ರೇಖಾ. ಸಂಜಿತ್ ಹೆಗ್ಡೆ ಹಾಡಿರುವ, ನಾಗಾರ್ಜುನ ಶರ್ಮ ಬರೆದಿರುವ ‘ಡಾರ್ಲಿಂಗು ನೀನು ಮುಂದೆ ಬಂದೆ… ಗ್ಯಾಪ್ ನಲ್ಲೇ ಹಾಗೆ ಬಿದ್ದು ಹೋದೆ’ ಎನ್ನುವ ಹಾಡಿನ ಲಿರಿಕಲ್ ವಿಡಿಯೋ ಈಗಾಗಲೇ ಸಾಕಷ್ಟು ಪಾಪ್ಯುಲಾರಿಟಿ ಪಡೆದಿದೆ. ಪಿ.ಆರ್.ಕೆ. ಯೂ ಟ್ಯೂಬ್ ಚಾನೆಲ್ಲಿನಲ್ಲಿ ರಿಲೀಸಾಗಿರುವ ಈ ಹಾಡು ಕಡಿಮೆ ಅವಧಿಯಲ್ಲಿ ಹೆಚ್ಚು ಟಾಕ್ ಕ್ರಿಯೇಟ್ ಮಾಡಿದೆ.
ಹಿಂದೆ ಯೋಗರಾಜ ಭಟ್ಟರ ನಿರ್ದೇಶನದಲ್ಲಿ ಬಂದಿದ್ದ ಪಂಚತಂತ್ರ ಸಿನಿಮಾದಲ್ಲಿ ಇದೇ ಸೋನಲ್ ಮಂಟೆರೋ ಭಾಗಿಯಾಗಿದ್ದ ‘ಶೃಂಗಾರದ ಹೊಂಗೇಮರ ಹೂ ಬಿಟ್ಟಿದೆ ಹಾಡು ದೊಡ್ಡ ಮಟ್ಟದಲ್ಲಿ ಹಿಟ್ ಆಗಿತ್ತು. ನಂತರ ‘ಡೆಮೊ ಪೀಸ್’ನ ಡಾರ್ಲಿಂಗ್ ಹಾಡಿಗೆ ಜನ ಗ್ಯಾಪಲ್ಲಿ ಮನಸೋತಿದ್ದಾರೆ. ಅರ್ಜುನ್ ರಾಮು ಸಂಗೀತ ನೀಡಿರುವ ಈ ಚೆಂದದ ಹಾಡಿಗೆ ಮದನ್ ಹರಿಣಿ ಕೊರಿಯೋಗ್ರಫಿ ಮಾಡಿದ್ದಾರೆ. ಕನ್ನಡ ಚಿತ್ರರಂಗದ ಸಾಕಷ್ಟು ಸಿನಿಮಾಗಳಿಗೆ ಕೆಲಸ ಮಾಡಿ ಅನುಭವ ಪಡೆದಿರುವ ವಿವೇಕ್ ನಿರ್ದೇಶನದ ಚೊಚ್ಚಲ ಚಿತ್ರ ‘ಡೆಮೊ ಪೀಸ್. ವಿಶೇಷವೆಂದರೆ, ಪತ್ರಕರ್ತ, ಹೋರಾಟಗಾರ, ಚತುರ ಮಾತುಗಾರರಾಗಿ ಎಲ್ಲರಿಗೂ ಪರಿಚಯವಿದ್ದ ಚಕ್ರವರ್ತಿ ಚಂದ್ರಚೂಡ್ ಈ ಸಿನಿಮಾದಲ್ಲಿ ವಿಲನ್ ಆಗಿ ಅವತರಿಸಿದ್ದಾರೆ.