ಅಭಿಷೇಕ್ ಜೈನ್ ನಿರ್ದೇಶನದ ಡಿಂಗ ಚಿತ್ರದಲ್ಲಿ ಹೀರೋ ಆಗಿ ನಟಿಸುತ್ತಿರುವ ಪ್ರತಿಭಾವಂತ ನಟ ಆರ್ವ ಗೌಡ. ಹಾಗೆ ನೋಡಿದರೆ ನಾಯಕನಾಗಿ ಆರ್ವ ಅವರಿಗೆ ಇದು ಮೊದಲ ಸಿನಿಮಾವೇನಲ್ಲ. ಅದಾಗಲೇ ಚತುರ್ಭುಜ ಮತ್ತು ಮತ್ತು ಸುರ್ ಸುರ್ ಬತ್ತಿಯಲ್ಲಿ ನಾಯಕನಾಗಿ ಕಾಣಿಸಿಕೊಂಡಿರುವ ಆರ್ವ ಅವರಿಗಿದು ಡಿಂಗ ಮೂರನೇ ಚಿತ್ರ.
ರಂಗ ಭೂಮಿ ಹಿನ್ನೆಲೆಯ ಆರ್ವ ಮಂಡ್ಯ ರಮೇಶ್ ಅವರ ನಟನ ಸಂಸ್ಥೆಯಲ್ಲಿ ಕಲಿತು, ಸರಿಸುಮಾರು ಹದಿನೈದು ವರ್ಷಗಳ ಕಾಲ ನಾಟಕರಂಗದಲ್ಲಿ ಕೆಲಸ ಮಾಡಿ, ನೂರಾರು ನಾಟಕಗಳಲ್ಲಿ ಅಭಿನಯಿಸಿ, ಆ ನಂತರ ಕಿರುತೆರೆ ಮತ್ತು ಸಿನಿಮಾ ಕ್ಷೇತ್ರಕ್ಕೆ ಕಾಲಿಟ್ಟವರು. ನಾಟಕವೊಂದರಲ್ಲಿ ಆರ್ವ ಅವರ ನಟನೆಯನ್ನು ನೋಡಿದ ಸಿಹಿಕಹಿ ಚಂದ್ರು ಅವರು ಕರೆದು ಧಾರಾವಾಹಿಯಲ್ಲಿ ಪಾತ್ರ ನೀಡಿದರು. ಮತ್ತೊಂದು ನಾಟಕವನ್ನು ನೋಡಿದ ಚಿತ್ರತಂಡವೊಂದು ಚತುರ್ಭುಜ ಚಿತ್ರದ ಮೂಲಕ ನಾಯಕನನ್ನಾಗಿಸಿದರು. ಶ್ರೀಮಾನ್ ಶ್ರೀಮತಿ, ಪಾರ್ವತಿ ಪರಮೇಶ್ವರ, ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್, ಪಂಚರಂಗಿ ಪಾಂ ಪಾಂ ಸೇರಿದಂತೆ ಸಾಕಷ್ಟು ಸೀರಿಯಲ್ಗಳಲ್ಲಿ ನಟಿಸುವ ಮೂಲಕ ಆರ್ವ ಅಪಾರವಾದ ಜನಪ್ರಿಯತೆಯನ್ನೂ ಗಳಿಸಿದ್ದವರು.
ಸಾಮಾನ್ಯವಾಗಿ ಧಾರಾವಾಹಿಯಿಂದ ಚಿತ್ರರಂಗಕ್ಕೆ ಬರುವವರು ದಿನಾ ಹಣ ಸಿಗುವ ಸೀರಿಯಲ್ ಕ್ಷೇತ್ರ ಬಿಟ್ಟು ಗೆಲ್ಲುವ ತನಕ ದುಡ್ಡು ಕೈಗೆಟುಕದ ಚಿತ್ರರಂಗ ಯಾಕೆ ಬೇಕು ಅಂತಾ ಯೋಚಿಸುತ್ತಾರೆ. ಆರ್ವ ಈ ವಿಚಾರದಲ್ಲೂ ಭಿನ್ನ. ಡಾ.ರಾಜ್ ಅವರ ಅಪ್ಪಟ ಅಭಿಮಾನಿಯಾಗಿರುವ ಆರ್ವ ದುಡ್ಡಿನ ಬಗ್ಗೆ ಯಾವತ್ತೂ ತಲೆಕೆಡಿಸಿಕೊಳ್ಳುವುದಿಲ್ಲವಂತೆ. ತಮಗೆ ಸಿಗುವ ಪಾತ್ರವಷ್ಟೇ ಮುಖ್ಯ. ತಾವು ಒಪ್ಪಿಕೊಂಡ ಪಾತ್ರಕ್ಕೆ ಜೀವ ತುಂಬುತ್ತಾ ಹೋದರೆ ಸಾಕು ಮಿಕ್ಕೆಲ್ಲವನ್ನೂ ಅದು ದಯಪಾಲಿಸುತ್ತದೆ ಎಂದು ನಂಬಿದ್ದಾರೆ. ನಿಜಕ್ಕೂ ಮಾಡುವ ಕೆಲಸವನ್ನು ನಂಬಿ ಬದುಕುತ್ತಿದ್ದಾರೆ.
