2014 ರಲ್ಲಿ ತೆರೆಕಂಡಿದ್ದ “ದೃಶ್ಯ” ಚಿತ್ರದ ಮುಂದುವರಿದ ಭಾಗ “ದೃಶ್ಯ 2”. ಈ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭ ಇತ್ತೀಚೆಗೆ ನಡೆಯಿತು. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ ಬಿಡುಗಡೆ ಮಾಡಿದರು.

ಈ ಸಮಾರಂಭಕ್ಕೆ ಬಂದಿದ್ದು, ನನಗೆ ಖುಷಿಯಾಗಿದೆ. ರವಿ ಅಣ್ಣ ನನ್ನನ್ನು, ನಮ್ಮ ಕುಟುಂಬದವನು ಎಂದದ್ದು ಇನ್ನೂ ಸಂತೋಷ ತಂದಿದೆ. ಈ ಚಿತ್ರ ಮಲೆಯಾಳಂ, ತೆಲುಗು ಭಾಷೆಯಲ್ಲಿ ಬಂದಿದೆ ಅಂದರು. ಆದರೆ ನಾನು‌ ಯಾವ ಭಾಷೆಯಲ್ಲೂ ಈ ಸಿನಿಮಾ  ನೋಡಿಲ್ಲ‌. ಹಾಗಾಗಿ ನನಗೆ ಕಥೆ ಗೊತ್ತಿಲ್ಲ. ನನ್ನ ಹೆಂಡತಿ ಮಲೆಯಾಳಿ. ಅವರು ಮಲೆಯಾಳಂ ಚಿತ್ರ ನೋಡುವಾಗ ನನಗೂ ತೋರಿಸುತ್ತಾರೆ. ನಾನು ಸಬ್ ಟೈಟಲ್ ನೋಡುತ್ತಿರುತ್ತೇನೆ. ಒಳ್ಳೆಯ  ಕಲಾವಿದರು ಹಾಗೂ ಒಳ್ಳೆಯ ತಂತ್ರಜ್ಞರು ಸೇರಿ ಮಾಡಿದಾಗ ಅದು ಒಳ್ಳೆಯ ಸಿನಿಮಾನೇ ಆಗಿರುತ್ತದೆ. ದೃಶ್ಯ ಚಿತ್ರವನ್ನು ಕನ್ನಡದಲ್ಲೇ ನೋಡಿದ್ದೀನಿ. ಎರಡನೇ ಭಾಗವನ್ನು ಕನ್ನಡದಲ್ಲೇ ನೋಡುತ್ತೇನೆ. ನೀವು ಮೂರನೇ ಭಾಗ ಮಾಡುವುದಿದ್ದರೆ ಮೊದಲು ಕನ್ನಡದಲ್ಲೇ ಮಾಡಿ ಎಂದು ಸುದೀಪ್ ಸಲಹೆ ನೀಡಿದರು.

ದೃಶ್ಯ ಮೊದಲ ಭಾಗದ ಸಿನಿಮಾ ಮಾತುಕತೆ ಆರಂಭವಾಗಿದ್ದು, ನಮ್ಮ ಮಾಣಿಕ್ಯ ಚಿತ್ರದ ಚಿತ್ರೀಕರಣ ಸಮಯದಲ್ಲಿ. ನಾನು ರವಿ ಸರ್ ಗೆ ಒಂದು ಚೆನ್ನಾಗಿರುವ ಮಲೆಯಾಳಂ ಕಥೆ ಬಂದಿದೆ ಕೇಳಿ ಅಂತ ಹೇಳಿದೆ. ಅವರು ಮೊದಲು ಕೇಳಲಿಲ್ಲ. ನಂತರ ಕೆಲವು ದಿನಗಳ ನಂತರ ಕಥೆ ಕೇಳಿದರು. ದೃಶ್ಯ ಆರಂಭವಾಯಿತು ಎಂದು  ಸುದೀಪ್ ಆ ದಿನಗಳನ್ನು ನೆನಪಿಸಿಕೊಂಡರು.

