ಇದೇ ಅಕ್ಟೋಬರ್  4 ರಂದು ಬಿಡುಗಡೆಯಾದ ತಮಿಳು ಚಿತ್ರ ಅಸುರನ್ ನಿರ್ದೇಶಕ ವೆಟ್ರಿಮಾರನ್ ಎಂಬ ಪ್ರತಿಭಾವಂತನ ಸೃಜನಶೀಲತೆ ಮತ್ತು ನಾಯಕ ಧನುಷ್ ಎಂಬ ನಟನ ಅಮೋಘ ಹಾಗೂ ಮನೋಜ್ಞ ಅಭಿನಯದ ಮೂಲಕ ಗಮನ ಸೆಳೆಯುತ್ತಿದೆ. ಇದು ವೆಟ್ರಿಮಾರನ್ ನಿರ್ದೇಶನದ ಐದನೆಯ ಚಿತ್ರ. ಇಟಲಿ ಭಾಷೆಯ ಬೈಸಿಕಲ್ ಥೀಪ್ ಸಿನಿಮಾದಿಂದ ಪ್ರಭಾವಿತನಾಗಿ ನಿರ್ಮಿಸಿದ ಪೊಲ್ಲಾದವನ್, ಮಧುರೈ ಸುತ್ತ ಮುತ್ತ ಜನಪ್ರಿಯವಾಗಿರುವ ಕೋಳಿ ಕಾಳಗದ ಪಂದ್ಯ ಕುರಿತಾದ ಆಡುಕುಳಂ, ವಲಸೆ ಬಂದ ನಿರಾಶ್ರಿತ ಮೇಲೆ ಆರೋಪ ಹೊರಿಸಿ, ಚಿತ್ರ ಹಿಂಸೆ ನೀಡುವ ವಿಸಾರಣೈ ಹಾಗೂ ಉತ್ತರ ಚೆನ್ನೈ ನಗರದ ಅಪರಾಧ ಜಗತ್ತಿನ ಕಥೆಯಾದ ವಡಾಚೆನ್ನೈ ಸಿನಿಮಾಗಳ ನಂತರ ವೆಟ್ರಿಮಾರನ್ ಮತ್ತು ಧನುಷ್ ಜೋಡಿ ಇದೀಗ ಅಸುರನ್ ಚಿತ್ರದ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

ಈ ಐದು ಸಿನಿಮಾಗಳಲ್ಲಿ ನಟ ಧನುಷ್ ವಿಸಾರಣೈ ಸಿನಿಮಾದಲ್ಲಿ ನಟಿಸದೆ, ನಿರ್ಮಾಪಕರಾಗಿದ್ದರು. 1983 ರಲ್ಲಿ ತಮಿಳುನಾಡಿನಲ್ಲಿ ಚಂದ್ರಶೇಖರನ್ ಎಂಬ ನಿರಪರಾಧಿಯ ನೈಜ ಕಥೆ ಆಧಾರಿತ ಈ ಸಿನಿಮಾ 2016 ರಲ್ಲಿ ರಾಷ್ಟ್ರ ಪ್ರಶಸ್ತಿ ಪಡೆಯುವುದರ ಜೊತೆಗೆ 2017 ರಲ್ಲಿ ಭಾರತದಿಂದ ಆಸ್ಕರ್ ಪ್ರಶಸ್ತಿಗೆ ನಾಮಕರಣಗೊಂಡ ಚಿತ್ರಗಳಲ್ಲಿ ಒಂದಾಗಿತ್ತು. ವೆಲ್ಲೂರು ಸಮೀಪದ ರಾಣಿಪೇಟೆಯಿಂದ ಬಂದು ಚೆನ್ನೈ ನಗರದ ಪ್ರತಿಷ್ಠಿತ ಲೊಯಲ ಕಾಲೇಜಿನಲ್ಲಿ ಇಂಗ್ಲೀಷ್ ಸಾಹಿತ್ಯದಲ್ಲಿ ಪದವಿ ಹಾಗೂ ಮದ್ರಾಸ್ ಫಿಲಂ ಇನ್ಸ್ ಟಿಟ್ಯೂಟ್ ನಿಂದ ಚಿತ್ರ ಕಥೆ ರಚನೆ ಮತ್ತು ನಿರ್ದೇಶನದಲ್ಲಿ ಡಿಪ್ಲಮೊ ಪದವಿ ಪಡೆದ ವೆಟ್ರಿ ಮಾರನ್ ಆರಂಭದ ದಿನಗಳಲ್ಲಿ ಖ್ಯಾತ ತಮಿಳು ನಿರ್ದೇಶಕ ಬಾಲುಮಹೇಂದ್ರ ಬಳಿ ಧಾರವಾಹಿಗೆ ಸಹಾಯಕರಾಗಿ ದುಡಿಯುತ್ತಾ, ಚಿತ್ರ ನಿರ್ಮಾಣದ ಒಳ ಹೊರಗುಗಳನ್ನು ಪರಿಚಯ ಮಾಡಿಕೊಂಡ 44 ವರ್ಷ ವಯಸ್ಸಿನ ಯುವ ಪ್ರತಿಭೆ.

