ಅದ್ಯಾಕೋ ಈ ನಟರು ತೆರೆ ಮೇಲೆ ಹೇಳೋ ವೇದಾಂತವನ್ನು ನಿಜಜೀವನದಲ್ಲಿ ಪಾಲಿಸೋದೇ ಇಲ್ಲ. ವೇದಾಂತ ಹೇಳೋದು ಬದನೇಕಾಯಿ ತಿನ್ನೋದು… ಅನ್ನೋ ಹಾಗೆ ವರ್ತಿಸಿಬಿಡ್ತಾರೆ. ಬಿಗ್ ಸ್ಕ್ರೀನ್ ನಲ್ಲಿ ಕಾನೂನು ಕಟ್ಟಳೆಗಳ ಬಗ್ಗೆ ಬಿಗ್ ಬಿಗ್ ಲೆಕ್ಚರ್ ಕೊಡ್ತಾರೆ. ಅದನ್ನು ಅವರ ಬದುಕಿನಲ್ಲಿ ಅಳವಡಿಸಿಕೊಳ್ಳಲು ಮಾತ್ರ ಹಿಂಜರಿಯುತ್ತಾರೆ. ಇಂಥಾ ನಟರ ಸಾಲಿಗೆ ಈಗ ಕೊಲವೆರಿಡೀ ಖ್ಯಾತಿಯ ಧನುಷ್ ಕೂಡಾ ಸೇರಿದ್ದೇ ವಿಪರ್ಯಾಸ. ಅಂಥಾದ್ದು ಏನಾಯ್ತು ಅಂತೀರಾ..? ಈ ಸ್ಟೋರಿ ಓದಿ…
- ರಮ್ಯ ಅರುಣ್
2015ರಲ್ಲಿ ಧನುಷ್ ವಿದೇಶದಿಂದ ರೋಲ್ಸ್ ರಾಯ್ಸ್ ಕಾರನ್ನು ಆಮದು ಮಾಡಿಕೊಂಡಿದ್ದರು. ಭಾರೀ ಮೊತ್ತದ ಈ ಕಾರಿನ ಆಮದಿಗೆ ಅವರು 60 ಲಕ್ಷ ರೂಪಾಯಿ ಪ್ರವೇಶ ತೆರಿಗೆ ಕಟ್ಟಬೇಕಿತ್ತು. ಆದರೆ ಪೂರ್ತಿ ತೆರಿಗೆ ಕಟ್ಟಲು ಹಿಂದೇಟು ಹಾಕಿದ ಧನುಷ್ ಅರ್ಧದಷ್ಟು ತೆರಿಗೆ ಮಾತ್ರ ಪಾವತಿಸಿ, ನ್ಯಾಯಾಲಯದ ಮೊರೆ ಹೋಗಿದ್ದರು. ತೆರಿಗೆ ವಿನಾಯಿತಿ ನೀಡುವಂತೆ ಕೋರಿ ಕೋರ್ಟ್ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಕೈಗೆತ್ತಿಕೊಂಡ ಮದ್ರಾಸ್ ಹೈಕೋರ್ಟ್ ನ್ಯಾಯಮೂರ್ತಿ ಎಸ್.ಎಂ.ಸುಬ್ರಮಣಿಯಮ್ ವಿಚಾರಣೆ ನಡೆಸಿದ್ದಾರೆ. ತೆರಿಗೆ ವಿನಾಯಿತಿ ಕೊಡಲು ಸಾಧ್ಯವೇ ಇಲ್ಲ ಎಂದು ಖಡಾಖಂಡಿತವಾಗಿ ಹೇಳಿಬಿಟ್ಟಿದ್ದಾರೆ.
