ಧೃವಾ ಸರ್ಜಾ ಕನ್ನಡ ಚಿತ್ರರಂಗದ ಟಾಪ್ ಸ್ಟಾರ್ ಅನ್ನೋದು ಸಾಬೀತಾಗಿತ್ತು. ಒಂದಷ್ಟು ಜನ ನೀವೂ ‘ಡಿ ಬಾಸ್’ ಅಂತಾ ಮರ ಹತ್ತಿಸಲು ಹೊರಟಿದ್ದರು. ಆಗ ಧೃವಾ ಹೇಳಿದ್ದು ಒಂದೇ ಮಾತು ; ‘ಅಭಿಮಾನಿಗಳ ಪಾಲಿಗೆ ಡಿ ಬಾಸ್ ಅಂದರೆ ಅದು ದರ್ಶನ್ ಅಣ್ಣ ಮಾತ್ರ. ನನಗಂತೂ ಆಂಜನೇಯನೇ ಬಾಸು’ ಅಂದಿದ್ದರು.

ಎಲ್ಲೋ ಕೆಲವು ಅದೃಷ್ಟವಂತರನ್ನು ಬಿಟ್ಟರೆ, ಎಲ್ಲರೂ ಒಂದೇ ಸಿನಿಮಾಗೆ ಸ್ಟಾರ್ ಆಗಿಬಿಡಲು ಸಾಧ್ಯವಿಲ್ಲ. ಒಂದರ ಹಿಂದೊಂದು ಸಿನಿಮಾಗಳು ಶುರುವಾಗಿ ಅವು ಹಿಟ್ ಆಗಿ, ಅದರಲ್ಲಿ ಅಭಿನಯ, ಮ್ಯಾನರಿಸಮ್ಮು ಇತ್ಯಾದಿಗಳು ಪ್ರೇಕ್ಷಕರ ಮನಸ್ಸಿಗೆ ಹಿಡಿಸಿ, ಹಂತ ಹಂತವಾಗಿ ಜನ ಇಷ್ಟ ಪಡಲು ಶುರು ಮಾಡುತ್ತಾರೆ. ಶಿಳ್ಳೆ, ಚಪ್ಪಾಳೆಗಳು ಹೆಚ್ಚಾಗುತ್ತವೆ, ಕಟೌಟು, ಸ್ಟಾರು ಕಟ್ಟುವ ಮಟಕ್ಕೆ ಬೆಳೆದು, ಹಾಲಿನಭಿಷೇಕ ಇತ್ಯಾದಿ ಅತಿರೇಕದ ಆಚರಣೆಗಳ ತನಕ ಅಭಿಮಾನ ವೃದ್ಧಿಸುತ್ತದೆ!

ಇವತ್ತು ಚಿತ್ರರಂಗ ಇರುವ ಪರಿಸ್ಥಿತಿಯಲ್ಲಿ ಒಬ್ಬ ಹೀರೋ ಬೆಳೆದುನಿಲ್ಲಬೇಕೆಂದರೆ, ಮತ್ತೊಂದು ದೊಡ್ಡ ಮರದ ಸಹಾಯ ಬೇಕು. ಸೂಪರ್ ಸ್ಟಾರ್ ಅನ್ನಿಸಿಕೊಂಡವರು ಕೈ ಹಿಡಿದು ನಡೆಸಿದರೆ ಬೆಳೆಯೋ ಹುಡುಗರಿಗೆ ಇನ್ನೊಂದಿಷ್ಟು ಪುಷ್ಟಿ ನೀಡಿದಂತಾಗುತ್ತದೆ. ಏನೇ ಆದರೂ ಅಂತಿಮವಾಗಿ, ಎಷ್ಟರ ಮಟ್ಟಿಗೆ ಪ್ರತಿಭೆ ಇದೆ ಅನ್ನೋದಷ್ಟೇ ಮುಖ್ಯ. ಚೀಪ್ ಗಿಮಿಕ್ಕುಗಳೆಲ್ಲಾ ಜಾಸ್ತಿ ದಿನ ನಡೆಯೋದೂ ಇಲ್ಲ!

