ದೂದ್ ಪೇಡ ದಿಗಂತ್ ಜನಕ್ಕೆ ಇಷ್ಟವಾಗಿರೋದೇ ಈ ಕಾರಣಕ್ಕೆ!
ಟೈಮಿಗೆ ಸರಿಯಾಗಿ ಕೈಗೆ ಸಿಗೋದಿಕಲ್ಲ ಎಂಬಿತ್ಯಾದಿ ಹಳೆಯ ಆರೋಪಗಳನ್ನು ಹೊರತುಪಡಿಸಿದರೆ, ದಿಗಂತ್ ಅಪ್ಪಟ ಕಲಾವಿದ. ಯಾವ ಪಾತ್ರ ಕೊಟ್ಟರೂ ಅದರಲ್ಲಿ ಇನ್ವಾಲ್ವ್ ಆಗಿಬಿಡುತ್ತಾರೆ. ಮೊನ್ನೆ ದಿನ ವಿಶ್ವ ಎಡಚರ ದಿನವಿತ್ತಲ್ಲಾ? ಅವತ್ತು ʻ ಎಡಗೈಯೇ ಅಪಘಾತಕ್ಕೆ ಕಾರಣʼ ಎನ್ನುವ ಟೈಟಲ್ಲು ಅನಾವರಣಗೊಂಡು, ಫಸ್ಟ್ ಲುಕ್ ಪ್ರೋಮೋ ಕೂಡಾ ಹೊರಬಂದಿತ್ತು. ಈಗದು ಸಿಕ್ಕಾಪಟ್ಟೆ ವೈರಲ್ ಆಗಿದೆ.
ʻಜನ ನನ್ನ ಜನ ಲೊಡ್ಯ, ಲೆಫ್ಟಿ, ಲೊಡ್ಡೇಶ್, ಸೌತ್ʼಪ ಸಮ್ ಟೈಮ್ಸ್ ಲೋಹಿತ್ ಅಂತಾ ಕರೀತಾರೆ. ನಾವು ಲೆಫ್ಟಿಗಳು ಹತ್ತು ಪರ್ಸೆಂಟ್ ಇದ್ರೂನೂ ಜಗತ್ತು ಬಲಗೈಗೋಸ್ಕರ ಡಿಸೈನ್ ಆಗಿದೆ.ʼʼ ಎನ್ನುತ್ತಾ ಎಡಗೈ ಬಳಸಿ, ಕತ್ತರಿ ಹಿಡಿಯೋದು, ಕಾರ್ಡ್ ಸ್ವೈಪ್ ಮಾಡೋದು ಎಷ್ಟು ಕಷ್ಟ ಅನ್ನೋದನ್ನೆಲ್ಲಾ ವಿವರಿಸಲಾಗಿರುವ ಪ್ರೋಮೋ ನೋಡಿದರೆ ಈ ಸಿನಿಮಾ ಮನರಂಜಿಸುತ್ತಲೇ ಎಡಚರ ಕರುಣಾಜನಕ ಕತೆಯನ್ನೂ ತೆರೆದಿಡುವಂತಿದೆ.
ಕಾರ್ ಸ್ಟೇರಿಂಗು, ಟಿವಿ ರಿಮೋಟು, ಮೊಬೈಲು, ಕೀ ಪ್ಯಾಡು, ರೈಟಿಂಗ್ ಟೇಬಲ್ಲು, ಮನೆ ಬಾಗಿಲು – ಹೀಗೆ ಒಂದಲ್ಲಾ ಎರಡಲ್ಲಾ ಪ್ರತಿಯೊಂದರ ವಿನ್ಯಾಸ ಕೂಡಾ ಬಲಗೈ ಪ್ರಧಾನವಾಗಿಯೇ ಇದೆ. ಹಾಗಾದರೆ, ಜಗತ್ತಿನಲ್ಲಿರುವ ಸರಾಸರಿ ಹತ್ತು ಪರ್ಸೆಂಟ್ ಎಡಚರ ಗತಿ ಏನು? ಆಟಕ್ಕುಂಟು ಲೆಕ್ಕಕ್ಕಿಲ್ಲ ಅನ್ನುವಂತಿರುವ ಅವರ ಜೀವನದಲ್ಲಿ ಪ್ರತಿದಿನ ಏನೆಲ್ಲಾ ಅವಾಂತರ, ಯಡವಟ್ಟುಗಳು ಸೃಷ್ಟಿಯಾಗುತ್ತವೆ? ಇವನ್ನೆಲ್ಲಾ ಗಮನದಲ್ಲಿಟ್ಟುಕೊಂಡು ತಯಾರಾಗುತ್ತಿರುವ ಸಿನಿಮಾ ಎಡಗೈಯೇ ಅಪಘಾತಕ್ಕೆ ಕಾರಣ.
