ದುನಿಯಾ ವಿಜಿ ಒಂದಷ್ಟು ಕಾಲದಿಂದ ವೈಯಕ್ತಿಕ ಜಂಜಾಟಗಳಿಂದಲೇ ಸುದ್ದಿಯಲ್ಲಿದ್ದರು. ಇದರಿಂದ ಮಾನಸಿಕವಾಗಿಯೂ ಕುಸಿದು ಹೋಗಿದ್ದ ಅವರೀಗ ಮತ್ತದೇ ಹುಮ್ಮಸ್ಸಿನಿಂದ ಮೈಕೊಡವಿಕೊಂಡು ಮೇಲೇಳೋ ಸೂಚನೆ ನೀಡಿದ್ದಾರೆ. ದುನಿಯಾ ವಿಜಿ ಇಂಥಾ ಪಾತ್ರವನ್ನೂ ಮಾಡ ಬಹುದಾ ಅಂತ ಅಭಿಮನಿಗಳೇ ಅಚ್ಚರಿಗೊಳ್ಳುವಂಥಾ ಪಾತ್ರವೊಂದರಲ್ಲಿ ನಟಿಸಲು ತಯಾರಾಗುತ್ತಿದ್ದಾರೆ. ವಿಜಿಯ ಈ ಆವೇಗಕ್ಕೆ ನಿರ್ದೇಶಕ ರಾಘು ಶಿವಮೊಗ್ಗ ಕೂಡಾ ಜೊತೆಯಾಗಿದ್ದಾರೆ.
ವಿಜಯ್ ಅಭಿನಯದ ಕುಸ್ತಿ ಚಿತ್ರ ಮುಂದಕ್ಕೆ ಹೋದ ಬಗ್ಗೆ, ಅದೇ ಗ್ಯಾಪಲ್ಲಿ ಮತ್ತೊಂದು ಚಿತ್ರ ಅಣಿಗೊಳ್ಳಲಿರೋದರ ಬಗ್ಗೆ ಈ ಹಿಂದೆ ರಾಘು ಶಿವಮೊಗ್ಗ ಸ್ಪಷ್ಟೀಕರಣ ನೀಡಿದ್ದರು. ಕುಸ್ತಿಗೆ ತಯಾರಿ ನಡೆಸುತ್ತಲೇ ಮತ್ತೊಂದು ಚಿತ್ರವನ್ನು ವಿಜಿಗಾಗಿ ಮಾಡುತ್ತಿರೋದಾಗಿಯೂ ಹೇಳಿದ್ದರು. ಇದೀಗ ಖುದ್ದು ವಿಜಿ ಈ ವಿಚಾರವನ್ನು ಸ್ಪಷ್ಟಪಡಿಸಿದ್ದಾರೆ.
`ಪ್ರತಿ ಸಲಾನೂ ಹೊಸವರ್ಷ ಬಂತು ಅಂದ್ರೆ ಇನ್ನೊಂದಷ್ಟು ಹೊಸ ತರಹ ಬದಲಾಗ್ಬೇಕು ಅನ್ಸುತ್ತೆ. ೨೦೧೯ರಲ್ಲಿ ಆ ತರಹ ನನ್ನಲ್ಲೂ ಒಂದು ಚೇಂಜ್ ತರೋಣ ಅಂತ ನಿರ್ಧಾರ ಮಾಡಿದ್ದೀನಿ. ಬದಲಾವಣೆ ಜಗದ ನಿಯಮ’ ಎಂಬ ಮಾತಿದೆ. ಈ ನಿಮ್ ವಿಜಿ ದುನಿಯಾ ಕೂಡ ಅದಕ್ಕಿಂತ ಬೇರೇದೇನೂ ಅಲ್ಲ ಅಲ್ವ ಈ ಚೇಂಜ್ ನಿಮಗೆ ಈ ಹಿಂದಿಗಿಂತಲೂ ಇಷ್ಟಾಗುತ್ತೆ ಅಂತ ನಂಬಿದ್ದೀನಿ.