ನೆನ್ನೆ ಧನುಷ್ ಅರ್ಜಿ ವಿಚಾರಣೆಗೆ ಬಂದಿತ್ತು. ಆದರೆ ಧನುಷ್ ಪರ ವಕೀಲರು ಕೋರ್ಟ್ ಬಳಿ ಮನವಿ ಮಾಡಿದ್ದಾರೆ. ಅರ್ಜಿ ಹಿಂಪಡೆಯಲು ಅನುಮತಿ ಕೇಳಿದ್ದಾರೆ. ಅಲ್ಲದೇ ಪೂರ್ತಿ ತೆರಿಗೆ ಪಾವತಿಸೋದಾಗಿ ಹೇಳಿದ್ದಾರೆ. ಆದರೆ ಇದಕ್ಕೆ ಒಪ್ಪದ ನ್ಯಾಯಾಲಯ, ಪೂರ್ತಿ ತೆರಿಗೆ ಕಟ್ಟುವುದಾದರೆ ಇಷ್ಟು ದಿನ ಯಾಕೆ ಬೇಕಿತ್ತು? ನಿಮ್ಮ ಉದ್ದೇಶ ನಿಜವಾಗಿದ್ದರೆ ನೀವು ಈಗಾಗಲೇ ತೆರಿಗೆ ಪಾವತಿಸಿರುತ್ತಿದ್ದಿರಿ. ವಿಚಾರಣೆ ಬಂದಾಗ ಅರ್ಜಿ ವಾಪಸ್ ಪಡೆಯುವ ಮಾತಾಡುತ್ತೀರಲಿಲ್ಲ” ಎಂದು ಕಟುವಾಗಿ ಹೇಳಿದೆ.
ಅರ್ಜಿ ಹಿಂಪಡೆಯಲು ನಿರಾಕರಿಸಿದ ಹೈಕೋರ್ಟ್, ವಿಚಾರಣೆ ನಡೆಸಿ ತೀರ್ಪು ನೀಡಿದೆ. ಜೊತೆಗೆ ಛೀಮಾರಿ ಕೂಡಾ ಹಾಕಿದೆ. “ತೆರಿಗೆದಾರರ ಹಣ ಬಳಸಿಕೊಂಡು ರಸ್ತೆಗಳಲ್ಲಿ ಐಷಾರಾಮಿ ಕಾರು ಓಡಿಸುತ್ತೀರಿ. ಹಾಲು ಮಾರುವವರು, ದಿನಗೂಲಿ ಕಾರ್ಮಿಕರು ಸಹ ತಾವು ಖರೀದಿಸುವ ಲೀಟರ್ ಪೆಟ್ರೋಲ್ ಗೆ ತೆರಿಗೆ ಕಟ್ಟುತ್ತಾರೆ. ಅವರ್ಯಾರೂ ತೆರಿಗೆ ವಿನಾಯಿತಿ ಕೋರಿ ಕೋರ್ಟ್ ಮೆಟ್ಟಿಲೇರಲಿಲ” ಎಂದು ವ್ಯಂಗ್ಯವಾಗಿ ಹೇಳುವ ಮೂಲಕ ನಟ ಧನುಷ್ ಗೆ ಛೀಮಾರಿ ಹಾಕಿದೆ.
ಕೆಲ ದಿನಗಳ ಹಿಂದೆ ಇಳಯದಳಪತಿ ವಿಜಯ್ ಗೂ ಕೋರ್ಟ್ ಹೀಗೆಯೇ ಛೀಮಾರಿ ಹಾಕಿತ್ತು. ಐಷಾರಾಮಿ ಕಾರೊಂದನ್ನು ವಿದೇಶದಿಂದ ಆಮದು ಮಾಡಿಕೊಂಡಿದ್ದ ವಿಜಯ್, ಎಂಟ್ರಿ ಟ್ಯಾಕ್ಸ್ ಕಟ್ಟಲು ಹಿಂಜರಿದು, ಕೋರ್ಟ್ ಬಳಿ ತೆರಿಗೆ ವಿನಾಯಿತಿ ಕೇಳಿದ್ದರು. ವಿನಾಯಿತಿ ಕೊಡದ ಕೋರ್ಟ್, ನೀವೆಲ್ಲಾ ಸಿನಿಮಾದಲ್ಲಿ ಮಾತ್ರ ನಾಯಕರು ಎಂದು ಹೇಳಿ ಮಕ್ಕುಗಿದಿತ್ತು.
- ರಮ್ಯ ಅರುಣ್
No Comment! Be the first one.