ಚಾಮರಾಜನಗರ ಜಿಲ್ಲೆ ಬಸವಟ್ಟಿಯವರಾದ ಆರ್ವ ಶ್ರಮವಹಿಸಿ ದುಡಿಯುತ್ತಾ ಹಂತ ಹಂತವಾಗಿ ಹೆಸರು ಮಾಡುತ್ತಿದ್ದಾರೆ. ಯಾರೇ ಒಬ್ಬ ವ್ಯಕ್ತಿ ನಟನಾ ವೃತ್ತಿಯನ್ನು ಆಯ್ಕೆ ಮಾಡಿಕೊಂಡಾಗ ಬಹುಮುಖ್ಯವಾಗಿ ಅವರ ಮನೆ ಸದಸ್ಯರ ಸಹಕಾರ, ಪ್ರೋತ್ಸಾಹ ಮುಖ್ಯವಾಗುತ್ತದೆ. ಬಹುತೇಕರು ಮನೆಯ ವಿರೋಧದ ನಡುವೆಯೇ ನಟಿಸುವ ಸಂಕಷ್ಟವಿರುತ್ತದೆ. ಆದರೆ, ಆರ್ವ ಈ ನಿಟ್ಟಿನಲ್ಲಿ ನೋಡಿದರೆ ನಿಜಕ್ಕೂ ಅದೃಷ್ಟವಂತ. ಅವರ ತಂದೆ, ತಾಯಿ, ಅಣ್ಣ, ಅಕ್ಕ ಆದಿಯಾಗಿ ಪ್ರತಿಯೊಬ್ಬರೂ ಬೆನ್ನಿಗೆ ನಿಂತು ಸಹಕರಿಸಿದ್ದಾರೆ. ಇವರ ತಾಯಿಯಂತೂ ನನ್ನ ಮಗ ಈ ಕ್ಷೇತ್ರದಲ್ಲಿ ಏನೋ ಸಾಧಿಸುತ್ತಾನೆ ಎನ್ನುತ್ತಲೇ ಮಗನ ಕಲಾಸಕ್ತಿಯನ್ನು ಪೊರೆಯುತ್ತಿದ್ದಾರೆ.
ಡಿಂಗ ಸಿನಿಮಾದ ಮನೋಜ್ಞ ಅಭಿನಯದ ಮೂಲಕ ಎಲ್ಲರ ಗಮನ ಸೆಳೆಯುತ್ತಿರುವ ಆರ್ವ ಈ ಚಿತ್ರದ ಬಗ್ಗೆ ಅಪಾರ ಭರವಸೆ ಹೊಂದಿದ್ದಾರೆ. ಒಬ್ಬ ಕ್ಯಾನ್ಸರ್ ಪೇಷೆಂಟ್ ತಾನು ಸಾಯುತ್ತೇನೆ ಅಂತಾ ಗೊತ್ತಾದ ತಕ್ಷಣ ಮಾಡಿಟ್ಟಿರುವ ಆಸ್ತಿ ಬಗ್ಗೆ ಮಾತ್ರ ಯೋಚಿಸುತ್ತಾನೆ. ಆದರೆ ಇಲ್ಲಿ ನಾಯಕನಟ ಪ್ರೀತಿಯ ಹುಡುಕಾಟದಲ್ಲಿ ತೊಡಗುತ್ತಾನೆ. ಅದಕ್ಕೆ ನಾಯಿಮರಿ ಡಿಂಗ ಕೂಡಾ ಜೊತೆಯಾಗುತ್ತದೆ. ಹೀಗೆ ಕ್ಯಾನ್ಸರ್ ಪೀಡಿತನ ಪಾತ್ರದಲ್ಲಿ ಆರ್ವ ಅಭಿನಯಿಸಿದ್ದಾರೆ.