ಕೆಲವೊಮ್ಮೆ ಅದೆಷ್ಟು ಅಲೆದಾಡಿದರೂ ಒಲಿಯದ ಅದೃಷ್ಟವೆಂಬೋ ಮಾಯೆ, ಕೆಲವರ ಪಾಲಿಗೆ, ಕೆಲವಾರು ಸಂದರ್ಭಗಳಲ್ಲಿ ಬಯಸದೇನೇ ಒತ್ತರಿಸಿಕೊಂಡು ಬರೋದಿದೆ. ಅದಕ್ಕೆ ಕಣ್ಣೆದುರಿನ ಉದಾಹರಣೆ ಕೆಜಿಎಫ್ ಚಿತ್ರದಲ್ಲಿ ನಾಯಕಿಯಾಗಿ ನಟಿಸಿರೋ ಶ್ರೀನಿಧಿ ಶೆಟ್ಟಿ!
ಕೆಜಿಎಫ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿ ಘಂಟೆ ಕಳೆಯೋದರೊಳಗೇ ಅದು ಮಾಡಿರೋ ಮೋಡಿ, ಬಾಲಿವುಡ್ ಚಿತ್ರಗಳನ್ನೇ ಥಂಡಾ ಹೊಡೆಸಿರೋ ರೀತಿಗಳೇ ಈ ಚಿತ್ರದ ಅಸಲೀ ಖದರಿಗೆ ಸಾಕ್ಷಿಯಂತಿವೆ. ಈ ಬಗ್ಗೆ ಖುದ್ದು ಯಶ್ ಸೇರಿದಂತೆ ಇಡೀ ಚಿತ್ರತಂಡ ಕುಣಿದಾಡುವಂಥಾ ಖುಷಿಯಲ್ಲಿ ಮಿಂದೇಳುತ್ತಿದೆ. ಆದರೆ ಅದೆಲ್ಲವನ್ನೂ ಮೀರಿಸುವಂತೆ ಉದ್ವೇಗದಲ್ಲಿರುವಾಕೆ ಶ್ರೀನಿಧಿ ಶೆಟ್ಟಿ!
ತಾನು ಈ ಚಿತ್ರದ ಟ್ರೈಲರರ್ ನೋಡಿ ಅತ್ತೇ ಬಿಟ್ಟಿರೋದಾಗಿ ಶ್ರೀನಿಧಿ ಹೇಳಿಕೊಂಡಿದ್ದಾಳೆ. ತೀರಾ ಬಾಲಿವುಡ್ ಚಿತ್ರಗಳನ್ನೇ ಮೀರಿಸುವಂತಿರೋ ಕೆಜಿಎಫ್ ಚಿತ್ರದ ಭಾಗವಾಗಿರೋದರ ಹೆಮ್ಮೆ ಅದಕ್ಕೆ ಕಾರಣವಂತೆ. ಇದು ಸಹಜವೇ. ಯಾಕೆಂದರೆ ಈ ಶ್ರೀನಿಧಿಗೆ ಈಗ್ಗೆ ಎರಡು ವರ್ಷಗಳ ಹಿಂದೆ ಕೆಜಿಎಫ್ ಚಿತ್ರದಲ್ಲಿ ನಟಿಸೋ ಆಫರ್ ಬಂದಾಗ ಇಂಥಾದ್ದೊಂದು ಚಮಾತ್ಕಾರ ನಡೆಯಲಿದೆ ಎಂಬುದನ್ನು ಆಕೆ ಕನಸಲ್ಲಿಯೂ ಅಂದುಕೊಂಡಿರಲಿಲ್ಲವಂತೆ.
ಅದು ೨೦೧೬ರ ವರ್ಷ. ಮಾಡೆಲಿಂಗ್ ಕ್ಷೇತ್ರದಲ್ಲಿಯೂ ಒಂದಷ್ಟುಯ ಹೆಸರು ಮಾಡಿದ್ದ ಶ್ರೀನಿಧಿ ಮಿಸ್ ಇಂಡಿಯಾ ಸೌಂದರ್ಯ ಸ್ಪರ್ಧೆಯಲ್ಲಿ ಗೆಲುವು ಕಂಡಿದ್ದಳು. ಈ ಬಗ್ಗೆ ಮಾಧ್ಯಮಗಳಲ್ಲಿಯೂ ವರದಿ ಪ್ರಕಟವಾಗಿತ್ತು. ಇದನ್ನು ಕಂಡು ನಿರ್ದೇಶಕ ಪ್ರಶಾಂತ್ ನೀಲ್ ಶ್ರೀನಿಧಿಯನ್ನು ಸಂಪರ್ಕಿಸಿದ್ದರಂತೆ. ಅವರು ಹೇಳಿದ ಕಥೆ ಕೇಳಿ ಸಂಭ್ರಮದಿಂದಲೇ ಒಪ್ಪಿಕೊಂಡರೂ ಈ ಚಿತ್ರ ತನ್ನ ಪಾಲಿಗೆ ಅದೃಷ್ಟದ ಹೆಬ್ಬಾಗಿಲು ತೆರೆದೀತೆಂಬ ಸಣ್ಣ ಸುಳಿವೂ ಶ್ರೀನಿಧಿಗಿರಲಿಲ್ಲವಂತೆ. ಆದರೆ ಈ ಎರಡು ವರ್ಷಗಳ ಅವಧಿ ಆಕೆಯ ಪಾಲಿಗೆ ನಿಜಕ್ಕೂ ಹೊಸಾ ಅನುಭವಗಳ ಪಾಠಶಾಲೆ.
ಇದೀಗ ಅದರ ಪೂರ್ವಭಾವಿ ಫಲಿತಾಂಶ ಪ್ರಕಟವಾಗಿದೆ. ಬಾಲಿವುಡ್ ಮಟ್ಟದಲ್ಲಿಯೂ ಈ ಚಿತ್ರ ಸದ್ದು ಮಾಡುತ್ತಿದೆ. ಇಂಥಾ ಚಿತ್ರದ ನಾಯಕಿ ತಾನೆಂಬುದೇ ಶ್ರೀನಿಧಿ ಪಾಲಿಗೆ ಚಿವುಟಿ ನೋಡಿಕೊಳ್ಳುವಂಥಾ ಅಚ್ಚರಿಗೆ ಕಾರಣವಾಗಿದೆ!
#
No Comment! Be the first one.