ಕರ್ನಾಟಕ ಕಂಡ ಅಪ್ರತಿಮ ಮೇಧಾವಿ, ಪತ್ರಕರ್ತ, ಸಾಹಿತಿ ಪಿ. ಲಂಕೇಶ್ ಅವರ ನಿರ್ದೇಶನದಲ್ಲಿ ಎಲ್ಲಿಂದಲೋ ಬಂದವರು ಎನ್ನುವ ಚಿತ್ರ ನಾಲ್ಕು ದಶಕಗಳ ಹಿಂದೆ ತೆರೆಗೆ ಬಂದಿತ್ತು.  ದಿ.ಲೋಕೇಶ್ ಈ ಚಿತ್ರದ ನಾಯಕನಾಗಿ ನಟಿಸಿದ್ದರು. ಆ ಸಿನಿಮಾದ “ಎಲ್ಲಿದ್ದೇ ಇಲ್ಲೀತನಕಾ ಎಲ್ಲಿಂದಾ ಬಂದ್ಯವ್ವ ಹಾಡು ಇಂದಿಗೂ ಜನಜನಿತ. ಇದೀಗ ಲೋಕೇಶ್ ಅವರ ಪುತ್ರ ಸೃಜನ್, ಲೋಕೇಶ್ ಪ್ರೊಡಕ್ಷನ್ ಮೂಲಕ ನಿರ್ಮಿಸುತ್ತಿರುವ ಮೊದಲ ಚಿತ್ರಕ್ಕೆ ‘ಎಲ್ಲಿದ್ದೆ ಇಲ್ಲಿತನಕ ಎಂಬ ಶೀರ್ಷಿಕೆಯನ್ನೇ ಇಟ್ಟಿದ್ದಾರೆ. ಈ ಚಿತ್ರಕ್ಕೆ  ಯುವ ಪ್ರತಿಭೆ ತೇಜಸ್ವಿ ಆಕ್ಷನ್ ಕಟ್ ಹೇಳಿದ್ದಾರೆ.  ಅಲ್ಲದೆ ಸೃಜನ್ ಜೊತೆ ನಾಯಕಿಯಗಿ ಹರಿಪ್ರಿಯಾ ಕಾಣಿಸಿಕೊಂಡಿದ್ದಾರೆ.  ಈಗಾಗಲೇ ಶೂಟಿಂಗ್ ಹಾಗೂ ಪೋಸ್ಟ್ ಪ್ರೊಡಕ್ಷನ್  ಕೆಲಸಗಳನ್ನು ಮುಗಿಸಿಕೊಂಡಿರುವ  ಈ ಚಿತ್ರವೀಗ  ಬಿಡುಗಡೆಯ ಹಂತಕ್ಕೆ ಬಂದಿದೆ. ಇತ್ತೀಚೆಗೆ ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮವನ್ನು ನಟ, ನಿರ್ಮಾಪಕ ಸೃಜನ್ ಲೋಕೇಶ್ ತುಂಬಾ ವಿಶೇಷವಾಗಿ ಆಚರಿಸಿದರು. ತಮ್ಮ ಚಿತ್ರದಲ್ಲಿ ಕೆಲಸಮಾಡಿದ ಕಲಾವಿದರು ಹಾಗೂ ತಂತ್ರಜ್ಞರ ತಾಯಂದಿರುಗಳನ್ನೆಲ್ಲ ವೇದಿಕೆಗೆ ಕರೆಸಿ ಅವರ ಕೈಲೇ ಎಲ್ಲಿದ್ದೆ ಇಲ್ಲಿತನಕ ಚಿತ್ರದ ಹಾಡುಗಳ ಸಿಡಿಯನ್ನು ಬಿಡುಗಡೆ ಮಾಡಿಸುವ ಮೂಲಕ ಮಾತೆಯರಿಗೆ ಗೌರವ ಸಲ್ಲಿಸಿದ್ದಾರೆ.  