ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಈಗ ಪೊಗರು ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಇದುವರೆಗೂ ಖದರ್ ತುಂಬಿರೋ ಮಾಸ್ ಪಾತ್ರಗಳ ಮೂಲಕ, ಅದಕ್ಕೆ ತಕ್ಕುದಾದ ಡೈಲಾಗ್ಗಳ ಮೂಲಕವೇ ಅಭಿಮಾನಿ ಬಳಗ ಸೃಷ್ಟಿಸಿಕೊಂಡಿರುವವರು ಧ್ರುವ. ಇನ್ನು ಹೆಸರೇ ಪೊಗರು ಅಂತಿರೋ ಈ ಚಿತ್ರದಲ್ಲಿ ಅವರ ಅಬ್ಬರ ಎಂಥಾದ್ದಿರಬಹುದೆಂಬ ಅಂದಾಜು ಯಾರಿಗಾದರೂ ಸಿಗುತ್ತದೆ!
ಈ ಚಿತ್ರದಲ್ಲಿ ಧ್ರುವ ಪಾತ್ರ ಎಂಥಾದ್ದೆಂಬುದರ ಸುತ್ತಾ ನಾನಾ ಸುದ್ದಿಗಳು ಹರಿದಾಡುತ್ತಿವೆ. ಆದರೆ ಚಿತ್ರ ತಂಡ ಈ ಬಗ್ಗೆ ನಿಖರವಾದ ಮಾಹಿತಿ ಹೊರ ಬೀಳದಂತೆ ನೋಡಿಕೊಂಡಿದೆ. ಪೊಗರಿನಲ್ಲಿ ಇದುವರೆಗಿನ ತನ್ನೆಲ್ಲ ಚಿತ್ರಗಳನ್ನೂ ಮೀರಿಸುವಂಥಾ ಪೊಗರಿನಲ್ಲಿ ಧ್ರುವಾ ಕಾಣಿಸಿಕೊಂಡಿರೋದಂತೂ ನಿಜ.
ಆದರೆ ಈ ಚಿತ್ರದಲ್ಲಿ ಯಾರಿಗೂ ಕೇರು ಮಾಡದ ಧ್ರುವಾ ಪೊಗರಿಗೆ ಕಡಿವಾಣ ಹಾಕೋ ವಿಶೇಷವಾದ ಪಾತ್ರವೊಂದಿದೆಯಂತೆ. ಅದರಲ್ಲಿ ರಾಘವೇಂದ್ರ ರಾಜ್ ಕುಮಾರ್ ನಟಿಸಿದ್ದಾರೆ. ಈ ಪಾತ್ರದ ಮೂಲಕವೇ ಅವರು ನಟನೆಗೆ ವಾಪಾಸಾಗಿದ್ದಾರೆ. ಪೊಗರಿನ ಈ ಪಾತ್ರದ ಬಗ್ಗೆ ಖುದ್ದು ರಾಘವೇಂದ್ರ ರಾಜ್ ಕುಮಾರ್ ಅವರೇ ಖುಷಿಗೊಂಡಿದ್ದಾರೆ. ಇದೀಗ ಹೈದ್ರಾಬಾದ್ ನಲ್ಲಿ ಪೊಗರಿನ ಚಿತ್ರೀಕರಣ ಅವ್ಯಾಹತವಾಗಿ ನಡೆಯುತ್ತಿದೆ.