ಹರಿವು, ನಾತಿಚರಾಮಿ, Act 1978 ಮತ್ತು 19.20.21 ಥರದ ಕಾಡುವ ಸಿನಿಮಾಗಳನ್ನು ಕೊಟ್ಟವರು, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿರ್ದೇಶಕ ಮನ್ಸೋರೆ. ನಾಲ್ಕು ಸಿನಿಮಾಗಳನ್ನು ದಾಟಿ ಐದಕ್ಕೆ ಕಾಲಿಡೋ ಹೊತ್ತಿಗೆ ಮನ್ಸೋರೆ ʻದಾರಿʼ ಬದಲಿಸಿ ʻಲವ್ ಜರ್ನಿʼ ಶುರು ಮಾಡಿದ್ದಾರೆ. ಇದಕ್ಕೆ ಇವರಿಟ್ಟಿರುವ ಹೆಸರು ʻದೂರ ತೀರ ಯಾನʼ. ಬೆಂಗಳೂರಿನಲ್ಲಿ ಆರಂಭಗೊಂಡು ಗೋವಾದ ತನಕ ಸಾಗುವ ಕಥೆ ಇದರಲ್ಲಿದೆಯಂತೆ.
ಹೇಳಬೇಕು ಅಂದುಕೊಂಡಿದ್ದನ್ನು ಯಾವ ಮುಲಾಜು, ಅಂಜಿಕೆಗಳಿಲ್ಲದೆ ನೇರಾನೇರವಾಗಿ ಹೇಳುವ ಧಾಟಿ ಮನ್ಸೋರೆಗೆ ಸಿದ್ಧಿಸಿದೆ. ಯಾವ ವಿಚಾರವನ್ನು ಜಗತ್ತು ಮುಜುಗರ, ಮುಚ್ಚುಮರೆಗಳ ಅಡಿಯಲ್ಲಿ ಅಡಗಿಸಿಟ್ಟಿದೆಯೋ ಅದನ್ನು ನಾತಿಚರಾಮಿಯಲ್ಲೇ ಧೈರ್ಯವಾಗಿ ಹೇಳಿದವರು ಮನ್ಸೋರೆ. ಈ ಸಲ ತಮ್ಮ ನಾಲ್ಕೂ ಪ್ರಯೋಗಗಳನ್ನು ಮೀರುವುದಾಗಿ ಸ್ವತಃ ಅವರೇ ಹೇಳಿದ್ದಾರೆ. ಈ ಹಿಂದೆ ನಾತಿಚರಾಮಿಯಲ್ಲಿ ಸಂಧ್ಯಾರಾಣಿ ಅವರಂತಾ ಪ್ರಸಿದ್ದ ಲೇಖಕಿಯ ಜೊತೆ ಕೆಲಸ ಮಾಡಿದ್ದರು. ಈ ಸಲ ಕನ್ನಡದ ಖ್ಯಾತ ಬರಹಗಾರ್ತಿ, ಪತ್ರಕರ್ತೆ, ಸಾಮಾಜಿಕ ಕಾರ್ಯಕರ್ತೆ, ಚಿಂತಕಿ… ಹೀಗೆ ಹಲವು ವಿಭಾಗ, ವಲಯಗಳಲ್ಲಿ ಗುರುತಿಸಿಕೊಂಡಿರುವ ಚೇತನಾ ತೀರ್ಥಹಳ್ಳಿ ಅವರನ್ನು ʻದೂರ ತೀರ ಯಾನʼಕ್ಕೆ ಜೊತೆಯಾಗಿಸಿಕೊಂಡಿದ್ದಾರೆ.
