ಯೋಗರಾಜ್ ಭಟ್ಟರನ್ನ ನಿರ್ದೇಶಕರಾಗಿ ಮೆಚ್ಚಿಕೊಳ್ಳುವವರು ಎಷ್ಟು ಜನರಿದ್ದಾರೋ, ಅವರನ್ನು ಗೀತ ಸಾಹಿತಿಯಾಗಿ ಹಚ್ಚಿಕೊಂಡವರ ಸಂಖ್ಯೆ ಅದಕ್ಕಿಂತಲೂ ಅಧಿಕವಾಗಿದೆ. ಥಟಕ್ಕನೆ ಏನೂ ಇಲ್ಲ ಅನ್ನಿಸುತ್ತಲೇ ಬರ ಬರುತ್ತಾ ಏನೇನೋ ಹೊಳೆಯಿಸಿ ಬಿಡುವಂಥಾ ಜಾದೂ ಭಟ್ಟರಿಗೆ ಮಾತ್ರವೇ ಸಿದ್ಧಿಸಿರೋ ಕಲೆ. ಅದರ ಮೋಡಿ ನಾನಾ ಅವತಾರದಲ್ಲಿ, ಅವರ ಆ ಕ್ಷಣದ ಮೂಡಿಗೆ ತಕ್ಕಂತೆ ಮುಂದುವರೆಯುತ್ತಲೇ ಇದೆ!
ಯೋಗರಾಜ ಭಟ್ಟರ ಸೂಕ್ಷ್ಮ ಗ್ರಹಿಕೆ, ಪದ ಕಟ್ಟುವ ತಾಕತ್ತಿಗೆ ಹೊಸಾ ಉದಾಹರಣೆಯಾಗಿ ಯಜಮಾನ ಚಿತ್ರದ ಬಸಣ್ಣಿ ಬಾ ಎಂಬ ಸಾಂಗು ಸದ್ದು ಮಾಡುತ್ತಿದೆ. ಈ ಹಾಡೀಗ ಎಂಥಾ ಜನಪ್ರಿಯತೆ ಪಡೆದುಕೊಂಡಿದೆಯೆಂದರೆ ಯೂಟ್ಯೂಬ್ ತುಂಬಾ ಭಟ್ಟರ ಗುಣಗಾನ ನಡೆಯುತ್ತಿದೆ. ಅಲ್ಲಿಯೇ ಕಮೆಂಟುಗಳ ಮೂಲಕ ಭಟ್ಟರ ಗುಂಡಿಗೆ ಅದುರಿಸುವಂಥಾ ಪ್ರಶ್ನೆಗಳೂ ಎದುರಾಗುತ್ತಿವೆ.
ಇಂಥಾ ಹಾಡುಗಳನ್ನು ಬರೆಯೋಕೆ ಭಟ್ಟರಿಂದ ಮಾತ್ರ ಸಾಧ್ಯ ಅನ್ನೋದರಿಂದ ಹಿಡಿದು ನೀವು ಹಾಕೋ ಗುಂಡ್ಯಾವುದು ಎಂಬಲ್ಲಿಯ ವರೆಗೂ ಭಟ್ಟರ ಮಸ್ತಕಕ್ಕು ಗುಂಡಿನ ದಾಳಿ ಅವ್ಯಾಹತವಾಗಿ ನಡೆಯುತ್ತಿದೆ. ಬಹುತೇಕ ಅಭಿಮಾನಿಗಳು ಭಟ್ಟರು ಎಣ್ಣೆ ಹೊಡೆದು ಚಿತ್ತಾಗಿ ಕೂತಾಗಲೇ ಇಂಥಾ ಅಪರೂಪದ ಹಾಡುಗಳು, ಬೆರಗಾಗಿಸೋ ಪದಗಳು ಹುಟ್ಟುತ್ತವೆ ಅನ್ನೋ ತೀರ್ಮಾನಕ್ಕೆ ಬಂದಿದ್ದಾರೆ!
ಇದೆಲ್ಲ ಏನ ಏ ಇದ್ದರೂ ಕೂಡಾ ಯೋಗರಾಜ ಭಟ್ ಬರೆದಿರೋ ಬಸಣ್ಣಿ ಸಾಂಗ್ ಅಂತೂ ಎಲ್ಲ ದಾಖಲೆಗಳನ್ನು ಬೀಟ್ ಮಾಡುತ್ತಾ ದಾಪುಗಾಲಿಡುತ್ತಿದೆ. ಈ ಹಿಂದೆ ಯಜಮಾನ ಚಿತ್ರದ ಎರಡು ಹಾಡುಗಳು ಮಿಲಿಯನ್ನುಗಟ್ಟಲೆ ವೀವ್ಸ್ ಮೂಲಕ ದಾಖಲೆ ಬರೆದಿದ್ದವು. ಆದರೀಗ ಭಟ್ಟರ ಬಸಣ್ಣಿ ಅದನ್ನೂ ಬ್ರೇಕ್ ಮಾಡಿ ಬಿಟ್ಟಿದ್ದಾಳೆ!
#
No Comment! Be the first one.