ಅಪ್ಪ-ಅಮ್ಮ, ಮುದ್ದಾದ ಎರಡು ಹೆಣ್ಣು ಮಕ್ಕಳು, ಮಗಳ ಮೇಲೆ ಕಣ್ಣಿಡುವ ಕಿರಾತಕ. ಅವನಿಂದ ಬಚಾವಾಗಲು ಹುಡುಗಿ ಮಾಡುವ ಕೊಲೆ, ಅದನ್ನು ಮರೆಮಾಚಿ, ಜಗತ್ತಿನ ಕಣ್ಣಿಗೆ ಮಣ್ಣೆರಚುವ ಅಪ್ಪ. ಕಾನೂನಿನ ಕಣ್ಣಲ್ಲಿ ಆತ ಮಾಡಿದ್ದು ಅಪರಾಧವಾದರೂ, ನೋಡುವ ಮನಸುಗಳಲ್ಲಿ ಅನುಕಂಪದ ಭಾವ. ಈ ಫ್ಯಾಮಿಲಿ ಮಾಡಿದ್ದೇ ಸರಿ ಎನ್ನುವ ಫೀಲು ಹುಟ್ಟಿಸಿದ್ದ ಸಿನಿಮಾ ದೃಶ್ಯ.

ಏಳು ವರ್ಷಗಳ ಹಿಂದೆ ಬಂದಿದ್ದ ದೃಶ್ಯದಲ್ಲಿ ಹತ್ತು ಹಲವು ಹೊಸ ಎಲಿಮೆಂಟುಗಳಿದ್ದವು. ಆ ತನಕ ರವಿಚಂದ್ರನ್ ಅಂಥಾ ಪಾತ್ರದಲ್ಲಿ ಕಾಣಿಸಿರಲಿಲ್ಲ. ಕ್ಷಣಕ್ಷಣಕ್ಕೂ ತಿರುವುಗಳ ಜೊತೆ ಎದುರಾಗಿದ್ದ ‘ದೃಶ್ಯ’ಗಳು ಅಚ್ಚರಿ ಹುಟ್ಟಿಸಿದ್ದವು. ಕೊಳಕು ಕ್ರಮಿಗಳನ್ನು ಹೀಗೇ ಹೊಸಕಿ ಹಾಕಬೇಕು ಅಂತಾ ನೋಡಿದವರು ಅಭಿಪ್ರಾಯಪಟ್ಟಿದ್ದರು. ಇದೇ ಚಿತ್ರದ ಮುಂದುವರಿದ ಭಾಗ ದೃಶ್ಯ-2. ಹಾಗಂತ ಅದೇ ನಿರೀಕ್ಷೆಯಿಂದ ಸಿನಿಮಾ ನೋಡಲು ಹೋದರೆ ಅಕ್ಷರಶಃ ನಿರಾಶೆಯಷ್ಟೇ ದಕ್ಕಲು ಸಾಧ್ಯ.

ಆ ವ್ಯಾಪ್ತಿಯ ಪೊಲೀಸ್ ಠಾಣೆಗೆ ಬರುವ ಯಾವುದೇ ಅಧಿಕಾರಿ ರಾಜೇಂದ್ರ ಪೊನ್ನಪ್ಪನ ಕೇಸನ್ನು ರೀ ಓಪನ್ ಮಾಡಿ ಕೆದಕುವುದು ಸಲೀಸಾಗಿರುತ್ತೆ. ತನ್ನ ಅನುಮತಿ ಇಲ್ಲದೆ ಈ ಕೇಸನ್ನು ಮುಟ್ಟುವಂತಿಲ್ಲ ಎಂದು ನ್ಯಾಯಾಲಯವೇ ಹೇಳುವಷ್ಟರ ಮಟ್ಟಿಗೆ ಪ್ರಕರಣ ತಲುಪಿರುತ್ತದೆ. ಪೊಲೀಸ್ ಇಲಾಖೆಯ ಮರ್ಯಾದೆ ತೆಗೆದ ಈ ಕೊಲೆ ಕೇಸನ್ನು ಯಾವುದೇ ಕಾರಣಕ್ಕೂ ಇತ್ಯರ್ಥ ಮಾಡದೇ ಬಿಡಬಾರದು ಎನ್ನುವ ಚಾಲೆಂಜು ಡಿಪಾರ್ಟ್ಮೆಂಟ್ ನವರದ್ದು. ಅದಕ್ಕಾಗಿಯೇ ಅವರು ನಾನಾ ಬಗೆಯ ಕಸರತ್ತು ಮಾಡುತ್ತಾರೆ.

