ನೀಚ ಗಂಡನಿಂದ ದೂರವಾದ ಮಹಿಳೆ. ಜೊತೆಗೆ ಮುದ್ದಾದ, ತೋಳೆತ್ತರಕ್ಕೆ ಬೆಳೆದ ಮಗಳು. ಅದೂ ತನ್ನದಲ್ಲದ ನೆಲದಲ್ಲಿ, ನಮ್ಮವರು ಅನಿಸಿಕೊಳ್ಳದವರ ನಡುವೆ ಬದುಕೋದೇ ಕಷ್ಟ. ಜಗತ್ತಿನ ಎಲ್ಲ ಕೊಳಕನ್ನೂ ತನ್ನ ಸೆರಗಲ್ಲೇ ತುಂಬಿಕೊಂಡಂತಿರುವ ಕೊಲ್ಕತ್ತಾ ಎಂಬ ವಿಕ್ಷಿಪ್ತ ನಗರದಲ್ಲಿ ಬದುಕು ಸಾಗಿಸೋದು ಸುಲಭದ ಮಾತಲ್ಲ. ಅಲ್ಲಿ ಸಂಬಂಧಗಳಿಗೆ ಬೆಲೆ ಇಲ್ಲ. ಅಣ್ತಮ್ಮನಂತೆ ಭಾವಿಸಿ ಹತ್ತಿರಕ್ಕೆ ಬಿಟ್ಟುಕೊಂಡರೂ ಬಾಚಿ ನುಂಗಲು ಹೊಂಚು ಹಾಕಿರುತ್ತಾರೆ. ಮನೆಯಿಂದ ಹೊರಹೋದ ಮಕ್ಕಳು ವಾಪಾಸು ಬಂದೇ ಬರ್ತಾರೆ ಅನ್ನೋದಕ್ಕೆ ಯಾವ ಗ್ಯಾರೆಂಟಿಯೂ ಇಲ್ಲ. ಹೀಗಿರುವಾಗ ಜೊತೆಗಿದ್ದ ಮಗಳೂ ಕಿಡ್ನ್ಯಾಪ್ ಆಗಿಬಿಟ್ಟರೆ ಒಬ್ಬಂಟಿ ತಾಯಿಯ ಜೀವ ಹೇಗೆಲ್ಲಾ ಒದ್ದಾಡಿಬಿಡೋದಿಲ್ಲ? ದೇವಕಿ ಸಿನಿಮಾದಲ್ಲಿ ಘಟಿಸುವುದೂ ಇಂಥದ್ದೇ ಒಂದು ಪ್ರಕರಣ. ಹಾಗೆಂದು ಇಲ್ಲಿ ಮಗಳ ಅಪಹರಣ, ತಾಯಿಯ ಹುಡುಕಾಟ ಮಾತ್ರವಿಲ್ಲ. ಅನ್ಯರ ನೆಲದಲ್ಲೂ ಆಪತ್ಬಾಂಧವನಂತೆ ಬೆನ್ನಿಗೆ ನಿಲ್ಲುವ ಅಧಿಕಾರಿ, ಮಕ್ಕಳಿಲ್ಲದ ದಂಪತಿಗಳ ಒಳತುಡಿತ, ಬೆಳೆದ ಮಗನನ್ನು ಕಳೆದುಕೊಂಡ ತಂದೆಯೊಬ್ಬನ ವೇದನೆ, ಹಣಕ್ಕಾಗಿ ಎಳೇ ಮಕ್ಕಳನ್ನು ದಂಧೆಗೆ ತಳ್ಳುವ ಕ್ರಿಮಿಗಳು, ಸುಖದ ಜೀವನಕ್ಕಾಗಿ ಮಾಡಬಾರದ್ದನ್ನೆಲ್ಲಾ ಮಾಡುವ ಸೈಕೋ ಕಿಲ್ಲರ್ಸ್ ಇವಲ್ಲದರ ನಡುವೆ ಮಾನಸಿಕ ಕಾಯಿಲೆಯಿಂದ ಕಂಗಾಲಾದ ಹೆಣ್ಣುಮಗಳು… ಹೀಗೆ ದುನಿಯಾದಲ್ಲಿರುವ ವಕ್ರಗಳನ್ನೆಲ್ಲಾ ಒಂದು ಕಡೆ ಗುಡ್ಡೆ ಹಾಕಿ ಅದಕ್ಕೊಂದು ಕಥೆಯ ರೂಪ ಕೊಟ್ಟು, ಕಾಡುವ ಸ್ಕ್ರೀನ್ ಪ್ಲೇ ಬರೆದು ಸಿನಿಮಾವನ್ನಾಗಿ ತೆರೆಯ ಮೇಲೆ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ಲೋಹಿತ್.

