ಸಿನಿಮಾವೊಂದನ್ನು ಆರಂಭ ಮಾಡಿ, ಅದನ್ನು ಮುಗಿಸಿ ತಂದು ಥಿಯೇಟರಿಗೆ ಬಿಡೋಹೊತ್ತಿಗೆ ನಿರ್ಮಾಪಕರು ಹೈರಾಣಾಗಿಬಿಟ್ಟಿರುತ್ತಾರೆ. ಇಂಥಾದ್ದರಲ್ಲಿ ಸಿನಿಮಾ ಬಿಡುಗಡೆ ಸಮಯದಲ್ಲಿ ನಿರ್ಮಾಪಕರನ್ನು ತೋಳಗಳಂತೆ ಕಿತ್ತು ತಿನ್ನೋ ಒಂದಷ್ಟು ಮಂದಿಯಿದ್ದಾರೆ. ಸಿನಿಮಾ ಬಿಡುಗಡೆ ಸಮಯದಲ್ಲಿ ಖುದ್ದು ಸಿನಿಮಾ ನಿರ್ಮಾಪಕರು ಹೆಸರಾಂತ ವಾಹಿನಿಗಳು, ಪತ್ರಿಕೆಗಳು ಮತ್ತು ಆನ್ ಲೈನ್ ಮೀಡಿಯಾದ ಮಾರ್ಕೆಟಿಂಗ್ ವಿಭಾಗದವರನ್ನು ಕರೆಸಿ ತಮ್ಮ ಸಿನಿಮಾಗಳ ಪಬ್ಲಿಸಿಟಿಗಾಗಿ ಆಯಾ ಮಾಧ್ಯಮದ ಹೆಸರು, ರೀಚುಗಳಿಗೆ ತಕ್ಕಂತೆ, ಸಂಸ್ಥೆಗಳ ರೇಟ್ಕಾರ್ಡುಗಳನ್ವಯ ಜಾಹೀರಾತು ನೀಡೋದು ವಾಡಿಕೆ. ಇವುಗಳಲ್ಲಿ ಯಾವ ತಕರಾರೂ ಇಲ್ಲ.
ಈ ನಡುವೆ ಹುಚ್ಮುಂಡೆ ಮದುವೇಲಿ ಉಂಡವನೇ ಜಾಣ ಅಂತಾ ಪಾಪದ ನಿರ್ಮಾಪಕರನ್ನು ಸುಲಿದು ತಿನ್ನಲು ಒಂದಷ್ಟು ಮಂದಿ ಬಕಪಕ್ಷಿಗಳಂತೆ ಕಾದು ಕುಂತಿರುತ್ತಾರೆ. ಹಾಗೆ ಸಿಕ್ಕಸಿಕ್ಕ ನಿರ್ಮಾಪಕರ ತಲೆಸವರಿ ಕಾಸು ಮಾಡಿರೋರಲ್ಲಿ ಸ್ನೇಹಾ ಮ್ಯಾಥ್ಯೂ ಎಂಬ ಮಲೆಯಾಳಿ ಹೆಂಗಸು ಮತ್ತು ವಿಶಾಲನೆಂಬ ಮೋಸಗಾರರ ಹೆಸರು ಮುಖ್ಯವಾಗಿ ಕೇಳಿಬರುತ್ತಿದೆ. ಹೇಳಿ ಕೇಳಿ ಇದು ಆನ್ ಲೈನ್ ಯುಗ. ಈಗ ಥಿಯೇಟರಿನ ಮುಂದೆ ಕ್ಯೂ ನಿಂತು ಟಿಕೇಟು ಖರೀದಿಸೋ ಜಮಾನಾ ಮುಗಿದುಹೋಗಿದೆ. ಸಿನಿಮಾ ನೋಡೋರಲ್ಲಿ ಮುಕ್ಕಾಲುಪಾಲು ಮಂದಿ ತಮ್ಮ ಮೊಬೈಲುಗಳಲ್ಲಿರುವ ಬುಕ್ ಮೈ ಶೋ ಮೂಲಕ ಟಿಕೇಟು ಬುಕ್ ಮಾಡುತ್ತಾರೆ.