ಎಲ್ಲ ಅಂದುಕೊಂಡಂತೆ ಆಗಿದ್ದಿದ್ದರೆ ಈ ಹೊತ್ತಿಗೆ ರಿಷಬ್ ಶೆಟ್ಟಿ ನಟನೆಯ ಆಂಟಗೋನಿ ಶೆಟ್ಟಿ ಹೆಸರಿನ ಸಿನಿಮಾ ತಯಾರಾಗಬೇಕಿತ್ತು. ಈ ಚಿತ್ರವನ್ನು ನಿರ್ದೇಶಿಸಬೇಕಿದ್ದವರು ಸಮರ್ಥ್ ಬಿ ಕಡಕೋಳ್. ಸಿನಿಮಾದ ಬಹುತೇಕ ಭಾಗ ಮುಂಬೈನಲ್ಲಿ ಚಿತ್ರೀಕರಣಗೊಳ್ಳಬೇಕಿತ್ತು. ಕೋವಿಡ್ ಕಾರಣಕ್ಕೆ ಅದು ಸಾಧ್ಯವಾಗದ ಕಾರಣ ಆಂಟಗೋನಿ ಮುಂದಕ್ಕೆ ಹೋಗಿದೆ. ಈ ಗ್ಯಾಪಲ್ಲಿ ನಿರ್ದೇಶಕ ಸಮರ್ಥ್ ಗೆ ಹೊಳೆದ ಕಾನ್ಸೆಪ್ಟ್ ʻಎಡಗೈ ಅಪಘಾತʼದ್ದು. ತಮ್ಮ ಅಸೋಸಿಯೇಟ್ ಹುಡುಗನೊಬ್ಬ ಯಡಚನಾಗಿದ್ದು, ಆತ ಅನುಭವಿಸುತ್ತಿದ್ದ ಪಾಡನ್ನು ಕಣ್ಣಾರೆ ಕಂಡ ಸಮರ್ಥ್ ಯಾಕೆ ಇದನ್ನೇ ಸಿನಿಮಾದ ಸರಕಾಗಿಸಬಾರದು ಅಂತಾ ಯೋಚಿಸಿದ್ದರು. ಹಾಗೆ ಶುರುವಾದ ಕಥೆ ಒಂದೊಳ್ಳೆ ಕಾಮಿಡಿ ಮತ್ತು ಮನಮುಟ್ಟುವ ಸಬ್ಜೆಕ್ಟ್ ಆಗಿ ರೂಪಾಂತರಗೊಂಡಿದೆ.
ಎಡಚರ ಆತ್ಮಕತೆಯಂತಾ ಈ ಸಿನಿಮಾಗೆ ಮೋಹನ್ ಹಿರೇಗೌಡರ್ ಮುಖ್ಯ ನಿರ್ಮಾಪಕರಾಗಿದ್ದಾರೆ. ʻಅಂಬಿ ನಿಂಗ್ ವಯಸ್ಸಾಯ್ತೋʼ ಚಿತ್ರವನ್ನು ನಿರ್ದೇಶಿಸಿದ್ದ, ಸದ್ಯ ಪ್ರಜ್ವಲ್ ದೇವರಾಜ್ ಅಭಿನಯದ ಮಾಫಿಯಾ ಚಿತ್ರವನ್ನು ಕೈಗೆತ್ತಿಕೊಂಡಿರುವ ಗುರುದತ್ತ ಗಾಣಿಗ ʻಎಡಗೈಯೇ ಅಪಘಾತಕ್ಕೆ ಕಾರಣʼ ಚಿತ್ರದ ನಿರ್ಮಾಣ ಪಾಲುದಾರಿಕೆಯ ಜೊತೆಗೆ ಕ್ರಿಯೇಟೀವ್ ಹೆಡ್ ಆಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ.