ಪ್ರಭುದೇವ್ ನಿರ್ದೇಶನದ ದಬಾಂಗ್ 3 ಚಿತ್ರದ ಚಿತ್ರೀಕರಣ ಈಗಾಗಲೇ ಭರದಿಂದ ಸಾಗುತ್ತಿದೆ. ಸಲ್ಮಾನ್ ಖಾನ್ ಈ ಚಿತ್ರದ ಮುಖೇನ ಮತ್ತೆ ಪೊಲೀಸ್ ಧಿರಿಸಿನಲ್ಲಿ ಮಿಂಚಲಿದ್ದು, ಕನ್ನಡದ ಕಿಚ್ಚ ಸುದೀಪ್ ಕೂಡ ದಬಾಂಗ್ 3 ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಲಿದ್ದಾರೆ.
ಚಿತ್ರೀಕರಣದ ಸಂದರ್ಭದಲ್ಲಿ ಸಲ್ಮಾನ್ ಹೋದ ಕಡೆಯೆಲ್ಲಾ ಅಭಿಮಾನಿಗಳ ಜಮಾಯಿಸುತ್ತಿದ್ದು, ಶೂಟಿಂಗ್ ನೋಡಲು ಬಂದವರು ಚಿತ್ರೀಕರಣದ ದೃಶ್ಯಗಳನ್ನು ಚಿತ್ರೀಕರಿಸಿಕೊಂಡು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಿದ್ದಾರೆ. ಚಿತ್ರದ ಪೋಟೋಗಳು ಆನ್ ಲೈನ್ ನಲ್ಲಿ ಸೋರಿಕೆಯಾಗುತ್ತಿರುವುದು ಕೂಡ ಚಿತ್ರತಂಡಕ್ಕೆ ತಲೆನೋವಾಗಿ ಪರಿಣಮಿಸಿದೆ. ಹೀಗಾಗಿ ಪುಣೆಯಲ್ಲಿ ಚಿತ್ರದ ಸೆಟ್ ಸುತ್ತ ಎತ್ತರದ ಗೋಡೆ ಕಟ್ಟಲು ಸಲ್ಮಾನ್ ಖಡಕ್ ಕಂಡೀಷನ್ ಹಾಕಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಈ ಹಿಂದೆ ಜೈಪುರದಲ್ಲಿ ಸಿನಿಮಾದ ಚಿತ್ರೀಕರಣ ನಡೆಯುತ್ತಿತ್ತು. ಅಲ್ಲಿ ಸೋನಾಕ್ಷಿ ಸಿನ್ಹಾ ಅವರ ಜೊತೆಗಿನ ಡ್ಯಾನ್ಸ್ನ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ಲೀಕ್ ಆಗಿತ್ತು. ಇದಕ್ಕಿಂತ ಮುಂಚೆ ಸಲ್ಮಾನ್ ನಿರ್ವಹಿಸುತ್ತಿರುವ ಚುಲ್ಬುಲ್ ಪಾಂಡೆಯ ಯುವಕನ ಪಾತ್ರದ ಫೋಟೊ ಕೂಡ ವೈರಲ್ ಆಗಿತ್ತು. ಇದರಿಂದ ರೋಸಿ ಹೋಗಿರುವ ಸಲ್ಮಾನ್ ಖಾನ್ ಸೆಟ್ ನಲ್ಲಿ ಭದ್ರತೆಯನ್ನು ಹೆಚ್ಚಿಸುವ ಜತೆಗೆ ಚಿತ್ರೀಕರಣದ ಸ್ಥಳದಲ್ಲಿ ಚಿತ್ರತಂಡದ ಸದಸ್ಯರು ಫೋನ್ ಬಳಸುವುದನ್ನು ನಿಷೇಧಿಸಿದ್ದಾರೆ. ಈ ಮೂಲಕ ಯಾವುದೇ ಫೋಟೋಗಳು, ಸೀನ್ ಗಳು ಲೀಕ್ ಆಗದಂತೆ ಎಚ್ಚರಿಕೆ ವಹಿಸಿದ್ದಾರೆ ಎನ್ನಲಾಗಿದೆ. ಚಿತ್ರತಂಡವು ದಬಾಂಗ್ 3 ಸಿನಿಮಾವನ್ನು ಡಿಸೆಂಬರ್ 20ರಂದು ರಿಲೀಸ್ ಮಾಡುವುದಾಗಿ ಘೋಷಿಸಿದೆ.