ತಮಿಳು ಸಿನಿಮಾದ ಹಿರಿಯ ನಿರ್ದೇಶಕ ಕಸ್ತೂರಿ ರಾಜ ಎಂಬುವರ ಪುತ್ರನಾದ ಧನುಷ್ ನ ಮೂಲ ಹೆಸರು ವೆಂಕಟೇಶ್ ಪ್ರಭು. 2002 ರಲ್ಲಿ ತಂದೆಯ ನಿರ್ದೇಶನದ ತುಲ್ಲವದೋ ಇಳಮೈ ಸಿನಿಮಾದ ಮೂಲಕ ಅಭಿನಯಲೋಕಕ್ಕೆ ಕಾಲಿಟ್ಟ ಧನುಷ್ ಆಕಾರ ಮತ್ತು ರೂಪವನ್ನು ನೋಡಿ ನಕ್ಕವರು ಹೆಚ್ಚು ಮಂದಿ. ಕಡ್ಡಿಯಂತಹ ದೇಹದ ಈ ಹುಡುಗ ತಮಿಳು ಸಿನಿಮಾ ರಂಗದಲ್ಲಿ ನೆಲೆಯೂರಲು ಸಾಧ್ಯವೆ? ಎಂಬ ಪ್ರಶ್ನೆ ಎಲ್ಲೆರೆದುರು ಇತ್ತು. ಆದರೆ, ಧನುಷ್ ಗೆ ಇದ್ದ ಅದ್ಭುತವಾದ ಕಂಠ ಮತ್ತು ಧ್ವನಿಯ ಏರಿಳಿತದ ಮೇಲೆ ಸಾಧಿಸಿದ್ದ ಹಿಡಿತ ಹಾಗೂ ತನ್ನ ವ್ಯಕ್ತಿತ್ವ ಹಾಗೂ ರೂಪಿಗೆ ತಕ್ಕಂತೆ ಆಯ್ಕೆ ಮಾಡಿಕೊಂಡ ಪಾತ್ರಗಳ ಮೂಲಕ ತಮಿಳು ಸಿನಿಮಾ ರಸಿಕರ ಮನ ಗೆದ್ದನು. ಬೇರೆ ನಾಯಕರಿಂದ ನಿರೀಕ್ಷಿಸುತ್ತಿದ್ದ ನೃತ್ಯ, ಹೊಡೆದಾಟ, ಚೆಲುವು ಇವುಗಳನ್ನು ಬದಿಗೊತ್ತಿದ ತಮಿಳು ಜನತೆ ಈ ನಟನನ್ನು ತಮ್ಮ ಮನೆಯ ಹುಡುಗ ಅಥವಾ ಬೀದಿಯ ಹುಡುಗನಂತೆ ನೋಡುತ್ತಾ ಆತನ ಸಿನಿಮಾಗಳನ್ನು ಪ್ರೀತಿಸುತ್ತಾ ಬಂದರು. ತನ್ನ ದೇಹದ ಆಕಾರ, ರೂಪಗಳ ಬಗ್ಗೆ ಅರಿವಿದ್ದ ಧನುಷ್, ತಾನು ಅಭಿನಯಿಸಿದ ಸಿನಿಮಾಗಳಲ್ಲಿ ಪಾತ್ರಗಳಿಗೆ ಜೀವತುಂಬುತ್ತಾ, ಕಲೆ ಕುರಿತಾಗಿ ತಮ್ಮೊಳಗೆ ಇರುವ ಬದ್ಧತೆಯನ್ನು ಅನಾವರಣಗೊಳಿಸುತ್ತಾ ಇಂದು ತಮಿಳು ಸಿನಿಮಾ ಕ್ಷೇತ್ರದಲ್ಲಿ ಪ್ರತಿಭಾವಂತ ಕಲಾವಿದನಾಗಿ ಬೆಳೆದು ನಿಂತಿದ್ದಾನೆ.