ಸದ್ಯ ಚಾಲ್ತಿಯಲ್ಲಿರುವ ಉದಯೋನ್ಮುಖ ಹೀರೋಗಳ ಪಟ್ಟಿಯಲ್ಲಿ ಧನ್ವೀರ್ ಕೂಡಾ ಒಬ್ಬ. ತೀರಾ ಸಣ್ಣ ವಯಸ್ಸಿಗೇ ಹೀರೋ ಆದ ಹುಡುಗನೀತ. ಬಜ಼ಾರ್ ಮೂಲಕ ಒಂದು ಮಟ್ಟದ ಕ್ರೇಜ಼್ ಕ್ರಿಯೇಟ್ ಮಾಡಿರುವ ಧನ್ವೀರ್’ಗೆ ಆರಂಭದಿಂದಲೂ ಛಾಲೆಂಜಿಂಗ್ ಸ್ಟಾರ್ ದರ್ಶನ್ ಸಾಥ್ ನೀಡಿದ್ದಾರೆ. ಪ್ರತಿಭಾವಂತರೆನಿಸಿಕೊಂಡ ಯಾರೇ ಆದರೂ ಅವರಿಗೆ ತಮ್ಮಿಂದಾದಷ್ಟು ಸಹಕಾರ ನೀಡೋದು ದರ್ಶನ್ ಗುಣ.

ಹಾಗಂತ ಕುಂತರೂ ನಿಂತರೂ ಅವರ ಹೆಸರನ್ನೇ ಬಳಸಿಕೊಳ್ಳೋದು ಎಷ್ಟು ಸರಿ? ತಾವು ದರ್ಶನ್ ಅವರಿಗೆ ಜೈ ಅಂದರೆ ಅವರ ಅಭಿಮಾನಿಗಳೆಲ್ಲಾ ತಮಗೆ ಜೈಕಾರ ಹಾಕುತ್ತಾರೆನ್ನುವ ತಪ್ಪು ಕಲ್ಪನೆ ಕೆಲವರಲ್ಲಿದೆ. ದರ್ಶನ್ ಆಗಲಿ ಬೇರೆ ಯಾರೇ ದೊಡ್ಡ ಹೀರೋಗಳಾಗಲಿ, ಯಶಸ್ಸು, ಅಭಿಮಾನ ಇತ್ಯಾದಿಗಳೆಲ್ಲಾ ಒಂದೇ ಏಟಿಗೆ ದಕ್ಕಿಸಿಕೊಂಡವರಲ್ಲ. ಪಡಬಾರದ ಕಷ್ಟ, ನೋವು, ಯಾತನೆ, ಅವಮಾನಗಳ ನಡುವೆಯೇ ಸಿಕ್ಕ ಅವಕಾಶಗಳನ್ನು ಬಳಸಿಕೊಂಡು, ಶ್ರಮವಹಿಸಿ ದುಡಿದದ್ದರ ಪ್ರತಿಫಲವಾಗಿ ಜನ, ವರ್ಚಸ್ಸು, ಹಣ ಎಲ್ಲವೂ ಜೊತೆಯಾಯಿತು.

ಈ ನಿಟ್ಟಿನಲ್ಲಿ ನೋಡಿದರೆ ಧನ್ವೀರ್ ಸ್ಥಿತಿವಂತರ ಮನೆಯ ಹುಡುಗ. ಈತನ ತಂದೆ ತಿಮ್ಮೇಗೌಡ್ರು ದೊಡ್ಡ ಉದ್ಯಮಿ. ಬೇರೆ ನಿರ್ಮಾಪಕರು ಬರದಿದ್ದರೂ ತಮ್ಮ ಮಗನಿಗಾಗಿ ವರ್ಷಕ್ಕೊಂದಾದರೂ ಸಿನಿಮಾ ಮಾಡುವ ತಾಕತ್ತಿರುವವರು. ಧನ್ವೀರ್’ಗೆ ಕೂಡಾ ಹೀರೋ ಆಗಿ ನೆಲೆ ನಿಲ್ಲಲು ಬೇಕಿರುವ ಎತ್ತರ, ತೂಕ, ಲಕ್ಷಣ – ಎಲ್ಲವೂ ಇದೆ. ಧನ್ವೀರ್ ನಟಿಸಿದ ಮೊದಲ ಸಿನಿಮಾಗೆ ದರ್ಶನ್ ಬೇಕುಬೇಕಾದಷ್ಟು ಸಹಕಾರ ನೀಡಿದ್ದರು. ಎರನೇ ಸಿನಿಮಾದ ಮುಹೂರ್ತಕ್ಕೂ ಬಂದು ಹರಸಿದ್ದಾರೆ. ಹಾಗಂತ ಪ್ರತೀ ಹೆಜ್ಜೆಯಲ್ಲೂ ಅವರೇ ಇರಬೇಕು, ಅವರನ್ನೇ ಅನುಕರಿಸಬೇಕು ಅಂದರೆ ಹೇಗೆ?