ಪತಿಯನ್ನು ತೊರೆದ ದೇವಕಿ ಮಗಳೊಂದಿಗೆ ಜೀವಿಸುತ್ತಿರುತ್ತಾಳೆ. ರೇಡಿಯೋ ಕಾರ್ಯಕ್ರಮವೊಂದಕ್ಕೆ ಹೋದ ಮಗಳು ರಾತ್ರಿ ಎಷ್ಟೊತ್ತಾದರೂ ಮನೆಗೆ ಬರೋದೇ ಇಲ್ಲ. ಮಗಳನ್ನು ಹುಡುಕುತ್ತಾ ಹೊರಟವಳನ್ನು ಮೈ ಮಾರಿಕೊಳ್ಳುವ ಹೆಂಗಸು ಎಂದು ತಪ್ಪಾಗಿ ಗ್ರಹಿಸುವ ಕೊಲ್ಕೊತ್ತಾದ ಪೊಲೀಸರು ಈಕೆಯನ್ನು ಠಾಣೆಗೆ ಕರೆದೊಯ್ದು ನಿಲ್ಲಿಸುತ್ತಾರೆ. ವಾಸ್ತವ ಏನೆಂದು ನಂಬುವುದಿರಲಿ, ಆಕೆಯ ಮಾತನ್ನು ಕೇಳಿಸಿಕೊಳ್ಳುವ ತಾಳ್ಮೆಯೂ ಅಲ್ಲಿ ಯಾರಿಗೂ ಇರೋದಿಲ್ಲ. ಇವೆಲ್ಲದರ ನಡುವೆಯೂ ಪ್ರಾಮಾಣಿಕ ಅಧಿಕಾರಿ ದೇವಕಿಯ ಜೊತೆಯಾಗುತ್ತಾನೆ. ಕಾಲಿಡಬಾರದ ಜಾಗಗಳಿಗೆಲ್ಲಾ ಹೋಗಿ ಜಾಲಾಡಿದರೂ ಕಳೆದುಹೋದ ಮಗುವಿನ ಜಾಡು ಸಿಗೋದೇ ಇಲ್ಲ. ಇನ್ನೇನು ಸಿಕ್ಕಳು ಅನ್ನುವಷ್ಟರಲ್ಲಿ ಮತ್ತೆ ಮತ್ತೆ ಕಳೆದುಹೋಗಿರುತ್ತಾಳೆ. ಇಡೀ ಸಿನಿಮಾವನ್ನು ಜಸ್ಟ್ ಮಿಸ್ ಫಾರ್ಮುಲಾದ ಆಧಾರದಲ್ಲಿ ನಿರೂಪಿಸಲಾಗಿದೆ.

