ವಿಲನ್ ಆದಮೇಲೆ ಶೋಮ್ಯಾನ್ ಪ್ರೇಮ್ ನಿರ್ದೇಶನದಲ್ಲಿ ಒಂದಿಷ್ಟು ಗ್ಯಾಪ್ ನಂತರ ಬಿಡುಗಡೆಯಾಗಿರುವ ಸಿನಿಮಾ ಏಕ್ ಲವ್ ಯಾ. ಚಿತ್ರರಂಗ ಮತ್ತು ಪ್ರೇಕ್ಷಕರ ಗಮನವನ್ನು ತೀವ್ರವಾಗಿ ತಮ್ಮತ್ತ ಸೆಳೆಯುವ ಕಲೆ ಜೋಗಿ ಪ್ರೇಮ್ ಅವರಿಗೆ ಯಾವತ್ತೋ ಸಿದ್ಧಿಸಿದೆ. ಪ್ರೇಮ್ ಹೊಸಬರನ್ನೂ ಗೆಲ್ಲಿಸುತ್ತಲೇ, ತಾವೂ ಗೆದ್ದವರು. ಸೂಪರ್ ಸ್ಟಾರ್ ಗಳನ್ನು ಒಟ್ಟೊಟ್ಟಿಗೇ ಹ್ಯಾಂಡಲ್ ಮಾಡಿದವರು. ಸ್ವತಃ ತಾವೇ ಹೀರೋ ಆಗಿ ಎಲ್ಲರನ್ನೂ ಪದೇ ಪದೆ ಅಚ್ಚರಿಗೊಳಿಸಿದವರು. ಪ್ರೇಮ್ ಏನೇ ಮಾಡಲಿ ಅದು ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತದೆ. ಕನ್ನಡದಲ್ಲಿ ಲವ್ ಮತ್ತು ರೌಡಿಸಂ ಎರಡೂ ಜಾನರಿನ ಚಿತ್ರಗಳನ್ನು ಕೊಟ್ಟು ಸಕ್ಸಸ್ ಕಂಡವರು ಪ್ರೇಮ್. ಈ ಸಲ ತಮ್ಮ ಬಾಮೈದ ರಾಣಾನನ್ನು ಹೀರೋ ಆಗಿ ಲಾಂಚ್ ಮಾಡುವ ಮಹತ್ತರ ಜವಾಬ್ದಾರಿ ವಹಿಸಿಕೊಂಡಿದ್ದರಿಂದ ಎಲ್ಲರ ಗಮನ ಪ್ರೇಮ್ ಕಡೆ ನೆಟ್ಟಿತ್ತು. ಹಾಡುಗಳು ಸೂಪರ್ ಹಿಟ್ ಅನ್ನಿಸಿಕೊಂಡಿದ್ದರಿಂದ ಸಿನಿಮಾ ಹೇಗಿರಬಹುದು ಎನ್ನುವ ಕುತೂಹಲ ಪ್ರೇಕ್ಷಕರಲ್ಲೂ ಇತ್ತು.
ಪ್ರೀತ್ಸೆ ಪ್ರೀತ್ಸೆ ಅಂತಾ ಬೆನ್ನುಬಿದ್ದು ಪ್ರಾಣ ತಿನ್ನುವ ಹುಡುಗ. ಬೇಡ ಅಂತಾ ದೂರ ಹೋಗುವ ಹುಡುಗಿ. ಬಿಟ್ಟು ಹೋದವಳ ನೆನಪಲ್ಲಿ ನಶೆ ಏರಿಸಿಕೊಂಡು ತಿರುಗೋದು ಹುಡುಗನ ನಿತ್ಯಕರ್ಮ. ಮಗ ಓದಿ ದೊಡ್ಡ ಲಾಯರ್ ಆಗಬೇಕು ಅನ್ನೋದು ಅಪ್ಪನ ಕನಸು. ಒಳ್ಳೆ ವಕೀಲನಾಗಲು ಬೇಕಾದ ಎಲ್ಲ ಅರ್ಹತೆ ಇದ್ದರೂ ಎದೆಯ ತುಂಬ ಆವರಿಸಿಕೊಂಡ ಅವಳದ್ದೇ ನೆನಪು ಇವನ ಭವಿಷ್ಯವನ್ನು ನೆಲಕ್ಕದುಮಿರುತ್ತದೆ. ಬಯಸಿದವಳ ನೆನಪಲ್ಲಿ ಹುಡುಗ ಒದ್ದಾಡುತ್ತಿದ್ದರೆ, ಇವನ ರೋಷ, ಆವೇಷ, ದೌಲತ್ತನ್ನು ನೋಡಿದ ಮತ್ತೊಬ್ಬಳು ಇವನ ಹಿಂದೆ ಬೀಳುತ್ತಾಳೆ. ಇಷ್ಟೆಲ್ಲದರ ನಡುವೆ ನಡೆಯಬಾರದ ಘಟನೆಯೊಂದು ಜರುಗುತ್ತದೆ. ತಾನು ಮಾಡದ ತಪ್ಪಿಗೆ ಹೀರೋ ಬಲಿಪಶುವಾಗಬೇಕಾದ ಸಂದಿಗ್ಧತೆ ಎದುರಾಗುತ್ತದೆ.