‘ಡಿ ಬಾಸ್ ಅಭಿಮಾನಿಗಳನ್ನು ಧನ್ವೀರ್ ಟಾರ್ಗೆಟ್ ಮಾಡಿಕೊಂಡಿದ್ದಾರೆ’ ಅಂತಾ ಸ್ವತಃ ದರ್ಶನ್ ಫ್ಯಾನ್ಸು ಬಜಾರ್ ಹುಡುಗನ ಮೇಲೆ ಬೇಜಾರಾಗಿದ್ದಾರೆ. ತಮ್ಮ ಫೋಟೋ ಸ್ಟಿಕರುಗಳನ್ನು ಪ್ರಿಂಟ್ ಮಾಡಿಸಿ ಕೊಟ್ಟು ದರ್ಶನ್ ಅವರ ಫೋಟೋ ಪಕ್ಕ ಹಾಕಿಸಿಕೊಳ್ಳುತ್ತಿದ್ದಾರೆ, ಅವರ ಕೆಲವು ಅಭಿಮಾನಿಗಳಿಗೆ ಹಣದ ಆಮಿಷ ತೋರಿದ್ದಾರೆ ಅನ್ನೋ ಆರೋಪಗಳೆಲ್ಲಾ ಕೇಳಿಬರುತ್ತಿವೆ. ಅದು ಎಷ್ಟು ನಿಜವೋ ಸುಳ್ಳೋ ಗೊತ್ತಿಲ್ಲ. ಅದರೆ ಧನ್ವೀರ್ ನಡೆಯಲ್ಲಿ ಒಂದಿಷ್ಟು ಕೃತಕತೆ ಕಾಣುತ್ತಿದೆ. ಖಾಸಗಿಯಾಗಿ ನಡೆಯುವ ಪ್ರೆಸ್ ಮೀಟಲ್ಲೂ ಹುಡುಗರನ್ನು ನಾಟಕೀಯವಾಗಿ ಕರೆಸಿ ಜೈಕಾರ ಕೂಗಿಸಿಕೊಂಡು, ಹಾರ ಹಾಕಿಸಿಕೊಳ್ಳುವುದು ಪತ್ರಕರ್ತರಿಗೇ ರೇಜಿಗೆ ಹುಟ್ಟಿಸಿದ್ದಿದೆ.

ಧನ್ವೀರ್ ಮ್ಯಾನೇಜರ್ ಸಿದ್ದು ಎಂಬಾತ ಬೇರೆ ನಟರ ಅಭಿಮಾನಿಗಳ ಮೊಬೈಲಿಗೆ ‘ರಾಜಾಜಿನಗರದ ಮನೆಗೆ ಬನ್ನಿ ಬಾಸ್ ಸಿಗ್ತಾರೆ’ ಅಂತಾ ಮೆಸೇಜು ಬಿಡುತ್ತಾನಂತೆ. ಧನ್ವೀರ್ ಮನೆ ಮುಂದೆ ನಿಜಕ್ಕೂ ಜನ ಕ್ಯೂ ನಿಲ್ಲಬೇಕೆಂದರೆ, ಸೈಲೆಂಟಾಗಿ ನಾಲ್ಕಾರು ಗೆಲ್ಲುವ ಸಿನಿಮಾ ಕೊಟ್ಟರೆ ಸಾಕು. ಜೊತೆಗೆ ನಯವಿನಯ, ಸೋಲಿಗೆ ಅಂಜದ, ಗೆಲುವಿಗೆ ಹಿಗ್ಗದ ಮನಸ್ಥಿತಿ, ನಡತೆಯಲ್ಲಿ ಸಹಜತೆಗಳಿದ್ದರೆ ಹುಡುಗ ಎಷ್ಟು ಎತ್ತರಕ್ಕೆ ಬೇಕಾದರೂ ಬೆಳೆಯಬಹುದು. ಜನಕ್ಕೆ ಇಷ್ಟವಾಗುವ ಸಿನಿಮಾಗಳನ್ನು ಮಾಡುತ್ತಾ ಬಂದರೆ ಸಹಜವಾಗೇ ಅಭಿಮಾನಿಗಳು ಹುಟ್ಟಿಕೊಳ್ಳುತ್ತಾರೆ. ನಯಾ ಪೈಸೆ ಖರ್ಚಿಲ್ಲದೆಯೂ ಸಂಘಗಳು ಸ್ಥಾಪನೆಯಾಗುತ್ತವೆ. ಅದು ಬಿಟ್ಟು ಬೇರೆ ಏನೇ ಮಾಡಿದರೂ ಅದು ತಾತ್ಕಲಿಕವಷ್ಟೇ.

