ಸಾಹಸಸಿಂಹ ಡಾ. ವಿಷ್ಣುವರ್ಧನ್ ಅವರ ಆದರ್ಶಗಳನ್ನು ಅಜರಾಮರವಾಗಿಸುವ ನಿಟ್ಟಿನಲ್ಲಿ ವಿಷ್ಣುಸೇನಾ ಸಮಿತಿಯದ್ದು ಸಿಂಹನಡೆ. ವಿಷ್ಣು ಹೆಸರಲ್ಲಿ ನಾನಾ ಸಾಮಾಜಿಕ ಕೆಲಸ ಕಾರ್ಯಗಳನ್ನು ಮಾಡಿಕೊಂಡುಬಂದಿರುವ ಈ ಸಮಿತಿ ಪ್ರತೀ ವರ್ಷವೂ ಕೋಟಿಗೊಬ್ಬ ನಮ್ಮ ವಿಷ್ಣು ಎಂಬ ಶೀರ್ಷಿಕೆಯಲ್ಲಿ ಆಕರ್ಷಕವಾದ ಕ್ಯಾಲೆಂಡರ್ ಒಂದನ್ನು ಹೊರತರುತ್ತಿದೆ. ಪ್ರತೀ ವರ್ಷದ ಕಡೇ ಘಳಿಗೆಯಲ್ಲಿ ವಿಷ್ಣು ಅಭಿಮಾನಿ ಪಡೆ ಕಾತರದಿಂದ ಈ ಕ್ಯಾಲೆಂಡರಿಗಾಗಿ ಕಾಯುತ್ತದೆ. ವೀರಕಪುತ್ರ ಶ್ರೀನಿವಾಸ್ ಪರಿಕಲ್ಪನೆಯಲ್ಲಿ ಮೂಡಿ ಬರುತ್ತಿರೋ ಈ ಚಿತ್ರದ ಸೊಗಸೇ ಅಂಥಾದ್ದಿದೆ!
ಡಾ.ವಿಷ್ಣುವರ್ಧನ ಅವರ ನೆನಪನ್ನು ಮನೆ ಮನಗಳಲ್ಲಿ ಹಸಿರಾಗಿಡುವ ಸಲುವಾಗಿ ಕಳೆದ ೭ ವರ್ಷಗಳಂತೆ ಈ ವರ್ಷವೂ ಕೋಟಿಗೊಬ್ಬ ಕ್ಯಾಲೆಂಡರ್ ಅನ್ನು ಡಾ.ವಿಷ್ಣು ಸೇನಾ ಸಮಿತಿ ಹೊರ ತರುತ್ತಿದೆ. ಪ್ರತಿ ವರ್ಷವೂ ಹೊಸ ರೀತಿಯ ಪರಿಕಲ್ಪನೆ ಮತ್ತು ವಿನ್ಯಾಸಗಳಿಂದ ಮನಸೂರೆಗೊಳ್ಳುತ್ತಿರುವ ಕೋಟಿಗೊಬ್ಬ ಕ್ಯಾಲೆಂಡರ್ ಈ ಸಲ ಸಿಂಹಸ್ವರೂಪಿ ಡಾ.ವಿಷ್ಣುವರ್ಧನ ಎಂಬ ಪರಿಕಲ್ಪನೆ ಅಡಿಯಲ್ಲಿ ಮೂಡಿದೆ. ೧೨ ಪುಟಗಳ ಜೊತೆಗೆ ಇನ್ನೆರೆಡು ವಿಶೇಷ ಪುಟಗಳಿವೆ.
