೨-೧=೩ : ಇದು ಪ್ರೀತಿಯ ಹೊಸಾ ವ್ಯಾಖ್ಯಾನ
ಒಂದು ಪ್ರೀತಿ, ಪ್ರೀತಿಗೆ ಜೊತೆಯಾಗುವ ಮತ್ತೊಂದು ಒಲವು. ಎರಡೂ ಒಂದಾಗಬೇಕೆನ್ನುವಷ್ಟರಲ್ಲಿ ಅಡ್ಡ ಬರುವ ವಿಧಿ. ಒಲಿದುಬಂದಿದ್ದು ದೂರಾದಾಗ ಚಿಂತೆಗೀಡಾಗುವ ಪ್ರೀತಿ. ಆಗ ಎದುರಾಗುವ ಸ್ನೇಹ. ಅದು ಪ್ರೀತಿಯ ಜೊತೆ ಬಯಸುತ್ತಾ? ಒಂದು ವೇಳೆ ಸ್ನೇಹ ಮತ್ತು ಪ್ರೀತಿ ಒಂದಾದಮೇಲೆ ಹಳೆಯ ಒಲವು ಮತ್ತೆ ಎದುರಾದರೆ ಏನು ಕತೆ?… ಹೀಗೆ ಪ್ರೀತಿಯೇ ಜೀವಾಳವಾಗಿರುವ ಕತೆಯನ್ನು ಹೊತ್ತುಬಂದಿರುವ ಸಿನಿಮಾ ದಿಯಾ!
ಸಿನಿಮಾಗಳಲ್ಲಿ ಪ್ರೀತಿ ಶುರುವಾಗೋದನ್ನ ಎಲ್ಲಿಂದ ತೋರಿಸುತ್ತಾರೆ? ಹುಡುಗನಿಗೆ ಹುಡುಗಿಯ ಮೇಲೆ ಮನಸ್ಸಾಗುತ್ತದೆ. ಆತ ಆಕೆಯ ಬೆನ್ನುಬೀಳುತ್ತಾನೆ. ಮಾತಾಡಿಸುವ ಪ್ರಯತ್ನ ಮಾಡುತ್ತಾನೆ. ಪ್ರಪೋಸ್ ಮಾಡುತ್ತಾನೆ… ಹೀಗೆ ಬಹುತೇಕ ಹುಡುಗರ ದೃಷ್ಟಿಯಲ್ಲಷ್ಟೇ ಪ್ರೀತಿಯನ್ನು ಪ್ರದರ್ಶಿಸಲಾಗುತ್ತದೆ. ಆದರೆ ದಿಯಾ ಸಿನಿಮಾದಲ್ಲಿ ಹಾಗಿಲ್ಲ.
ಮೊದಲಿಗೆ ಹುಡುಗನನ್ನು ನೋಡುವುದು, ಅವನನ್ನು ಮಾತಾಡಿಸಲು ಹೆಣಗಾಡುವುದು, ಅವನ ಸಖ್ಯಕ್ಕಾಗಿ ಹಂಬಲಿಸುವುದು ಇಲ್ಲಿ ಹುಡುಗಿಯ ಕೆಲಸ!
ತೀರಾ ಕ್ಯೂಟ್ ಎನಿಸುವ ಲವ್ ಸ್ಟೋರಿಯಿಂದ ಸಿನಿಮಾ ಶುರುವಾಗುತ್ತದೆ. ಅಂತರ್ಮುಖಿಯಂತಾ ವ್ಯಕ್ತಿತ್ವದ, ಸೈಲೆಂಟು ಹುಡುಗಿಯ ಮನಸ್ಸಲ್ಲಿ ಪ್ರೀತಿಯ ಅಲೆ ಭೋರ್ಗರೆಯುತ್ತದೆ. ಕಾಲೇಜಿನಲ್ಲಿ ತಾನು ಮೆಚ್ಚಿದ ಹುಡುಗ ಸಡನ್ನಾಗಿ ಮರೆಯಾಗುತ್ತಾನೆ. ವರ್ಷಗಳು ಮೂರಾದಮೇಲೆ. ಕಾಲೇಜು ಮುಗಿದಿರುತ್ತದೆ. ಬದುಕು ಬಾಂಬೆಗೆ ಶಿಫ್ಟ್ ಆಗಿರುತ್ತದೆ. ಆಗ ದಿಢೀರನೆ ಕಾಣೆಯಾಗಿದ್ದ ಹುಡುಗ ಕಣ್ಮುಂದೆ ಬರುತ್ತಾನೆ. ಅನುಕ್ಷಣವೂ ನೆನಪಿನಲ್ಲಿ ಇದ್ದವನು ಕಣ್ಣೆದುರೇ ಪ್ರತ್ಯಕ್ಷವಾದಾಗ ಏನಾಗುತ್ತದೆ? ಯಾರು ಯಾರನ್ನು ಮಾತಾಡಿಸಬಹುದು? ಹುಡುಗಿ ತನ್ನ ಪ್ರೀತಿಯನ್ನು ಅವನ ಮುಂದೆ ನಿವೇದಿಸಿಕೊಳ್ಳುತ್ತಾಳಾ? ಇವಳ ಬಗ್ಗೆ ಅವನ ಮಮನಸ್ಸಿನಲ್ಲಿ ಎಂಥಾ ಭಾವನೆ ಇರುತ್ತದೆ? ಹುಡುಗ-ಹುಡುಗಿ ಒಂದಾಗುತ್ತಾರಾ? ಒಂದು ವೇಳೆ ಒಂದಾದರೆ ಕತೆ ಅಲ್ಲಿಗೇ ಮುಗಿಯುತ್ತದಾ? ಹಾಗಿದ್ದರೆ ಮತ್ತೊಬ್ಬ ಹುಡುಗನಿಗೆ ಇಲ್ಲಿ ಏನು ಕೆಲಸ?