ಸುದೀಪ್ ನನ್ನ ಮಗ. ಆತನನ್ನು ಬರಮಾಡಿಕೊಳ್ಳಲು ನಾನೇ ಮುಖ್ಯದ್ವಾರದ ಬಳಿ ಹೋಗಿದ್ದೆ. ನನ್ನ ಸಮಾರಂಭಕ್ಕೆ ಬರಲು ಸುದೀಪ್ ಗೆ ಕರೆಯಬೇಕೆಂದು ಏನು ಇಲ್ಲ. ಆರ್ಡರ್ ಮಾಡಬಹುದು. ಏಕೆಂದರೆ ಆತ ನನ್ನ ಮಗ. ಸುದೀಪ್ ಸಮಾರಂಭಗಳಿಗೆ ನಾನು ಹಾಗೆ ಹೋಗುತ್ತೇನೆ. ನಮ್ಮಿಬ್ಬರಲ್ಲಿ ಆ ಬಾಂಧವ್ಯವಿದೆ.

ಇನ್ನು ಪಿ.ವಾಸು ಅವರ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರ, ಮೊದಲ ಭಾಗದ ತರಹ ನೂರಕ್ಕೆ ನೂರು ಜನರ ಮೆಚ್ಚುಗೆಗೆ ಪಾತ್ರವಾಗಲಿದೆ. ಎಲ್ಲಾ ಕಲಾವಿದರ ಅಭಿನಯ ಹಾಗೂ ತಂತ್ರಜ್ಞರ ಕೈಚಳಕ ತುಂಬಾ ಚೆನ್ನಾಗಿದೆ.

ದೃಶ್ಯ ಚಿತ್ರದ ಚಿತ್ರತಂಡ ಬಹುತೇಕ ಈ ಚಿತ್ರದಲ್ಲೂ ಇದೆ. ಹಿರಿಯ ನಟ ಅನಂತನಾಗ್ ದೃಶ್ಯ ೨ ನಲ್ಲಿ ಅಭಿನಯಿಸಿದ್ದಾರೆ. ಒಬ್ಬ ಜವಾಬ್ದಾರಿಯುತ ತಂದೆ ಸಂಕಷ್ಟದಿಂದ ತನ್ನ ಕುಟುಂಬವನ್ನು ಹೇಗೆ ಪಾರು ಮಾಡುತ್ತಾನೆ ಎಂಬ ವಿಷಯ ಚಿತ್ರದ ಹೈಲೆಟ್ ಎಂದು ತಿಳಿಸಿದ ರವಿಚಂದ್ರ ವಿ ಅವರು, ಚಿತ್ರೀಕರಣದ ಕೆಲವು ಅನುಭವಗಳನ್ನು ಹಂಚಿಕೊಂಡರು.

ನನಗೆ ಈ ಸಿನಿಮಾದಲ್ಲಿ ನಟಿಸಲು ಅವಕಾಶ ಮಾಡಿಕೊಟ್ಟ ನಿರ್ಮಾಪಕರಿಗೆ ಹಾಗೂ ನಿರ್ದೇಶಕ ಪಿ.ವಾಸು ಅವರಿಗೆ ಧನ್ಯವಾದ. ನಾನು ಮಲೆಯಾಳಂ ನಲ್ಲಿ ಬಹಳ ನಿರ್ದೇಶಕರ ಜೊತೆ ಕೆಲಸ ಮಾಡಿದ್ದೀನಿ. ಆದರೆ ನನ್ನ ಒನ್ ಆಫ್ ದಿ ಬೆಸ್ಟ್ ಡೈರೆಕ್ಟರ್ ಪಿ.ವಾಸು ಅವರು. ರವಿಚಂದ್ರ ಸರ್ ಅಂತಹ ಉತ್ತಮ ನಟರ ಜೊತೆ ಕೆಲಸ ಮಾಡಿದ್ದು ಸಂತಸ ತಂದಿದೆ. ನಮ್ಮ ಟ್ರೇಲರ್ ಬಿಡುಗಡೆಗೆ  ಬಂದಿರುವ ಸುದೀಪ್ ಅವರಿಗೆ ಧನ್ಯವಾದ ಎಂದರು ನಾಯಕಿ ನವ್ಯ ನಾಯರ್.

