ದೇವೀರಿ ಸಿನಿಮಾದ ಕ್ಯಾತನ ಪಾತ್ರದಲ್ಲಿ ಮನೋಜ್ಞವಾಗಿ ನಟಿಸಿ ರಾಜ್ಯ ಪ್ರಶಸ್ತಿ ಪಡೆದಿದ್ದನಲ್ಲಾ… ಅದೇ ಹುಡುಗ ಈ ಮಂಜ. ಬಾಸ್ಕೋ ಅನಾಥ ಮಕ್ಕಳ ಕೇಂದ್ರದಲ್ಲಿದ್ದ ಮಂಜ ನಿರ್ದೇಶಕಿ ಕವಿತಾ ಲಂಕೇಶರ ಕೈಗೆ ಸಿಕ್ಕು ದೇವೀರಿ ಚಿತ್ರದಲ್ಲಿ ನಟಿಸಿದ ನಂತರ ಪ್ರೀತಿ ಪ್ರೇಮ ಪ್ರಣಯ, ಕೋದಂಡರಾಮ, ಸಚ್ಚಿ ಚಿತ್ರಗಳಲ್ಲಿ ಕಾಣಿಸಿಕೊಂಡ.
ಇಪ್ಪತ್ತು ವರ್ಷಗಳ ಹಿಂದೆ ಆ ಹುಡುಗನ ಬದುಕು ಅಕ್ಷರಶಃ ಬೀದಿಗೆ ಬಿದ್ದಿತ್ತು. ಬಿಎಸ್ಸೆನ್ನೆಲ್ʼನಲ್ಲಿ ಸಣ್ಣದೊಂದು ನೌಕರಿ ಮಾಡಿಕೊಂಡಿದ್ದ ತಂದೆ ಮಹಾನ್ ಕುಡುಕ. ಹೆಂಡತಿ ಮತ್ತು ಮಗನನ್ನು ಬೀದಿಗೆ ತಳ್ಳಿದ್ದ. ನಾಟಕಗಳಲ್ಲಿ ಸಣ್ಣ ಪುಟ್ಟ ಪಾತ್ರ ಮಾಡುತ್ತಿದ್ದ ಆತನ ತಾಯಿಗೆ ಸಿಗುತ್ತಿದ್ದ ಹಣ ಒಪ್ಪೊತ್ತಿನ ಊಟಕ್ಕೂ ಸಾಲುತ್ತಿರಲಿಲ್ಲ. ಮನೆ ಬಾಡಿಗೆ ಕಟ್ಟದ ಕಾರಣ ಮಾಲೀಕ ಮನೆಯಲ್ಲಿದ್ದ ಗಂಟು ಮೂಟೆ ಸಮೇತ ತಾಯಿ ಮಗನನ್ನು ಹೊರಹಾಕಿದ್ದ.
ಬದುಕಲು ಬೇರೆ ಯಾವ ದಾರಿಯೂ ಇರಲಿಲ್ಲ. ಅಂಥ ಸಂದರ್ಭದಲ್ಲಿ ಆ ಹುಡುಗನಿಗೆ ಆಶ್ರಯ ನೀಡಿದ್ದು ಬೆಂಗಳೂರು ರೈಲ್ವೇ ನಿಲ್ದಾಣ. ರೈಲ್ವೇ ಸ್ಟೇಷನ್ನಿನ ಫುಟ್ಪಾತ್ ಬದಿಯೇ ತಾಯಿ-ಮಗನ ವಾಸಸ್ಥಾನ. ಹತ್ತು ವರ್ಷದ ಮುಗ್ಧ ಹುಡುಗನಿಗೆ ರೈಲ್ವೇ ಸ್ಟೇಷನ್ನಿನಲ್ಲಿ ಕೂಲಿ ಕೆಲಸ ಮಾಡಿ, ಅದರಿಂದ ಸಂಪಾದಿಸಿದ ಅರವತ್ತೆಪ್ಪತ್ತು ರೂಪಾಯಿಯ ಪುಡಿಗಾಸೇ ಅನ್ನದ ಮೂಲ.
ಇಂಥ ಹುಡುಗನನ್ನು ಕೂಲಿ ಕೆಲಸ ಮಾಡಿಕೊಂಡಿರಲು, ಸರ್ಕಾರ ಮತ್ತು ಕಾನೂನು ಬಿಡುವುದಿಲ್ಲ. ಕೆಲವು ಪಾಪಿ ಪೊಲೀಸರ ಕಾಟ ಬೇರೆ. ಹೀಗಾಗಿ ಆತ ಬಾಸ್ಕೋ ಮನೆ ಎಂಬ ಅನಾಥಾಲಯಕ್ಕೆ ಸೇರಬೇಕಾಗುತ್ತದೆ. ಹೀಗೆ ತಂದೆ ತಾಯಿ ಬದುಕಿದ್ದಾಗಲೇ ಅನಾಥಾಶ್ರಮ ಸೇರಿದ ಹುಡುಗನ ಹೆಸರು ಮಂಜುನಾಥ.
