ಒಬ್ಬಳಿಗೆ ಭಯಂಕರ ಕೋಪ. ಇನ್ನೊಬ್ಬಳು ಬಹಳ ಮುಗ್ಧೆ … ಇವರಿಬ್ಬರ ನಡುವೆ ಸಿಕ್ಕಿಕೊಂಡರೆ ಆಗ ಕೃಷ್ಣ ಗತಿ ಏನು? ಈ ಪ್ರಶ್ನೆಗೆ ಉತ್ತರ ಸಿಗಬೇಕು ಎಂದರೆ, ಈ ಶುಕ್ರವಾರ ಬಿಡುಗಡೆಯಾಗುತ್ತಿರುವ ‘ದಿಲ್ ಪಸಂದ್’ ಚಿತ್ರವನ್ನು ನೋಡಬೇಕು.
‘ದಿಲ್ ಪಸಂದ್’ ಒಂದು ಪಕ್ಕಾ ಮನರಂಜನಾತ್ಮಕ ಚಿತ್ರ. ಸಿಕ್ಕಾಪಟ್ಟೆ ನಗು ಜೊತೆಗೆ ಒಂದಿಷ್ಟು ಅಳು ತರಿಸುವ ಸೆಂಟಿಮೆಂಟ್ ದೃಶ್ಯಗಳೂ ಇವೆ. ಒಟ್ಟಾರೆ ಇದೊಂದು ಪಕ್ಕಾ ಫ್ಯಾಮಿಲಿ ಚಿತ್ರವಾಗಿದ್ದು, ಕುಟುಂಬದವರೆಲ್ಲರಿಗೂ ಚಿತ್ರ ಬಹಳ ಇಷ್ಟವಾಗಲಿದೆ ಎಂಬ ನಂಬಿಕೆ ಚಿತ್ರತಂಡದವರಿಗೆ ಇದೆ.
ಅದರಲ್ಲೂ ಈ ಚಿತ್ರ ನಿಶ್ವಿಕಾ ನಾಯ್ಡುಗೆ ಬಹಳ ಸ್ಪೆಷಲ್ ಅಂತೆ. ಅದಕ್ಕೆ ಕಾರಣವೂ ಇದೆ. ಇದುವರೆಗೂ ಅವರು ಲವ್ ಟ್ರ್ಯಾಕ್ ಗಳಿರುವ ಚಿತ್ರಗಳಲ್ಲಿ ನಟಿಸಿದ್ದರೂ, ಪೂರ್ಣಪ್ರಮಾಣದ ಲವ್ ಸ್ಟೋರಿಯಲ್ಲಿ ನಟಿಸಿರಲಿಲ್ಲವಂತೆ. ಆದರೆ, ಇದೊಂದು ಪೂರ್ಣಪ್ರಮಾಣದ ಪ್ರೇಮ ಕಥಾನಕ ಎನ್ನುತ್ತಾರೆ ಅವರು. ಈ ಕುರಿತು ಮಾತನಾಡುವ ನಿಶ್ವಿಕಾ, ‘ಬಹಳ ಇಷ್ಟಪಟ್ಟು, ಕಷ್ಟಪಟ್ಟು ಮಾಡಿರುವ ಪಾತ್ರ. ನನ್ನ ಪಾತ್ರದ ಹೆಸರು ಐಶು. ತುಂಬಾ ಎಮೋಷನ್ ಇರುವ ಹುಡುಗಿ. ಇದೊಂದು ಬೋಲ್ಡ್ ಪಾತ್ರ. ಬಹಳ ಎನರ್ಜಿ ಇರುವ ಪಾತ್ರ. ಅವಳಿಗೆ ಬಹಳ ಕೋಪ. ಅಳು ಬಂದರೂ ಅವಳು ಕೋಪದಲ್ಲೇ ತೋರಿಸಿಕೊಳ್ಳುತ್ತಾಳೆ. ಅಂಥದ್ದೊಂದು ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಈ ಚಿತ್ರದಲ್ಲಿ ಮನರಂಜನೆಗೆ ಮೋಸವಿಲ್ಲ. ಎರಡೂವರೆ ಗಂಟೆ ಫುಲ್ ಮನರಂಜನೆ ಇರುವ ಚಿತ್ರ’ ಎಂದು ಸರ್ಟಿಫಿಕೇಟ್ ಕೊಡುತ್ತಾರೆ.