ಸಿನಿಮಾದ ಆರಂಭದಲ್ಲೇ ಮಗಳು ಕಳೆದುಹೋದಳು ಅನ್ನೋದು ಜಾಹೀರಾಗುತ್ತದೆ. ಅಂತಿಮ ಘಟ್ಟದ ತನಕ ಹುಡುಗಿ ಸಿಗುತ್ತಾಳಾ ಇಲ್ಲವಾ ಅನ್ನೋದು ಗುಟ್ಟಾಗಿ ಉಳಿದುಬಿಡುತ್ತದೆ. ಹೀಗಾಗಿ ಪ್ರೇಕ್ಷಕ ಕೂಡಾ ಆ ತಾಯಿಯ ಪಾತ್ರದೊಂದಿಗೆ ಕನೆಕ್ಟ್ ಆಗಿಬಿಡುತ್ತಾನೆ. ಅಲ್ಲಿ ನಡೆಯುವ ಪ್ರತಿಯೊಂದು ಘಟನೆಗಳೂ ಪರದೆ ಎದುರು ಕುಂತವನ ಎದೆ ನಡುಗಿಸುತ್ತದೆ. ಎಲ್ಲಿ ಏನು ಅನಾಹುತವಾಗಿಬಿಡುತ್ತದೋ ಅನ್ನೋ ಭಯ ಕಾಡುತ್ತಲೇ ಇರುತ್ತದೆ. ಇಷ್ಟು ತೀವ್ರವಾಗಿ ಕತೆಯನ್ನು ನಿರೂಪಿಸಿರುವುದು ನಿರ್ದೇಶಕ ಲೋಹಿತ್ ಕಸುಬುದಾರಿಕೆಯನ್ನು ತೋರಿಸುತ್ತದೆ. ಕಲಾವಿದರಾಗಿ ಪ್ರಿಯಾಂಕಾ ಉಪೇಂದ್ರ, ಅವರ ಮಗಳು ಐಶ್ವರ್ಯ ಉಪೇಂದ್ರ ಮತ್ತು ಕಿಶೋರ್ ನಟನೆ ಕತೆಗೆ ಪೂರಕವಾಗಿದೆ. ಚಿತ್ರದ ಕ್ಲೈಮ್ಯಾಕ್ಸಿನಲ್ಲಂತೂ ಉಪ್ಪಿ ಪುತ್ರಿ ಐಶ್ವರ್ಯ ಎಂಥವರ ಕಣ್ಣಲ್ಲೂ ನೀರುಕ್ಕುವಂತೆ ಅಭಿನಯಿಸಿದ್ದಾಳೆ. ಇಡೀ ಚಿತ್ರದ ಮತ್ತೊಂದು ತಾಕತ್ತೆಂದರೆ ಅದು ಹೆಚ್.ಸಿ. ವೇಣು ಅವರು ಸೆರೆ ಹಿಡಿದಿರುವ ನೈಜ ಬೆಳಕಿನ ಛಾಯಾಗ್ರಹಣ. ಸಿನಿಮಾದ ಹಿನ್ನೆಲೆ ಸಂಗೀತ ಕೂಡಾ ಅಷ್ಟೇ ಪ್ರಾಮುಖ್ಯತೆ ಹೊಂದಿದೆ.

ಕೊಲ್ಕತ್ತಾದ ಎದೆಭಾಗದಲ್ಲಿ ತೂಗಾಡುತ್ತಿರುವ ಹೌರಾ ಬ್ರಿಡ್ಜು ಇಲ್ಲಿ ನಡೆಯುವ ಪ್ರತೀ ಘಟನೆಗೂ ಸಾಕ್ಷಿಯಾಗಿ ನಿಲ್ಲುತ್ತದೆ. ಚಿತ್ರದ ಪಾತ್ರಗಳಂತೆಯೇ ಈ ಬ್ರಿಡ್ಜು ಕೂಡಾ ಪ್ರಧಾನ ಪಾತ್ರದಂತೆ ಕಾಣುತ್ತದೆ. ಕ್ಷಣ ಕ್ಷಣಕ್ಕೂ ತಲ್ಲಣಗೊಳಿಸುವ, ಕುಂತವರ ಎದೆಯಲ್ಲಿ ದಿಗಿಲು ಹುಟ್ಟಿಸುವ ದೇವಕಿ ಪ್ರತಿಯೊಬ್ಬರೂ ನೋಡಲೇಬೇಕಾದ ಚಿತ್ರವಾಗಿದೆ. ಯಾವ ಕಾರಣಕ್ಕೂ ಮಿಸ್ ಮಾಡಿಕೊಳ್ಳಬೇಡಿ!

CG ARUN

ಸಮೀರಾ ಸಾಹಸಕ್ಕೆ ನೆಟ್ಟಿಗರು ಸುಸ್ತು!

Previous article

ಚಿತ್ರೀಕರಣಕ್ಕೆ ಬೀಗ!

Next article

You may also like

Comments

Leave a reply

Your email address will not be published. Required fields are marked *