ಮೆಹ್ತಾ ಆರಂಭಿಸಿದ ಸಿನಿಮಾ ರಪ್ಪನೆ ಶೂಟಿಂಗ್ ಮುಗಿಸಿ, ಧಡಾರಂತಾ ಥೇಟರಿಗೆ ಬಂದುಬಿಡುತ್ತದೆ. ಸದ್ಯ ಸ್ಟಾರ್ ನಟರ ಪಟ್ಟಿಯಲ್ಲಿ ಶ್ಯಾನೆ ಟಾಪಲ್ಲಿರುವ ಧೃವ ಸರ್ಜಾ ಇದಕ್ಕೆ ತದ್ವಿರುದ್ಧ.
ಕೆಲವು ನಿರ್ಮಾಪಕರು ಸಿನಿಮಾ ಆರಂಭಿಸುತ್ತಿದ್ದಂತೇ ಆ ಚಿತ್ರಗಳ ಬಗೆಗೊಂದು ಪಾಸಿಟೀವ್ ಫೀಲ್ ಶುರುವಾಗಿಬಿಡುತ್ತದೆ. ಅದಕ್ಕೆ ಅವರ ಹಿಂದಿನ ಸಿನಿಮಾಗಳೂ ಕಾರಣವಿರಬಹುದು. ನಿರ್ಮಾಪಕ ಉದಯ್ ಕೆ. ಮೆಹ್ತಾ ಕೂಡಾ ಗಾಂಧಿನಗರದ ಮಟ್ಟಿಗೆ ಲಕ್ಕಿ ಪ್ರೊಡ್ಯೂಸರ್ ಅಂತಲೇ ಹೆಸರಾಗಿರುವವರು. ಕೃಷ್ಣನ್ ಲವ್ ಸ್ಟೋರಿ, ಜರಾಸಂಧ, ಬಚ್ಚನ್, ಕೃಷ್ಣ ರುಕ್ಕು, ಲವ್ ಇನ್ ಮಂಡ್ಯ, ಸಿಂಗ, ರಾಜ ರಾಜೇಂದ್ರ ಮತ್ತು ಬ್ರಹ್ಮಚಾರಿಯಂಥಾ ಗೆದ್ದು ಜನಪ್ರಿಯತೆ ಪಡೆದ ಮತ್ತು ವ್ಯಾಪಾರದಲ್ಲಿ ಲಾಭ ಕಂಡ ಸಿನಿಮಾಗಳನ್ನೇ ನಿರ್ಮಿಸಿದವರು ಉದಯ್ ಮೆಹ್ತಾ. ʻʻಥೇಟರುಗಳಲ್ಲಿ ಹೆಚ್ಚು ದಿನ ನಿಲ್ಲದೇ ಇದ್ದರೂ ಸಿನಿಮಾ ಲಾಭ ಗಳಿಸಲು ಸಾಧ್ಯವಾ?ʼʼ ಅನ್ನೋದು ಸಾಮಾನ್ಯ ಜನರ ಕಾಮನ್ ಪ್ರಶ್ನೆಯಾಗಿರುತ್ತದೆ. ಅದಕ್ಕೆ ಮೆಹ್ತಾ ಮಾತ್ರ ಪರ್ಫೆಕ್ಟಾಗಿ ಉತ್ತರಿಸಬಲ್ಲರು.
ಸಿನಿಮಾ ನಿರ್ಮಿಸುವ ಮುನ್ನ ಬಂಡವಾಳ ಹೂಡುವವರು ಅಷ್ಟದಿಕ್ಕುಗಳಿಂದಲೂ ಲೆಕ್ಕ ಹಾಕಿದರೆ ಮಾತ್ರ ಲಾಭ ಕಾಣಲು ಸಾಧ್ಯ. ಎಷ್ಟೋ ಚಿತ್ರಗಳು ಥೇಟರಲ್ಲಿ ಭರ್ಜರಿ ಪ್ರದರ್ಶನ ಕಂಡರೂ ನಿರ್ಮಾಪಕರಿಗೆ ಬಿಡಿಗಾಸಿನ ಫಾಯಿದೆಯಾಗಿರುವುದಿಲ್ಲ. ಚಿತ್ರನಿರ್ಮಾಣ ಮಾಡುವುದು ಹೇಗೆ ಎನ್ನುವ ಕೋರ್ಸನ್ನು ಯಾರಾದರೂ ಆರಂಭಿಸಿದರೆ ಮುಲಾಜಿಲ್ಲದೇ ಮೆಹ್ತಾರನ್ನು ಕರೆದೊಯ್ದು ಪ್ರಿನ್ಸಿಪಾಲರನ್ನಾಗಿಸಬಹುದು. ಸಿನಿಮಾ ಪ್ರೊಡ್ಯೂಸ್ ಮಾಡುವಲ್ಲಿ ಅಷ್ಟರ ಮಟ್ಟಿಗಿನ ವ್ಯವಹಾರ ಚತುರತೆ ಉದಯ್ ಅವರದ್ದು.