ಮೇರು ನಟ ರಜನಿಕಾಂತ್ ಅಳಿಯನಾಗಿದ್ದರೂ ಸಹ ಎಲ್ಲಿಯೂ ತನ್ನ ಮಾವನ ಅಥವಾ ತನ್ನ ಕುಟುಂಬದ ಪ್ರಭಾವವನ್ನು ಬಳಸಿಕೊಳ್ಳದೆ ಸ್ವಯಂ ಸಾಧನೆಯಿಂದ ಔನ್ನತ್ಯಕ್ಕೇರಿದ ಹಾಗೂ ಅತ್ಯಂಯ ವಿನಯಶೀಲ ಗುಣಗಳುಳ್ಳ ಕೆಲವೇ ಕಲಾವಿದರಲ್ಲಿ ಧನುಷ್ ಪ್ರಥಮ ಸ್ಥಾನದಲ್ಲಿ ನಿಲ್ಲುತ್ತಾನೆ. ಕಾದಲ್ ಕೊಂಡೇನ್ ಎಂಬ ಸಿನಿಮಾದಲ್ಲಿ ಮಾನಸಿಕ ಅಸ್ವಸ್ಥ ಪ್ರೇಮಿಯಾಗಿ ಅಭಿನಯಿಸುವುದರ ಮೂಲಕ ತನ್ನ ಪ್ರತಿಭೆಯನ್ನು ಹೊರಹಾಕಿದ ಧನುಷ್, ವೇಟ್ರಿಮಾರನ್ ನಿರ್ದೇಶಕದ ಆಡುಕುಳ ಸಿನಿಮಾದಲ್ಲಿ ತನ್ನ ಅಭಿನಯಕ್ಕಾಗಿ ರಾಷ್ಟ್ರ ಪ್ರಶಸ್ತಿ ಪಡೆದ ಪ್ರತಿಭೆ. ತಾನು ಹಾಡಿದ ವೈ ದಿಸ್ ಕೊಲವರಿ ಕೊಲವರಿ ಡಿ ಎಂಬ ಹಾಡಿನ ಮೂಲಕ ಯೂ ಟ್ಯೂಬ್ ನಲ್ಲಿ ಹತ್ತು ಕೋಟಿ ಅಭಿಮಾನಿಗಳನ್ನು ಸಂಪಾದಿಸಿದ ಈತ, ಮುಸ್ಲಿಂ ಹುಡುಗಿ ಮತ್ತು ಹಿಂದು ಹುಡುಗನ ಪ್ರೇಮದ ಕಥೆಯುಳ್ಳ ರಾಂಜಾನಾ ಎಂಬ ಹಿಂದಿ ಸಿನಿಮಾದಲ್ಲಿ ನಟಿಸಿ, ಇಡೀ ದೇಶದುದ್ದಕ್ಕೂ ಪ್ರಶಂಸೆಯನ್ನು ಪಡೆದನು. ಎಂದೂ ಕೀರ್ತಿ ಮತ್ತು ಪ್ರಚಾರವನ್ನು ಬೆನ್ನತ್ತದ, ಈಗಿನ ಸಿನಿಮಾ ನಾಯಕರ ಹಾಗೆ ಇಮೇಜ್ ಕಟ್ಟಿಕೊಳ್ಳುವ ಕಥೆಗಳಿಗೆ ಬೆನ್ನು ಹತ್ತದೆ ತನಗೆ ದಕ್ಕುವ ಪಾತ್ರಗಳಿಗೆ ಜೀವ ತುಂಬುವ ಕಲಾವಿದನಾಗಿದ್ದಾನೆ. ಭಾರತದ ಸಿನಿಮಾ ಇತಿಹಾಸದಲ್ಲಿ ನಾಯಕ ನಟರಿಗೆ ಇರಬೇಕಾದ ದೇಹ ಅಥವಾ ರೂಪ ಇಲ್ಲದಿದ್ದರೂ ತಮ್ಮ ಮನೋಜ್ಞ ಅಭಿನಯದ ಮೂಲಕ ಮನಗೆದ್ದ ನಟರ ಇತಿಹಾಸ ದೊಡ್ಡದಿದೆ. ಓಂಪುರಿ, ನಾಸಿರುದ್ದಿನ್ ಶಾ, ನಾನಾ ಪಾಟೇಕರ್, ನವಾಜುದ್ದಿನ್ ಸಿದ್ದಿಕಿ ಹೀಗೆ ಹಲವರನ್ನು ಹೆಸರಿಸಬಹುದು. ಧನುಷ್ ತನ್ನ ಅಭಿನಯದ ಮೂಲಕ ಎಲ್ಲರನ್ನು ಬೆರಗುಗೊಳಿಸುತ್ತಾ ಸಾಗುತ್ತಿದ್ದಾನೆ. 1982 ರಲ್ಲಿ ಜನಿಸಿದ, 37 ವರ್ಷದ ಧನುಷ್, ಅಸುರನ್ ಚಿತ್ರದಲ್ಲಿ 60 ವರ್ಷದ ವೃದ್ಧನಾಗಿ ಮೂರು ಮಕ್ಕಳ ತಂದೆಯಾಗಿ ನಟಿಸಿರುವ ಪರಿ ನಿಜಕ್ಕೂ ವಿಸ್ಮಯಕಾರಿಯಾದದ್ದು. ಎಂತಹದ್ದೇ ನಟನಿಗೆ ಸವಾಲಾಗಬಹುದಾದ ಈ ಪಾತ್ರವನ್ನು ತನ್ನ ಎದೆಗೆ ಇಳಿಸಿಕೊಂಡು, ಅದರೊಳಗೆ ಪರಕಾಯ ಪ್ರವೇಶ ಮಾಡಿ ಅಭಿನಯಿಸುರುವುದನ್ನು ನೋಡಿದಾಗ, ನಮಗೆ 1980 ರ ದಶಕದಲ್ಲಿ ಮಣಿರತ್ನಂ ನಿರ್ದೇಶನದ ನಾಯಗನ್ ಚಿತ್ರದಲ್ಲಿ ನಟಿಸಿದ್ದ ಕಮಲ್ ಹಾಸನ್ ರವರ ಅಭಿನಯ ನೆನಪಿಗೆ ಬರುತ್ತದೆ.

