ಚಿತ್ರರಂಗ ಮತ್ತು ಪ್ರೇಕ್ಷಕರ ಗಮನವನ್ನು ತೀವ್ರವಾಗಿ ತಮ್ಮತ್ತ ಸೆಳೆಯುವ ಕಲೆ ಶೋಮ್ಯಾನ್ ಜೋಗಿ ಪ್ರೇಮ್ ಅವರಿಗೆ ಯಾವತ್ತೋ ಸಿದ್ಧಿಸಿದೆ. ಪ್ರೇಮ್ ಹೊಸಬರನ್ನೂ ಗೆಲ್ಲಿಸುತ್ತಲೇ, ತಾವೂ ಗೆದ್ದವರು. ಸೂಪರ್ ಸ್ಟಾರ್ ಗಳನ್ನು ಒಟ್ಟೊಟ್ಟಿಗೇ ಹ್ಯಾಂಡಲ್ ಮಾಡಿದವರು. ಸ್ವತಃ ತಾವೇ ಹೀರೋ ಆಗಿ ಎಲ್ಲರನ್ನೂ ಪದೇ ಪದೇ ಅಚ್ಚರಿಗೊಳಿಸಿದವರು. ಪ್ರೇಮ್ ಏನೇ ಮಾಡಲಿ ಅದು ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತದೆ.
ಸದ್ಯ ರಕ್ಷಿತಾ ಪ್ರೇಮ್ ಸಹೋದರ ರಾಣಾರನ್ನು ಲಾಂಚ್ ಮಾಡಲು ಪ್ರೇಮ್ ಶ್ರಮಿಸುತ್ತಿದ್ದಾರೆ. ʻಏಕ್ ಲವ್ ಯಾʼ ಚಿತ್ರ ಈಗಾಗಲೇ ಪೂರ್ಣಗೊಂಡಿದ್ದು, ಈ ಚಿತ್ರದ ಮೊದಲ ಹಾಡನ್ನು ರಿಲೀಸ್ ಮಾಡಿದ್ದಾರೆ. ಲವ್ ಕಂ ಆ್ಯಕ್ಷನ್ ಸಬ್ಜೆಕ್ಟ್ ಈ ಚಿತ್ರದ್ದಾಗಿದ್ದು ಅಪಾರ ವೆಚ್ಚದ ಸೆಟ್ ಗಳನ್ನು ನಿರ್ಮಿಸಿ ಅದ್ದೂರಿಯಾಗಿ ಚಿತ್ರೀಕರಿಸಿದ್ದಾರೆ. ಈಗ ಬಿಡುಗಡೆಯಾಗಿರುವ ರೊಮ್ಯಾಂಟಿಕ್ ಹಾಡು ಕೂಡಾ ಮೊದಲ ನೋಟಕ್ಕೇ ಎಲ್ಲರನ್ನೂ ಸೆಳೆಯುತ್ತಿದೆ. ಅರ್ಜುನ್ ಜನ್ಯ ಸಂಗೀತ ನಿರ್ದೇಶನದ ಟ್ಯೂನ್ ಗೆ, ಸ್ವತಃ ಪ್ರೇಮ್ ಚೆಂದದ ಸಾಲುಗಳನ್ನು ಪೋಣಿಸಿದ್ದಾರೆ. ʻʻಯಾರೇ ಯಾರೇ ನೀನು ನಂಗೇ, ಏನೋ ಆಸೆ ಹೇಳೋದ್ ಹೆಂಗೆ? ನಿನಗಾಗೇ ಜನನ ನಿನಗಾಗೇ ಮರಣ
ನೀನಿಲ್ದೇ ಇನ್ನೇನಿದೆ?ʼ ಎಂಬ ರೊಮ್ಯಾಂಟಿಕ್ ಸಾಲುಗಳಿರುವ ಹಾಡು ಹಿಟ್ ಆಗೋದು ಗ್ಯಾರೆಂಟಿ ಎಂಬಂತಿದೆ. ಪ್ರೇಮ್ ಅವರ ಸಿನಿಮಾಗಳಲ್ಲಿ ಹಾಡುಗಳು ಪ್ರಾಮುಖ್ಯತೆ ಪಡೆದಿರುತ್ತವೆ. ಇವರು ಆಯ್ಕೆ ಮಾಡಿಕೊಳ್ಳುವ ಟ್ಯೂನಿನಲ್ಲೇ ಜನರನ್ನು ಸಮ್ಮೋಹಕಗೊಳಿಸುವ ಗುಣವಿರುತ್ತದೆ. ಜೊತೆಗೆ ಮನಸಿಗೆ ಹತ್ತಿರವಾದ ಸಾಲುಗಳು ಯಾವಾಗಲೂ ಗೆಲುವು ಸಾಧಿಸುತ್ತದೆ. ಸದ್ಯ ಏಕ್ ಲವ್ ಯಾದ ಹಾಡು ಕೂಡಾ ಇದೇ ನಿಟ್ಟಿನಲ್ಲಿದೆ.
ಕನ್ನಡ ಸೇರಿದಂತೆ ತಮಿಳು, ತೆಲುಗು, ಮಲಯಾಳಂಗಳಲ್ಲೂ ಈ ಹಾಡು ಬಿಡುಗಡೆಯಾಗಿದ್ದು, ಕನ್ನಡದ ಹಾಡಿಗೆ ಅರ್ಮಾನ್ ಮಲ್ಲಿಕ್ ದನಿ ನೀಡಿದರೆ ಉಳಿದ ಭಾಷೆಗಗಳಲ್ಲಿ ಸಂಜಿತ್ ಹೆಗ್ಡೆ ಹಾಡಿದ್ದಾರೆ. ರಿಲೀಸಾಗಿರುವ ಮೊದಲ ಹಾಡೇ ಇಷ್ಟು ಖುಷಿ ಕೊಡುತ್ತಿರುವಾಗ, ʻಏಕ್ ಲವ್ ಯಾʼದ ಉಳಿದ ಹಾಡುಗಳು ಜನರನ್ನು ಹೇಗೆಲ್ಲಾ ಮೋಡಿ ಮಾಡುತ್ತದೋ ನೋಡಬೇಕು..!
a
No Comment! Be the first one.