ಹಳೆಯದ್ದನ್ನೆಲ್ಲ ಮರೆತು ಹೊಸ ಬದುಕು ರೂಪಿಸಿಕೊಳ್ಳಹೊರಟವನು ತನಗರಿವಿಲ್ಲದೇ ವಿಷ ವರ್ತುಲದಲ್ಲಿ ಸಿಕ್ಕಿಬಿದ್ದಿರುತ್ತಾನೆ. ಅಲ್ಲಿಗೆ ಎಲ್ಲವೂ ಮುಗಿದುಹೋಯ್ತಾ ಎಂದು ಅಂದುಕೊಳ್ಳುವ ಹೊತ್ತಿಗೇ ತಿರುವುಗಳು ಎದುರಾಗುತ್ತವೆ. ಎಲ್ಲ ಸಿಕ್ಕುಗಳಿಂದ ಬಿಡಿಸಿಕೊಂಡು ಹೊರಬರಲೇಬೇಕು ಅನ್ನೋದು ಅಂತಿಮ ತೀರ್ಪಾದರೂ ಅದು ಹೇಗೆ ಅನ್ನೋದೇ ಕಾಯ್ದಿರಿಸುವ ಕುತೂಹಲ.
ಹುಡುಗರ ಮನಸ್ಸು ಯಾಕೆ ಹೀಗೆಂದು ಗೊತ್ತಿಲ್ಲ. ದಾರಿಯಲ್ಲಿ ನಡೆದುಹೋದವಳ ಸಣ್ಣ ಕಿರುನಗೆ ಯುವಕರ ಬದುಕನ್ನೇ ತಿರುಗಿಸಿಬಿಡುತ್ತದೆ. ಆ ಕ್ಷಣವೇ ʻಇವಳು ನನ್ನವಳುʼ ಅಂತಾ ತಮ್ಮಷ್ಟಕ್ಕೆ ತಾವು ತೀರ್ಮಾನಿಸಿಬಿಡುತ್ತಾರೆ. ಒಂದು ವೇಳೆ ತಮ್ಮ ಮನೋಬಯಕೆಗಳಿಗೆ ವಿರುದ್ಧವಾಗಿ ನಸೀಬು ಉಲ್ಟಾ ಹೊಡೀತು ಅಂದುಕೊಳ್ಳಿ. ಆ ಕ್ಷಣದಿಂದ ಬುದ್ದಿಯನ್ನು ಕೇಡಿನ ಕೈಗೆ ಕೊಟ್ಟು, ʻತನಗೆ ಸಿಗದವಳು ಬೇರೆ ಯಾರಿಗೂ ಸಿಗಬಾರದುʼ ಅಂತಾ ಧೂರ್ತ ನಿರ್ಣಯಕ್ಕೆ ಬಂದುಬಿಡುತ್ತಾರೆ. ಏಕ್ ಲವ್ ಯಾ ಚಿತ್ರದ ಮೊದಲ ಭಾಗ ಇಂಥದ್ದೇ ಸರಕನ್ನು ಹೊಂದಿದೆ.
