ಮಮ್ಮಿ ಎನ್ನುವ ಸಿನಿಮಾ ಮಾಡಿ ಎಲ್ಲರನ್ನೂ ಅಚ್ಛರಿಗೀಡುಮಾಡಿದ್ದ ಯುವಕ ಲೋಹಿತ್. ಅತಿ ಕನ್ನಡ ಚಿತ್ರರಂಗದ ಅತ್ಯಂತ ಕಿರಿಯ ವಯಸ್ಸಿನ ನಿರ್ದೇಶಕ ಎನಿಸಿಕೊಂಡಿರುವ ಲೋಹಿತ್ ಈಗ ಮತ್ತೊಂದು ಸಿನಿಮಾ ಮಾಡಿ ಮುಗಿಸಿದ್ದಾರೆ. ಮೊದಲು ಈ ಚಿತ್ರಕ್ಕೆ ಹೌರಾ ಬ್ರಿಡ್ಜ್ ಎಂಬ ಹೆಸರಿತ್ತು. ಈಗ ಸಿನಿಮಾಗೆ ಮತ್ತಷ್ಟು ಸೂಕ್ತವಾಗಿಲೆಂಬ ಕಾರಣಕ್ಕೆ ‘ದೇವಕಿ’ ಎಂದು ಬದಲಿಸಲಾಗಿದೆ.
ರಿಯಲ್ ಸ್ಟಾರ್ ಉಪೇಂದ್ರ ಮತ್ತು ಪ್ರಿಯಾಂಕಾ ಪುತ್ರಿ ಐಶ್ವರ್ಯಾ ಮೊಟ್ಟ ಮೊದಲ ಬಾರಿಗೆ ಈ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾಳೆ. ಈ ಸಿನಿಮಾದಲ್ಲಿ ಪ್ರಿಯಾಂಕಾ ಉಪೇಂದ್ರ ಮಗಳಾಗಿಯೇ ಐಶ್ವರ್ಯಾ ಕಾಣಿಸಿಕೊಳ್ಳುತ್ತಿರೋದು ವಿಶೇಷ. ಈ ಸಿನಿಮಾ ಹೌರಾ ಬ್ರಿಡ್ಜ್ ಸೇರಿದಂತೆ ಭಾರತದ ಹಲವು ಕಡೆ ಚಿತ್ರೀಕರಣಗೊಂಡಿದೆ. ಪ್ರಿಯಾಂಕಾ ಉಪೇಂದ್ರ ಅವರು ನಿರ್ದೇಶಕ ಲೋಹಿತ್ ಹೇಳಿದಷ್ಟೇ ನಟಿಸಿ ಸುಮ್ಮನಾದರೆ, ಐಶ್ವರ್ಯಾ ಮಾತ್ರ ಪ್ರತಿಯೊಂದು ದೃಶ್ಯದಲ್ಲೂ ಇದು ಯಾಕೆ ಹೀಗೆ, ಅದು ಯಾಕೆ ಹಂಗೆ? ಅಂತಾ ಪ್ರಶ್ನಿಸಿಯೇ ನಟಿಸುತ್ತಿದ್ದುದಂತೆ. ಉಪ್ಪಿ ಕೂಡಾ ತಾವು ಒಪ್ಪಿದ ಸಿನಿಮಾದ ಪ್ರತಿಯೊಂದು ಸಂದರ್ಭದ ಪೂರ್ವಾಪರ ತಿಳಿಯದೆ ಅಭಿನಯಿಸೋದಿಲ್ಲ. ಬಹುಶಃ ತಂದೆಯ ಬುದ್ಧಿ ಐಶ್ವರ್ಯಾಗೆ ಬಂದಿರಬಹುದು ಅನ್ನೋದು ನಿರ್ದೇಶಕ ಲೋಹಿತ್ ಅನಿಸಿಕೆ.
ಮಮ್ಮಿ ಚಿತ್ರದ ಶೂಟಿಂಗ್ ಸಂದರ್ಭದಲ್ಲೇ ದೇವಕಿಯ ಕತೆ ಹೇಳಿ ಪ್ರಿಯಾಂಕಾರನ್ನು ಒಪ್ಪಿಸಿದ್ದರಂತೆ ಲೋಹಿತ್. ಆಗಲೇ ಮಗಳ ಪಾತ್ರವನ್ನು ಐಶ್ವರ್ಯಾ ಮಾಡಿದರೆ ಚೆಂದ ಎಂದು ಹೇಳಿದ್ದರಂತೆ. ಹಾಗೆ ನೋಡಿದರೆ ಐಶ್ವರ್ಯಾಗೆ ತಾನು ಕಾಮಿಡಿ ಸಿನಿಮಾದಲ್ಲಿ ನಟಿಸಬೇಕು ಅನ್ನೋ ಬಯಕೆ ಇತ್ತು ಅಂತಾ ಸ್ವತಃ ರಿಯಲ್ ಸ್ಟಾರ್ ಹೇಳಿದರು. ಆದರೆ ಈ ಸಿನಿಮಾ ಥ್ರಿಲ್ಲರ್ ಎಲಿಮೆಂಟುಗಳನ್ನು ಹೊಂದಿದೆ. ಐಶ್ವರ್ಯಾ ಪಾಲಿಗೆ ಇದು ಮೊದಲ ಸಿನಿಮಾ ಅಂತಾ ಅನಿಸೋದೇ ಇಲ್ಲ. ಅಷ್ಟು ಮನೋಜ್ಞವಾಗಿ ನಟಿಸಿದ್ದಾಳೆ ಅನ್ನೋದು ಚಿತ್ರತಂಡದ ಎಲ್ಲರ ಅಭಿಪ್ರಾಯ! ದೇವಕಿ ಚಿತ್ರದ ಐಶ್ವರ್ಯಾ ಪೋಸ್ಟರ್ ಅನ್ನು ನಟಿ ಪಾರೂಲ್ ಯಾದವ್ ಬಿಡುಗಡೆಗೊಳಿಸಿದ್ದಾರೆ.
No Comment! Be the first one.