ಸೃಜನ್ ಲೋಕೇಶ್ ನಟಿಸಿ, ತಮ್ಮ ಲೋಕೇಶ್ ಪ್ರೊಡಕ್ಷನ್ಸ್ ಮೂಲಕ ನಿರ್ಮಿಸುತ್ತಿರುವ ಸಿನಿಮಾ ‘ಎಲ್ಲಿದ್ದೆ ಇಲ್ಲಿತನಕ’. ಕಳೆದ ಎಂಟು ವರ್ಷಗಳ ಕಾಲ್ ತಮ್ಮ ಜೊತೆಗಿದ್ದ, ತಮ್ಮ ನಿರ್ಮಾಣದ ಎಲ್ಲ ಧಾರಾವಾಹಿ, ಟೀವಿ ಶೋಗಳ ಕ್ರಿಯೇಟೀವ್ ಡೈರೆಕ್ಟರ್ ಆಗಿದ್ದ ತೇಜಸ್ವಿ ಅವರಿಗೆ ನಿರ್ದೇಶನದ ಜವಾಬ್ದಾರಿ ಕೊಟ್ಟು ‘ಎಲ್ಲಿದ್ದೆ ಇಲ್ಲಿತನಕ’ ಚಿತ್ರವನ್ನು ರೂಪಿಸಿದ್ದಾರೆ.
ಸಿನಿಮಾವೊಂದು ತಯಾರಾಗಿ, ತೆರೆಮೇಲೆ ಬಂದಮೇಲೆ ನೋಡಿದ ಪ್ರೇಕ್ಷಕರು, ವಿಮರ್ಶಕರು ಏನೆಲ್ಲಾ ವಿಮರ್ಶೆ ಮಾಡಲು ಸಾಧ್ಯವೋ ಅದನ್ನು ಸ್ಕ್ರಿಪ್ಟ್ ಲೆವೆಲ್ಲಿನಲ್ಲೇ ಸ್ವತಃ ಚಿತ್ರತಂಡವೇ ಮಾಡಿಮುಗಿಸಿತ್ತು. ಹೀಗೆ ತಾವು ಸೃಷ್ಟಿಸಿದ ಸಬ್ಜೆಕ್ಟನ್ನು ತಾವೇ ಸ್ವಯಂ ವಿಮರ್ಶೆಗೊಳಪಡಿಸಿಕೊಳ್ಳುತ್ತಾ ಬಂದ ಕಾರಣದಿಂದಲೋ ಏನೋ ‘ಎಲ್ಲಿದ್ದೆ ಇಲ್ಲಿತನಕ’ ಒಂದು ಗಟ್ಟಿಯಾದ ಸಿನಿಮಾವಾಗಿ ಎದ್ದುನಿಂತಿದೆ.
ಈ ಚಿತ್ರಕ್ಕೆ ಟಾಕಿಂಗ್ ಸ್ಟಾರ್ ಸೃಜಾ ನಿರ್ಮಾಪಕ ಅನ್ನೋದು ನಿಜ. ಆದರೆ ಚಿತ್ರೀಕರಣಕ್ಕೆ ಬಂದಮೇಲೆ ಯಾವತ್ತೂ ನಿರ್ಮಾಪಕನಂತೆ ಸೃಜನ್ ವರ್ತಿಸಿರಲಿಲ್ಲವಂತೆ. ಸಾಮಾನ್ಯವಾಗಿ ನಾಯಕನಟನೇ ಚಿತ್ರಕ್ಕೆ ಬಂಡವಾಳ ಹೂಡಿದಂತಾ ಸಮಯದಲ್ಲಿ ಸಣ್ಣ ಪುಟ್ಟ ರಾಜಿ ಮಾಡಿಕೊಳ್ಳೋದು ಸಹಜ. ಆದರೆ ಸೃಜನ್ ಮಾತ್ರ ಯಾವ ಸಂದರ್ಭದಲ್ಲೂ ಅಂತಹ ರಾಜಿ, ಮುಲಾಜುಗಳಿಗೆ ಒಳಗಾಗಿಲ್ಲವಂತೆ. ಈ ಚಿತ್ರಕ್ಕೆ ಏನೇನು ಬೇಕೋ ಎಲ್ಲವನ್ನೂ ಸಮರ್ಪಕವಾಗಿ ಪೂರೈಸಿದ್ದಾರೆ. ಚಿತ್ರೀಕರಣಕ್ಕೆಂದು ಹೊರಡೋ ಮುಂಚೆ ಈ ಸಿನಿಮಾಗಾಗಿ ಏನಿಲ್ಲವೆಂದರೂ ಹನ್ನೆರಡು ಬಗೆಯಲ್ಲಿ ಡೈಲಾಗ್ ಬರೆಯಲಾಗಿತ್ತು. ತೀರಾ ಅಳೆದೂ ತೂಗಿ, ಯಾವುದು ಮಾಡಿದರೆ ಸರಿಹೋಗುತ್ತದೆ? ಯಾವುದನ್ನು ಜನ ಒಪ್ಪೋದಿಲ್ಲ ಎನ್ನುವುದನ್ನೆಲ್ಲಾ ತೀರ್ಮಾನಿಸಿ ಕಡೆಗೆ ಶೂಟ್ ಮಾಡಲಾಗಿದೆ. ಇಷ್ಟೊಂದು ಮುತುವರ್ಜಿ ವಹಿಸಿದ್ದರಿಂದಲೋ ಏನೋ ಈಗಾಗಲೇ ಬಿಡುಗಡೆಯಾಗಿರುವ ಹಾಡುಗಳು ಮತ್ತೆ ಮತ್ತೆ ಕೇಳುವಂತಿವೆ. ಸಿನಿಮಾ ಕೂಡಾ ಜನ ಒಂದಕ್ಕಿಂತಾ ಹೆಚ್ಚು ಬಾರಿ ಥಿಯೇಟರಿಗೆ ಬಂದು ನೋಡುವಷ್ಟು ಚೆಂದಕ್ಕಿದೆ ಅನ್ನೋದು ಚಿತ್ರತಂಡದ ಭರವಸೆ. ಇಷ್ಟರಲ್ಲೇ ತೆರೆಗೆ ಬರಲಿರುವ ಚಿತ್ರ ಮತ್ತು ಆ ಚಿತ್ರದಲ್ಲಿನ ಸೃಜನ್, ಹರಿಪ್ರಿಯಾ ಪಾತ್ರ, ನಿರ್ದೇಶಕರ ಕ್ರಿಯಾಶೀಲತೆ, ಒಟ್ಟಾರೆ ತಂಡದ ಕೆಲಸ ನೋಡಿ ಜನ ‘ಎಲ್ಲಿದ್ರು ಇಲ್ಲೀತನಕ’ ಎನ್ನುವಂತಾಗಲಿ!