ಹೇಗಾದರೂ ಮಾಡಿ ರಾಜೇಂದ್ರ ಪೊನ್ನಪ್ಪ ಮತ್ತು ಅವನ ಕುಟುಂಬದವರಿಂದ ಗುಟ್ಟು ತಿಳಿಯಲು ಹವಣಿಸುತ್ತಾರೆ. ಪೊನ್ನಪ್ಪನ ಸುತ್ತ ಕಣ್ಣು, ಕಿವಿಗಳನ್ನು ಎಚ್ಚರವಾಗಿಡುತ್ತಾರೆ. ಬಗೆಬಗೆಯಲ್ಲಿ ಶೋಧಿಸುತ್ತಾರೆ. ಒಂದು ಹಂತರದಲ್ಲಿ ಇನ್ನು ರಾಜೇಂದ್ರ ಪೊನ್ನಪ್ಪನ ಕತೆ ಮುಗೀತು, ಈ ಸಲ ಬಚಾವಾಗಲು ಸಾಧ್ಯವೇ ಇಲ್ಲ  ಅನ್ನಿಸಿಬಿಡುತ್ತದೆ. ಇದೆಲ್ಲವನ್ನೂ ಮೀರಿ ರಾಜೇಂದ್ರ ಪೊನ್ನಪ್ಪ ಮತ್ತು ಅವನ ಹೆಂಡತಿ, ಮಕ್ಕಳು ಸಿಕ್ಕಿಬೀಳುತ್ತಾರಾ? ಆಗ ಹೂಟತಿಟ್ಟ ಹೆಣದ ಅವಶೇಷ ಸಿಗತ್ತಾ? ರಾಜೇಂದ್ರ ಪೊನ್ನಪ್ಪ ಜೈಲು ಪಾಲಾಗುತ್ತಾನಾ? ಹೆಂಡತಿ ಮಾಡುವ ಯಡವಟ್ಟೇನು? ಅವನ ಮಕ್ಕಳ ಸ್ಥಿತಿ ಏನಾಗುತ್ತದೆ? ಎನ್ನುವ ಕುತೂಹಲಗಳನ್ನು ತಿಳಿದುಕೊಳ್ಳಲು ದೃಶ್ಯ-೨ ಸಿನಿಮಾವನ್ನು ನೋಡಬಹುದು.

ಈ ಚಿತ್ರದ ಮೊದಲ ಭಾಗದಲ್ಲಿ ಹೇಳಿಕೊಳ್ಳುವಂತಾ ಕ್ಯೂರಿಯಾಸಿಟಿ ಬಿಲ್ಡ್‌ ಆಗೋದಿಲ್ಲ. ಹೆಚ್ಚೂ ಕಮ್ಮಿ ಹಳೇ ದೃಶ್ಯಗಳು, ಸಾಧು ಕೋಕಿಲನ ಸವಕಲು ಕಾಮಿಡಿ, ಪಕ್ಕದ ಮನೆ ಗಂಡ ಹೆಂಡತಿಯ ಹುಸಿ ಕಿತ್ತಾಟಗಳೇ ಚಲಿಸುತ್ತಿರುತ್ತವೆ. ನಿಜಕ್ಕೂ ಸಿನಿಮಾ ಕೂರಿಸೋದು ಸೆಖೆಂಡ್‌ ಹಾಫ್‌ ಶುರುವಾದಾಗ. ರಾಜೇಂದ್ರ ಪೊನ್ನಪ್ಪನ ವಿರುದ್ಧ ಸಾಕ್ಷಿ ಸಿಕ್ಕೇಬಿಡ್ತು, ಹೆಣದ ಅಸ್ಥಿಪಂಜರ ಕೂಡಾ ದೊರಕಿತು ಎನ್ನುವಾಗ ಟೆನ್ಷನ್‌ ಶುರುವಾಗೋದು ನಿಜ. ಆದರೆ ಅಷ್ಟೇ ಬೇಗ ಆ ಕೌತುಕ ಮುರಿದು ಬೀಳುತ್ತದೆ.