ಸಿನಿಮಾಗಳ ಗುಣಮಟ್ಟವನ್ನು ಅಲ್ಲಿ ನಿರ್ಧಾರ ಮಾಡೋದು ಪ್ರತಿಷ್ಟಿತ ಮಾಧ್ಯಮಗಳ ವಿಮರ್ಶೆ. ಇದರ ಜೊತೆಗೆ ನೋಡಿದವರು ಮಾಡಿದ ವೋಟುಗಳ ಆಧಾರದ ಮೇಲೆ ಪರ್ಸೆಂಟೇಜ್ ಲೆಕ್ಕದಲ್ಲಿ ಅಂಕಗಳನ್ನು ನೀಡಲಾಗುತ್ತದೆ. ಯಾವ ಸಿನಿಮಾಗೆ ಹೆಚ್ಚು ವೋಟು ಪಡೆದಿರುತ್ತದೋ ಅದನ್ನು ನೋಡಿ ಪ್ರೇಕ್ಷಕರು ಸಿನಿಮಾಗೆ ಹೋಗಬೇಕೋ ಬೇಡವೋ ನಿರ್ಧರಿಸುತ್ತಾರೆ. ಬುಕ್ ಮೈ ಶೋ ಇಡೀ ಇಂಡಿಯಾದಲ್ಲಿರುವ ನಂಬಲರ್ಹ ಬುಕ್ ಟಿಕೇಟ್ ಜಾಲತಾಣ ಮತ್ತು ಆಪ್. ಸಿನಿಮಾ ಮಾತ್ರವಲ್ಲದೆ, ಇವೆಂಟುಗಳು, ಸ್ಪೋರ್ಟ್, ರಂಗಭೂಮಿಗೆ ಸಂಬಂಧಿಸಿದಂತೆ ಎಲ್ಲ ಬಗೆಯ ಟಿಕೇಟುಗಳು ಆನ್ಲೈನಿನಲ್ಲೇ ಬಿಕರಿಯಾಗುತ್ತವೆ.
ಬುಕ್ ಮೈ ಶೋ ಎಂಬುದು ಪೂರ್ತಿಯಾಗಿ ಕಂಪ್ಯೂಟರ್ ಚಾಲಿತವಾದ ಅಚ್ಚುಕಟ್ಟಾದ ತಾಣ. ಇದರಲ್ಲಿ ಸಿನಿಮಾ ನೋಡಿದ ಮಂದಿಯ ರೇಟಿಂಗ್ ಮತ್ತು ವೋಟಿಂಗ್ಗಳೇ ಪ್ರಧಾನವಾಗಿ ಕೌಂಟ್ ಆಗುತ್ತದೆ. ಸಿನಿಮಾ ನೋಡಿದ ಪ್ರೇಕ್ಷಕರ ಪ್ರಾಮಾಣಿಕವಾದ ವೋಟಿಂಗ್ ಮತ್ತು ರೇಟಿಂಗ್ ಕಾರಣದಿಂದಲೇ ಬುಕ್ ಮೈ ಶೋ ವಿಶ್ವಾಸಾರ್ಹತೆ ಉಳಿಸಿಕೊಂಡಿತ್ತು. ಇದಕ್ಕಾಗಿಯೇ ಒಂದು ವ್ಯಸ್ಥಿತವಾದ ಟೀಮು ಬೆಂಗಳೂರೂ ಸೇರಿದಂತೆ ನಾನಾ ನಗರಗಳಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಗಮನೀಯ ವಿಚಾರವೆಂದರೆ ಈ ಆಪಿನ ರೇಟಿಂಗ್ನಲ್ಲಾಗಲಿ ಓಟಿಂಗಿನಲ್ಲಾಗಲೀ ಯಾವುದೇ ರೀತಿಯ ಗಿಮಿಕ್ಕುಗಳನ್ನು ಮಾಡಲು ಸುತಾರಾಂ ಸಾಧ್ಯವಿಲ್ಲ ಅನ್ನೋದು ಖುದ್ದು ಬುಕ್ ಮೈ ಶೋ ಸಂಸ್ಥೆಯ ವಾದ. ಆದರೆ ಗಾಂಧಿನಗರದಲ್ಲೀಗ ಕೆಲ ಐನಾತಿ ಆಸಾಮಿಗಳು ಈ ರೇಟಿಂಗ್ ಮತ್ತು ವೋಟಿಂಗ್ ರೈಸ್ ಮಾಡಿಸೋದಾಗಿ ಹೇಳುತ್ತಾ ಸಿನಿಮಾ ನಿರ್ಮಾಪಕರನ್ನು ಎಡತಾಕುತ್ತಲೇ ಭರಪೂರವಾಗಿ ಕಾಸು ಪೀಕುತ್ತಾ ಯಾಮಾರಿಸಲಾರಂಭಿಸಿದ್ದಾರೆ!
