ಯಾವುದನ್ನೂ, ಯಾರನ್ನೂ ಸುಲಭಕ್ಕೆ ಸ್ವೀಕರಿಸದೆ, ಹತ್ತಿರಕ್ಕೆ ಬಿಟ್ಟುಕೊಳ್ಳದೆ ಬದುಕಿದವರು ರವಿ ಬೆಳಗೆರೆ. ಏನೇನೂ ಬರೆಯಲು ಬಾರದ ಕೆಲವರು ಇವರ ಬಳಿ ವರ್ಷಾನುಗಟ್ಟಲೆ ಬಾಳಿದ ಉದಾಹರಣೆಗಳಿವೆ. ಸುದ್ದಿ ಹುಡುಕುವ ನೈಪುಣ್ಯತೆ, ಮಾಹಿತಿ ಸಂಗ್ರಹಿಸುವ ಕಲೆಯಿಂದಷ್ಟೇ ಅಲ್ಲಿ ಬದುಕು ಕಟ್ಟಿಕೊಂಡವರಿದ್ದಾರೆ. ಬೆಳಗೆರೆ ಅವರಿಗೆ ಸರಿಗಟ್ಟುವಂತಾ ಬರವಣಿಗೆ ಇದ್ದು, ಅವರ ವ್ಯಕ್ತಿತ್ವವನ್ನು ಸಹಿಸಿಕೊಳ್ಳೋದು ಕಷ್ಟವಾಗಿ ಹೆಚ್ಚು ಕಾಲ ಅಲ್ಲಿರಲಾರದೆ ಹೊರಬಂದವರೂ ಸಾಕಷ್ಟಿದ್ದಾರೆ. ಎರಡನೇ ವರ್ಗದಕ್ಕೆ ಸೇರಿದವರಲ್ಲಿ ಬಹುಶಃ ಮಹೇಶ್‌ ದೇವಶೆಟ್ಟಿ ಕೂಡಾ ಒಬ್ಬರು.

ರವಿ ಬೆಳಗೆರೆ ತೊಂಭತ್ತರ ದಶಕದಲ್ಲಿ ಅಪಾರವಾಗಿ ಓದುಗರನ್ನು ಸಂಪಾದಿಸಿದ್ದರಲ್ಲಾ? ಹಾಗೆಯೇ ಹೊಸದಾಗಿ ಬರೆಯುವವರನ್ನೂ ಸೆಳೆಯುತ್ತಿದ್ದರು. ಹೊಸ ಪತ್ರಕರ್ತರು, ಬರಹಗಾರರನ್ನೆಲ್ಲಾ ತಮ್ಮ ಬರವಣಿಗೆಯಿಂದಲೇ ಹುಟ್ಟುಹಾಕಿದವರವರು ಅವರು. ಇವರ ಬಳಿ ಕೆಲಸ ಮಾಡುವ ಬಯಕೆಯಿಂದ, ಅಶೋಕ್‌ ಶೆಟ್ಟರ್‌ ಅವರ ಶಿಫಾರಸಿನ ಮೇರೆಗೆ ʻಹಾಯ್ʼ ಮೆಟ್ಟಿಲು ಹತ್ತಿ ಹೋಗಿದ್ದರು ಮಹೇಶ್‌. ಬಯಸಿದಂತೆ ಕೆಲಸವೂ ಸಿಕ್ಕಿತ್ತು.