ಈ ಸಂದರ್ಭದಲ್ಲಿ ಸೃಜನ್ ತಾಯಿ ಗಿರಿಜ ಲೋಕೇಶ್  ಮಾತನಾಡುತ್ತ  ಸೃಜನ್ ಚಿತ್ರರಂಗದಲ್ಲಿ ಎತ್ತರಕ್ಕೆ ಬೆಳೆಯಬೇಕೆಂಬುದು ಅವನ ತಂದೆಯ ಆಸೆಯಾಗಿತ್ತು. ಅವರು ತೀರಿಕೊಂಡ ಮೇಲೆ ಮುಂದೇನು ಅಂತ ನಾನು ಚಿಂತಿಸುತ್ತಿರುವಾಗ, ನಾನು ದುಡಿದು ನಿನ್ನನ್ನು ಸಾಕುತ್ತೇನೆ ಎಂದು ಭರವಸೆ  ಕೊಟ್ಟಿದ್ದ. ತಾನು ಹೇಳಿದಂತೆ ತನ್ನ ಸ್ವ ಸ್ವಾಮರ್ಥ್ಯದಿಂದಲೇ ಬೆಳೆದು ಆತ ಈ ಮಟ್ಟಕ್ಕೆ ಬಂದಿದ್ದು, ಈಗ ಸಿನಿಮಾ  ನಿರ್ಮಿಸುತ್ತಿದ್ದಾನೆ. ಆತನ ಈ ಬೆಳವಣಿಗೆ ಕಂಡು  ತಾಯಿಯಾದ ನನಗೆ ತುಂಬಾ ಖುಷಿಯಾಗಿದೆ ಎಂದಾಗ ಅಲ್ಲಿ ನೆರೆದಿದ್ದವರ ಕಣ್ಣುಗಳು ಒದ್ದೆಯಾಗಿದ್ದವು.
ಈ ಸಿನಿಮಾದಲ್ಲಿ ನಾಯಕನ ತಾಯಿಯಾಗಿ ಕಾಣಿಸಿಕೊಂಡಿರುವ ಹಿರಿಯನಟಿ ತಾರಾ ಮಾತನಾಡಿ ನಾವು ಕಾಶ್ಮೀರದಲ್ಲಿ ಚಿತ್ರೀಕರಣ ಮಾಡುವಾಗ ಪ್ರತಿದಿನ ಪುಲ್ವಾಮಾ  ರಸ್ತೆಯಲ್ಲಿಯೇ ಪ್ರಯಾಣ ಮಾಡುತ್ತಿದ್ದೆವು. ನಾವು ಅಲ್ಲಿಂದ ವಾಪಸ್ ಬಂದ ನಂತರ ಅದೇ ಜಗದಲ್ಲಿ ಘೋರ ಘಟನೆ ನಡೆದಿರುವುದನ್ನು ನೆನಪಿಸಿಕೊಂಡರೆ ನನಗೆ  ಈಗಲೂ ಗಾಬರಿ ಮತ್ತು ಬೇಸರವಾಗುತ್ತದೆ ಎಂದು  ಹೇಳಿದರು. ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಮಾತನಾಡಿ ದಿ.ಲೋಕೇಶ್ ಅವರು ನನ್ನ ತಂದೆಯವರನ್ನು ಹೋಲುತ್ತಾರೆ. ಇವರ ಕುಟುಂಬದ ಚಿತ್ರಕ್ಕೆ ಸಂಗೀತ ಮಾಡಬೇಕೆನ್ನುವ ಬಯಕೆ ನನಗೆ ಮೊದಲಿಂದಲೂ ಇತ್ತು. ಅದು ಈಗ ನೆರವೇರಿದೆ ಎಂದು ಹೇಳಿದರು. ನಾಯಕಿ ಹರಿಪ್ರಿಯಾ ಮಾತನಾಡುತ್ತ ಎಲ್ಲರ ಬದುಕಿನಲ್ಲೂ ತಾಯಿ ಎಂಬ ಪದ ತುಂಬಾ  ಮುಖ್ಯವಾಗಿರುತ್ತದೆ.  ತಾಯಂದಿರುಗಳ ಕೈಲಿ  ಆಡಿಯೋ ಬಿಡುಗಡೆ ಮಾಡಿಸಿದ್ದು ನಿಜಕ್ಕೂ ಆರ್ಥಪೂರ್ಣವಾಗಿದೆ ಎಂದು ಹೇಳಿದರು.