ಬಿಡುಗಡೆಯಾದ ಮೊದಲ ದಿನ ಮಲೇಷಿಯಾದಲ್ಲಿ 18 ಕೋಟಿ ಹಾಗೂ ತಮಿಳುನಾಡಿನಲ್ಲಿ 16 ಕೋಟಿ ಹಣ ಬಾಚಿರುವ ಅಸುರನ್ ಸಿನಿಮಾದ ಯಶಸ್ಸಿನ ಹಿಂದೆ ಧನುಷ್ ಮತ್ತು ವೇಟ್ರಿಮಾರನ್ ಇಬ್ಬರ ಹೊಂದಾಣಿಕೆ ಅದ್ಭುತವಾಗಿ ಕೆಲಸ ಮಾಡಿದೆ. ಒಬ್ಬ ಸೃಜನಶೀಲ ನಿರ್ದೇಶಕನ ಕನಸನ್ನು ಸಾಕಾರಗೊಳಿಸುವ ಕಲಾವಿದನಾಗಿ ಧನುಷ್ ಇರುವುದು ವೇಟ್ರಿಮಾರನ್ ಪಾಲಿಗೆ ಅದೃಷ್ದದ ವಿಷಯ ಎನ್ನ ಬಹುದು.

1960-70 ರ ದಶಕದ ದೌರ್ಜನ್ಯದ ಕಥೆಯುಳ್ಳ ಈ ಸಿನಿಮಾ ಪೂಮಣಿ ಎಂಬುವರ ಪ್ರಸಿದ್ಧ ಕಾದಂಬರಿ ವೆಕ್ಕೈ ಕಥೆಯನ್ನು ಆಧಾರವಾಗಿ ಇಟ್ಟುಕೊಂಡು ನಿರ್ಮಿಸಲಾಗಿದೆ. ದಕ್ಷಿಣ ತಮಿಳುನಾಡಿನಲ್ಲಿ ಮೇಲ್ಜಾತಿಯ ಸಮುದಾಯ ತಳವರ್ಗದವರ ಮೇಲೆ ನಡೆಸುವ ಅಮಾನವಿಯ ಕ್ರೌರ್ಯವನ್ನು ಯಥಾವತ್ತಾಗಿ ಚಿತ್ರದಲ್ಲಿ ಬಿಂಬಿಸಲಾಗಿದೆ. ದಲಿತರು ಮತ್ತು ಕೆಳವರ್ಗದವರು ಕಾಲಿಗೆ ಚಪ್ಪಲಿ ಧರಿಸಬಾರದು ಎಂಬ ವಿಷಯದಲ್ಲಿ ಆರಂಭವಾಗುವ ಈ ಕಥನ, ತಳ ಸಮುದಾಯದ ತುಂಡು ಭೂಮಿಯನ್ನು ಕಬಳಿಸುವ ಹುನ್ನಾರಕ್ಕೆ ತಿರುಗಿ, ಹಿಂಸೆಗೆ ಪ್ರತಿ ಹಿಂಸೆ, ಕೊಲೆಗೆ ಪ್ರತಿ ಕೊಲೆ ಹೀಗೆ ಮುಂದುವರಿಯುತ್ತಾ ಸಾಗುತ್ತದೆ. ಹಿಂಸೆಯನ್ನು ತ್ಯೆಜಿಸಿ, ಅಹಿಂಸಾತ್ಮಕ ಮಾರ್ಗದಲ್ಲಿ ನಡೆಯಲು ಇಚ್ಚಿಸುವ ನಾಯಕ ಶಿವಸಾಮಿ ತನ್ನಿಬ್ಬರು ಮಕ್ಕಳ ರೋಷಾವೇಶಗಳನ್ನು ತಡೆಗಟ್ಟಲು ವಿಫಲನಾಗುತ್ತಾನೆ. ಭೂಮಾಲಿಕನನ್ನು ಚಪ್ಪಲಿಯಿಂದ ಹೊಡೆದು ಕೊಲೆಯಾಗುವ ಹಿರಿಯ ಮಗ, ಕೊಲೆಗೆ ಸಾಕ್ಷಿಯಾಗಿದ್ದ ಎರಡನೆಯ ಮಗ ಅಣ್ಣನ ಕೊಲೆಗೆ ಪ್ರತಿಯಾಗಿ ಭೂಮಾಲಿಕನನ್ನು ಬಲಿ ತೆಗೆದುಕೊಂಡು ಇಡೀ ಕುಟುಂಬವನ್ನು ಊರಿಂದ ಊರಿಗೆ, ಕಾಡಿನಿಂದ ಕಾಡಿಗೆ ಅಲೆಯುವಂತೆ ಅತಂತ್ರನಾಗಿ ಮಾಡುತ್ತಾನೆ.