ಹುಡುಗಿಯನ್ನು ಹತ್ತಿರ ಮಾಡಿಕೊಳ್ಳೋದು, ಸ್ವಲ್ಪ ಸಲುಗೆ ಕೊಟ್ಟರೆ ಪ್ರಪೋಸ್ ಮಾಡೋದು, ಒಂದು ವೇಳೆ ಆಕೆ ಪ್ರೀತಿಯನ್ನು ತಿರಸ್ಕರಿಸಿದರೆ, ಆಕೆಯ ಕ್ಯಾರೆಕ್ಟರ್ ಸರಿ ಇಲ್ಲ ಅಂತಾ ಹೇಳಿಕೊಂಡು ತಿರುಗೋದು ಬಹುತೇಕ ಗಂಡ್ಮಕ್ಕಳಿಗೆ ವ್ಯಾಧಿಯಂತೆ. ಅಂಥಾ ರೋಗಗ್ರಸ್ಥ ಮನಸ್ಸುಗಳಿಗೆ ನಾಯಕಿಯ ಮಾತುಗಳಿಂದ ತಿವಿಸಿದ್ದಾರೆ. ʻ ನಾನು ಯಾವತ್ತಾದ್ರೂ ಬಂದು ನಿನ್ನನ್ನು ಲವ್ ಮಾಡ್ತಿದ್ದೀನಿ ಅಂತಾ ಹೇಳಿದ್ದೀನಾ?ನೀನು ಅಂದುಕೊಂಡಂತೆ ಸ್ಮೈಲ್ ಮಾಡೋರು, ಹಗ್ ಮಾಡೋರು ಎಲ್ಲಾ ಲವರ್ಸೇ ಆಗಿದ್ದಿದ್ರೆ ಈ ಜಗತ್ತಲ್ಲಿ ಫ್ರೆಂಡ್ಸು, ಫ್ರೆಂಡ್ ಶಿಪ್ ಅನ್ನೋದಕ್ಕೆ ವ್ಯಾಲ್ಯೂನೇ ಇರ್ತಾ ಇರ್ಲಿಲ್ಲ ಕಣೋ…ʼ ಅಂತಾ ಅನಿತಾ ಅಬ್ಬರಿಸುತ್ತಾಳೆ.
ಹಾಗಂತ ಇದು ಗಂಡುಕುಲದ ವಿರೋಧಿ ಸಿನಿಮಾವಲ್ಲ. ಸಾಮಾನ್ಯಕ್ಕೆ ಪ್ರಾಮಾಣಿಕ ಪ್ರೀತಿಯನ್ನು ಒಪ್ಪುವ ಪೋಷಕರಿಗಿಂತಾ ತಿರಸ್ಕರಿಸುವವರೇ ಹೆಚ್ಚು. ಇಲ್ಲಿ ಹುಡುಗನದ್ದು ಬರಿಯ ಆಕರ್ಷಣೆಯ ಪ್ರೀತಿಯಲ್ಲ. ಆಂತರ್ಯದಲ್ಲಿ ಮೊಳೆತು, ಚಿಗುರಿ, ಒಳಗೊಳಗೇ ಬಲಿತ ನಿಷ್ಕಾಮ ಪ್ರೇಮ. ಈ ಕಾರಣ ಅವಳಪ್ಪನ ಮುಂದೆಯೇ ಹೋಗಿ ನೇರಾನೇರ ಮಾತಾಡುವ ಧೈರ್ಯವೂ ಇರುತ್ತದೆ.
ʻʻನಿಮ್ಮಂತಾ ದೊಡ್ಡೋರು ಲವ್ ಮಾಡೋದು ತಪ್ಪು ಅಂತಾನೇ ವಾದಿಸ್ತೀರ ಹೊರತು, ಸರಿ ಅಂತಾ ಯಾವತ್ತೂ ಒಪ್ಪೋದೇ ಇಲ್ಲ. ಪಬ್ಬು ಪಾರ್ಕು ಅಂತಾ ಸುತ್ತಾಡಿಕೊಂಡು, ಥಿಯೇಟರಲ್ಲಿ ಕೈ ಹಿಡ್ಕೊಂಡು ಅಪ್ಪಾ ಅಮ್ಮನಿಗೆ ಗೊತ್ತಾಗದಂತೆ ಎತ್ತಾಕೊಂಡ್ ಹೋಗಿ ಮೂರು ದಿನ ಮಜಾ ಮಾಡಿ ತಂದು ಬಿಡ್ತಾರಲ್ಲಾ…? ಅವರೇ ಸರಿ ಸರ್…ʼʼ ಅಂತಾ ಹೀರೋ ಡೈಲಾಗು ಹೊಡೆದಾಗ ʻನಿಜಾನೇ ಅಲ್ಲವಾ?ʼ ಅನ್ನಿಸುತ್ತದೆ.