ಸಿನಿಮಾ ಒಂದು ಬುಕ್ ಮೈ ಶೋನ ವೋಟಿಂಗಿನಿಂದಲೇ ಟೇಕಾಫ್ ಆಗೋದೂ ಇದೆ. ಆದ್ದರಿಂದಲೇ ಕಲೆಕ್ಷನ್ನು ಹೇಗಾದರೂ ಹೆಚ್ಚಾಗಬೇಕೆಂಬ ಹಂಬಲದಿಂದ ನಿರ್ಮಾಪಕರು ಕಾದು ಕೂತಿರುತ್ತಾರಲ್ಲಾ? ಅಂಥವರನ್ನು ಕೆಲವು ಐನಾತಿಗಳು ಕ್ಯಾಚು ಹಾಕಿಕೊಳ್ಳುತ್ತಾರೆ. ಇಂಥವರು ಬುಕ್ ಮೈ ಶೋನಲ್ಲಿ ವೋಟಿಂಗ್ ರೈಸ್ ಮಾಡೋದಾಗಿ ಹೇಳಿ ನಲವತ್ತು ಸಾವಿರದಿಂದ ಒಂದು ಲಕ್ಷದ ವರೆಗೂ ಕಾಸು ಪೀಕುತ್ತಾರೆ. ಇದೀಗ ಗಾಂಧಿನಗರದಲ್ಲಿ ಇಂಥಾ ವಂಚಕರ ಸಂಖ್ಯೆ ಹೆಚ್ಚಾಗಿ ಬಿಟ್ಟಿದೆ. ಅದ್ಯಾರೋ ಸ್ನೇಹಾ ಮ್ಯಾಥ್ಯೂ ಮತ್ತು ವಿಶಾಲ್ ಎಂಬಿಬ್ಬರು ಪ್ರತ್ಯೇಕವಾಗಿ ನಡೆಸುತ್ತಿರುವ ಫ್ರಾಡು ಕೆಲಸವಿದೆಯಲ್ಲಾ? ದಿನದಿಂದ ದಿನಕ್ಕೆ ಅದು ಮಿತಿಮೀರಿ ಬೆಳೆಯುತ್ತಿದೆ.
ವಂಚಕ ವಿಶಾಲ್!
ನಮ್ಮಪ್ಪ ಎಂ.ಪಿ. ನನಗೆ ನೂರಾರು ಕೋಟಿ ಆಸ್ತಿ ಇದೆ… ಅಂತೆಲ್ಲಾ ಪುಂಗಿ ಊದಿ ಯಾಮಾರಿಸಿರೋದು ಒಬ್ಬಿಬ್ಬರನ್ನಲ್ಲ. ಅಸಲಿಗೆ ಇವನ ಅಪ್ಪ ರಾಜ್ ಕುಮಾರ್ ಎಂಬಾತ ಉತ್ತರ ಕರ್ನಾಟಕದಲ್ಲಿ ಗ್ರಾಮಪಂಚಾಯ್ತಿ ಸದಸ್ಯನಂತೆ. ಆದರೆ ವಂಚಕ ವಿಶಾಲ್ ನಮ್ಮಪ್ಪ ಎಂ.ಪಿ. ಎಂದು ಸುಳ್ಳೇ ಬಿಲ್ಡಪ್ ಕೊಡುತ್ತಿದ್ದ. ಈ ಫೋರ್ ಟ್ವೆಂಟಿ ವಿಶಾಲ್ ೨೦೧೮ರಲ್ಲಿ ಬಿಡುಗಡೆಯಾದ ಸಿನಿಮಾಗಳಲ್ಲಿ ಮುಕ್ಕಾಲು ಭಾಗ ನಿರ್ಮಾಪಕರಿಗೀತ ಉಂಡೆ ನಾಮ ತಿಕ್ಕಿದ್ದಾನೆ. ಮೀಡಿಯಾ ಒನ್ ಸೆಲ್ಯೂಷನ್ಸ್ ಸಂಸ್ಥೆಯಲ್ಲಿ ಈತ ಒಂದೆರಡು ತಿಂಗಳು ಕೆಲಸಕ್ಕಿದ್ದ.
