ಬಾಗಲಕೋಟೆಯ ಶ್ರೀವಾಸವಿ ಚಿತ್ರಮಂದಿರದಲ್ಲಿ ಬಹಳ ದಿನಗಳ ನಂತರ ಕನ್ನಡ ಚಿತ್ರವೊಂದು ಐವತ್ತು ದಿನಗಳ ಪ್ರದರ್ಶನ ಕಂಡಿರುವ “ದೇಸಾಯಿ” ಚಲನಚಿತ್ರ, ಉತ್ತರ ಕರ್ನಾಟಕದ ಕೌಟುಂಬಿಕ ಚಲನಚಿತ್ರವಾಗಿದ್ದು, ಬಾಗಲಕೋಟೆ ಜಿಲ್ಲೆಯ ಐತಿಹಾಸಿಕ ಸ್ಥಳಗಳಲ್ಲಿ ಚಿತ್ರೀಕರಣ ಮಾಡಿರುವುದು ವಿಶೇಷ. ಐವತ್ತು ದಿನಗಳ ಯಶಸ್ವಿ ಪ್ರದರ್ಶನ ಕಂಡಿರುವ ಕಾರಣ ಚಿತ್ರದ ನಾಯಕ ಪ್ರವೀಣ್ ಕುಮಾರ್, ನಿರ್ದೇಶಕ ನಾಗಿರೆಡ್ಡಿ ಭಡ, ನಿರ್ಮಾಪಕ ಮಹಾಂತೇಶ್ ವಿ ಚೋಳಚ್ಚಗುಡ್ಡ ಚಿತ್ರಮಂದಿರಕ್ಕೆ ಭೇಟಿ ನೀಡಿ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡಿದ್ದರು. ಶ್ರೀಒಪ್ಪತೇಶ್ವರ ಮಹಾಸ್ವಾಮಿಗಳು ಗುಳೇದಗುಡ್ಡ, ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮಿಗಳು ಆಗಮಿಸಿ ಚಲನಚಿತ್ರ ತಂಡಕ್ಕೆ ಶುಭ ಹಾರೈಸಿದರು.
ಮಾಧ್ಯಮದವರೊಂದಿಗೆ ಮಾತನಾಡಿದ ಮಹಾಂತೇಶ್ ವಿ ಚೋಳಚಗುಡ್ಡ, ಬಾಗಲಕೋಟೆಯ ಜನ ಚಿತ್ರೀಕರಣದ ಸಂದರ್ಭದಲ್ಲಿ ಮತ್ತು ಚಿತ್ರ ಬಿಡುಗಡೆ ನಂತರವೂ ಸಾಕಷ್ಟು ಪ್ರೋತ್ಸಾಹ ನೀಡಿರುವುದಕ್ಕೆ ಧನ್ಯವಾದ ತಿಳಿಸಿದರು. ಎಲ್ಲರೂ ಕನ್ನಡ ಚಿತ್ರವನ್ನು ನೋಡಿ. ಪ್ರೋತ್ಸಾಹಿಸಿ ಎಂದು ಮನವಿ ಮಾಡಿದರು.
ಕನ್ನಡ ಚಲನಚಿತ್ರಗಳಿಗೆ ಉತ್ತರ ಕರ್ನಾಟಕದ ಜನತೆ ಮೊದಲಿನಿಂದಲೂ ಪ್ರೋತ್ಸಾಹ ನೀಡುತ್ತಾ ಬಂದಿದ್ದಾರೆ. ಇವತ್ತು ಬಾಗಲಕೋಟೆಯಲ್ಲಿ ಯಶಸ್ವಿ ಪ್ರದರ್ಶನ ಕಂಡಿರುವ “ದೇಸಾಯಿ” ಚಿತ್ರ ಸಾಕ್ಷಿ ಎಂದು ಮಾತನಾಡಿದ ನಾಯಕ ಪ್ರವೀಣ್ ಕುಮಾರ್, ಕನ್ನಡ ಚಿತ್ರಗಳನ್ನು ಚಿತ್ರಮಂದಿರಗಳಲ್ಲೇ ನೋಡಿ ಎಂದರು.
ರಾಜಕುಮಾರ್ ಅವರ ಸಂಪತ್ತಿಗೆ ಸವಾಲ್ ಚಿತ್ರದ ನೆನಪು ತೆಗೆದು, ಇಂತಹ ಸದಭಿರುಚಿ ಚಿತ್ರಗಳಿಗೆ ಉತ್ತರ ಕರ್ನಾಟಕದಲ್ಲಿ ಸಾಕಷ್ಟು ಪ್ರೋತ್ಸಾಹ ಸಿಕ್ಕಿದ್ದವು. ಈಗ ಮಹಾಂತೇಶ ಚೋಳಚಗುಡ್ಡ ನಿರ್ಮಾಣ ಮಾಡಿರುವ ಕೂಡು ಕುಟುಂಬದ ಕುರಿತು, ತಂದೆ ಮಕ್ಕಳ ಸಂಬಂಧದ ಬಗ್ಗೆ ಕಥೆವುಳ್ಳ “ದೇಸಾಯಿ” ಚಿತ್ರ ಶತದಿನೋತ್ಸವ ಪೂರೈಸಲೆಂದು ಪೂಜ್ಯರು ಹಾರೈಸಿದರು.
ಈ ಸಂದರ್ಭದಲ್ಲಿ ಚಿತ್ರಮಂದಿರದ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಲಾಯಿತು. ಸಹ ನಿರ್ಮಾಪಕರಾದ ಯಲ್ಲಪ್ಪ ವಿ ಚೋಳಚಗುಡ್ಡ, ಅಶೋಕ್ ಲಾಗಲೂಟಿ, ಆರ್ ಜಿ ಪಾಟೀಲ್, ಡಾ|ರಾಮಚಂದ್ರ ನಾಯಕ್, ಶಶಿಕಲಾ ಪಟ್ಟಣಶೆಟ್ಟಿ, ದರಿಯಪ್ಪ ಎಳ್ಳಿಗುತ್ತಿ ಮುಂತಾದ ಗಣ್ಯರು ಭಾಗವಹಿಸಿದ್ದರು.
No Comment! Be the first one.