ದೃಶ್ಯ ೨ ಬಿಡುಗಡೆಗೆ ಸಿದ್ದವಾಗಿದೆ. ಎಲ್ಲಾ ಕಲಾವಿದರ ಹಾಗೂ ತಂತ್ರಜ್ಞರ ಸಹಕಾರದಿಂದ ಚಿತ್ರ ಉತ್ತಮವಾಗಿ ಮೂಡಿಬಂದಿದೆ. ನನಗೆ ಈ ಸಿನಿಮಾದಲ್ಲಿ ಇಷ್ಟವಾಗಿದ್ದು‌, ರವಿಚಂದ್ರ ಹಾಗೂ ನವ್ಯ ನಾಯರ್ ಅವರ ರಿಲೇಶನ್ ಶಿಪ್. ಅವರಿಬ್ಬರ ನೈಜ ಅಭಿನಯ ತುಂಬಾ ಚೆನ್ನಾಗಿದೆ. ಯಾವಾಗಲೂ ಒಬ್ಬ ನಿರ್ದೇಶಕ, ಯಾವ ನಾಯಕನ ಸಿನಿಮಾ‌ ಮಾಡುವನೊ, ಮೊದಲು ಅವನ ಫ್ಯಾನ್ ಆಗಬೇಕು. ಆಗ ಸಿನಿಮಾ ಉತ್ತಮವಾಗಿ ಮೂಡಿಬರುತ್ತದೆ. ರವಿಚಂದ್ರ ಅವರಂತೂ ಕಂಪ್ಲೀಟ್ ಸ್ಟಾರ್ ಎಂದು ಬಣ್ಣಿಸಿದ ನಿರ್ದೇಶಕ ಪಿ.ವಾಸು ಅವರು ಚಿತ್ರ ಮುಂದಿನ ತಿಂಗಳ ಹತ್ತರಂದು ತೆರೆಗೆ ಬರಲಿದೆ.  ನೋಡಿ ಪ್ರೋತ್ಸಾಹಿಸಿ ಎಂದರು.‌

ಸಂಗೀತ ನೀಡಿರುವ ಅಜನೀಶ್ ಲೋಕನಾಥ್ ಸಂಗೀತದ ಬಗ್ಗೆ, ಪ್ರಮೋದ್ ಶೆಟ್ಟಿ ತಮ್ಮ ಪಾತ್ರದ ಬಗ್ಗೆ ಮಾತನಾಡಿದರು. E4 entertainment ಲಾಂಛನದಲ್ಲಿ ನಿರ್ಮಾಣವಾಗಿದ್ದು, ನಿರ್ಮಾಪಕರಲೊಬ್ಬರಾದ ಮುಖೇಶ್ ಮೆಹ್ತಾ ಮಾತನಾಡಿ ಕನ್ನಡದಲ್ಲಿ ಇದು ನಮ್ಮ ಎರಡನೇ ಚಿತ್ರ. ಎಲ್ಲರ ಸಹಕಾರದಿಂದ ಚಿತ್ರ ಉತ್ತಮವಾಗಿ ಮೂಡಿಬಂದಿದೆ. ಟ್ರೇಲರ್ ಬಿಡುಗಡೆಗೆ ಬಂದಿರುವ ಸುದೀಪ್ ಅವರಿಗೆ ಧನ್ಯವಾದ ಎಂದರು. ಮೊದಲ ಬಾರಿಗೆ ಕನ್ನಡ ಸಿನಿಮಾವೊಂದನ್ನು ಬಿಡುಗಡೆ ಮಾಡುತ್ತಿರುವ ಜೀ ಸಿನಿಮಾಸ್ ನ ನೀರಜ್ ಸಹ ಕೆಲವು ವಿಷಯಗಳನ್ನು ಹಂಚಿಕೊಂಡರು.

ARUN KUMAR G
ARUN KUMAR G Senior Film Journalist GAURI LANKESH PATRIKE, KARMAVEERA and others

ಕನ್ನಡಿಗರಿಗೆ ಕ್ಷಮೆ ಕೇಳಿದ್ದೇಕೆ ರಾಜಮೌಳಿ..?

Previous article

ರಾಜ್ಯಾದ್ಯಂತ ‌ ಗಣಿ-ಸುನಿ ಸಖತ್‌ ಹೌಸ್ ಫುಲ್!

Next article

You may also like

Comments

Leave a reply