ಈ ಸಂದರ್ಭದಲ್ಲೇ ‘ನಿಮ್ಮ ಸಿನಿಮಾ ರೇಟಿಂಗ್ ಜಾಸ್ತಿ ಮಾಡಿಸಿಕೊಡ್ತೀನಿ’ ಅಂತಾ ಒಂದೊಂದು ಸಿನಿಮಾದವರಿಂದ ಮೂರರಿಂದ ನಾಲ್ಕು ಲಕ್ಷದಂತೆ ಕೋಟ್ಯಂತರ ರುಪಾಯಿ ವಂಚಿಸಿಬಿಟ್ಟಿದ್ದ. ಉಪೇಂದ್ರ ನನಗೆ ತುಂಬಾ ಕ್ಲೋಸು, ಒಳ್ಳೇ ಹುಡ್ಗ ಪ್ರಥಮ್ ನನ್ನ ಅಣ್ಣನಂತೆ, ಹೀರೋಯಿನ್ ಕಾವ್ಯಾ ಶೆಟ್ಟಿಗೆ ನಾನೇ ಗಾಡ್ ಫಾದರ್ರು ಅನ್ನೋದರಿಂದ ಮೊದಲ್ಗೊಂಡು ಬಾಲಿವುಡ್ಡಿನ ತನಕ ಎಲ್ಲ ಸೆಲೆಬ್ರೆಟಿ ಸ್ಟಾರುಗಳೊಂದಿಗೆ ಸಂಬಂಧ ಬೆಸೆದುಕೊಂಡು ಮಾತಾಡೋದು ಇವನಿಗೆ ದೊಡ್ಡ ಚಾಳಿ. ಏನಿವನ ಹಿನ್ನೆಲೆ ಅಂತಾ ಹುಡುಕಹೊರಟರೆ ದೊಡ್ಡ ಬಳ್ಳಾಪುರದ ವಿಳಾಸ ನೀಡಿ ಆಧಾರ್ ಕಾರ್ಡ್ ಪಡೆದಿದ್ದ ಅನ್ನೋ ಅಂಶ ಬೆಳಕಿಗೆ ಬಂದಿದೆ.
ಸದ್ಯ ತಮಿಳಿನ ಶಂಕರ್ ಜೊತೆಗೆ ನಾನು ಅಸೋಸಿಯೇಟು ಅಂತೆಲ್ಲಾ ಓಡಾಡಿಕೊಂಡಿರೋ ವಿಶಾಲ್ ಸಿಕ್ಕಸಿಕ್ಕವರ ಬಳಿ ದುಡ್ಡೆತ್ತುವ ಕಾಯಕದಲ್ಲಿ ನಿರತನಾಗಿದ್ದಾನೆ. ಈತನ ವಿರುದ್ಧ ಸ್ವತಃ ಬುಕ್ ಮೈ ಶೋನ ಮಾರ್ಕೆಟ್ ನಡೆಸುತ್ತಿರುವ ಮೀಡಿಯ ಒನ್ ಸೆಲ್ಯೂಷನ್ ನವರು ಪೊಲೀಸ್ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಸಾಕಷ್ಟು ಜನ ಚಲನಚಿತ್ರ ವಾಣಿಜ್ಯ ಮಂಡಳಿಗೆ ವಿಶಾಲನ ವಿರುದ್ಧ ದೂರು ನೀಡಿರುವ ಪುರಾವೆಗಳೂ ಇವೆ.
ಆನ್ಲೈನ್ ಮಾರ್ಕೆಟಿಂಗ್ನವರಿಗೆ ಕಂಟಕವಾಗಿದ್ದಾಳೆ ಸ್ನೇಹಾ ಮ್ಯಾಥ್ಯೂ
ಇನ್ನು ಕೇರಳದ ಎರ್ನಾಕುಲಂನ, ಶಬ್ಬೀರ್ ಎನ್ನುವ ಮಾಲೀಕನ ಮನೆಯ ವಿಳಾಸದಲ್ಲಿ ಖರೀದಿಸಿರುವ ಸಿಮ್ ಕಾರ್ಡ್ ಬಳಸಿ ಸ್ನೇಹಾ ಮ್ಯಾಥ್ಯೂಸ್ ಎಂಬಾಕೆ ನಡೆಸುತ್ತಿರುವ ದಂಧೆಯ ಬಗ್ಗೆ ಕೇಳಿದರಂತೂ ಬೆಚ್ಚಿಬೀಳುವ ಸಂಗತಿಗಳು ಹೊರಬೀಳುತ್ತಿವೆ. ಈಕೆ ಕೂಡಾ ಕಳೆದ ಎರಡು ವರ್ಷಗಳಿಂದ ಬಿಡುಗಡೆಯಾದ ಸಿನಿಮಾಗಳಲ್ಲಿ ಬಹುಪಾಲು ಸಿನಿಮಾ ನಿರ್ಮಾಪಕರಿಗೆ ಸ್ವತಃ ಕರೆ ಮಾಡಿ ನಿಮ್ಮ ಸಿನಿಮಾದ ರೇಟಿಂಗ್ ಹೆಚ್ಚಿಸುತ್ತೇನೆ ಅಂತಾ ಮನಬಂದಂತೆ ಸುಲಿದಿದ್ದಾಳೆ. ಒಂದು ವೇಳೆ ಹಣ ಕೊಡದೇ ಹೋದರೆ ರೇಟಿಂಗ್ ಬೀಳಿಸಿ ನಿರ್ಮಾಪಕರನ್ನು ಬೆಚ್ಚಿಬೀಳಿಸುತ್ತಿದ್ದಾಳೆ.