ದೃಶ್ಯ ಮೊದಲ ಭಾಗದಲ್ಲಿ ಇಲ್ಲದ ಕೆಲವು ಪಾತ್ರಗಳನ್ನೂ ಇಲ್ಲಿ ಸೃಷ್ಟಿಸಲಾಗಿದೆ. ಚಿತ್ರಕತೆ ಬರಹಗಾರನ ಪಾತ್ರದಲ್ಲಿ ಅನಂತ್‌ ನಾಗ್‌ ನಟಿಸಿದ್ದಾರೆ. ಆದರೆ, ಆ ಪಾತ್ರ ಅಷ್ಟು ಗಟ್ಟಿಯಾಗಿಲ್ಲ. ಯತಿರಾಜ್‌ ಕುಡುಕನ ಪಾತ್ರದಲ್ಲಿ ನೈಜವಾಗಿ ನಟಿಸಿದ್ದಾರೆ.  ವಿಧಿ ವಿಜ್ಞಾನ ಪ್ರಯೋಗ ಶಾಲೆಯ ಸೆಕ್ಯೂರಿಟಿ ಸಿಸ್ಟಂ ಈ ಮಟ್ಟಿಗೆ ದುರ್ಬಲವಾಗಿದೆಯಾ ಅನ್ನೋ ಅನುಮಾನವನ್ನು ಯತಿ ಹುಟ್ಟಿಸುತ್ತಾರೆ. ತಮ್ಮ ಸಹಜ ಅಭಿನಯದ ಮೂಲಕ ಇತ್ತೀಚೆಗೆ ಹೆಸರು ಮಾಡುತ್ತಿರುವ ಪ್ರಮೋದ್‌ ಶೆಟ್ಟರನ್ನು ಹೇಗೆ ಹ್ಯಾಂಡಲ್‌ ಮಾಡೋದು ನಿರ್ದೇಶಕ ಪಿ. ವಾಸು ಅವರಿಗೆ ಗೊತ್ತಾಗಲಿಲ್ಲವೋ? ಸೀನಿಯರ್‌ ಡೈರೆಕ್ಟರ್‌ ಮುಂದೆ ಶೆಟ್ಟರೇ ಶೇಕ್‌ ಆದರೋ ಗೊತ್ತಿಲ್ಲ. ಪ್ರಮೋದ್‌ ಮಾತ್ರ ಪೊಲೀಸ್‌ ಅಧಿಕಾರಿಯ ಪಾತ್ರವನ್ನು ಅನುಭವಿಸದೇ ಬರಿಯ ನಟನೆ ಮಾಡಿದ್ದಾರೆ.  ʻಏನೇ ಬುದ್ದಿವಂತಿಕೆಯಿಂದ ಬದುಕಿದರೂ, ಪೊಲೀಸರ ಕೈಗೆ ಯಾವಾಗ ಸಿಕ್ಕಾಕೊಳ್ತೀನಿ ಅನ್ನೋ ಭಯ ಇದೆಯಲ್ಲಾ? ಅದಕ್ಕಿಂತಾ ದೊಡ್ಡ ಶಿಕ್ಷೆ ಬೇಕಾ?ʼ – ಈ ರೀತಿಯ ಸಹಜ ಸಂಭಾಷಣೆಗಳು ಆಪ್ತವಾಗುತ್ತವೆ.

