ಧ್ರುವ ಸರ್ಜಾ ಅಪ್ಪ ಆಗುತ್ತಿದ್ದಾರೆ. ಹಾಗಂತ ಈ ವಿಷಯವನ್ನು ಅವರೇ ಸೋಷಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ. ಪತ್ನಿಯ ಪ್ರೆಗ್ನನ್ಸಿ ಫೋಟೋಗಳನ್ನು ಹಂಚಿಕೊಳ್ಳುವುದರ ಜತೆಗೆ, ತಾವು ಅಪ್ಪ ಆಗುತ್ತಿರುವ ಸಿಹಿಸುದ್ದಿಯನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.
ಅಂದಹಾಗೆ, ಸರ್ಜಾ ಫ್ಯಾಮಿಲಿ ಇತ್ತೀಚೆಗೆ ಸಾಕಷ್ಟು ನೋವು ಅನುಭವಿಸಿತ್ತು. ಮೊದಲಿಗೆ ಚಿರಂಜೀವಿ ಸರ್ಜಾ ನಿಧನ. ನಂತರ ಅರ್ಜುನ್ ಸರ್ಜಾ ಅವರ ಮಾವ ಮತ್ತು ಹಿರಿಯ ನಟ ರಾಜೇಶ್ ಅವರ ನಿಧನದಿಂದ ಈ ಕುಟುಂಬ ಸಾಕಷ್ಟು ನೊಂದಿತ್ತು. ಇತ್ತೀಚೆಗೆ ಅರ್ಜುನ್ ಸರ್ಜಾ ಅವರ ತಾಯಿ ಮತ್ತು ಧ್ರುವ ಅವರ ಅಜ್ಜಿ ಲಕ್ಷ್ಮೀದೇವಮ್ಮ ಸಹ ನಿಧನರಾಗಿದ್ದರು. ಹೀಗೆ ಬ್ಯಾಕ್ ಟು ಬ್ಯಾಕ್ ಸಾವು, ನೋವಿನ ಸುದ್ದಿಯಿಂದ ಸುಸ್ತಾಗಿದ್ದ ಸರ್ಜಾ ಕುಟುಂಬಕ್ಕೆ ಹೀಗೆ ಹೊಸ ಜೀವದ ಆಗಮನ ಖುಷಿ ನೀಡಿದೆ. ಬರೀ ಸರ್ಜಾ ಕುಟುಂಬಕ್ಕಷ್ಟೇ ಅಲ್ಲ, ಧ್ರುವ ಅಭಿಮಾನಿಗಳು ಸಹ ಫುಲ್ ಖುಷಿಯಾಗಿದ್ದು, ತಮ್ಮ ಮೆಚ್ಚಿನ ನಟ ಅಪ್ಪ ಆಗುತ್ತಿರುವುದಕ್ಕೆ ಕಾಯುತ್ತಿದ್ದಾರೆ.
ಒಂದು ಕಡೆ ಎಲ್ಲರೂ ಖುಷಿಯಾಗಿದ್ದರೆ, ಧ್ರುವ ಚಿತ್ರಗಳ ನಿರ್ಮಾಪಕರಿಗೆ ಮಾತ್ರ ಸಣ್ಣ ಟೆನ್ಷನ್ ಶುರುವಾಗಿದೆ. ಅದಕ್ಕೆ ಕಾರಣ, ಧ್ರುವ ಎಲ್ಲಿ ಚಿತ್ರೀಕರಣ ಮುಂದೂಡಿಬಿಡುತ್ತಾರೋ ಎಂಬ ಭಯ. ಎಲ್ಲ ಅಂದುಕೊಂಡಂತೆ ಆಗಿದ್ದರೆ, ಧ್ರುವ ಅಭಿನಯದ ಮಾರ್ಟಿನ್ ಚಿತ್ರವು ಇದೇ ಸೆ. 30ರಂದು ಬಿಡುಗಡೆಯಾಗಬೇಕಿತ್ತು. ಆದರೆ, ಇನ್ನೂ ಚಿತ್ರೀಕರಣವೇ ಮುಗಿದಿಲ್ಲ. ಏಪ್ರಿಲ್ನಲ್ಲೇ ಚಿತ್ರೀಕರಣ ಮುಗಿದಿರಬೇಕಿತ್ತು. ಆದರೆ, ಮೂಲಗಳ ಪ್ರಕಾರ ಚಿತ್ರ ಮೂಡಿಬರುತ್ತಿರುವ ರೀತಿ ಸರಿ ಹೋಗುತ್ತಿಲ್ಲವೆಂದು ಧ್ರುವ ಒಂದಿಷ್ಟು ಬದಲಾಯಿಸಿದರಂತೆ. ಹಾಗಾಗಿ, ಚಿತ್ರ ತಡವಾಗಿದೆ. ಇನ್ನೇನು ಶುರುವಾಗಬೇಕು ಎನ್ನುವಷ್ಟರಲ್ಲಿ ಮಳೆಯಿಂದ ಮತ್ತೆ ಮುಂದಕ್ಕೆ ಹೋಗಿದೆ. ಮತ್ತೆ ಶುರುವಾಗಬೇಕು ಎನ್ನುವಷ್ಟರಲ್ಲಿ ಧ್ರುವ ಅಜ್ಜಿ ಆಸ್ಪತ್ರೆಗೆ ದಾಖಲಾಗಿದ್ದರಿಂದ, ಒಂದೂವರೆ ತಿಂಗಳುಗಳ ಕಾಲ ಧ್ರುವ ಚಿತ್ರೀಕರಣಕ್ಕೆ ಬರಲಿಲ್ಲವಂತೆ. ಇತ್ತೀಚೆಗೆ ಮತ್ತೆ ಶುರುವಾಗಿದೆಯಾದರೂ, ಅದು ಮುಗಿಯುವುದು ಯಾವಾಗ, ಚಿತ್ರ ಬಿಡುಗಡೆ ಯಾವಾಗ ಎಂದು ಚಿತ್ರತಂಡದವರಿಗೇ ಗೊತ್ತಿಲ್ಲ.