ಫೇಸ್ ಬುಕ್, ವೆಬ್ ಸೈಟ್ ಗಳಲ್ಲಿ ಜಾಹೀರಾತುಗಳು ಸೇರಿದಂತೆ ನಾನಾ ವಿಧದ ಪ್ರಮೋಷನ್ನುಗಳನ್ನು ನಡೆಸುವ ಆನ್ ಲೈನ್ ಮಾರ್ಕೆಟಿಂಗ್ ಮಾಡುವ ಸಂಸ್ಥೆಗಳು ಮತ್ತು ಏಜೆಂಟರಿಗೆ ಸ್ನೇಹಾ ಮ್ಯಾಥ್ಯೂಸ್ ಪೀಡೆಯಂತೆ ಕಾಡುತ್ತಿದ್ದಾಳೆ. ಈ ಸಂಸ್ಥೆಗಳು ಆನ್ಲೈನಿನ ವಿವಿಧ ಬಗೆಯ ಜಾಹೀರಾತು ನೀಡುವುದಾಗಿ ನಿರ್ಮಾಪಕರ ಬಳಿ ಅಫಿಷಿಯಲ್ ಆಗಿ ಕಮಿಟ್ ಆಗಿರುತ್ತವೆ. ಆದರೆ ಬುಕ್ ಮೈಶೋ ರೇಟಿಂಗು ಏರಿಸುವ ಅನ್ ಅಫಿಷಿಯಲ್ ಕೆಲಸವನ್ನು ಹೇಗೆ ತಾನೆ ಮಾಡುಲು ಸಾಧ್ಯ?
‘ನೋಡ್ರಿ.. ಸ್ನೇಹಾ ಮ್ಯಾಥ್ಯೂ ಕೊಟ್ಟ ಹಣಕ್ಕೆ ತಕ್ಕಂತೆ ರೇಟಿಂಗ್ ರೈಸ್ ಮಾಡಿಸ್ತಾಳೆ. ನೀವ್ಯಾಕೆ ಮಾಡಿಸಲು ಸಾಧ್ಯವಿಲ್ಲ?’ ಎಂದು ಕೇಳುವ ನಿರ್ಮಾಪಕರಿಗೇನೂ ಕಡಿಮೆ ಇಲ್ಲ. ಇದು ಆನ್ಲೈನ್ ಸಂಸ್ಥೆಯ ಮುಖ್ಯಸ್ಥರಿಗೆ ಧರ್ಮಸಂಕಟವಾಗಿದೆ. ಇಲ್ಲಿ ಬುಕ್ ಮೈ ಶೋದವರು ರೇಟಿಂಗ್ ಹೆಚ್ಚಿಸಲು ಸಾಧ್ಯವೇ ಇಲ್ಲ ಅನ್ನುತ್ತಾರಾದರೂ ಸ್ನೇಹಾ ಮ್ಯಾಥ್ಯೂ ಥರದ ಪಾಖಂಡಿಗಳು ಕಾಸು ಕೊಡುತ್ತಿದ್ದಂತೇ ಮ್ಯಾಜಿಕ್ಕು ಮಾಡಿದಂತೆ ವೋಟು ಹೆಚ್ಚಿಸುವುದರ ಮರ್ಮವೇ ಯಾರಿಗೂ ತಿಳಿಯುತ್ತಿಲ್ಲ. ಆದಷ್ಟು ಬೇಗ ಈ ಇಬ್ಬರು ವಂಚಕರ ಬುಡಕ್ಕೆ ಬಿಸಿನೀರು ಬೀಳಿಸದಿದ್ದರೆ ಕನ್ನಡ ಸಿನಿಮಾ ಉದ್ಯಮಕ್ಕೆ ಕೇಡುಗಾಲ ತಪ್ಪಿದ್ದಲ್ಲ.