ಜಿ.ವಿ.ಎಸ್‌ ಸೀತಾರಾಮ್‌ ಛಾಯಾಗ್ರಹಣದಲ್ಲಿ ಈ ಬಾರಿ ಯಾವ ಮ್ಯಾಜಿಕ್ಕೂ ನಡೆದಿಲ್ಲ. ‌ಪಾತ್ರಗಳ ಮುಖಕ್ಕೆ ಬಳಿದ ಮೇಕಪ್ಪು ಎದ್ದು ಕಾಣುತ್ತದೆ. ಕಲರ್‌ ಗ್ರೇಡಿಂಗ್‌, ಕಂಪ್ಯೂಟರ್‌ ಗ್ರಾಫಿಕ್ಸ್ ಕೆಲಸ ತೀರಾ ಕಳಪೆಯಾಗಿದೆ. ಭಾರತದ ಅತ್ಯದ್ಭುತ ಸಿನಿಮಾಗಳಿಗೆ ಕೆಲಸ ಮಾಡಿದ ಸುರೇಶ್‌ ಅರಸ್‌ ಸಂಕಲನ ಈ ಕಾಲಕ್ಕೆ ತಕ್ಕಂತೆ ಅಪ್ಡೇಟ್‌ ಆಗಿಲ್ಲ ಅನ್ನೋದು ನಿಜ. ಒಟ್ಟಾರೆಯಾಗಿ ನೋಡಿದರೆ ದೃಶ್ಯ -೨ ಅವಸರದಲ್ಲಿ ಸುತ್ತಿಟ್ಟಂತೆ ಕಾಣುತ್ತದೆ. ಕಥೆಯನ್ನು ಕೂಡಾ ಒತ್ತಾಯಪೂರ್ವಕವಾಗಿ ಹೆಣೆದಿರುವುದು ಗೊತ್ತಾಗುತ್ತದೆ. ನಿರ್ದೇಶಕ ಪಿ. ವಾಸು ಹಳೆಯ ಆಯಾಸಗಳಿಂದ ಎದ್ದು ಬಂದು ಈ ಸಿನಿಮಾ ಕಟ್ಟಿದ್ದಾರಾ ಅನ್ನಿಸುತ್ತದೆ.

ಎಲ್ಲಾ ಕೊರತೆಗಳ ನಡುವೆ ಇಡೀ ಸಿನಿಮಾವನ್ನು ನೋಡಿಸಿಕೊಂಡು ಹೋಗುವುದು ರವಿಚಂದ್ರನ್‌, ನವ್ಯಾ ನಾಯರ್‌, ಆರೋಹಿ ಮತ್ತು ಸಂಪತ್‌ ಕುಮಾರ್ ಪಾತ್ರಗಳು ಮಾತ್ರ. ರವಿಚಂದ್ರನ್‌ ಒಂದಿಷ್ಟು ತೆಳ್ಳಗೆ ಕಾಣಿಸುತ್ತಾರೆ. ಹಳೆಯ ಗ್ಲಾಮರ್‌ ಅವರ ಮುಖದಲ್ಲಿ ಮತ್ತೆ ಪ್ರತಿಷ್ಠಾಪನೆಗೊಂಡಿದೆ.

ARUN KUMAR G
ARUN KUMAR G Senior Film Journalist GAURI LANKESH PATRIKE, KARMAVEERA and others

“ರೈಡರ್” ಡಿಸೆಂಬರ್ 24ರಂದು ತೆರೆಗೆ…

Previous article

ನಾನು ಈ ಪ್ರಶ್ನೆಗೆ ಉತ್ತರಿಸುವುದಿಲ್ಲ..!

Next article

You may also like

Comments

Leave a reply

Your email address will not be published. Required fields are marked *