ತೀರಾ ಚೆಂದ ಎನಿಸುವ ಕತೆಯ, ಕಾಡುವ ಸನ್ನಿವೇಶಗಳೊಂದಿಗೆ ಜೀವ ಪಡೆದಿರುವ ಸಿನಿಮಾ ದಿಯಾ. ಇಡೀ ಸಿನಿಮಾ ಸೈಲೆಂಟಾಗೇ ಇದ್ದರೂ ಅದು ನೋಡುಗರ ಮನಸ್ಸಿನಲ್ಲಿ ಸೃಷ್ಟಿಸುವ ಸದ್ದು ದೊಡ್ಡದು. ಖುಷಿ ಮತ್ತು ದೀಕ್ಷಿತ್ ಶೆಟ್ಟಿ ಮುದ್ದು ಮುದ್ದಾದ ನಟನೆಯೊಂದಿಗೆ ಸಿನಿಮಾ ಶುರುವಾಗುತ್ತದೆ. ಅರ್ಧ ಸಿನಿಮಾ ಮುಗಿಯೋ ಹೊತ್ತಿಗೆ ಎಂಟ್ರಿ ಕೊಡುತ್ತಾನೆ ನೋಡಿ ಆ ಹುಡುಗ… ಇಷ್ಟು ದಿನ ಅದೆಲ್ಲಿದ್ದನೋ ಗೊತ್ತಿಲ್ಲ. ಹೆಸರು ಪೃಥ್ವಿ ಅಂಬರ್ ಅಂತೆ. ಇಡೀ ಸಿನಿಮಾವನ್ನು ನುಂಗಿಕೊಂಡವನಂತೆ ನಟಿಸಿದ್ದಾನೆ. ಆ ಮೂಲಕ, ಕೀಟಲೆ ಹುಡುಗನಾಗಿ ಬಂದು ಪ್ರೇಕ್ಷಕರ ಮನಸ್ಸಿನಲ್ಲಿ ಪರ್ಮನೆಂಟಾದ ಸ್ಥಾನ ಗಿಟ್ಟಿಸಿಕೊಂಡುಬಿಡುತ್ತಾನೆ. ಒಂದು ಸಿನಿಮಾದ ದೃಶ್ಯ ಅತಿಯಾದ ಪ್ರೀತಿಯನ್ನು ತೋರಿ ಕಣ್ಣೀರು ಸೃಷ್ಟಿಸುತ್ತದೆ ಅಂದರೆ ಅದರ ತಾಕತ್ತು ಎಂಥದ್ದು ಅಂತಾ ಊಹಿಸಿ. ದಿಯಾ ಸಿನಿಮಾ ಅದನ್ನು ಸಾಧ್ಯವಾಗಿಸಿದೆ. ೬-೫=೨ ಅನ್ನೋ ಥ್ರಿಲ್ಲರ್ ಜಾನರಿನ ಸಿನಿಮಾವನ್ನು ಕಟ್ಟಿಕೊಟ್ಟಿದ್ದ ಅಶೋಕ ಕೆ.ಎಸ್. ಎನ್ನುವ ಪ್ರತಿಭಾವಂತನ ಸುಂದರ ಮತ್ತು ಸೃಜನಶೀಲ ಕಲಾಕೃತಿ ದಿಯಾ.
ತನ್ನ ಸೂಕ್ಷ್ಮ ಚಿಂತನೆಗಳೊಂದಿಗೆ ಕನ್ನಡ ಚಿತ್ರವನ್ನು ಬೇರೆಯದ್ದೇ ಲೆವೆಲ್ಲಿಗೆ ಕೊಂಡೊಯ್ಯಬಲ್ಲ ಶಕ್ತಿ ಇರುವ ನಿರ್ದೇಶಕ ಅಶೋಕ. ಪ್ರೀತಿಯನ್ನು ಈ ಧಾಟಿಯಲ್ಲೂ ಹೇಳಬಹುದಲ್ಲಾ ಅನ್ನೋದನ್ನು ತೋರಿಸಿಕೊಟ್ಟಿರುವ ಅಪರೂಪದ ಸಿನಿಮಾ ಕಸುಬುದಾರ. ಅಜನೀಶ್ ಲೋಕನಾಥ್ ಹಿನ್ನೆಲೆ ಸಂಗೀತ ಇಡೀ ಸಿನಿಮಾಗೆ ಉಸಿರಿನಂತಿದೆ. ಸೌರಭ್ ವಾಗ್ಮರೆ ಛಾಯಾಗ್ರಹಣ ಮತ್ತು ನವೀನ್ ರಾಜ್ ಸಂಕಲನ ಚಿತ್ರದ ಜೀವವಾಗಿದೆ.
ಇಂಥ ಸಿನಿಮಾ ಗೆಲ್ಲಬೇಕು; ಗೆಲ್ಲಲೇಬೇಕು. ನೋ ಡೌಟ್. ದಿಯಾ ಕನ್ನಡ ಸಿನಿಮಾ ಹಿಸ್ಟರಿಯಲ್ಲಿ ದಾಖಲಾಗಬಹುದಾದ ಅಪರೂಪದ ಚಿತ್ರ.