`ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೆ ಜೀವನ…’ ಹಾಡಿನ ಮೊದಲ ಸಾಲು ಈಗ ಸಿನಿಮಾ ಆಗಿ ಬಿಡುಗಡೆಗೊಂಡಿದೆ. ಕಾಂತ ಕನ್ನಲ್ಲಿ ನಿರ್ದೇಶನದಲ್ಲಿ ಮೂಡಿಬಂದಿರುವ ಸಿನಿಮಾ ನೋಡಿದ ಎಲ್ಲರನ್ನೂ ಸೆಳೆಯುತ್ತಿದೆ. ಸಿನಿಮಾ ನೋಡಿ ಹೊರಬಂದ ಪ್ರತಿಯೊಬ್ಬರ ಮುಖದಲ್ಲೂ ಮಂದಹಾಸ ಮೂಡಿಸುವ ಸಿನಿಮಾ ಇದು.
ಅಂದಹಾಗೆ ಇದೇ `ಇರುವುದೆಲ್ಲವ ಬಿಟ್ಟು’ ಶೀರ್ಷಿಕೆ ವರನಟ ಡಾ. ರಾಜ್ ಕುಮಾರ್ ಅವರ ನಟನೆಯ ಕೊನೆಯ ಸಿನಿಮಾ ಆಗಬೇಕಿತ್ತು ಅನ್ನೋ ವಿಚಾರವೊಂದು ಹೊರಬಿದ್ದಿದೆ. ಈ ಸಿನಿಮಾವನ್ನು ನೋಡಿದ ಕೆ.ಎಂ.ಎಫ್‌ನ ಮಾಜಿ ವ್ಯವಸ್ಥಾಪಕ ನಿರ್ದೇಶಕ ಎ.ಎಸ್. ಪ್ರೇಮನಾಥ್ ಖುದ್ದು ನಿರ್ದೇಶಕರ ಬಳಿ ಈ ವಿಷಯವನ್ನು ಹೇಳಿದರಂತೆ. ಪ್ರೇಮ್‌ನಾಥ್ ಡಾ.ರಾಜ್ ಕುಟುಂಬದ ಜೊತೆ ತೀರಾ ನಿಕಟ ಸಂಪರ್ಕ ಹೊಂದಿರುವವರು. ಹೀಗಾಗಿ ಅಣ್ಣಾವ್ರ ಕುರಿತ ಸಾಕಷ್ಟು ಇಂಟರೆಸ್ಟಿಂಗ್ ವಿಚಾರಗಳು ಪ್ರೇಮನಾಥ್ ಅವರಿಗೆ ಸಹಜವಾಗೇ ಗೊತ್ತಿರುತ್ತದೆ. ಡಾ. ರಾಜ್‌ಕುಮಾರ್ ನಟಿಸಬೇಕಿದ್ದ ಆ ಸಿನಿಮಾಗೆ ಖ್ಯಾತ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಕಥೆಯನ್ನೂ ಹೇಳಿದ್ದರಂತೆ. `ಇರುವುದೆಲ್ಲವ ಬಿಟ್ಟು’ ಅನ್ನೋ ಶೀರ್ಷಿಕೆಯನ್ನು ರಾಜಣ್ಣ ಬಹುವಾಗಿ ಇಷ್ಟಪಟ್ಟಿದ್ದರಂತೆ. ಅವರ ಅನಾರೋಗ್ಯ ಮತ್ತಿತರ ಕಾರಣಗಳಿಗೆ ಆ ಸಿನಿಮಾ ಸೆಟ್ಟೇರಿರಲಿಲ್ಲ. ಒಂದು ವೇಳೆ ಅಣ್ಣಾವ್ರು ಈಗಲೂ ಇರುವಂತಾಗಿ, ಅದೇ ಶೀರ್ಷಿಕೆಯೊಂದಿಗೆ ಇಷ್ಟು ಮುದ್ದಾದ ಸಿನಿಮಾ ಮೂಡಿಬಂದಿರೋದನ್ನು ನೋಡಿದ್ದಿದ್ದರೆ ಅದೆಷ್ಟು ಖುಷಿಪಡುತ್ತದ್ದರೋ…?