ಪ್ರಚಾರಕರ್ತರ ಪಾಡು ಕೇಳೋರ್ಯಾರು?
ತಮ್ಮ ಪಾಡಿಗೆ ತಾವು ಕೆಲಸ ಮಾಡಿಕೊಂಡಿರುವ ಕನ್ನಡದ ಏಳು ಜನ ಪತ್ರಿಕಾ ಪ್ರಚಾರಕರ್ತರಿಗೂ ಇದರ ಬಿಸಿ ಮುಟ್ಟುತ್ತಲೇ ಇದೆ. ದಿನಕ್ಕೊಬ್ಬರಂತೆ ಹುಟ್ಟಿಕೊಳ್ಳುತ್ತಿರುವ ನಕಲಿ ಆನ್ ಲೈನ್ ಏಜಂಟರು, ಫೇಸ್ ಬುಕ್ಕು, ಟ್ರಾಲ್ ಪೇಜಿನವರು ನಿರ್ಮಾಪಕರ ಮನೆ ಮುಂದೆ ಕೂತು ಕಾಸಿಗಾಗಿ ಪೀಡಿಸುತ್ತಾರೆ. ಸಿನಿಮಾ ಬಿಡುಗಡೆಯ ಹೊತ್ತಿಗೆ ನಿರ್ಮಾಣದ ವಿಚಾರದಲ್ಲೇ ಜರ್ಝರಿತರಾದ ನಿರ್ಮಾಪಕರು ಆನ್ಲೈನ್ ಪಬ್ಲಿಸಿಟಿ ಹೆಸರನಲ್ಲಿ ಇಲಿ ಹೆಗ್ಗಣಗಳೆಲ್ಲಾ ಜೇಬು ಕಚ್ಚುವ ಪರಿಗೆ ಬೇಸತ್ತು ಪ್ರಚಾರಕರ್ತರನ್ನು ‘ಯಾರ್ರೀ ಇವರು?’ ಅಂತಾ ಪ್ರಶ್ನಿಸುವಂತಾಗಿದೆ.
ಫೇಸ್ ಬುಕ್ಕಲ್ಲಿ ಒಂದೂವರೆ ಲೈನು ಟೈಪು ಮಾಡಿ ಸಿನಿಮಾ ಪೋಸ್ಟರ್ಗಳನ್ನು ಅಂಟಿಸಿ ‘ನಂದು ಅಷ್ಟು ರೀಚು, ಇಷ್ಟು ರೀಚು’ ಅಂದವರನ್ನೆಲ್ಲಾ ಕರೆದು ಪತ್ರಿಕಾಗೋಷ್ಟಿ ನಡೆಸುತ್ತಾ ಹೋದರೆ ಅದು ಪ್ರೆಸ್ ಮೀಟ್ ಆಗೋದಿಲ್ಲ. ಬದಲಿಗೆ ಬಹಿರಂಗ ಸಮಾವೇಶಗಳಾಗುತ್ತವೆ ಅನ್ನೋದನ್ನು ಸಿನಿಮಾ ಪ್ರಚಾರಕರ್ತರು ಅರ್ಥಮಾಡಿಕೊಳ್ಳಬೇಕು. ಪತ್ರಿಕಾಗೋಷ್ಟಿಗಳನ್ನು ಬಳಸಿಕೊಂಡು ಕಾಂಟ್ಯಾಕ್ಟು ವೃದ್ಧಿಸಿಕೊಂಡು ಕಾಸೆತ್ತುವವರನ್ನು ಇನ್ನಾದರೂ ಅವಾಯ್ಡು ಮಾಡಬೇಕು.
