ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಎರಡು ವರ್ಷಗಳಿಗೊಂದು ಚಿತ್ರ ಮಾಡುತ್ತಾರೆಂಬ ಬಗ್ಗೆ ಅವರ ಅಭಿಮಾನಿಗಳೆಲ್ಲರಲ್ಲಿ ಪ್ರೀತಿ ತುಂಬಿದ ತಕರಾರೊಂದಿದೆ. ಆದರೆ ಕನಿಷ್ಠ ವರ್ಷಕ್ಕೊಂದಾದರೂ ಚಿತ್ರ ಮಾಡುವಂತೆ ಸಾಕ್ಷಾತ್ತು ಅಂಬರೀಶ್ ಅವರೇ ಕಿವಿ ಹಿಂಡಿದ್ದರಲ್ಲಾ? ಅದರಿಂದಾಗಿಯೇ ಧ್ರುವ ಬೇಗ ಬೇಗನೆ ಸಿನಿಮಾ ಮುಗಿಸಿಕೊಳ್ಳಲು ತಯಾರಾಗಿದ್ದರು. ಈ ವಿದ್ಯಮಾನದ ಹಿಂಚುಮುಂಚಲ್ಲಿಯೇ ನಂದಕಿಶೋರ್ ನಿರ್ದೇಶನದ ಪೊಗರು ಚಿತ್ರದಲ್ಲಿ ನಟಿಸಲೂ ಧ್ರುವ ತಯಾರಾಗಿದ್ದರು.
ದುರಂತವೆಂದರೆ ತಿಂಗಳುಗಳು ಸರಿದು ವರ್ಷವೊಂದು ಜಮೆಯಾಗುತ್ತಾ ಬಂದರೂ ಪೊಗರು ಚಿತ್ರದ ಸುಳಿವೇ ಇಲ್ಲ. ಇದರಿಂದ ನಿರಾಸೆಗೊಂಡವರೆಲ್ಲ ಕಾರಣ ಕೆದಕಲಾರಂಭಿಸಿದ್ದರು. ಇದೀಗ ಧ್ರುವ ಸರ್ಜಾ ಪೊಗರು ಚಿತ್ರವನ್ನು ಪೂರೈಸಲಾಗದಿರೋದರ ಹಿಂದಿರೋ ಅಸಲೀ ಕಾರಣವೊಂದನ್ನು ಸಿನಿಬಜ಼್ ಕಲೆ ಹಾಕಿದೆ!
ತಾಯಿಯನ್ನು ತುಂಬಾ ಹಚ್ಚಿಕೊಂಡು ಬೆಳೆದ ಹುಡುಗ ಧೃವ ಸರ್ಜಾ. ಯಾವುದೇ ಚಿತ್ರ ಮಾಡೋದಿರಲಿ, ಯಾವ ನಿರ್ಧಾರ ತೆಗೆದುಕೊಳ್ಳೋದಿದ್ದರೂ ಅಮ್ಮನ ಒಪ್ಪಿಗೆ, ಹಾರೈಕೆ ಪಡೆದೇ ಮುಂದುವರೆಯೋದು ಧ್ರೃವಾ ಪರಿಪಾಲಿಸಿಕೊಂಡು ಬಂದಿರೋ ರೂಢಿ. ಒಂದರ್ಥದಲ್ಲಿ ಅಮ್ಮ ಅಂದ್ರೆ ಧ್ರುವ ಪಾಲಿಗೆ ಪ್ರಪಂಚವಿದ್ದಂತೆ. ಅದೇ ರೀತಿ ಅಮ್ಮನ ಆಶೀರ್ವಾದದೊಂದಿಗೆ ಹೊಸಾ ಹುರುಪಿನಿಂದಲೇ ಅವರು ನಂದಕಿಶೋರ್ ನಿರ್ದೇಶನದ ಪೊಗರು ಚಿತ್ರಕ್ಕೆ ರೆಡಿಯಾಗಲಾರಂಭಿಸಿದ್ದರು. ಇದರಲ್ಲಿನ ಪಾತ್ರಗಳಿಗೆ ಎರಡು ಶೇಡ್ ಇದೆ. ಹದಿನೈದು ವರ್ಷದ ಹುಡುಗನಾಗಿಯೂ ಧ್ರುವ ಕಾಣಿಸಿಕೊಳ್ಳಬೇಕಿತ್ತು.