ಇನ್ನೂ ಎರಡನೇ ಸಿನಿಮಾ ರಿಲೀಸಾಗೋ ಮುಂಚೆಯೇ ಬಾಸ್ ಅನ್ನಿಸಿಕೊಳ್ಳುವ ಬಯಕೆ, ಬಿಲ್ಡಪ್ಪುಗಳೆಲ್ಲಾ ಮಾಡುತ್ತಾ ನಿಂತರೆ ಪ್ರತಿಭೆಯೆನ್ನೋದು ತಳ ಹಿಡಿದು ಸೀದುಹೋಗುತ್ತದೆ. ಹಾಗಾಗುವುದು ಬೇಡ ಧನ್ವೀರ್. ಆತುರವೇಕೆ? ನಿಧಾನವಾದರೂ ಪರವಾಗಿಲ್ಲ, ಯಾರೂ ಅಲ್ಲಾಡಿಸದಂತೆ ನಿಮ್ಮ ಕಾಲ ಮೇಲೆ ನೀವು ನಿಲ್ಲಿ. ಪ್ರತೀ ಸಲ ಆಸರೆ ಬಯಸಬೇಡಿ… ಒಳ್ಳೇದಾಗ್ಲಿ ಧ್ವನ್ವೀರ್!

ದಿನಕರ್ ತೂಗುದೀಪ ದರ್ಶನ್ ಅವರ ಒಡಹುಟ್ಟಿದ ಸಹೋದರ. ಆದರೆ ಯಾವತ್ತೂ ಅವರು ಅಣ್ಣನ ವರ್ಚಸ್ಸನ್ನು ತಮ್ಮ ಲಾಭಕ್ಕೆ ಕನ್ವರ್ಟ್ ಮಾಡಿಕೊಂಡವರಲ್ಲ. ದರ್ಶನ್ ಅವರ ಅತಿ ದೊಡ್ಡ ಹಿಟ್ ಸಿನಿಮಾ ಸಾರಥಿಯನ್ನು ನಿರ್ದೇಶಿಸಿದ್ದು ಸ್ವತಃ ದಿನಕರ್. ಆದರೆ ಯಾವತ್ತೂ ದರ್ಶನ್ ಅವರ ಜನಪ್ರಿಯತೆಯನ್ನು ತಮ್ಮ ಲಾಭಕ್ಕೆ ಬಳಸಿಕೊಂಡವರಲ್ಲ, ಬೀಗಲಿಲ್ಲ.

(ಈ ವರದಿ ಯಾವುದೇ ವ್ಯಕ್ತಿಯ ಮಾನಹಾನಿ ಮಾಡುವ ಉದ್ದೇಶ ಹೊಂದಿಲ್ಲ)

CG ARUN

ಬಿಟ್ಟಿಯಾಗಿ ಹಾಡಿದ್ದರಾ?

Previous article

ಚೆಕ್ ಮೇಟ್ ಟೀಸರ್ ಬಂದಿದೆ!

Next article

You may also like

Comments

Leave a reply

Your email address will not be published. Required fields are marked *