ಆದಿಮಾನವನಾಗಿ ಬೆಳಕಿಗೆ ಬಂದಿದ್ದ ಮನುಷ್ಯ ಒಂದು ಆ್ಯಂಗಲ್ ನಲ್ಲಿ ಕಾಡುಪ್ರಾಣಿ. ಕಾಡಿನಿಂದ ಬುದ್ಧಿಬೆಳೆಸಿಕೊಂಡು ನಗರಕ್ಕೆ ಬಂದ ಮನುಷ್ಯ ತಾನು ಬಂದರೂ ತನ್ನಲಿರಬೇಕಾದ ಮನುಷ್ಯತ್ವವನ್ನು ಕಾಡಿನಲ್ಲಿಯೇ ಹೂತು ಬಂದಿದ್ದಾನೆ. ಎಲ್ಲರಿಗೂ ದೇವರಮನೆ ಗೊತ್ತು. ಆದರೆ ದೇವರು ಎಲ್ಲಿದ್ದಾನೆ ಎನ್ನುವುದೇ ಗೊತ್ತಿಲ್ಲ. ಎಂಬಿತ್ಯಾದಿ ಡೈಲಾಗುಗಳ ಮೂಲಕವೇ ಪ್ರೇಕ್ಷಕರಿಗೆ ಕನೆಕ್ಟ್ ಆಗುವ ಸಿನಿಮಾ ದೇವರು ಬೇಕಾಗಿದ್ದಾರೆ.
ಇತ್ತೀಚಿಗಷ್ಟೇ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದ್ದು, ಟ್ರೇಲರ್ ಅನ್ನು ನಿರ್ದೇಶಕ ಸತ್ಯಪ್ರಕಾಶ್ ಮತ್ತು ನಟ ಮಾಸ್ತಿ ಬಿಡುಗಡೆ ಮಾಡಿದರು. ಪ್ರಮುಖ ಪಾತ್ರದಲ್ಲಿ ನಟಿಸಿರುವ ಹಿರಿಯ ನಟ ಶಿವರಾಂ “ನನಗೇನು ದೇವರು ಬೇಕಾಗಿಲ್ಲ. ಆದರೆ, ಯಾರಿಗೆ ದೇವರು ಬೇಕೋ ಅವರೊಟ್ಟಿಗೆ ನಾನು ಸೇರಿಕೊಂಡಿದ್ದೇನೆ. ಕನ್ನಡದಲ್ಲಿ ದೊಡ್ಡ ದೊಡ್ಡ ನಟರೆನಿಸಿಕೊಂಡವರ ಜತೆಗೆ ನಟಿಸುವ ಯೋಗ್ಯತೆ ಕಳೆದುಕೊಂಡಿದ್ದೇನೆ” ಎಂದು ಬೇಸರದಲ್ಲೇ ಮಾತು ಆರಂಭಿಸಿದ ಹಿರಿಯ ನಟ ಶಿವರಾಮ್ ” ಸೃಜಶೀಲತೆಗೆ ಅರ್ಥಬರುವಂತೆ ನಡೆದುಕೊಳ್ಳುವವರ ಜತೆಗೆ ಸಿನಿಮಾ ಮಾಡುತ್ತಿದ್ದೇನೆ. ಸೃಜನಶೀಲ ನಿರ್ದೇಶಕರಿಂದ ಸಿನಿಮಾ ರಂಗ ಮುನ್ನಡೆಯಬೇಕು. ಆ ಬಗ್ಗೆ ನನಗೆ ಕಾಳಜಿ ಇದೆ. ಹಾಗಾಗಿ ನನ್ನ ನಟನೆಗೆ ಬೆಲೆ ನಿಗದಿಪಡಿಸಿಕೊಳ್ಳದೆ, ಸೃಜನಶೀಲರ ಜತೆ ಕೆಲಸ ಮಾಡುತ್ತಿದ್ದೇನೆ. ಬಾಲ ನಟ ಅನೂಪ್ ಜತೆಗೆ ತುಂಬಾ ಹೆಮ್ಮೆಯಿಂದ ನಟಿಸಿದ್ದೇನೆ. ಆ ಬಾಲಕನಿಂದಲೂ ಸಾಕಷ್ಟು ಕಲಿತೆ” ಎಂದರು.
ಇನ್ನು ಶಿವರಾಮ್ ಜತೆಗೆ ಬಾಲ ಕಲಾವಿದನಾಗಿ ಅಭಿನಯಿಸಿರುವ ಅನೂಪ್ ಆಕಸ್ಮಿಕವಾಗಿ ಸಿಕ್ಕದ್ದಂತೆ. ಚಿತ್ರತಂಡ ಐದಾರು ವರ್ಷದ ಬಾಲಕನ ಪಾತ್ರಕ್ಕೆ ಶೋಧ ನಡೆಸುತ್ತಿದ್ದಾಗ ಪುನೀತ್ ರಾಜ್ಕುಮಾರ್ ನಡೆಸಿಕೊಡುವ ‘ಫ್ಯಾಮಿಲಿ ಪವರ್’ ಕಾರ್ಯಕ್ರಮದಲ್ಲಿ ಮಾಸ್ಟರ್ ಅನೂಪ್ ಕಣ್ಣಿಗೆ ಬಿದ್ದನಂತೆ. ಆಶ್ಚರ್ಯವೆಂದರೆ ಈತನ ಕಾಲ್ ಶೀಟ್ ಪಡೆಯಲು ಮೂರು ತಿಂಗಳು ಕಾಯಬೇಕಾಯಿತು ಎಂದು ನಿರ್ದೇಶಕರು ತಿಳಿಸಿದರು.ಈ ಚಿತ್ರವನ್ನು ಕೆಂಜಾ ಚೇತನ್ ಸಿಂಗ್ ನಿರ್ದೇಶನ ಮಾಡಿದ್ದು, ಬರೋಬ್ಬರಿ 16 ನಿರ್ಮಾಪಕರು ಕ್ರೌಡ್ ಫಂಡಿಂಗ್ ಮೂಲಕ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.