ಸಿನಿಮಾ ನಿರ್ಮಾಪಕರನ್ನು ಸುಲಿಯುವ ಇಂಥಾ ಐನಾತಿಗಳು ಕೇವಲ ಬುಕ್ ಮೈ ಶೋಗೆ ಮಾತ್ರವೇ ಸೀಮಿತವಾಗಿಲ್ಲ. ಇದೀಗ ನಾಯಿ ಕೊಡೆಗಳಂತೆ ತಲೆ ಎತ್ತಿರುವ ಹಲವಾರು ಸಿನಿಮಾ ವೆಬ್ಸೈಟುಗಳದ್ದೂ ಕೂಡಾ ಇದೇ ಕಸುಬು. ಅದೆಷ್ಟೋ ಮಂದಿ ಅಕ್ಷರದ ಪರಿಚಯ ಇಲ್ಲದವರೂ ಕೂಡಾ ಇಂಥಾ ವೆಬ್ ಸೈಟ್ ಕ್ರಿಯೇಟು ಮಾಡಿಕೊಂಡು ಕಾಸು ಸುಲಿಯಲು ನಿಂತಿದ್ದಾರೆ. ಇಂಥಾ ಯಾರೇ ಬಂದರೂ ಈ ವೆಬ್ ಸೈಟುಗಳ ಗೂಗಲ್ ಅನಾಲಿಟಿಕ್ಸ್ ಏನಿದೆ? ಫೇಸ್ ಬುಕ್ ಲೈಕ್ಸ್ ಎಷ್ಟಿದೆ? ಎಂಬ ಬಗ್ಗೆ ದಾಖಲೆ ಕೇಳಿದರೆ ಎಲ್ಲ ಹಣೆಬರಹವೂ ಜಾಹೀರಾಗುತ್ತದೆ.
ಎರಡ್ಮೂರು ಸಾವಿರ ಖರ್ಚು ಮಾಡಿ ವೆಬ್ಸೈಟು ಓಪನ್ ಮಾಡೋದೇನೂ ದೊಡ್ಡ ವಿಚಾರವಲ್ಲ. ಆದರೆ ಅದರ ಯೋಗ್ಯತೆ ನಿರ್ಧಾರವಾಗೋದು ಬರವಣಿಗೆಯಿಂದ ಹಾಗೂ ಅದು ಓದುಗರನ್ನು ಯಾವ ರೀತಿ ತಲುಪುತ್ತಿದೆ ಎಂಬ ದಾಖಲೆಯಿಂದಷ್ಟೇ. ಆದರೆ ಇಂಥಾ ಯಾವ ಯೋಗ್ಯತೆಯೂ ಇಲ್ಲದೆ ನಿರ್ಮಾಪಕರ ಬೇಟೆಗೆ ಕಾದು ಕೂತವರು, ಆನ್ ಲೈನ್ ವಂಚಕರು ಗಾಂಧಿನಗರದ ಎಲ್ಲ ಗಲ್ಲಿಗಳನ್ನೂ ಆವರಿಸಿಕೊಂಡಿದ್ದಾರೆ. ಇಂಥವರಿಗೆ ಕೊಟ್ಟ ಕಾಸಿಗೆ ಯಾವ ಫಾಯಿದೆಯೂ ಗಿಟ್ಟುವುದಿಲ್ಲ.
ಹೀಗೂ ಮಾಡಬಹುದು
ಇತ್ತೀಚಿನ ದಿನಗಳಲ್ಲಿ ಟೆಕ್ಕಿಗಳು, ಇಂಜಿನಿಯರಿಂಗ್ ಸ್ಟೂಡೆಂಟುಗಳು ಮತ್ತು ಕೆಲವು ಸ್ಟಾರ್ ನಟರ ಅಭಿಮಾನಿಗಳು ಫೇಸ್ ಬುಕ್ ಪೇಜುಗಳನ್ನು ಹೊಂದಿದ್ದಾರೆ. ಹಣಕ್ಕಾಗಿ ಅಥವಾ ಹವ್ಯಾಸಕ್ಕಾಗಿ ತಮ್ಮ ಪೇಜುಗಳಲ್ಲಿ ಸಿನಿಮಾ ಪ್ರಮೋಟ್ ಮಾಡುವ ಕೆಲಸ ನಿರ್ವಹಿಸುತ್ತಿದ್ದಾರೆ. ಸಿನಿಮಾ ಬಿಡುಗಡೆಗೆ ಮುಂಚೆ ಆನ್ ಲೈನ್ ಏಜಂಟರ ಸಮೇತ ಅವರನ್ನೆಲ್ಲಾ ಖುದ್ದು ಸಿನಿಮಾ ಪ್ರಚಾರಕರ್ತರೇ ಒಂದೆಡೆ ಕರೆದು ಸಭೆ ನಡೆಸಿ, ಅವರವರ ವ್ಯಾಪ್ತಿ, ವಿಸ್ತಾರ, ಅರ್ಹತೆಗೆ ತಕ್ಕಂತೆ ಏನಾದರೊಂದು ಕೊಟ್ಟು ಅಥವಾ ಔತಣ ನೀಡಿ ಅಡ್ಮಿನ್ನುಗಳನ್ನು ಪ್ರಚಾರಕರ್ತರೇ ಹ್ಯಾಂಡಲ್ ಮಾಡಿಬಿಟ್ಟರೆ ಯಾವ ಸಮಸ್ಯೆಯೂ ತಲೆಯೆತ್ತೋದಿಲ್ಲ. ಈ ನಿಟ್ಟಿನಲ್ಲಿ ಆದಷ್ಟು ಬೇಗ ಪ್ರಚಾರಕರ್ತರು ಎಚ್ಚೆತ್ತುಕೊಳ್ಳಬೇಕಾದ ತುರ್ತಿದೆ.
