ನಾಯಕನಟಿಯಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಸ್ಪರ್ಶಾ ರೇಖ ನಂತರ ಬಿಗ್ ಬಾಸ್ ಸ್ಪರ್ಧಿಯಾಗಿ, ಪೋಷಕ ಪಾತ್ರಗಳಲ್ಲಿ ಕಾಣಿಸುತ್ತಲೇ ಈಗ ನಿರ್ಮಾಪಕಿಯಾಗಿಯೂ ಗುರುತಿಸಿಕೊಳ್ಳುತ್ತಿದ್ದಾರೆ.
ಭ್ರಹ್ಮಗಂಟು ಧಾರಾವಾಹಿಯ ಲೀಡ್ ಪಾತ್ರದಲ್ಲಿ ನಟಿಸುತ್ತಿರುವ ಭರತ್ ಹೀರೋ ಆಗಿ ನಟಿಸುತ್ತಿರುವ ಮೊದಲ ಚಿತ್ರವನ್ನು ರೇಖಾ ನಿರ್ಮಿಸಿದ್ದಾರೆ. ಈ ಚಿತ್ರಕ್ಕೆ ‘ಡೆಮೊ ಪೀಸ್ ಎಂದು ಹೆಸರಿಡಲಾಗಿದೆ. ಅದಾಗಲೇ ಚಿತ್ರೀಕರಣವೆಲ್ಲಾ ಮುಗಿಸಿಕೊಂಡು ರಿಲೀಸಿಗೂ ರೆಡಿ ಇದೆ. ನವೆಂಬರ್ ಅಥವಾ ಡಿಸೆಂಬರ್ ತಿಂಗಳಲ್ಲಿ ತೆರೆಗೆ ಬರಲಿರುವ ಡೆಮೊ ಪೀಸ್ ಈಗ ಲಿರಿಕಲ್ ವಿಡಿಯೋ ರಿಲೀಸು ಮಾಡುವ ಪ್ಲಾನಿನಲ್ಲಿದೆ.
ಸಂಜಿತ್ ಹೆಗ್ಡೆ ಹಾಡಿರುವ, ನಾಗಾರ್ಜುನ ಶರ್ಮ ಬರೆದಿರುವ ‘ಡಾರ್ಲಿಂಗು ನೀನು ಮುಂದೆ ಬಂದೆ ಗ್ಯಾಪ್ ನಲ್ಲೇ ಹಾಗೆ ಬಿದ್ದು ಹೋದೆ… ಎಂಬ ಸಾಲಿನಿಂದ ಶುರುವಾಗುವ ಹಾಡಿನ ಲಿರಿಕಲ್ ವಿಡಿಯೋವನ್ನು ಚಿತ್ರತಂಡ ಮೊದಲಿಗೆ ಬಿಡುಗಡೆ ಮಾಡುತ್ತಿದೆ. ಇದೇ ಅಕ್ಟೋಬರ್ 12ರ ಶನಿವಾರ ಸಂಜೆ 7.30ಕ್ಕೆ ಈ ಹಾಡನ್ನು ರಿಲೀಸ್ ಪಿ.ಆರ್.ಕೆ. ಯೂ ಟ್ಯೂಬ್ ಚಾನೆಲ್ಲಿನಲ್ಲಿ ಲೋಕಾರ್ಪಣೆಗೊಳ್ಳಲಿದೆ.
ಅರ್ಜುನ್ ರಾಮು ಸಂಗೀತ ನೀಡಿರುವ ಈ ಹಾಡಿಗೆ ಮದನ್ ಹರಿಣಿ ಕೊರಿಯೋಗ್ರಫಿ ಮಾಡಿದ್ದಾರೆ. ಸಂಜಿತ್ ಹೆಗಡೆ ಹಾಡಿರುವ ಶೈಲಿಯೇ ಯುವಕರ ಮೈ ಕುಣಿಸುವಂತಿದೆ ಅನ್ನೋದು ನಿರ್ದೇಶಕ ವಿವೇಕ್ ಒಪೀನಿಯನ್ನು!
ಆಟೋರಾಜ, ಅಭಿನೇತ್ರಿ, ಮೇಲ್ಕೋಟೆ ಮಂಜ, ಕೃಷ್ಣ ರುಕ್ಕು ಮತ್ತು ನಾಗರಕಟ್ಟೆ ಸೇರಿದಂತೆ ಸರಿಸುಮಾರು ಒಂದು ಡಜನ್ ಸಿನಿಮಾಗಳ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಿ ಅನುಭವ ಪಡೆದಿರುವ ವಿವೇಕ್ ನಿರ್ದೇಶನದ ಚೊಚ್ಚಲ ಚಿತ್ರ ‘ಡೆಮೊ ಪೀಸ್. ಬರಹಗಾರ, ಪತ್ರಕರ್ತ, ಹೋರಾಟಗಾರ ಹೀಗೆ ಸಾಕಷ್ಟು ಡೆಸಿಗ್ನೇಷನ್ನುಗಳಿರುವ ಚಕ್ರವರ್ತಿ ಚಂದ್ರಚೂಡ್ ಈ ಸಿನಿಮಾದಲ್ಲಿ ವಿಲನ್ ಆಗಿಯೂ ಅವತಾರವೆತ್ತಿದ್ದಾರೆ.
ಸ್ಪರ್ಶಾ ರೇಖಾ ಅವರೇ ನಿರ್ಮಿಸಿರುವ ಚಿತ್ರ ಅಂದಮೇಲೆ ಸಿನಿಮಾದಲ್ಲಿ ಕಾಡುವಂಥದ್ದೇನೋ ಇದ್ದೇ ಇರುತ್ತದೆ ಅನ್ನೋದು ಗ್ಯಾರೆಂಟಿ. ಈಗ ಬರಲಿರುವ ಹಡುಗಳನ್ನು ಪುನೀತ್ ರಾಜ್ ಕುಮಾರ್ ಅವರ ಪಿ.ಆರ್.ಕೆ. ಸಂಸ್ಥೆ ಹಕ್ಕು ಪಡೆದಿದೆ. ‘ಪಂಚತಂತ್ರದ ನಾಯಕಿ ಸೋನಲ್ ಮೊಂತೆರೋ ಭರತ್ಗೆ ಜೋಡಿಯಾಗಿ ಈ ಚಿತ್ರದಲ್ಲಿ ನಟಿಸಿದ್ದಾರೆ.