ಇನ್ನು ಕಿರುತೆರೆಯ ‘ಜೊತೆಜೊತೆಯಲಿ’ ಧಾರಾವಾಹಿಯ ಮೂಲಕ ಸಖತ್ ಫೇಮಸ್ ಆಗಿರುವ ಮೇಘಾ ಶೆಟ್ಟಿ ಈ ಚಿತ್ರದ ಮತ್ತೊಬ್ಬ ನಾಯಕಿ. ಅವರು ಸಹ ತಮ್ಮ ಪಾತ್ರದ ಬಗ್ಗೆ ಸಖತ್ ಎಕ್ಸೈಟ್ ಆಗಿದ್ದಾರೆ. ತಮ್ಮ ಪಾತ್ರದ ಬಗ್ಗೆ ಮಾತನಾಡುವ ಅವರು, ‘ಟೀಸರ್, ಟ್ರೇಲರ್ ನೋಡಿದರೆ ಚಿತ್ರದಲ್ಲಿ ಏನಿರಲಿದೆ ಎಂಬುದು ಗೊತ್ತಾಗುತ್ತದೆ. ಇದೊಂದು ಫನ್ಫಿಲ್ಡ್ ಸಿನಿಮಾ. ಕುಟುಂಬ ಕೂತು ಎಂಜಾಯ್ ಮಾಡುವ ಸಿನಿಮಾ. ಮುಗ್ಧ ಹುಡುಗಿಯ ಪಾತ್ರದಲ್ಲಿ ನಾನು ಕಾಣಿಸಿಕೊಳ್ಳುತ್ತಿದ್ದೇನೆ. ವಿಷ ಕೊಟ್ಟು ಅಮೃತ ಎಂದರೂ ಅದನ್ನು ಕುಡಿಯುವಂತಹ ಪಾತ್ರ ನನ್ನದು. ಇದರ ಜತೆಗೆ ನನ್ನ ಪಾತ್ರಕ್ಕೆ ಇನ್ನೊಂದು ಶೇಡ್ ಸಹ ಇದೆ. ಚಿತ್ರದಲ್ಲಿ ನನ್ನದು ಎರಡು ಅವತಾರಗಳಿವೆ. ಒಂದು ಮಾಡರ್ನ್. ಇನ್ನೊಂದು ಸಾಂಪ್ರದಾಯಿಕ. ಇವರೆಡನ್ನೂ ಹೇಗೆ ಬ್ಯಾಲೆನ್ಸ್ ಮಾಡುತ್ತೀನಿ ಅಂತ ಚಿತ್ರದಲ್ಲೇ ನೋಡಬೇಕು’ ಎನ್ನುತ್ತಾರೆ ಮೇಘಾ.
‘ದಿಲ್ ಪಸಂದ್’ ಚಿತ್ರವನ್ನು ಸುಮಂತ್ ಕ್ರಾಂತಿ ನಿರ್ಮಿಸಿದರೆ, ಶಿವತೇಜಸ್ ಬರೆದು ನಿರ್ದೇಶನ ಮಾಡಿದ್ದಾರೆ. ಕೃಷ್ಣ, ನಿಶ್ವಿಕಾ ಮತ್ತು ಮೇಘಾ ಅಲ್ಲದೆ, ಅಜಯ್ ರಾವ್ ಸಹ ಒಂದು ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮಿಕ್ಕಂತೆ ರಂಗಾಯಣ ರಘು, ಸಾಧು ಕೋಕಿಲ, ಗಿರಿ, ಅರುಣಾ ಬಾಲರಾಜ್ ಮುಂತಾದವರು ನಟಿಸಿದ್ದು, ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿದ್ದಾರೆ.
No Comment! Be the first one.