  ಚಿತ್ರದ  ನಾಯಕ ಸೃಜನ್ ಲೋಕೇಶ್ ಮಾತನಾಡಿ ತಂತ್ರಜ್ಞರುಗಳೇ ನಮ್ಮ ಚಿತ್ರಕ್ಕೆ ನಿಜವಾದ ಹೀರೋ. ಅವರಿಂದಲೇ ಚಿತ್ರ  ಇಲ್ಲಿವರೆಗೆ ಬಂದಿದೆ. ವೇಣು  ಅವರು ಒಂದು ಮೇಣದ ಬತ್ತಿಯನ್ನು ಬಳಸಿಕೊಂಡು ಅದ್ಬುತವಾದ ಶಾಟ್ ತೆಗೆದಿದ್ದಾರೆ. ಅರ್ಜುನ್ ಜನ್ಯ ಒಳ್ಳೆಯ ಮ್ಯೂಸಿಕ್ ನೀಡಿದ್ದಾರೆ. ಬರೀ ಬಂಡವಾಳ ಇದ್ದರೆ ಸಾಕಾಗಲ್ಲ, ತಕ್ಕೆ ತಕ್ಕಹಾಗೆ  ಶ್ರದ್ದೆ, ಆಸಕ್ತಿ ಇರಬೇಕು, ಆಗಲೇ  ಒಳ್ಳೆಯ ಸಿನಿಮಾ ಆಗುತ್ತದೆ. ಇಷ್ಟು ವರ್ಷ ಟಿವಿಯಲ್ಲಿ  ದುಡಿದ  ಹಣವನ್ನೆಲ್ಲ ಈ ಚಿತ್ರಕ್ಕೆ ಹಾಕಿದ್ದೇನೆ. ಜನ ಒಳ್ಳೇ ಚಿತ್ರ ಮಾಡಿದ್ದೇನೆಂದು ಪ್ರೋತ್ಸಾಹಿಸಿದರೆ ನನಗೆ ಖುಷಿಯಾಗುತ್ತದೆ. ನನ್ನ ಮಗ ಮಾ.ಸುಕೃತ್ ಕೂಡ  ಈ ಚಿತ್ರದ ಸಣ್ಣ ಪಾತ್ರದಲ್ಲಿ  ಕಾಣಿಸಿಕೊಂಡಿದ್ದಾನೆ. ಇದರ ಜೊತೆ  ಲೋಕೇಶ್ ಕ್ರಿಯೇಶನ್ಸ್ ಮೂಲಕ   ಇವಳು  ಸುಜತ ಎಂಬ ಹೊಸ  ಸೀರಿಯಲ್  ಕೂಡ ಮಾಡುತ್ತಿದ್ದೇನೆ ಎಂದು ಹೇಳಿದರು.
ಈ ಚಿತ್ರದಲ್ಲಿ ಯಶಸ್ ಸೂರ್ಯ, ಎಂ.ಎಸ್. ಉಮೇಶ್ ಸೇರಿದಂತೆ ಸಾಕಷ್ಟು ಜನ ಕಲಾವಿದರು ಅಭಿನಯಿಸಿದ್ದಾರೆ.
CG ARUN

ಸಲ್ಲು ಫೇಸ್‌ಬುಕ್ ಸ್ಟೇಟಸ್‌ನಲ್ಲಿ ಕನ್ನಡದ ಪೋಸ್ಟರ್!

Previous article

ಕುಸ್ತಿ ಅಖಾಡದಿಂದ ಬಾಕ್ಸಿಂಗ್ ರಿಂಗ್ ಒಳಗೆ ಜಿಗಿಯುವ ಪೈಲ್ವಾನ್!

Next article

You may also like

Comments

Leave a reply

Your email address will not be published. Required fields are marked *