ಈಗೀಗ ಎಷ್ಟೇ ಸೀಕ್ರೆಟ್ ಆಗಿ ಸಿನಿಮಾ ಶೂಟಿಂಗ್ ಮಾಡಿದರೂ ಸಹ ಕೆಲವೊಂದು ಫೋಟೋಗಳು, ವಿಡಿಯೋ ತುಣುಕುಗಳು ಸೋಶಿಯಲ್ ಮೀಡಿಯಾದಲ್ಲಿ ಲೀಕ್ ಆಗುತ್ತಲೇ ಇದೆ. ಅದಕ್ಕಾಗಿ ಸಾಕಷ್ಟು ಸಿನಿಮಾಗಳು ಮೊಬೈಲ್ ಬ್ಯಾನ್ ಮಾಡುವ ಮೂಲಕವೇ ಶೂಟಿಂಗ್ ನಡೆಸುತ್ತದೆ. ಸದ್ಯ ಸಲ್ಮಾನ್ ಖಾನ್ ನಟನೆಯ ದಬಾಂಗ್ 3 ಚಿತ್ರೀಕರಣದ ಸೆಟ್ ನಲ್ಲಿಯೂ ಮೊಬೈಲ್ ಬ್ಯಾನ್ ಮಾಡಲಾಗಿದೆ.
ಮೊದಲನೇ ಹಂತದ ಶೂಟಿಂಗ್ ಮುಗಿದು ಎರಡನೇ ಭಾಗದ ಶೂಟಿಂಗ್ ಇನ್ನೇನು ಆರಂಭವಾಗಲಿದೆ. ಶೂಟಿಂಗ್ ಆರಂಭವಾಗುವ ಮುನ್ನವೇ ಚಿತ್ರೀಕರಣಕ್ಕೆ ಬರುವ ಯಾರ ಬಳಿಯೂ ಮೊಬೈಲ್ ಇಲ್ಲದಂತೆ ನೋಡಿಕೊಳ್ಳುವಂತೆ ಚಿತ್ರತಂಡ ಸಂಬಂಧಪಟ್ಟವರಿಗೆ ಆದೇಶ ಹೊರಡಿಸಿದೆ. ಸಿನಿಮಾ ಬಿಡುಗಡೆಯಾಗುವರೆಗೂ ಇದಕ್ಕೆ ಸಂಬಂಧಪಟ್ಟ ಯಾವುದೇ ರೀತಿಯ ಫೋಟೋಗಳು ಹಾಗೂ ವಿಡಿಯೋಗಳು ಎಲ್ಲೂ ಲೀಕ್ ಆಗದಂತೆ ನೋಡಿಕೊಳ್ಳಲು ಹೀಗೆ ಮಾಡಲಾಗಿದೆಯಂತೆ. ಉಳಿದಂತೆ ಮಹೇಶ್ ಮಂಜ್ಲೇಕರ್ ಅವರ ಮಗಳು ಸಾಯಿ ಮಂಜ್ಲೇಕರ್ ಈ ಸಿನಿಮಾದ ಮೂಲಕ ಬಾಲಿವುಡ್ ಎಂಟ್ರಿಗೆ ಸಿದ್ಧರಾಗಿದ್ದಾರೆ. ಇದರಿಂದಾಗಿ ಈ ಸಲ ಅವರ ಲುಕ್ ಅನ್ನು ಮುಚ್ಚಿಡುವ ಸಲುವಾಗಿಯೂ ಮೊಬೈಲ್ ಬ್ಯಾನ್ ಮಾಡಲಾಗಿದೆ ಎಂಬ ಗಾಳಿಸುದ್ದಿಯೂ ಹರಿದಾಡುತ್ತಿದೆ. ಪ್ರಭುದೇವ ನಿರ್ದೇಶನದ ಈ ಸಿನಿಮಾ ಡಿಸೆಂಬರ್ 20ಕ್ಕೆ ತೆರೆ ಕಾಣಲಿದೆ.