ಮೆಹ್ತಾ ಆರಂಭಿಸಿದ ಸಿನಿಮಾ ರಪ್ಪನೆ ಶೂಟಿಂಗ್ ಮುಗಿಸಿ, ಧಡಾರಂತಾ ಥೇಟರಿಗೆ ಬಂದುಬಿಡುತ್ತದೆ. ಸದ್ಯ ಸ್ಟಾರ್ ನಟರ ಪಟ್ಟಿಯಲ್ಲಿ ಶ್ಯಾನೆ ಟಾಪಲ್ಲಿರುವ ಧೃವ ಸರ್ಜಾ ಇದಕ್ಕೆ ತದ್ವಿರುದ್ಧ. ಧೃವಾ ಒಪ್ಪಿಕೊಂಡ ಸಿನಿಮಾ ರೆಡಿಯಾಗಿ ಚಿತ್ರಮಂದಿರದೊಳಗೆ ಬರಲು ಏನಿಲ್ಲವೆಂದರೂ ಮೂರು ವರ್ಷ ಬೇಕೇಬೇಕು ಎನ್ನುವ ಸ್ಥಿತಿ ಸದ್ಯದಲ್ಲಿದೆ. ಧೃವಾಗಿರುವ ಕ್ರೇಜ಼ು ಬೇರೊಬ್ಬರಿಗಿದ್ದಿದ್ದರೆ ಕಡೇಪಕ್ಷ ವರ್ಷಕ್ಕೊಂದಾದರೂ ಸಿನಿಮಾ ತೆರೆಗಪ್ಪಳಿಸುವಂತೆ ನೋಡಿಕೊಳ್ಳುತ್ತಿದ್ದರು. ಆದರೆ, ಧೃವಾ ನಟಿಸಿರುವ ನಾಲ್ಕನೇ ಸಿನಿಮಾನೇ ರಿಲೀಸ್ ಆಗಿಲ್ಲ. ಸಿನಿಮಾದ ಕ್ವಾಲಿಟಿ ಕಡೆ ಗಮನ ಕೊಡಬೇಕು ನಿಜ. ಆದರೆ, ಓಡುವ ಕುದುರೆ ಅನ್ನಿಸಿಕೊಂಡು ಈ ಮಟ್ಟಿಗೆ ಸ್ಲೋ ಆಗಬಾರದು. ಸಿನಿಮಾ ಅಂದರೆ ಬರಿಯ ಮನರಂಜನೆ ಮಾತ್ರವಲ್ಲ, ಇದೊಂದು ಉದ್ಯಮ. ಕೋಟ್ಯಂತರ ರುಪಾಯಿಗಳ ವಹಿವಾಟು, ನೂರಾರು ಜನರ ಬದುಕು ಹೀಗೆ ಒಂದಕ್ಕೊಂದು ವಿಚಾರಗಳು ಬೆಸೆದುಕೊಂಡಿರುತ್ತವೆ.
ವಿಚಾರ ಹೀಗಿರುವಾಗ, ಹೈಸ್ಪೀಡ್ ಮೆಹ್ತಾ, ಧೃವಾ ಜೊತೆ ಸೇರಿ ದುಬಾರಿ ಸಿನಿಮಾಗೆ ಕೈ ಇಟ್ಟಿದ್ದಾರೆ. ನಂದಕಿಶೋರ್ ಮತ್ತು ಧೃವಾ ಕಾಂಬಿನೇಷನ್ನಿನ ಮೊದಲ ಸಿನಿಮಾ ಬಿಡುಗಡೆಗೆ ಮುನ್ನವೇ ಮತ್ತೊಂದು ಅನೌನ್ಸ್ ಆಗಿದೆ. ʻದುಬಾರಿ ಅಂತಂದ ಕೂಡಲೇ ಎಲ್ಲರೂ ಶ್ರೀಮಂತಿಕೆ ಅಂದುಕೊಳ್ಳುತ್ತಾರೆ. ಈ ಸಿನಿಮಾದಲ್ಲಿ ಸಂಬಂಧಗಳು ಹೇಗೆ ದುಬಾರಿಯಾಗುತ್ತವೆ ಅನ್ನೋದನ್ನು ತೋರಿಸುತ್ತೇವೆ. ಐ ಯಾಮ್ ಟೂ ಕಾಸ್ಟ್ಲೀ ಅಂತಾ ಟ್ಯಾಗ್ ಲೈನ್ ಇಟ್ಟಿರುವುದು ನೋಡಿ ಯಾರೂ ಅನ್ಯಥಾ ಭಾವಿಸಬೇಡಿ. ಧೃವಾ ಅವರ ಪರ್ಸನಲ್ ಲೈಫಿಗೂ ಸಿನಿಮಾದ ಕತೆಗೂ ಯಾವುದೇ ಲಿಂಕ್ ಇಲ್ಲʼ ಅಂತಾ ಸ್ವತಃ ಚಿತ್ರತಂಡ ಹೇಳಿಕೊಳ್ಳುತ್ತಿದೆ!
ಏನಾದರಾಗಲಿ, ಉದಯ್ ಮೆಹ್ತಾ ಜೊತೆ ಸೇರಿದ ಮೇಲಾದರೂ ಧೃವ ಸರ್ಜಾ ಸ್ಪೀಡಾಗಿ ಸಿನಿಮಾಗಳನ್ನು ಮಾಡಲಿ!