ಕನ್ನಡದ ಹಲವು ದಿನಪತ್ರಿಕೆಗಳ, ಸಾಪ್ತಾಹಿಕ ಪುರವಣಿಗಳ ದಿಕ್ಕು-ದೆಸೆ ಬದಲಿಸಿ ಅದರ ತೂಕ ಹೆಚ್ಚಿಸಿದವರು ಚೇತನಾ. ಗದ್ಯ, ಪದ್ಯ, ಕಥೆ, ಕಾದಂಬರಿ… ಹೀಗೆ ಯಾವುದೇ ಪ್ರಾಕಾರವಾದರೂ ಸಲೀಸಾಗಿ ಬರೆದು ಓದುಗರೆದೆಗಿಳಿಸುವ ತಾಕತ್ತು ಹೊಂದಿರುವ ಬರಹʼಗಾಯತ್ರಿʼ ಇವರು. ಬರವಣಿಗೆ ಮಾತ್ರವಲ್ಲ, ತುಂಬಾ ಚೆಂದನೆಯ ಚಿತ್ರ ಬಿಡಿಸುವ, ಯಾವುದೇ ವಿಚಾರದ ಬಗ್ಗೆ ಸರಾಗವಾಗಿ ಮಾತಾಡುವ ಸಿಕ್ಕಾಪಟ್ಟೆ ಕ್ರಿಯೇಟೀವ್ ಹೆಣ್ಣುಮಗಳಿದು. ಈ ಹಿಂದೆ ಬಿ. ಸುರೇಶ ಅವರ ಉಪ್ಪಿನ ಕಾಗದ ಸಿನಿಮಾಕ್ಕೆ ಸ್ಕ್ರೀನ್ ಪ್ಲೇ, ಡೈಲಾಗ್ ಮತ್ತು ಹಾಡನ್ನು ಬರೆದಿದ್ದರು. ಇದಲ್ಲದೇ ಅನೇಕ ಸಿನಿಮಾಗಳ ಸ್ಕ್ರಿಪ್ಟ್ ಡಾಕ್ಟರ್ ಕೆಲಸವನ್ನೂ ಸದ್ದಿಲ್ಲದೇ ಮಾಡಿಕೊಡುತ್ತಾ ಬಂದಿದ್ದಾರೆ. ಸಾಕಷ್ಟು ಧಾರಾವಾಹಿ, ಶೋಗಳಿಗೂ ಸರಕು ಒದಗಿಸಿದ್ದಾರೆ. ಪತ್ರಿಕೋದ್ಯಮ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಅಪಾರ ಹೆಸರು ಮಾಡಿ ಟೀವಿ ಮತ್ತು ಸಿನಿಮಾ ಕ್ಷೇತ್ರದಲ್ಲೂ ತೊಡಗಿಸಿಕೊಂಡಿರುವ ಚೇತನಾ ತೀರ್ಥಹಳ್ಳಿ ದೂರ ತೀರಯಾನಕ್ಕೂ ಸ್ಕ್ರೀನ್ ಪ್ಲೇ ಮತ್ತು ಸಂಭಾಷಣೆಯನ್ನು ಬರೆದಿದ್ದಾರೆ.
ಎಲ್ಲ ಕ್ಷೇತ್ರದಲ್ಲೂ ಶಿಷ್ಯಪಡೆ, ಅನುಯಾಯಿಗಳನ್ನು ಹೊಂದಿರುವ ಚೇತನಾ ಸಿನಿಬಜ್ ಪಾಲಿಗೆ ಯಾವತ್ತಿಗೂ ಪ್ರೇರಕಶಕ್ತಿಯಾಗಿದ್ದಾರೆ. ಸಣ್ಣದಾಗಿ ಶುರುವಾಗಿ ಇವತ್ತು ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಗುರುತುಗಳನ್ನು ಸೃಷ್ಟಿಸಿರುವ CINIBUZZ ಮೀಡಿಯಾಗೆ ಹೆಸರು ಸೂಚಿಸಿದ್ದು ಕೂಡಾ ಇವರೇ!
ಗೆಳತಿಯಾಗಿ, ಗುರುವಾಗಿ, ಸಹೋದರಿಯಾಗಿ ಸಹಯಾನಿಗಳಿಗೆ ದಾರಿ ತೋರುವ ಚೇತನಾ ಮತ್ತು ಎಲ್ಲರ ಪ್ರೀತಿಯ ಜೀವ ಮನ್ಸೋರೆ ಇಬ್ಬರಿಗೂ ತುಂಬಾನೇ ಒಳ್ಳೇದಾಗ್ಲಿ…
– ಅರುಣ್
No Comment! Be the first one.