ಇದಕ್ಕಾಗಿ ಹೊಸಾ ದೈಹಿಕ ಕಸರತ್ತುಗಳನ್ನೂ ಕೂಡಾ ಧ್ರುವ ಆರಂಭಿಸಿದ್ದರು. ಆದರೆ ಇದೆಲ್ಲ ಚಾಲ್ತಿಯಲ್ಲಿರುವಾಗಲೇ ಧ್ರುವ ಅವರ ತಾಯಿ ಅಮ್ಮಾಜಿ ಏಕಾಏಕಿ ಕಾಯಿಲೆಗೀಡಾಗಿದ್ದರು. ಎಲ್ಲ ಹುರುಪುಗಳೂ ಇಳಿದು ಹೋದಂತಾಗಿ ಅಮ್ಮನ ದೇಖಾರೇಕಿಗೆ ನಿಂತ ಧ್ರುವ ಒಂದಷ್ಟು ಕಾಲ ಅದರಲ್ಲಿಯೇ ಕಳೆದು ಹೋಗಿದ್ದರು. ನಂತರ ಅಮ್ಮ ಚೇತರಿಸಿಕೊಂಡರಾದರೂ ಪೊಗರು ಕಥೆಗೂ ಮುಂಚೆ ನಂದ ಕಿಶೋರ್ ನಿರ್ದೇಶನದಲ್ಲಿಯೇ ಮತ್ತೊಂದು ಚಿತ್ರದಲ್ಲಿ ನಟಿಸಲೂ ಮುಂದಾಗಿದ್ದರು. ಅಲ್ಲು ಅರ್ಜುನ್ ನಟಿಸಿದ್ದ ತೆಲುಗಿನ ಸರೈನುಡು ಚಿತ್ರದ ರೀಮೇಕ್ ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡು ಅದರ ಕೆಲಸ ಕಾರ್ಯಗಳಲ್ಲಿ ತೊಡಗಿಕೊಳ್ಳಬೇಕೆನ್ನುವಷ್ಟರಲ್ಲಿ ಧ್ರುವಾಗೆ ಮತ್ತೊಂದು ಆಘಾತ ಕಾದಿತ್ತು!
ಪೊಗರು ಚಿತ್ರದ ಆರಂಭದ ಹಂತದಲ್ಲಿ ಅನಾರೋಗ್ಯಕ್ಕೀಡಾಗಿ ಚೇತರಿಸಿಕೊಂಡು ಮೊದಲಿನಂತಾಗಿದ್ದ ಧ್ರವಾ ತಾಯಿಗೆ ಸ್ಟ್ರೋಕ್ ಆಗಿತ್ತು. ಯಾರೇ ಆದರೂ ಇಂಥಾ ಆಘಾತವನ್ನು ಭರಿಸಿಕೊಳ್ಳೋದು ಕಷ್ಟ. ತಾಯಿಯನ್ನು ವಿಪರೀತ ಹಚ್ಚಿಕೊಂಡಿರೋ ಧ್ರುವ ತನ್ನ ಚಿತ್ರಕ್ಕಿಂತ ತಾಯಿಯೇ ಮುಖ್ಯ ಅಂದುಕೊಂಡು ಶುಷ್ರೂಷೆಯಲ್ಲಿ ತೊಡಗಿಕೊಂಡಿದ್ದರು. ಈ ಕ್ಷಣಕ್ಕೂ ಧ್ರುವ ತಾಯಿಯ ಆರೋಗ್ಯದಲ್ಲಿ ಹೇಳಿಕೊಳ್ಳುವಂಥಾ ಸುಧಾರಣೆಗಳೇನೂ ಆಗಿಲ್ಲ.
ಪದೇ ಪದೆ ಎದುರಾದ ಇಂಥಾ ಆಘಾತದಿಂದ ಮನಸು ಗಟ್ಟಿ ಮಾಡಿಕೊಂಡು ಧ್ರುವ ಮತ್ತೆ ಬಣ್ಣ ಹಚ್ಚುವ ತಯಾರಿಯಲ್ಲಿದ್ದಂತಿದೆ. ಅಭಿಮಾನಿಗಳು ಮತ್ತು ನಿರ್ದೇಶಕ ನಂದಕಿಶೋರ್ ಕೂಡಾ ಅದನ್ನೇ ನಿರೀಕ್ಷಿಸುತ್ತಿದ್ದಾರೆ. ಧ್ರುವ ಸರ್ಜಾ ಅವರ ಅಮ್ಮನ ಆರೋಗ್ಯ ಆದಷ್ಟು ಬೇಗನೆ ಸುಧಾರಿಸಲಿ. ನೆನೆಗುದಿಗೆ ಬಿದ್ದಿರೋ ಪೊಗರು ಚಿತ್ರ ಮತ್ತಷ್ಟು ಖದರ್ ತುಂಬಿಕೊಂಡು ಪುಟಿದೇಳುವಂತಾಗಲಿ…
#
No Comment! Be the first one.