ಏಕ್ ಲವ್ ಯಾ ಚಿತ್ರದ ಮೊದಲ ಭಾಗ ಸ್ವಲ್ಪ ಜಾಳುಜಾಳಾಯ್ತೇನೋ ಅನ್ನಿಸುವುದು ನಿಜ. ಲವ್ವು, ಕಾಮಿಡಿಗಳೇ ತುಂಬಿಕೊಂಡಿತಾ ಅನ್ನಿಸುವಷ್ಟರಲ್ಲಿ, ದ್ವಿತೀಯಾರ್ಧ ರೋಚಕತೆಯನ್ನು ಪಡೆಯುತ್ತದೆ. ಕತೆ ಏಕ್ ಧಂ ಥ್ರಿಲ್ಲರ್ ಜಾನರಿಗೆ ಜರುಗುತ್ತದೆ. ಸಿನಿಮಾದ ಹೀರೋ ರಾಣಾ ಮೊದಲ ಸಿನಿಮಾವಾದರೂ ಅನುಭವಿಸಿ ನಟಿಸಿದ್ದಾರೆ. ರಚಿತಾ ರಾಮ್ ಧೂಮಲೀಲೆಯಲ್ಲಿ ಮಿಂದೆದ್ದಿದ್ದಾರೆ. ರೀಷ್ಮಾ ಹಾಡುಗಳಲ್ಲಿ ಚೆಂದ ಕಾಣಿಸಿದ್ದಾರೆ. ಕಾಮಿಡಿ ಹುಡುಗರ ನಟನೆ ಇನ್ನೂ ಕಿರುತೆರೆ ಸ್ಟೇಜು ಇಳಿದಿಲ್ಲ. ಚರಣ್ ರಾಜ್ ಪಾತ್ರ ಗಮನ ಸೆಳೆಯುತ್ತದೆ.
ಮೋಹನ್ ಮಾಸ್ಟರ್ ಡ್ಯಾನ್ಸ್ ಸ್ಟೆಪ್ಪುಗಳು ಮಜಾ ಕೊಡುತ್ತವೆ. ಮಾಸ್ ಮಾದ ಮಾಡಿಸಿರುವ ಬಿಲ್ಡಿಂಗ್ ಜಂಪು ಮೈ ಜುಮ್ಮನೆನಿಸುತ್ತದೆ. ಅರ್ಜುನ್ ಜನ್ಯ ಮತ್ತು ಛಾಯಾಗ್ರಾಹಕ ಮಹೇನ್ ಸಿಂಹ ಕೆಲಸ ಸಿನಿಮಾದ ಶಕ್ತಿ. ಪ್ರತೀ ಛಾಯಾಗ್ರಾಹಕರೂ ತಮ್ಮದೇ ಆದ ಶೈಲಿ ಹೊಂದಿರುತ್ತಾರೆ. ಮಹೇನ್ ಸಿಂಹ ಕತೆಗೆ ಬೇಕಾದಂತೆ ಶೈಲಿಯನ್ನೂ ಬದಲಿಸಿಕೊಳ್ಳುವ ಜಾಣ್ಮೆ ಇರುವ ತೀರಾ ವಿರಳ, ಚತುರ ತಂತ್ರಜ್ಞ. ಛಾಯಾಗ್ರಹಣ ಅಂದರೆ ಬರಿಯ ತಾಂತ್ರಿಕ ಕೆಲಸವಲ್ಲ ಅದೊಂದು ದಿವ್ಯಕಲೆ ಅನ್ನೋದನ್ನು ಈ ಚಿತ್ರದ ಪ್ರತಿಯೊಂದು ಫ್ರೇಮೂ ತೋರಿಸಿದೆ.
Comments