ಸಿನಿಮಾ ಕಥೆ ಮಾಡುವುದಕ್ಕೆ ಎಲ್ಲಿಂದ ಸ್ಫೂರ್ತಿ ಸಿಗುತ್ತದೆ ಎಂದು ಹೇಳುವುದು ಕಷ್ಟ. ಒಂದು ಸಣ್ಣ ಘಟನೆಯೇ ಯಶಸ್ವಿ ಚಿತ್ರಕ್ಕೆ ಮುನ್ನುಡಿಯಾಗಹುದು. ಈ ಶುಕ್ರವಾರ ಬಿಡಗುಡೆಯಾಗುತ್ತಿರುವ ಕೃಷ್ಣ, ನಿಶ್ವಿಕಾ ಮತ್ತು ಮೇಘಾ ಶೆಟ್ಟಿ ಅಭಿನಯದ ‘ದಿಲ್ ಪಸಂದ್’ ಚಿತ್ರದ ಕಥೆಗೆ ಸ್ಫೂರ್ತಿ ಏನು ಗೊತ್ತಾ? ನಿರ್ದೇಶಕ ಶಿವತೇಜಸ್ ಅವರ ಸ್ನೇಹಿತರ ಜೀವನದಲ್ಲಿ ನಡೆದ ಘಟನೆಯಂತೆ.
‘ನನ್ನ ಸ್ನೇಹಿತರ ಜೀವನದಲ್ಲಿ ನೋಡಿದ್ದೆ. ಅದರಿಂದ ಸ್ಫೂರ್ತಿ ಪಡೆದು ಈ ಚಿತ್ರದ ಕಥೆಯನ್ನು ಬರೆದಿದ್ದೇನೆ. ಈಗಿನ ಕಾಲಘಟ್ಟದಲ್ಲಿ ಕೆಲವು ಘಟನೆಗಳು ಗೊತ್ತಿದ್ದೋ, ಗೊತ್ತಿಲ್ಲದೆಯೋ ನಡೆಯುತ್ತಿರುತ್ತದೆ. ನನ್ನ ಕ್ಲೋಸ್ ಫ್ರೆಂಡ್ ಜೀವನದಲ್ಲೇ ನಡೆದಿತ್ತು. ಅದನ್ನಿಟ್ಟುಕೊಂಡು ಒಂದು ಮನರಂಜನಾತ್ಮಕವಾದ ಚಿತ್ರವನ್ನು ಮಾಡಿದ್ದೇವೆ. ಇಡೀ ಫ್ಯಾಮಿಲಿ ಕುಳಿತು ನೋಡುವಂತಹ ಚಿತ್ರ ಇದು’ ಎನ್ನುತ್ತಾರೆ ಶಿವತೇಜಸ್.
ಶಿವತೇಜಸ್ ಮಾಡಿಕೊಟ್ಟಿರುವ ಚಿತ್ರ ನೋಡಿ ನಿರ್ಮಾಪಕ ಸುಮಂತ್ ಕ್ರಾಂತಿ ಖುಷಿಯಾಗಿದ್ದಾರೆ. ಸುಮಂತ್ ಸಹ ನಿರ್ದೇಶಕರು. ‘ಬರ್ಕ್ಲಿ’, ‘ಕಾಲಚಕ್ರ’ ಮುಂತಾದ ಚಿತ್ರಗಳನ್ನು ನಿರ್ದೇಶಿಸಿದವರು. ಅದರ ನಡುವೆಯೇ ಅವರು ಈ ಚಿತ್ರವನ್ನು ನಿರ್ಮಿಸಿದ್ದಾರೆ. ಅಷ್ಟೇ ಅಲ್ಲ, ನಿರ್ದೇಶಕ ಶಿವತೇಜಸ್ ತಮಗೆ ಏನು ಕಥೆ ಹೇಳಿದರೋ, ಅದರ ತರಹವೇ ಚಿತ್ರ ಮಾಡಿಕೊಟ್ಟಿದ್ದಾರೆ ಎಂದು ಖುಷಿ ವ್ಯಕ್ತಪಡಿಸುತ್ತಾರೆ.