ಇನ್ನು, ಈ ಚಿತ್ರವೇ ನಿಧಾನವಾಗುತ್ತಿರುವುದರಿಂದ, ಧ್ರುವ ಸರ್ಜಾ ಅಭಿನಯದಲ್ಲಿ ಪ್ರೇಮ್ ನಿರ್ದೇಶಿಸುತ್ತಿರುವ ಹೊಸ ಚಿತ್ರ ಮುಂದಕ್ಕೆ ಹೋಗುತ್ತಿದೆ. ಇಷ್ಟರಲ್ಲಾಗಲೇ ಚಿತ್ರೀಕರಣ ಪ್ರಾರಂಭವಾಗಿ ಅರ್ಧ ಮುಗಿದಿರಬೇಕಿತ್ತು. ಚಿತ್ರತಂಡದವರು ಮಂಡ್ಯದ ಬಳಿ ಸೆಟ್ ಸಹ ನಿರ್ಮಿಸಿದ್ದರು. ಆದರೆ, ಮಾರ್ಟಿನ್ ಮುಗಿಯುವವರೆಗೂ ಈ ಚಿತ್ರ ಶುರುವಾಗುವಂತಿಲ್ಲ. ಈಗಾಗಲೇ ಮಳೆಗೆ ಅದೆಷ್ಟು ಸೆಟ್ ನಾಶವಾಗಿದೆಯೋ ಗೊತ್ತಿಲ್ಲ.
ಹೀಗಿರುವಾಗಲೇ ಧ್ರುವ ಅಪ್ಪ ಆಗುತ್ತಿರುವ ಸುದ್ದಿಯನ್ನು ಹೇಳಿದ್ದಾರೆ. ಹೆಂಡತಿ ಹೆರಿಗೆಯ ಹೊತ್ತಿಗೆ ಅವರು ಒಂದಿಷ್ಟು ದಿನ ಚಿತ್ರೀಕರಣಕ್ಕೆ ರಜ ಹಾಕಿ, ಜೊತೆಯಲ್ಲಿರುವುದು ಸಹಜ. ಆ ನಂತರವೂ ಒಂದು ಪಕ್ಷ, ಧ್ರುವ ಏನಾದರೂ ಮಗುವನ್ನು ಆಟವಾಡಿಸುತ್ತಾ ಕುಳಿತುಬಿಟ್ಟರೆ, ಆಗ ಎಲ್ಲವೂ ತಡವಾಗುತ್ತದೆ. ಆಗ ಮಾರ್ಟಿನ್ ಮುಗಿಯುವುದು ವರ್ಷದ ಕೊನೆಯಾಗುತ್ತದೆ ಮತ್ತು ಹೊಸ ಚಿತ್ರವೇನಿದ್ದರೂ ಮುಂದಿನ ವರ್ಷವೇ. ಇನ್ನು, ಮಾರ್ಟಿನ್ ಯುಗಾದಿಗೆ ಬಿಡುಗಡೆಯಾಗಿ, ಪ್ರೇಮ್ ನಿರ್ದೇಶನದ ಸಿನಿಮಾ 2024ರಲ್ಲಿ ಬಿಡುಗಡೆಯಾದರೆ ಆಶ್ಚರ್ಯವಿಲ್ಲ. ಹಾಗಾಗಿ, ನಿರ್ಮಾಪಕರಿಗೆ ಸಣ್ಣ ಟೆನ್ಶನ್ ಶುರುವಾಗಿರುವುದಂತೂ ನಿಜ.
ಧ್ರುವ ಮುಂದೇನು ಮಾಡುತ್ತಾರೆ ಎಂಬ ಕುತೂಹಲ ಎಲ್ಲರಿಗೂ ಇದೆ. ಯಾವುದಕ್ಕೂ ಕಾದು ನೋಡಬೇಕು.
No Comment! Be the first one.