ಆಯುಷ್ಮಾನ್ ಖುರಾನ ನಟನೆಯ ಡ್ರೀಮ್ ಗರ್ಲ್ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದೆ. ಟ್ರೇಲರ್‌ನ ಮೊದಲ ದೃಶ್ಯದಲ್ಲಿಯೇ ಸೀತೆಯ ಪಾತ್ರದಲ್ಲಿ ಆಯುಷ್ಮಾನ್‌ ಕಾಣಿಸಿಕೊಂಡಿದ್ದು, ಉದ್ಯೋಗ ಗಿಟ್ಟಿಸಿಕೊಳ್ಳಲು ‘ಡ್ರೀಮ್‌ ಗರ್ಲ್‌’ ಆಗಿ ಅವರು ಬದಲಾಗುತ್ತಾರೆ. ಕಾಲ್‌ ಸೆಂಟರ್‌ನಲ್ಲಿ ಕೆಲಸ ಮಾಡುವಾಗ ಹುಡುಗಿಯ ಧ್ವನಿಯಲ್ಲಿ ಮಾತನಾಡಿ ಹತ್ತಾರು ಯುವಕರ ಕನಸಿನ ರಾಣಿಯಾಗುವ ಕಥಾ ಹಂದರವನ್ನು ಹೊಂದಿರುವ ಡ್ರೀಮ್ ಗರ್ಲ್ ನಲ್ಲಿ ‘ಪೂಜಾ’ ಪಾತ್ರಕ್ಕಾಗಿ ಆಯುಷ್ಮಾನ್‌ ಹುಡುಗಿಯರ ರೀತಿ ಮಾತನಾಡುವುದನ್ನು ಕೂಡ ಕಲಿತುಕೊಂಡಿದ್ದಾರೆ.

ಪೂಜಾ ಧ್ವನಿಗೆ ಫಿದಾ ಆಗಿ ಸಾಕಷ್ಟು ಬಳಕೆಕಾರರು, ಜತೆಗೆ ಕಾಲೋನಿ ಹಿರಿಯರು, ಅಂತಿಮವಾಗಿ ಆಯುಷ್ಮಾನ್ ಖುರಾನ ತಂದೆಯೂ ಖೆಡ್ಡಾಕ್ಕೆ ಬೀಳುತ್ತಾರೆ. ಎಲ್ಲರನ್ನೂ ನಗಿಸಿ, ಅಳಿಸಿ, ಪ್ರೀತಿಯ ಬಲೆಯಲ್ಲಿ ಬೀಳಿಸಿಕೊಳ್ಳುವ ‘ಪೂಜಾ’ಳನ್ನು ಎಲ್ಲರೂ ಹುಡುಕಲು ಆರಂಭಿಸುತ್ತಾರೆ. 3 ನಿಮಿಷದ ಸಿನಿಮಾ ಟ್ರೇಲರ್‌ನಲ್ಲೂ ಆಯುಷ್ಮಾನ್‌ ಹುಡುಗಿಯರಂತೆ ಮಾತನಾಡುವ ದೃಶ್ಯಗಳು ನಗು ಉಕ್ಕಿಸುತ್ತವೆ. ‘ಸೀರೆ ಎಳೆದಾಗ ಈ ಕಾಲದ ದ್ರೌಪದಿ ಸುಮ್ಮನಿರುವುದಿಲ್ಲ’ ಎನ್ನುವಂತಹ ಪಂಚಿಂಗ್ ಡೈಲಾಗ್‌ಗಳು ನೋಡುಗರಿಗೆ ಕಚಗುಳಿ ಇಡುವಂತಿದೆ.

ರಾಜ್ ಶಾಂಡಿಲ್ಯ ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ ಈ ಚಿತ್ರಕ್ಕೆ ಏಕ್ತಾ ಕಪೂರ್, ಶೋಭಾ ಕಪೂರ್, ಆಶಿಶ್ ಸಿಂಗ್ ಬಂಡವಾಳ ಹೂಡಿದ್ದಾರೆ. ಉಳಿದಂತೆ ಅನ್ನು ಕಪೂರ್, ವಿಜಯ್ ರಾಜ್, ಅಭಿಷೇಕ್ ಬ್ಯಾನರ್ಜಿ, ಮನ್ಜೋತ್ ಸಿಂಗ್, ನಿಧಿ ಬಿಷ್ಟ್, ರಾಜೇಶ್ ಶರ್ಮಾ, ರಾಜ್ ಬನ್ಸಾಲಿ ಪ್ರಮುಖ ತಾರಾಗಣದಲ್ಲಿದ್ದಾರೆ. ಇದೇ ಸೆಪ್ಟೆಂಬರ್ 13ರಂದು ಡ್ರೀಮ್ ಗರ್ಲ್ ಭಾರತದಾದ್ಯಂತ ಬಿಡುಗಡೆಯಾಗಲಿದೆ.

CG ARUN

ಹೆಣ್ಣು ಮಕ್ಕಳ ಶೋಷಣೆಯ ವಿರುದ್ಧ ನಿಂತ ಭಾಗ್ಯಶ್ರೀ!

Previous article

ಸದ್ಯದಲ್ಲೇ ಬರಲಿದೆ ಬದಾಯಿ ಹೋ ಪಾರ್ಟ್ 2!

Next article

You may also like

Comments

Leave a reply

Your email address will not be published. Required fields are marked *