ಈ ಕ್ಯಾಲೆಂಡರ್ ಡಾ.ವಿಷ್ಣುವರ್ಧನ ಅವರ ವಿಶೇಷ ಫೋಟೋಗಳು ಮತ್ತು ಅವರು ನುಡಿದಿದ್ದ ಕೆಲವು ಸುಪ್ರಸಿದ್ಧ ಹೇಳಿಕೆಗಳನ್ನು ಒಳಗೊಂಡಿದೆ. ಜೊತೆಗೆ ಡಾ.ವಿಷ್ಣುವರ್ಧನ್ ಅವರು ಸಿಂಹಸ್ವರೂಪಿ ಹೇಗೆ ಎಂಬುದರ ಬಗ್ಗೆ ಡಾ.ವಿ.ನಾಗೇಂದ್ರ ಪ್ರಸಾದ್, ಕೆ.ಕಲ್ಯಾಣ್ ಮತ್ತು ರವಿ ಶ್ರೀವತ್ಸ ಮುಂತಾದವರು ಮಾತನಾಡಿದ್ದಾರೆ. ಒಂದು ವೃತ್ತಿಪರ ಕ್ಯಾಲೆಂಡರ್ ನಲ್ಲಿ ಇರುವಂತಹ, ರಜೆ ದಿನಗಳು, ರಾಹುಕಾಲ, ಗುಳಿಕಕಾಲ, ಅಮಾವಾಸೆ, ಹುಣ್ಣಿಮೆ ಇತ್ಯಾದಿಗಳೆಲ್ಲವೂ ಈ ಕ್ಯಾಲೆಂಡರ್ ನಲ್ಲಿ ಕಾಣಬಹುದು. ವಿಷ್ಣು ಅವರ ಕ್ಯಾಲೆಂಡರ್ ಎಂದ ಮಾತ್ರಕ್ಕೆ ಬರೀ ಫೋಟೋಗಳಿಗೆ ಅಥವಾ ಅಭಿಮಾನಿಗಳಿಗೆ ಮಾತ್ರ ಸೀಮಿತವಾಗದೆ ಇಡೀ ಕುಟುಂಬದವರಿಗೆ ಅನುಕೂಲವಾಗುವಂತೆ ರೂಪುಗೊಂಡಿದೆ.
ಸಿಂಹವೊಂದು ಮನೆಯ ಗೋಡೆ ಮೇಲೆ ನಡೆದು ಹೋಗುವ ಅನುಭವವನ್ನು ಕಟ್ಟಿಕೊಡುವಂತಹ ಆಕರ್ಷಕ ವಿನ್ಯಾಸ ಮತ್ತು ಸಾಮಾನ್ಯ ಕ್ಯಾಲೆಂಡರ್ ಗಿಂತ ದುಪ್ಟಟ್ಟು ಗಾತ್ರ ಹೊಂದಿರುವುದು ಈ ಕ್ಯಾಲೆಂಡರ್ನ ಮತ್ತೆರೆಡು ವಿಶೇಷಗಳಾಗಿವೆ. ಇಷ್ಟೆಲ್ಲಾ ವಿಶೇಷತೆಗಳ ಕ್ಯಾಲೆಂಡರ್ನ ಮುದ್ರಣ ಹತ್ತಿರಹತ್ತಿರ ನೂರು ರೂಪಾಯಿ ಇದ್ದರೂ, ಅದನ್ನು ಅಭಿಮಾನಿಗಳಿಗಾಗಿ ವೀರಕಪುತ್ರ ಶ್ರೀನಿವಾಸ್ ಮತ್ತವರ ಸ್ನೇಹಿತರು ಕೇವಲ ರೂ.೫೦/_ರೂಪಾಯಿಗಳಿಗೆ ನೀಡುತ್ತಿದ್ದಾರೆ. ಏಕೆಂದರೆ ಈ ಕ್ಯಾಲೆಂಡರ್ ಪ್ರತಿಯೊಬ್ಬ ಅಭಿಮಾನಿಯ ಮನೆಯಲ್ಲಿರಬೇಕೆಂಬುದು ಅವರ ಉದ್ದೇಶ. ಈ ಕ್ಯಾಲೆಂಡರ್ ಎಲ್ಲಾ ಜಿಲ್ಲೆ ಮತ್ತು ತಾಲೂಕುಗಳ ಬಸ್ ಸ್ಟ್ಯಾಂಡ್ ಬಳಿಯ ಪುಸ್ತಕದ ಅಂಗಡಿಗಳಲ್ಲಿ ಲಭ್ಯವಿದೆ.
#