ಬಾಲಿವುಡ್ ಮತ್ತು ಹಿಂದಿ ಕಿರುತೆರೆಯ ಖ್ಯಾತ ನಿರ್ಮಾಪಕಿ ಏಕ್ತಾ ಕಪೂರ್ ಗಂಡುಮಗುವಿಗೆ ಅಮ್ಮನಾಗಿದ್ದಾರೆ. ಬಾಡಿಗೆ ತಾಯಿ ಮೂಲಕ ಅವರು ಅಮ್ಮನಾಗಿದ್ದು, ಮಗು ಆರೋಗ್ಯವಾಗಿದೆ. ಸದ್ಯದಲ್ಲೇ ಏಕ್ತಾ, ಪುತ್ರನನ್ನು ಮನೆಗೆ ಕರೆದೊಯ್ಯಲಿದ್ದಾರೆ ಎನ್ನಲಾಗಿದೆ. ಏಕ್ತಾ ಸಹೋದರ, ನಟ ತುಷಾರ್ ಕಪೂರ್ ಅವರೂ ಸಹ ೨೦೧೬ರಲ್ಲಿ ಬಾಡಿಗೆ ತಾಯಿ ಮೂಲಕ ’ಲಕ್ಷ್ಯ’ ಮಗುವಿಗೆ ತಂದೆಯಾಗಿದ್ದರು. ಬಾಡಿಗೆ ತಾಯಿ ಮೂಲಕ ಪೋಷಕರಾದ ಬಾಲಿವುಡ್ ತಾರೆಯರ ಪಟ್ಟಿಯಲ್ಲಿ ಶಾರುಖ್ ಖಾನ್, ಅಮೀರ್ ಖಾನ್, ನಿರ್ದೇಶಕ ಕರಣ್ ಜೋಹರ್ ಅವರೂ ಇದ್ದಾರೆ.
ಅಮ್ಮನಾಗಿ ಹೊಸ ಜವಾಬ್ದಾರಿಗೆ ಬಡ್ತಿ ಪಡೆದ ಏಕ್ತಾ ಕಪೂರ್ ಅವರನ್ನು ಬಾಲಿವುಡ್ ನಿರ್ಮಾಪಕರಾದ ಹನ್ಸಲ್ ಮೆಹ್ತಾ, ಸಂಜಯ್ ಗುಪ್ತಾ ಸೇರಿದಂತೆ ಹಲವರು ಅಭಿನಂದಿಸಿದ್ದಾರೆ. ತಾಯಿ ಶೋಭಾ ಕಪೂರ್ ಅವರೊಡಗೂಡಿ ಏಕ್ತಾ ಬಾಲಾಜಿ ಟೆಲಿಫಿಲ್ಮ್ಸ್ ನಡೆಸುತ್ತಿದ್ದಾರೆ. ಅವರ ಬ್ಯಾನರ್ನ ಹಲವು ಧಾರಾವಾಹಿಗಳು ದೊಡ್ಡ ಜನಪ್ರಿಯತೆ ಗಳಿಸಿವೆ. ಸಿದ್ದಾರ್ಥ್ ಮಲ್ಹೋತ್ರಾ ಮತ್ತು ಪರಿಣೀತಿ ಚೋಪ್ರಾ ನಟನೆಯ ’ಜಬಾರಿಯಾ ಜೋಡಿ’, ಆಯುಷ್ಮಾನ್ ಖುರಾನಾ ಅವರ ’ಡ್ರೀಮ್ ಗರ್ಲ್’, ಕಂಗನಾ ರನಾವತ್ ಮತ್ತು ರಾಜಕುಮಾರ್ ರಾವ್ ಅಭಿನಯದ ’ಮೆಂಟಲ್ ಹೈ ಕ್ಯಾ’, ಕೊಂಕಣ ಸೇನ್ ಶರ್ಮಾ ನಿರ್ದೇಶನದ ’ಡಾಲಿ ಕಿಟ್ಟಿ ಔರ್ ವೊಹ್ ಚಮಕ್ತೆ ಸಿತಾರೆ’ ಹಿಂದಿ ಚಿತ್ರಗಳು ಅವರ ನಿರ್ಮಾಣದಲ್ಲಿ ತಯಾರಾಗುತ್ತಿವೆ.
–
#
No Comment! Be the first one.