ಅಲ್ಲೀಇಲ್ಲಿ ಸುದ್ದಿ ಹೆಕ್ಕಿ, ದಿನಗಟ್ಟಲೆ ಕೂತು ಬರೆದುಕೊಟ್ಟ ನ್ಯೂಸು ವಾರ ಕಳೆದರೂ ಪ್ರಿಂಟಾಗುತ್ತಲೇ ಇರಲಿಲ್ಲ. ಆದರೆ, ಮಹೇಶ್‌ ಬರೆಯೋದನ್ನು ನಿಲ್ಲಿಸಿರಲಿಲ್ಲ. ಪತ್ರಿಕೆಗಳು ಅಚ್ಚಿಗೆ ಹೋಗಿ, ತಮ್ಮ ವರದಿಗಳು ಪ್ರಕಟಗೊಳ್ಳದಿದ್ದರೂ ನಿರಂತರವಾಗಿ ಬರೆದು ಬಾಸ್‌ ಟೇಬಲ್ಲಿಗೆ ತಲುಪಿಸುತ್ತಿದ್ದರು. ಅದೊಂದು ದಿನ ಟಾಯ್ಲೆಟ್ಟಿಗೆ ಎದ್ದುಹೋಗುವಾಗ ಬಾಸ್‌ ಬೆಳಗೆರೆ ಟೇಬಲ್ಲಿನಲ್ಲಿ ಕೂತಿದ್ದ, ಮಹೇಶರ ಅಷ್ಟೂ ಬರವಣಿಗೆಯ ಗೊಂಚಲನ್ನು ಕೈಲಿ ಹಿಡಿದು ಹೋಗಿದ್ದರು. ಅಲ್ಲಿದ್ದವರ ಕಣ್ಣುಗಳಲ್ಲಿ ಭಯಾನಕ ಕುತೂಹಲ. ಮೌಲ್ಯಮಾಪನ ಮುಗಿಸಿ ಆಚೆ ಬಂದವರೇ, ʻಎಲ್ಲಯ್ಯಾ ಇದ್ದೆ ಇಷ್ಟು ದಿನ…ʼ ಅಂತಾ ಉದ್ಗರಿಸಿದ್ದರು. ʻಯಾವ ಕಾರಣಕ್ಕೂ ನಿಲ್ಲಿಸಬೇಡ ಬರಿ…ʼ ಅಂದಿದ್ದರಂತೆ!

  • ಈ ವಿಚಾರ ಎಷ್ಟು ನಿಜವೋ ಗೊತ್ತಿಲ್ಲ. ಆದರೆ, ಮಹೇಶ್‌ ದೇವಶೆಟ್ಟಿ ಎನ್ನುವ ಪ್ರಖರ ಬರಹಗಾರ ಹಾಯ್‌ ಬೆಂಗಳೂರ್‌ ಮೂಲಕ ಜನ್ಮ ತಳೆದಿದ್ದು ಮಾತ್ರ ಅಕ್ಷರದಾಣೆಗೂ ನಿಜ. ಹಾಯ್‌ ಬೆಂಗಳೂರ್‌ ಪತ್ರಿಕೆಯಲ್ಲಿ ದೇವಶೆಟ್ಟಿ ಮಹೇಶ್‌ ಹೆಸರು ಕೆಲಕಾಲ ರಾರಾಜಿಸಿತು. ಇವರೇ ಬರೆಯುತ್ತಿದ್ದ ಪರದೇಕೆ ಪೀಚೆ ಅಂಕಣ ಓದುಗರಿಗೆ ಬಲು ಮಜಾ ನೀಡುತ್ತಿತ್ತು. ಆ ನಂತರ ದೇವಶೆಟ್ಟರ ಬರವಣಿಗೆ ಮೆರಗು ಪಡೆದಿದ್ದು ನೂತನ ಮತ್ತು ವಿಜಯ ಕರ್ನಾಟಕದಲ್ಲಿ. ಈಶ್ವರ್‌ ದೈತೋಟ ಸಂಪಾದಕರಾಗಿದ್ದ ಕಾಲದಲ್ಲಿ, ನೂತನಕ್ಕಾಗಿ ದೇವಶೆಟ್ಟರು ಬರೆದಿದ್ದ ಕ್ರಿಕೆಟ್‌ ಮ್ಯಾಚ್‌ ಫಿಕ್ಸಿಂಗ್‌ ಕುರಿತಾದ ಕವರ್‌ ಸ್ಟೋರಿಯನ್ನು ಯಾರೂ ಮರೆತಿರಲಾರರು.