ದೇವೀರಿ ಸಿನಿಮಾದ ಕ್ಯಾತನ ಪಾತ್ರದಲ್ಲಿ ಮನೋಜ್ಞವಾಗಿ ನಟಿಸಿ ರಾಜ್ಯ ಪ್ರಶಸ್ತಿ ಪಡೆದಿದ್ದನಲ್ಲಾ… ಅದೇ ಹುಡುಗ ಈ ಮಂಜ. ಬಾಸ್ಕೋ ಅನಾಥ ಮಕ್ಕಳ ಕೇಂದ್ರದಲ್ಲಿದ್ದ ಮಂಜ ನಿರ್ದೇಶಕಿ ಕವಿತಾ ಲಂಕೇಶರ ಕೈಗೆ ಸಿಕ್ಕು ದೇವೀರಿ ಚಿತ್ರದಲ್ಲಿ ನಟಿಸಿದ ನಂತರ ಪ್ರೀತಿ ಪ್ರೇಮ ಪ್ರಣಯ, ಕೋದಂಡರಾಮ, ಸಚ್ಚಿ ಚಿತ್ರಗಳಲ್ಲಿ ಕಾಣಿಸಿಕೊಂಡ. ದೇವೀರಿ ಚಿತ್ರದ ಶೂಟಿಂಗ್ ನಡೆಯುತ್ತಿದ್ದ ದಿನಗಳಲ್ಲೇ ಆತನ ತಾಯಿ ಕೂಡಾ ತೀವ್ರ ಅನಾರೋಗ್ಯದಿಂದ ಜೀವಬಿಟ್ಟಿದ್ದಳು. ತಂದೆ ಅದಾಗಲೇ ಮತ್ತೊಂದು ಮದುವೆಯಾಗಿ ಇನ್ನಿಬ್ಬರು ಮಕ್ಕಳಿಗೆ ಜನ್ಮ ನೀಡಿದ್ದ. ಇಂಥ ಮಂಜುನನ್ನು ಮತ್ತೆ ಓದಲು ಹಚ್ಚಿ, ಉತ್ತಮ ಜೀವನ ಕಲ್ಪಿಸಿದ್ದು ಬಾಸ್ಕೋ ಮನೆಯೇ.
ಉತ್ತಮ ಕ್ರಿಕೆಟ್ ಪಟುವೂ ಆಗಿರುವ ಮಂಜ ಕರ್ನಾಟಕ ಲೀಗ್ ಪಂದ್ಯಗಳಲ್ಲಿ ಹಲವಾರು ಬಾರಿ ಸ್ಪರ್ಧಿಸಿದ್ದಾನೆ. ಸದ್ಯ ಜರ್ಮನ್ ದೇಶದಲ್ಲಿ ಪ್ರಪಂಚದ ವಿವಿಧ ಮೂಲೆಗಳಿಂದ ಆಯ್ಕೆಯಾದ ಒಂದಷ್ಟು ಹುಡುಗರಿಗೆ ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳುವುದು ಹೇಗೆ ಮತ್ತು ಕ್ರೀಡೆಯ ಮೂಲಕ ಬದುಕು ರೂಪಿಸಿಕೊಳ್ಳುವ ಹೊಸ ಮಾರ್ಗಗಳನ್ನು ಹೇಳಿಕೊಡಲಾಗುತ್ತಿದೆ. ಜರ್ಮನ್ ಖ್ಯಾತ ಫುಟ್ಪಾಲ್ ಪಟು ಜೆನ್ಸ್ ಲೆಹಮನ್ ನೀಡುವ ಈ ತರಬೇತಿ ಕಾರ್ಯಾಗಾರಕ್ಕೆ ‘ಡಿಕೇಸರ್ ಅಂಡ್ ಫ್ರೆಂಡ್ ಶಿಪ್’ನ ಫೆಲೋಶಿಪ್ ಪಡೆದು ಮಂಜ ಕೂಡಾ ಆಯ್ಕೆಯಾಗಿದ್ದ. ಕನಸು ಕಾಣುವ ಕಾಲದಲ್ಲಿ ಕಷ್ಟವನ್ನು ಕಂಡಿದ್ದ ಹುಡುಗ ಹೊಸ ಭರವಸೆ, ಜವಾಬ್ದಾರಿಗಳನ್ನು ಹೊತ್ತು ಜರ್ಮನಿಗೂ ಹೋಗಿಬಂದ. ಸದ್ಯ ಸ್ಫೋರ್ಟ್ಸ್ ಅಕಾಡೆಮಿಯೊಂದರಲ್ಲಿ ಕೋ ಆರ್ಡಿನೇಟರ್ ಆಗಿ ಕೆಲಸ ಮಾಡುತ್ತಿದ್ದಾನೆ. ಇವತ್ತು ಈ ಹುಡುಗನ ಮೂವತ್ತೊಂದನೇ ಹುಟ್ಟುಹಬ್ಬ. ಹರಸಿ ಪ್ಲೀಸ್…