ಟಗರು ಸಿನಿಮಾದ ಡಾಲಿ ಪಾತ್ರ ನಟ ಧನಂಜಯ್ಗೆ ಹೊಸ ಹುಟ್ಟು ನೀಡಿದ ಚಿತ್ರ. ಅದಕ್ಕೂ ಮೊದಲು ನಟನಾಗಿ ಧನಂಜಯ್ ಮಿಂಚಿದ್ದರೂ, ಹೀರೋ ಆಗಿ ಸಾಕಷ್ಟು ಸೋಲೊ (!) ಸಿನಿಮಾಗಳು ಬಿಡುಗಡೆಯಾಗಿದ್ದರೂ ರೆಕಗ್ನಿಷನ್ಗೋಸ್ಕರ ಧನಂಜಯ್ ಟಗರು ತನಕ ಕಾಯಬೇಕಾಯ್ತು. ಡಾಲಿ ಎಂಬ ಬ್ಯಾಡಿ ಧನಂಜಯ್ ಪಾಲಿಗೆ ಮಾತ್ರ ಗುಡ್ಡಿ ಆಗಿ ಕಂಗೊಳಿಸಿತು. ಇವತ್ತು ಧನಂಜಯ್ ಬ್ಯುಸಿಯೆಸ್ಟ್ ನಟ.
ಇಂಥದೊಂದು ಪಾತ್ರವನ್ನ ಸೃಷ್ಟಿಸಿದ ನಿರ್ದೇಶಕ ಸೂರಿಯವರನ್ನ ಧನಂಜಯ ಕೃತಜ್ಞತೆಯಿಂದ ನೆನೆದು ಧನ್ಯವಾದ ಅರ್ಪಿಸಿದರೂ, ಮತ್ತೊಂದು ಮೂಲೆಯಲ್ಲಿ ಅವರಿಗೊಂದು ಸಂಕಟ ಶುರುವಾಗಿದೆ. ಅದೇನೆಂದರೆ ಈಗಂತೂ ವಿಲನ್ ಪಾತ್ರಗಳು ಅವರನ್ನೇ ಹೆಚ್ಚೆಚ್ಚಾಗಿ ಹುಡುಕಿಕೊಂಡು ಬರುತ್ತಿವೆಯಂತೆ. ‘ಒಳ್ಳೇ ಪಾತ್ರವಾಗಿದ್ದರೆ ಸಾಕು, ಹೀರೋನೋ ವಿಲ್ಲನ್ನೋ; ಪರವಾಗಿಲ್ಲ ಅಭಿನಯಿಸುತ್ತೇನೆ’ ಎಂದು ಹೇಳಿಕೊಂಡು ಧನಂಜಯ್ ಕೂಡಾ ಉತ್ಸಾಹದಿಂದಲೇ ಕೆಲವು ಆಫರ್ಗಳನ್ನ ಒಪ್ಪಿಕೊಂಡಿದ್ದರು. ಆದರೆ ಅವರೊಬ್ಬ ನಾಯಕ ನಟ ಎಂಬುದನ್ನೇ ಮರೆತವರಂತೆ ಇಂಡಸ್ಟ್ರಿಯವರು ಧನಂಜಯ್ಗೆ ಬರೀ ಬ್ಯಾಡಿ ರೋಲ್ಗಳನ್ನೆ ಹಿಡಿದುಕೊಂಡು ಆಫರ್ ಕೊಡಲಾರಂಭಿಸಿದ್ದಾರಂತೆ.
ವಿಲನ್ ಪಾತ್ರ ಒಪ್ಪಿಕೊಂಡರೆ ಕೈತುಂಬಾ ಅವಕಾಶಗಳು, ಜೇಬಿನ ತುಂಬಾ ಹಣ ಎರಡಕ್ಕೂ ಮೋಸವಿಲ್ಲ. ಆದರೆ ಅದಷ್ಟನ್ನೇ ಮಾಡಿಕೊಂಡಿದ್ದರೆ ಅಷ್ಟಕ್ಕೇ ಸೀಮಿತವಾಗಿಬಿಡುತ್ತೇನೆ ಎಂಬ ಆತಂಕವೂ ಧನಂಜಯ್ಗಿದೆ.
‘ಸ್ಟಾರ್ ನಟರ ಕೆಲವೊಂದು ಸಿನಿಮಾಗಳನ್ನ, ಅದರಲ್ಲಿನ ಪಾತ್ರಗಳನ್ನ ಇಷ್ಟಪಟ್ಟು ಖಳನಾಗಿದ್ದೇನೇ ವಿನಾ, ಡಾಲಿ ಗುಂಗಲ್ಲೇ ಜೀವನ ಕಳೆಯುವುದಕ್ಕೆ ನನಗೂ ಇಷ್ಟವಿಲ್ಲ’ ಎನ್ನುತ್ತಾರೆ ಧನಂಜಯ್.v ‘ನಾನು ಚಾರಿತ್ರಿಕ ವ್ಯಕ್ತಿ ಅಲ್ಲಮನಂತ ಪಾತ್ರವನ್ನೂ ಮಾಡಿದ್ದವನು. ಆದರದು ಈ ಮಟ್ಟದ ಜನಪ್ರಿಯತೆ ಗಳಿಸಲಿಲ್ಲ. ವೈಯುಕ್ತಿಕವಾಗಿ ನನಗೆ ಎಲ್ಲಾ ಬಗೆಯ ಪಾತ್ರಗಳೂ ಇಷ್ಟ. ಆದರೆ ಹೆಸರು ತಂದುಕೊಟ್ಟಿರುವುದು ಮಾತ್ರ ಟಗರುವಿನ ಡಾಲಿ ಪಾತ್ರ. ನನ್ನ ಆಸಕ್ತಿ, ಪ್ರತಿಭೆ, ಹಿನ್ನೆಲೆ ಗೊತ್ತಿದ್ದವರು ನನ್ನ ಆಯ್ಕೆ ಕಂಡು ಬೇಸರಿಸಿಕೊಳ್ಳುವುದುಂಟು. ‘ಯಾಕೆ ಬರೀ ಕೆಟ್ಟ ಪಾತ್ರಗಳನ್ನೇ ಒಪ್ಪಿಕೊಳ್ಳುತ್ತಿದ್ದೀರಿ? ಅಂತಲೂ ಕೆಲವರು ಆಕ್ಷೇಪಿಸುತ್ತಾರೆ.. ಆದರೆ ನಾನೇನು ಮಾಡಲಿ? ಇವತ್ತು ಕ್ರೈಂ ಸುದ್ದಿಗಳಿಗೆ, ಅಪರಾಧ ಜಗತ್ತಿನ ಸಿನಿಮಾಗಳಿಗೆ ದೊಡ್ಡ ಮಟ್ಟದ ಪ್ರೇಕ್ಷಕರಿದ್ದಾರೆ. ಒಳ್ಳೇ ಪಾತ್ರಗಳನ್ನ ಎದುರು ನೋಡುತ್ತಲೇ ಇದನ್ನೂ ಮಾಡಲೇಬೇಕು.. ಹೊಟ್ಟೆಪಾಡು ನಡೆಯಬೇಕಲ್ಲ ಸ್ವಾಮಿ’ ಎನ್ನುತ್ತಾರೆ ಧನಂಜಯ್.
No Comment! Be the first one.