ಬುಕ್ ಮೈ ಶೋನವರು ಏನನ್ನುತ್ತಾರೆ?
ಬುಕ್ ಮೈ ಶೋನಲ್ಲಿ ಹೀಗೆ ಫೇಕ್ ವೋಟಿಂಗ್ ಆಡ್ ಮಾಡೋ ಯಾವ ಆಪ್ಷನ್ನುಗಳೂ ಇಲ್ಲ ಎಂಬುದನ್ನು ಬುಕ್ ಮೈ ಶೋ ಮುಖ್ಯಸ್ಥರೇ ಖಚಿತ ಪಡಿಸಿದ್ದಾರೆ. ಈ ಬಗ್ಗೆ ಸಿನಿಮಾ ನಿರ್ಮಾಪಕರು ಮತ್ತು ಇತರೇ ಮಂದಿ ಒಂದು ವಿಚಾರವನ್ನು ಸ್ಪಷ್ಟವಾಗಿ ಗಮನದಲ್ಲಿಟ್ಟುಕೊಳ್ಳಬೇಕಿದೆ. ಬುಕ್ ಮೈ ಶೋನೊಂದಿಗೆ ಯಾವುದೇ ವ್ಯವಹಾರ ನಡೆಸೋದಿದ್ದರೂ ಎಂಜಿ ರಸ್ತೆಯಲ್ಲಿರುವ ಮಿಟ್ಟಲ್ ಟವರ್ ನಲ್ಲಿರುವ ಬುಕ್ಮೈ ಶೋ ಅಧಿಕೃತ ಜಾಹೀರಾತು ಏಜೆನ್ಸಿ ‘ಮೀಡಿಯಾ ೧ ಸೆಲ್ಯೂಷನ್’ನ ಕರ್ನಾಟಕ ಬ್ರ್ಯಾಂಚ್ ಹೆಡ್ ಸುಚೇತಾ ದಾಸ್ (ಸಂಪರ್ಕ: 080 4222990) ಮತ್ತು ಅವರು ಸೂಚಿಸುವ ಅಧಿಕೃತ ಜಾಹೀರಾತು ವಿಭಾಗದ ಪ್ರತಿನಿಧಿಗಳೊಂದಿಗೆ ಮಾತ್ರವೇ ವ್ಯವಹರಿಸಿದರೆ ಇಂಥಾ ವಂಚಕರಿಂದ ದೂರವಿರಬಹುದು.
ಬುಕ್ ಮೈ ಶೋನ ಯಾವುದೇ ರೀತಿಯ ವಿವರ, ಅಪ್ಡೇಟ್ಸ್ ಬೇಕಿದ್ದರೂ ಬುಕ್ಮೈ ಶೋ ಆಡಳಿತ ವರ್ಗವನ್ನು ನೇರವಾಗಿಯೇ ಸಂಪರ್ಕಿಸಬಹುದು. ಇವರನ್ನು ಹೊರತುಪಡಿಸಿ ಬೇರೆ ಯಾರೇ ಬಂದು ಬುಕ್ ಮೈ ಶೋ ಹೆಸರಲ್ಲಿ ವ್ಯವಹಾರಕ್ಕೆ ನಿಂತರೂ ಈ ಬಗ್ಗೆ ಕಾನೂನು ಕ್ರಮ ಕೈಗೊಳ್ಳಲು ಯಾವ ಮುಲಾಜೂ ಬೇಕಿಲ್ಲ ಒಟ್ಟಾರೆಯಾಗಿ ಬುಕ್ ಮೈ ಶೋನ ಹೆಸರು ಹೇಳಿಕೊಂಡು ದಂಧೆ ನಡೆಸುವಂತೆಯೇ, ಆನ್ಲೈನ್ ವೆಬ್ಸೈಟುಗಳ ಮೂಲಕವೂ ಕಾಸೆತ್ತುವವರ ಬಗ್ಗೆ ಸಿನಿಮಾ ಮಾಡುವವರು ಜಾಗ್ರತೆಯಿಂದಿದ್ದರೆ ಒಳಿತು.
No Comment! Be the first one.