ತನ್ನ ಹರೆಯದಲ್ಲಿ ಇಂತಹದ್ದೇ ಕೃತ್ಯಗಳ ಮೂಲಕ ಹುಟ್ಟಿದ ಊರು ಬಿಟ್ಟು ಕೃಷಿಯ ಮೂಲಕ ಹೊಸ ಬದುಕು ಕಟ್ಟಿಕೊಂಡಿದ್ದ ಶಿವಸಾಮಿಗೆ ಮಕ್ಕಳು ಸ್ವಾಭಿಮಾನಕ್ಕೆ ಧಕ್ಕೆ ಬಂದಾಗ ಹಿಂಸೆಗೆ ಇಳಿದಾಗ ಅನುಭವಿಸುವ ಸಂಕಟ ಹೇಳತೀರುದು. ತಂದೆಯಾಗಿ ಧನುಷ್ ಮತ್ತು ತಾಯಿಯಾಗಿ ಮಲೆಯಾಳಂ ನ ಖ್ಯಾತ ತಾರೆ ಮಂಜು ವಾರಿಯರ್ ಇಬ್ಬರೂ ಪೈಪೋಟಿಗೆ ಬಿದ್ದವರಂತೆ ಅಭಿನಯಿಸಿ, ಇಡೀ ಸಿನಿಮಾವನ್ನು ತಮ್ಮ ಹೆಗಲ ಮೇಲೆ ಹೊತ್ತು ಸಾಗಿದ್ದಾರೆ. ಇವರಿಗೆ ಪಶುಪತಿ ಮತ್ತು ಪ್ರಕಾಶ್ ರೈ ಸಾಥ್ ನೀಡಿರುವುದು ಗಣೀಯವಾದ ಅಂಶ. ಯಾವುದೇ ಹಾಸ್ಯ, ನೃತ್ಯದಂತಹ ಕೃತಕ ದೃಶ್ಯವನ್ನು ಸೇರಿಸದೆ, ಕೇವಲ ಎರಡು ಹಾಡುಗಳನ್ನು ಹಿನ್ನಲೆಯಾಗಿ ಬಳಸಿಕೊಂಡಿರುವುದು ಈ ಸಿನಿಮಾದ ವಿಶೇಷ. ಕಥೆಗೆ ಹಿಂಸೆಯ ದೃಶ್ಯಗಳು ಅನಿವಾರ್ಯವಾಗಿದ್ದರೂ ಸಹ ಅವುಗಳನ್ನು ಕಲಾತ್ಮಕವಾಗಿ ತೋರಿಸುತ್ತಾ, ಹೊಡೆದಾಟದ ದೃಶ್ಯಗಳಿಗೆ ಜೀವಂತಿಕೆ ತುಂಬಲಾಗಿದೆ.

ಕಥೆಯ ಇಲ್ಲದ ಸಿನಿಮಾಗಳಿಗೆ ಸಿಕ್ಸ್ ಪ್ಯಾಕ್ ಇಮೇಜಿನ ನಾಯಕನಿಗೆ ತಕ್ಕಂತೆ ಡೈಲಾಗ್ ಹೊಸೆಯುತ್ತಾ, ಹಾಡು ಬರೆಯುತ್ತಾ, ಜನಪ್ರಿಯ ನಟನೊಬ್ಬನ ಸಿನಿಮಾ ನಿರ್ದೇಶನ ಮಾಡುವುದನ್ನು ಬಂಡವಾಳ ಮಾಡಿಕೊಂಡಿರುವ ನಿರ್ದೇಶಕರೆಂಬ ಖಾಲಿತಲೆಗಳು ಮತ್ತು ಕುದುರೆಗಿಂತ ಅದರ ಲದ್ದಿ ಬಿರುಸು ಎನ್ನುವಂತೆ ಕೇವಲ ಹಾಡು, ನೃತ್ಯ, ಪೈಟಿಂಗ್ ಗಳಿಂದ ನಟ ಎಂದು ಕರೆಸಿಕೊಂಡಿರುವ ಸರ್ಕಸ್ ಗಿರಾಕಿಗಳಂತೆ ಕಾಣುವ ನಮ್ಮ ನಾಯಕ ನಟರುಗಳು ನಿರ್ದೇಶಕ ವೇಟ್ರಿಮಾರನ್ ಮತ್ತು ನಟ ಧನುಷ್ ಅವರಿಂದ ಕಲಿಯುವುದು ಸಾಕಷ್ಟಿದೆ.

ರಮ್ಯಾಕೃಷ್ಣಾಗೆ ವಯಸ್ಸೇ ಆಗಲ್ವಾ?!

Previous article

ಅಭಿನಯದಲ್ಲಿ ನಿಜಕ್ಕೂ ಚಕ್ರವರ್ತಿಯೇ…

Next article

You may also like

Comments

Leave a reply

Your email address will not be published. Required fields are marked *