ದಿನಪತ್ರಿಕೆಗಳ ಸಿನಿಮಾ ಪುರವಣಿ ಹೆಚ್ಚೂ ಕಮ್ಮಿ ಒಂದೇ ಥರದ ಸುದ್ದಿಗಳಿಂದ ತುಂಬಿರುತ್ತಿದ್ದವರು. ವಿಜಯ ಕರ್ನಾಟಕದ ʻಸಿನಿ ವಿಜಯʼ ಆ ಏಕತಾನತೆಯನ್ನು ತಪ್ಪಿಸಿತ್ತು. ಕನ್ನಡ ಸಿನಿಮಾ ಪತ್ರಿಕೋದ್ಯಮದ ಸ್ಟಾರ್‌ ಬರಹಗಾರ ಗಣೇಶ್‌ ಕಾಸರಗೋಡು ಆ ಪುರವಣಿ ವಿಭಾಗದ ಮುಖ್ಯಸ್ಥರಾಗಿದ್ದರು. ಬಣ್ಣದ ಜಗತ್ತಿನ ಥಳುಕು ಬಳುಕಿನಾಚೆಗಿನ ಕರಾಳ ಮುಖವನ್ನು, ಬೆಚ್ಚಿಬೀಳುವ, ಅಚ್ಛರಿಗೊಳ್ಳುವಂಥಾ ಆಯಾಮಗಳನ್ನು ಕಾಸರಗೋಡು ಓದುಗರಿಗೆ ಪರಿಚಯಿಸಿದ್ದರು. ಗಣೇಶ್‌ ಅವರ ಮನಮಿಡಿಯುವ ಬರವಣಿಗೆ, ಕಲಾವಿದ ಶ್ರೀಪಾದ್‌ ರೂಪಿಸುತ್ತಿದ್ದ ಪುಟ ವಿನ್ಯಾಸ ಓದುಗರಲ್ಲಿ ಹೊಸ ಕ್ರೇಜ಼ು ಸೃಷ್ಟಿಸಿತ್ತು. ಆ ಕಾಲದಲ್ಲೇ ವಿಜಯಕರ್ನಾಟಕದ ಸಿನಿಮಾ ಪುರವಣಿಗೆಯ ಮೆರುಗನ್ನು ಮತ್ತಷ್ಟು ಹೆಚ್ಚಿಸಿದವರು ಮಹೇಶ್‌ ದೇವಶೆಟ್ಟಿ. ಗಣೇಶ್‌ ಕಾಸರಗೋಡು ಅವರು ವಿಜಯಕರ್ನಾಟಕದಿಂದ ಹೊರನಡೆದನಂತರ ಸಿನಿಮಾ ಸಪ್ಲಿಮೆಂಟನ್ನು ಕ್ರಿಯಾಶೀಲವಾಗಿ ಮುನ್ನಡೆಸಿದರು.

ಇಲ್ಲಿ ಎಲ್ಲರಿಗೂ ಹೊಗಳಿಕೆಯಷ್ಟೇ ಇಷ್ಟ. ನಿಜ, ನಿಷ್ಠುರತೆಯಿಂದ ಬರೆದು ಸಿನಿಮಾಪತ್ರಿಕೋದ್ಯಮದಲ್ಲಿ ಉಳಿಯೋದು ಕಷ್ಟ. ಅದರಲ್ಲೂ, ಜಾಹೀರಾತ್ಯಾವುದು? ಸುದ್ದಿ ಯಾವುದು ಎನ್ನುವ ಗೊಂದಲ ಹುಟ್ಟಿಸುವ ದಿನಪತ್ರಿಕೆಗಳಲ್ಲಿ ಕೆಲಸಕ್ಕಿದ್ದು, ಸತ್ಯ ಬರೆಯುವುದು ಸುಮ್ಮನೆ ಮಾತಲ್ಲ. ಸ್ವಲ್ಪ ಹೆಚ್ಚೂಕಮ್ಮಿಯಾದರೂ ಸ್ಟಾರುಗಳ ಆರೋಪ, ಅಭಿಮಾನಿಗಳ ಆಕ್ರೋಶದ ಜೊತೆಗೆ ಸಂಸ್ಥೆ ಮುಖ್ಯಸ್ಥರ ನೇರ ಅವಕೃಪೆಗೆ ಒಳಗಾಗಬೇಕಾಗುತ್ತದೆ. ಎದುರಿಗೆ ನೈಸಾಗಿದ್ದುಕೊಂಡೇ ಬುಡಕ್ಕೆ ಡೈನಾಮೆಂಟಿರುವ ಬತ್ತಿ ಗಿರಾಕಿಗಳೂ ಇಲ್ಲಿರುತ್ತಾರೆ.

ಇವೆಲ್ಲವನ್ನೂ ಮೀರಿ ಬೆಳೆದವರು ಮಹೇಶ್‌ ದೇವಶೆಟ್ಟಿ. ವಿಜಯ ಕರ್ನಾಟಕದಿಂದ ಹೊರಬಂದವರು ಪಬ್ಲಿಕ್‌ ಟೀವಿಯ ಫಿಲ್ಮ್‌ ಬ್ಯೂರೋ ಮುಖ್ಯಸ್ಥರಾದರು. ಮಹೇಶ್‌ ಎಂಥಾ ಮ್ಯಾಜಿಕ್‌ ಮಾಡಿದ್ದಾರೆಂದರೆ, ಕಳೆದ ನಾಲ್ಕು ವರ್ಷದಿಂದ ಪಬ್ಲಿಕ್‌ ಟೀವಿಯ ಸಿನಿ ಅಡ್ಡ ಕಾರ್ಯಕ್ರಮ ನಂ. 1 ಸ್ಥಾನದಲ್ಲೇ ಮುಂದುವರೆದಿದೆ.