ಈ ನನ್ನ ಹೊಸ ಕನಸಿಗೆ ಜೊತೆ ಸೇರಿರೋರು ಡೈರೆಕ್ಟರ್ ರಾಘು ಶಿವಮೊಗ್ಗ. ನಿಜ, ಈ ಬದುಕು ಅನ್ನೋ ಕುಸ್ತಿಯಲ್ಲಿ ದಿನಾ ಹೊಸ ಪಟ್ಟು ಹಾಕ್ತಾ ಇದ್ರೇನೇ ಗೆಲ್ಲೋಕೆ ಸಾಧ್ಯ! ಹಾಗಾಗಿ ಒಂದ್ಕಡೆ ಕುಸ್ತಿಯ ತಯಾರಿ ಅಖಾಡದ ಹೊರಗೆ ನಡೆದಿದೆ. ಅದೇ ಟೈಮಲ್ಲಿ ಅದೇ ರಾಘು ಜೊತೆ ಸೇರಿಕೊಂಡು ಹೊಸದೊಂದು ಪಾತ್ರದಲ್ಲಿ ನಿಮ್ಮೆದುರು ಬರ್ತಿದ್ದೇನೆ. ಈ ಬಾರಿ ನಾನು ಮಾಡ್ತಿರುವ ಪಾತ್ರ ನನ್ನ ಅಣ್ಣ ತಮ್ಮಂದಿರಂಥ ಅಭಿಮಾನಿಗಳಿಗೆ ಖಂಡಿತ ಇಷ್ಟವಾಗುತ್ತೆ ಅಂತ ಗೊತ್ತು. ಆದ್ರೆ ಇಲ್ಲಿ ಇರೋರು ಅಭಿಮಾನಿಗಳು ಮಾತ್ರ ಅಲ್ಲ ಅಂತಾನೂ ನನಗೆ ಗೊತ್ತು. ವಿಜಯ್ ಕೂಡ ಈ ತರಹ ಪಾತ್ರ ಮಾಡೋದ? ಅಂತ ಪ್ರಶ್ನೆ ಮಾಡಿದ್ರೂ ವಿಶೇಷ ಏನಿಲ್ಲ. ಆದ್ರೆ ಅದೇ ನೋಡಿ ಒಬ್ಬ ಕಲಾವಿದನ ಅದೃಷ್ಟ!
ಒಟ್ಟಿನಲ್ಲಿ ಪರದೆ ಮೇಲೆ ಬರೋ ನನ್ನ ಪಾತ್ರಗಳು ನಿಮ್ಮ ಅಭಿಮಾನ ಉಳಿಸುತ್ತೆ, ಬೆಳೆಸುತ್ತೆ ಎನ್ನೋದರಲ್ಲಿ ಯಾವುದೇ ಸಂದೇಹ ಬೇಡ. ನನ್ನ ರೋಲ್ ಏನು ಅಂತ ತಿಳಿಯೋಕೆ ನಿಮಗೆಲ್ಲ ಅವಸರ ಇದೆ ಅಂತ ನನಗೂ ಗೊತ್ತು. ಆದ್ರೆ ಈ ಎಲ್ಲ ಸಂಗತಿಗಳನ್ನು ನಾನು ಹೊಸ ವರ್ಷದ ಮೊದಲ ದಿನ, ಅಂದರೆ ಜನವರಿ ೧ ರಂದು ಬೆಳಿಗ್ಗೆ ೯ ಗಂಟೆಗೆ ಹೇಳುವೆ. ಅದುವರೆಗೆ ನಿಮ್ಮ ಪ್ರೀತಿ, ಅಭಿಮಾನ ಬೆಂಬಲ ಎಲ್ಲವೂ ಹೀಗೇನೇ ಇರಲಿ ಎನ್ನೋದೇ ಈ ನಿಮ್ಮ ವಿಜಯ್ ಪ್ರಾರ್ಥನೆ… ಹೀಗಂತ ಹೇಳಿಕೊಂಡಿರೋ ವಿಜಿ ಈ ವರೆಗಿನ ಎಲ್ಲ ಜಂಜಾಟಗಳಿಂದ ಹೊರ ಬಂದು ಹೊಸಾ ಬದುಕು ಶುರು ಮಾಡೋ ಸೂಚನೆಯನ್ನೂ ನೀಡಿದ್ದಾರೆ.
#