ಯಾವುದೋ ಭಾಷೆಯ ಸಿನಿಮಾವನ್ನು ಕಡ ತಂದು ತಮ್ಮದೇ ಕಲಾಕೃತಿ ಎನ್ನುವಂತೆ ಪೋಸು ಕೊಡೋರು, ಯಾವತ್ತಾದರೂ ಒಂದು ದಿನ ಸಿಗೇಬಿದ್ದಾಗ ಮಳ್ಳನಗೆ ಬೀರೋದು ಕನ್ನಡ ಚಿತ್ರರಂಗದಲ್ಲೇನು ಹೊಸದಲ್ಲ. ಇತ್ತೀಚೆಗೆ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ನಟನೆಯ ದ್ರೋಣ ಅನ್ನೋ ಸಿನಿಮಾವೊಂದು ಆರಂಭವಾಗಿ ಭಾರೀ ಪ್ರಚಾರ ಪಡೆದಿತ್ತು. ಈಗ ಆ ಸಿನಿಮಾದ ಕಥೆಯೂ ಅದೇ ಹಾದಿಯಲ್ಲಿದೆ.
ಈ ಚಿತ್ರ ಆರಂಭವಾದ ದಿನದ ಪೋಸ್ಟರುಗಳು, ಜಾಹೀರಾತುಗಳಲ್ಲಿ ಕಥೆ, ಚಿತ್ರಕತೆ, ಸಂಭಾಷಣೆ, ನಿರ್ದೇಶನ ಪ್ರಮೋದ್ ಚಕ್ರವರ್ತಿ ಅಂತಾ ಪ್ರಚಾರ ಮಾಡಲಾಗಿತ್ತು. “ಭಾಳಾ ವರ್ಷಗಳಿಂದ ನನಗಾಗಿ ಪ್ರಮೋದ್ ಈ ಕಥೆ ರೆಡಿ ಮಾಡಿಕೊಳ್ಳುತ್ತಿದ್ದರು” ಅಂತಾ ಶಿವಣ್ಣ ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದರು. ಆದರೀಗ ದ್ರೋಣನ ಮೂಲ ತಮಿಳುನಾಡಿನಲ್ಲಿರುವ ಸೂಚನೆ ಸಿಗಲಾರಂಭಿಸಿದೆ. ಸದ್ಯ ಚಿತ್ರೀಕರಣದ ಹಂತದಲ್ಲಿರುವ ದ್ರೋಣ ತಮಿಳಿನಲ್ಲಿ ಬಂದಿದ್ದ ಸಾಟ್ಟೈ ಚಿತ್ರದ ರಿಮೇಕು ಅನ್ನೋ ಸುದ್ದಿ ಕೇಳಿಬರುತ್ತಿದೆ. ಬಹುಶಃ ಈ ವಿಚಾರ ಶಿವಣ್ಣನಿಗೆ ಮೊದಲೇ ಗೊತ್ತಿರಲಿಲ್ಲವೇನೋ!
ತೀರಾ ಪ್ರಾಮಾಣಿಕ ಶಿಕ್ಷಕನೊಬ್ಬ ವ್ಯವಸ್ಥೆಯನ್ನು ಬದಲಿಸಹೊರಡುವುದು, ಆ ಸಂದರ್ಭದಲ್ಲಿ ತನ್ನ ವ್ಯಕ್ತಿತ್ವಕ್ಕೆ ವಿರುದ್ಧವಾದ ಆಪಾದನೆಗಳನ್ನು ಎದುರಿಸಬೇಕಾಗಿಬರುವ ಕಾಡುವ ಕಥೆ ಸಾಟ್ಟೈ ಚಿತ್ರದ್ದು. ಕನ್ನಡದಲ್ಲಿ ಯಾರೇ ಕೂಗಾಡಲಿ ಸಿನಿಮಾವನ್ನು ನಿರ್ದೇಶನ ಮಾಡಿದ್ದರಲ್ಲಾ ಸಮುದ್ರಖಣಿ ಅವರು ಆ ಚಿತ್ರದ ಪ್ರಧಾನ ಪಾತ್ರದಲ್ಲಿ ಮನೋಜ್ಞವಾಗಿ ಅಭಿನಯಿಸಿದ್ದರು. ಈಗ ಶಿವರಾಜ್ ಕುಮಾರ್ ನಿಭಾಯಿಸುತ್ತಿರೋದು ಅದೇ ಪಾತ್ರವನ್ನಂತೆ. ಮಾಡಲಿ.. ಜಗತ್ತಿನ ಯಾವ ಭಾಷೆಗೆ ಬೇಕಾದರೂ ರಿಮೇಕ್ ಆಗಲು ಅರ್ಹತೆ ಹೊಂದಿರುವ ಚಿತ್ರವದು. `ಇದು ಇಂಥಾ ಸಿನಿಮಾದ ರಿಮೇಕು..’ ಅಂತಾ ಹೇಳಿಕೊಳ್ಳೋಕೇನು ನಿರ್ದೇಶಕರಿಗೆ ಬಾಧೆ?. ಜೊತೆಗೆ ಕಥೆ, ಚಿತ್ರಕತೆ ಎಲ್ಲದರ ಕ್ರೆಡಿಟ್ಟು ಹಾಕೊಳ್ಳೋದಿದೆಯಲ್ಲಾ? ಅದು ಹೇಗಾದರೂ ಸಾಧ್ಯವೋ?
#