ಈ ಕುರಿತು ಮಾತನಾಡಿರುವ ಅವರು, ‘ಶಿವತೇಜಸ್ ಅವರು ‘ದಿಲ್ ಪಸಂದ್ ಕಥೆ ಏನು ಹೇಳಿದ್ರು, ಅದೇ ತರಹ ತೆರೆಯ ಮೇಲೂ ತೋರಿಸಿದ್ದಾರೆ. ಸಾಮಾನ್ಯವಾಗಿ ಪೇಪರ್ ಮೇಲೆ ಏನೋ ಇರುತ್ತದೆ, ಚಿತ್ರದಲ್ಲೇ ಇನ್ನೇನೋ ಇರುತ್ತದೆ. ಆದರೆ, ಇಲ್ಲಿ ಹಾಗಾಗಿಲ್ಲ. ಬಹಳ ಅಚ್ಚುಕಟ್ಟಾಗಿ ಮಾಡಿದ್ದಾರೆ. ಚಿತ್ರ ನೋಡಿ ನಾನಂತೂ ತುಂಬಾ ಎಂಜಾಯ್ ಮಾಡಿದ್ದೇನೆ. ಕೊನೆಗೆ ಅಳು ಸಹ ಬಂತು. ಇಲ್ಲಿ ತಂದೆ-ಮಗನ ಸೆಂಟಿಮೆಂಟ್ ಬಹಳ ಇಷ್ಟ ಆಯ್ತು. ಕಂಟೆಂಟ್ ಚೆನ್ನಾಗಿದ್ದರೆ ಜನ ಗುರುತಿಸಿ ಕೈಹಿಡಿಯುತ್ತಾರೆ ಎಂಬ ನಂಬಿಕೆ ನನಗಿದೆ. ಮುಖ್ಯವಾಗಿ, ಯಾವುದೇ ಚಿತ್ರವಾದರೂ ರಿಯಾಲಿಟಿಗೆ ಕನೆಕ್ಟ್ ಆಗಬೇಕು. ಸಿನಿಮಾ ನೋಡುತ್ತಿದ್ದರೆ, ಇದು ನಿಜಜೀವನ ಎಂದನಿಸಬೇಕು. ಆಗ ಚಿತ್ರ ಖುಷಿಕೊಡುತ್ತದೆ. ಈ ಚಿತ್ರದಲ್ಲೂ ಆ ತರಹ ಕನೆಕ್ಟ್ ಆಗುವ ಹಲವು ವಿಷಯಗಳಿವೆ. ಎಲ್ಲರ ಜೀವನದಲ್ಲೂ ನಡೆಯಬಹುದಾದ ಘಟನೆಗಳು ಇಲ್ಲಿವೆ. ನನ್ನ ನಿರ್ಮಾಣದ ಮೊದಲ ಚಿತ್ರವಾದರೂ, ಎಲ್ಲೂ ಸಮಸ್ಯೆ ಆಗಲಿಲ್ಲ. ಬಹಳ ನೀಟ್ ಆಗಿ ಮುಗಿಯಿತು’ ಎನ್ನುತ್ತಾರೆ.
‘ದಿಲ್ ಪಸಂದ್’ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿದ್ದು, ಒಂದು ಹಾಡನ್ನು ಮಂಗ್ಲಿ ಹಾಡಿರುವುದು ವಿಶೇಷ. ಶೇಖರ್ ಚಂದ್ರು ಛಾಯಾಗ್ರಹಣ ಮಾಡಿರುವ ಈ ಚಿತ್ರದಲ್ಲಿ ಕೃಷ್ಣಗೆ ನಾಯಕಿಯರಾಗಿ ನಿಶ್ವಿಕಾ ನಾಯ್ಡು ಮತ್ತು ಮೇಘಾ ಶೆಟ್ಟಿ ನಟಿಸಿದ್ದ, ಮಿಕ್ಕಂತೆ ಅರುಣಾ ಬಾಲರಾಜ್, ರಂಗಾಯಣ ರಘು, ಗಿರಿ, ತಬಲಾ ನಾಣಿ ಮುಂತಾದವರು ನಟಿಸಿದ್ದಾರೆ. ಅಜಯ್ ರಾವ್ ಅತಿಥಿ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ.
No Comment! Be the first one.