ಡಾಲಿ ಧನಂಜಯ್ ಭೈರವಗೀತಾ ಚಿತ್ರದ ನಂತರ ಪಾಪ್ಕಾರ್ನ್ ಮಂಕಿ ಟೈಗರ್ ಚಿತ್ರದ ಚಿತ್ರೀಕರಣದಲ್ಲಿ ಭಾಗಿಯಾಗಿರೋದು ಗೊತ್ತೇ ಇದೆ. ಆದರೆ ಈ ಚಿತ್ರೀಕರಣದ ನಡುವೆ ಕೊಂಚ ಬಿಡುವು ಮಾಡಿಕೊಂಡು ಅವರೀಗ ತನ್ನ ಹುಟ್ಟೂರು ಮೈಸೂರಿಗೆ ತೆರಳಿದ್ದಾರೆ. ಹಾಗಂತ ಅವರೇನು ತವರಲ್ಲಿ ರೆಸ್ಟು ತೆಗೆದುಕೊಳ್ಳಲು ಹೋಗಿದ್ದಾರೆ ಅಂದುಕೊಳ್ಳುವಂತಿಲ್ಲ. ಯಾಕಂದ್ರೆ ಅವರು ಹಾಗೆ ತರಾತುರಿಯಿಂದ ಮೈಸೂರಿಗೆ ತೆರಳಲು ಮತ್ತೊಂದು ಚಿತ್ರದ ಚಿತ್ರೀಕರಣ ಕಾರಣ!
ಧನಂಜಯ್ ನೀರ್ದೋಸೆ ಖ್ಯಾತಿಯ ವಿಜಯ್ ಪ್ರಸಾದ್ ನಿರ್ದೇಶನದ ತೋತಾಪುರಿ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದರಲ್ಲವರು ವಿಶೇಷ ಪಾತ್ರವೊಂದಕ್ಕೆ ಜೀವ ತುಂಬಿದ್ದಾರೆ. ಇದೀಗ ಮೈಸೂರಿನಲ್ಲಿ ಡಾಲಿ ಭಾಗದ ಚಿತ್ರೀಕರಣ ಅವ್ಯಾಹತವಾಗಿ ನಡೆಯುತ್ತಿದೆ.ತೋತಾಪುರಿಯಲ್ಲಿ ಈ ವಿಶೇಷವಾದ ಪಾತ್ರವನ್ನು ಡಾಲಿಗಾಗಿಯೇ ವಿಜಯ ಪ್ರಸಾದ್ ರೂಪಿಸಿದ್ದರಂತೆ. ಒಟ್ಟಾರೆ ಕಥೆಯ ಸೊಗಸು ಮತ್ತು ತನ್ನ ಪಾತ್ರದ ಕಿಮ್ಮತ್ತು ಕಂಡು ಖುಷಿಗೊಂಡೇ ಧನಂಜಯ್ ಕೂಡಾ ಇದರಲ್ಲಿ ನಟಿಸಲು ಒಪ್ಪಿಕೊಂಡಿದ್ದರಂತೆ. ಇದೀಗ ಡಾಲಿ ಆ ಪಾತ್ರಕ್ಕೆ ಜೀವ ತುಂಬುತ್ತಿದ್ದಾರೆ.
ಇಲ್ಲಿ ಡಾಲಿಯದ್ದು ನಾರಾಯಣ ಪಿಳೈ ಎಂಬ ಉದ್ಯಮಿಯ ಪಾತ್ರ. ಪಾಪ್ಕಾರ್ನ್ ಮಂಕಿ ಟೈಗರ್ಗಾಗಿ ಗಡ್ಡ ಬಿಟ್ಟ ಅವತಾರದಲ್ಲಿ ಕಾಣಿಸಿಕೊಂಡಿದ್ದರಲ್ಲಾ ಧನಂಜಯ್? ತೋತಾಪುರಿ ಪಾತ್ರಕ್ಕಾಗಿ ಆ ಗೆಟಪ್ಪನ್ನು ಸಂಪೂರ್ಣವಾಗಿಯೇ ಬದಲಾಯಿಸಿಕೊಂಡಿದ್ದಾರೆ. ಹೇರ್ ಸ್ಟೈಲೂ ಬದಲಾಗಿ ಬಿಟ್ಟಿದೆ. ಸೂಟ್ ಧರಿಸಿದ ಸ್ಟೈಲಿಶ್ ರೂಪದಲ್ಲಿ ಅವರು ಕಾಣಿಸಿಕೊಳ್ಳುತ್ತಿದ್ದಾರೆ.
#