ದೇವಶೆಟ್ಟರ ಸಾಧನೆಗಳ ಬಗ್ಗೆ ಸಿಂಹಾವಲೋಕನ ಮಾಡಲು ಈಗ ಸ್ಪಷ್ಟ ಕಾರಣವೂ ಇದೆ. ಮುದ್ರಣ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ  ಹೆಸರು ಗಳಿಸಿರುವ ಮಹೇಶ್‌ ದೇವಶೆಟ್ಟಿ ಈ ಹಿಂದೆ ಬಣ್ಣದ ಲೋಕದ ಮತ್ತೊಂದು ಮುಖ, ಹಿರಿಯ ನಟಿ ಮೀನಾ ಕುಮಾರಿಯ ಬದುಕನ್ನು ಕುರಿತ ಸುಟ್ಟ ಚಿಟ್ಟೆಯ ಕತೆ, ನಟಿ ರೇಖಾಳ ಬಗೆಗಿನ ಕೆಂಡ ಸಂಪಿಕೆಯ ಕಹಾನಿ, ಮೇಕಿಂಗ್‌ ಆಫ್‌ ಆಪ್ತಮಿತ್ರ, ರಜನಿಕಾಂತ್‌ ಕೃತಿಗಳನ್ನು ರಚಿಸಿದ್ದರು. ಬಿಡುಗಡೆಯಾದ ಎಷ್ಟೋ ಕೇಂದ್ರಗಳಲ್ಲಿ ಸತತ ಎರಡು ವರ್ಷ ಪ್ರದರ್ಶನಗೊಂಡು ದಾಖಲೆ ನಿರ್ಮಿಸಿದ ಸಿನಿಮಾ ಬಂಗಾರದ ಮನುಷ್ಯ.

ಈ ಚಿತ್ರ ತೆರೆಗೆಬಂದು ನಲವತ್ತೆಂಟು ವರ್ಷಗಳೇ ಕಳೆದಿವೆ. ಬಂಗಾರದ ಮನುಷ್ಯನಿಗೆ ಇನ್ನೇನು ಅರ್ಧಶತಮಾನವಾಗುವ ಈ ಹೊತ್ತಿನಲ್ಲಿ ಮಹೇಶ್‌ ದೇವಶೆಟ್ಟಿ ಆ ಚಿತ್ರ ರೂಪುಗೊಂಡಿದ್ದರ ಸುತ್ತಲಿನ ಸಮಗ್ರ ವಿವರವನ್ನು ದಾಖಲಿಸಿದ್ದಾರೆ. ʻಮೇಕಿಂಗ್‌ ಆಫ್‌ ಬಂಗಾರದ ಮನುಷ್ಯʼ ಮುದ್ದಾದ ಪುಸ್ತಕವಾಗಿ ಹೊರಬಂದಿದೆ. ಈ ಕೃತಿಯನ್ನು ಪಬ್ಲಿಕ್‌ ಟಿವಿ ಮುಖ್ಯಸ್ಥರಾದ ಎಚ್.ಆರ್.ರಂಗನಾಥ್ ಲೋಕಾರ್ಪಣೆ ಮಾಡಿದ್ದಾರೆ. ಡಾ.ಶಿವರಾಜ್‌ಕುಮಾರ್ ಬೆನ್ನುಡಿ ಬರೆದಿದ್ದಾರಲ್ಲದೆ, ವಿಡಿಯೋ ಮೂಲಕ ಶುಭ ಕೋರಿದ್ದಾರೆ. ಈ ಪುಸ್ತಕ ಬರೆದ ದೇಶವಶೆಟ್ಟರಿಗೆ ಮಾತ್ರವಲ್ಲ, ಓದುಗರ ಪಾಲಿಗೂ ಬಂಗಾರವಾಗಲಿ…

ARUN KUMAR G
ARUN KUMAR G Senior Film Journalist GAURI LANKESH PATRIKE, KARMAVEERA and others

ಲಗಾಮ್ ಕನ್ನಡದ ಲಗಾನ್ ಆಗಲಿ ಅಂದರು ಅಪ್ಪು!

Previous article

‘ಮಾಧ್ಯಮ ಅನೇಕ’ದಲ್ಲಿ ಸ್ಟ್ರೀಮ್ ಆಗಲಿದೆ…

Next article

You may also like

Comments

Leave a reply

Your email address will not be published.