ಸಂದೀಪ್ ಜನಾರ್ಧನ್ ನಿರ್ದೇಶನದ ಫೇಸ್ ಟು ಫೇಸ್ ಚಿತ್ರ ಪ್ರೇಕ್ಷಕರೆದುರು ಅನಾವರಣಗೊಂಡಿದೆ. ಹೊಸತನದ ಸುಳಿವು ನೀಡುತ್ತಲೇ ಎಲ್ಲರನ್ನೂ ಸೆಳೆದುಕೊಂಡಿದ್ದ ಈ ಚಿತ್ರ ಪ್ರೇಕ್ಷಕರನ್ನು ನಿರೀಕ್ಷೆ ಮೀರಿ ಕಾಡಿದೆ. ಯಾರೂ ಊಹಿಸಲು ಸಾಧ್ಯವಾಗದಂಥಾ ಟ್ವಿಸ್ಟುಗಳು, ಚಿತ್ರಕಥೆಯಲ್ಲಿನ ಅಮೋಘ ಪ್ರಯೋಗಗಳೂ ಸೇರಿದಂತೆ ಆರಂಭದಿಂದ ಕಡೇಯವರೆಗೂ ಅತ್ತಿತ್ತ ಅಲ್ಲಾಡದಂತೆ ನೋಡಿಸಿಕೊಂಡು ಹೋಗೋ ಗುಣಗಳಿಂದ ಈ ಸಿನಿಮಾ ಎಲ್ಲರಿಗೂ ಹಿಡಿಸಿದೆ.ನಿರ್ದೇಶಕ ಸಂದೀಪ್ ಜನಾರ್ಧನ್ ಶುರುವಿನಿಂದಲೂ ಕೂಡಾ ಈ ಚಿತ್ರ ಮಾಮೂಲಿ ಜಾಡಿನದ್ದಲ್ಲ ಅನ್ನೋ ಸುಳಿವು ನೀಡುತ್ತಲೇ ಬಂದಿದ್ದರು. ಸ್ಕ್ರೀನ್ ಪ್ಲೇ ವಿಚಾರದಲ್ಲಿ ಇಲ್ಲಿ ಹೊಸಾ ಜಾದೂ ನಡೆದಿರೋ ಸೂಚನೆಯನ್ನೂ ಕೊಟ್ಟಿದ್ದರು. ಅದೆಲ್ಲವೂ ಪ್ರೇಕ್ಷಕರನ್ನು ಅಚ್ಚರಿಯಂತೆ ಕಾಡಿದೆ. ಈ ಮೂಲಕವೇ ಫೇಸ್ ಟು ಫೇಸ್ ಮಾಮೂಲಿ ಪ್ರೇಮ ಕಥಾನಕಗಳಿಗಿಂತಲೂ ರೋಚಕವಾದ ಅನುಭವವನ್ನು ಕೊಡುತ್ತದೆ.
ನಾಯಕ ರೋಹಿತ್ ಭಾನುಪ್ರಕಾಶ್ ಇಲ್ಲಿ ಸಂತೋಷ್ ಅನ್ನೋ ಪಾತ್ರಕ್ಕೆ ಜೀವ ತುಂಬಿದ್ದಾರೆ. ದಿವ್ಯಾ ಉರುಡಗ ಸ್ನೇಹಾ ಆಗಿ, ಪೂರ್ವಿ ಜೋಶಿ ಪ್ರೀತಿಯಾಗಿ ನಟಿಸಿದ್ದಾರೆ. ಇಲ್ಲಿ ನಾಯಕ ಆರಂಭದಲ್ಲಿ ಸ್ನೇಹಾಳನ್ನು ಪ್ರೀತಿಸುತ್ತಾನೆ. ಆದರೆ ಮೆದುಳಿನ ಮೂಲದಲ್ಲಿಯೇ ಎಲ್ಲವೂಈ ಅಳಿಸಿ ಹೋದಂಥಾ ವಿಚಿತ್ರ ಸ್ಥಿತಿಯಲ್ಲಿ ಸ್ನೇಹ ದೂರಾಗಿ ಬಿಟ್ಟಿರುತ್ತಾಳೆ. ಆ ಅಗಲಿಕೆಯ ಪರಿತಾಪದಲ್ಲಿದ್ದ ನಾಯಕನಿಗೆ ಮತ್ತೋರ್ವ ಹುಡುಗಿ ಪ್ರೀತಿ ಸಿಕ್ಕಿ ಆಕೆಯ ಮೇಲೆ ಲವ್ವಗುತ್ತೆ… ಇಂಥಾ ಸ್ಪಷ್ಟ ಚಿತ್ರಣವೊಂದನ್ನು ಮೊದಲಾರ್ಧದಲ್ಲಿಯೇ ನೀಡೋ ನಿರ್ದೇಶಕರು ಆನಂತರ ಗೊಂದಲಗಳ ಆಟ ಶುರುವಿಡುತ್ತಾರೆ.
ಇಲ್ಲಿನ ಕಥೆ ಅತ್ತ ಕರಾವಳಿ ತೀರದಲ್ಲಿಯೂ ಇತ್ತ ಮಲೆನಾಡ ಪ್ರದೇಶದಲ್ಲಿಯೂ ಪಯಣಿಸುತ್ತೆ. ಇದರ ನಡುವೆಯೇ ಒಂದು ಮರ್ಡರ್ ಮಿಸ್ಟರಿಯೂ ತೆರೆದುಕೊಳ್ಳುತ್ತೆ. ಒಟ್ಟಾರೆಯಾಗಿ ಪ್ರೀತಿ, ಅಮ್ಮನ ಸೆಂಟಿಮೆಂಟು, ಸಂಬಂಧಗಳ ತೊಳಲಾಟ… ಇದು ಮಾಮೂಲು ಅನ್ನಿಸಬಹುದಾದ ಸ್ಟೋರಿ ಲೈನ್. ಆದರೆ ಸ್ಕ್ರೀನ್ ಪ್ಲೇ ಜಾದೂ ಮೂಲಕವೇ ನಿರ್ದೇಶಕರು ಇದನ್ನು ಅಸಾಮಾನ್ಯವೆಂಬಂತೆ ಕಟ್ಟಿ ಕೊಡಲು ಪ್ರಯತ್ನಿಸಿದ್ದಾರೆ. ಒಂದು ಮಟ್ಟಿಗೆ ಜಯವನ್ನೂ ಸಾಧಿಸಿದ್ದಾರೆ. ಇಲ್ಲಿ ಟ್ವಿಸ್ಟುಗಳ ಸರಮಾಲೆಯೇ ಇದೆ. ಪ್ರೇಕ್ಷಕರು ಅಂದುಕೊಂಡಿದ್ದನ್ನೆಲ್ಲ ಅದಲು ಬದಲಾಗಿಸುತ್ತಾ ದೃಷ್ಯಗಳು ಕದಲುತ್ತವೆ. ಇಂಥಾ ಸಾಲು ಸಾಲು ಕ್ಯೂರಿಯಾಸಿಟಿಗಳ ನಡುವೆಯೂ ಮತ್ತೊಂದು ಟ್ವಿಸ್ಟಿನ ಮೂಲಕ ಕ್ಲೈಮ್ಯಾಕ್ಸ್ ಅನ್ನೂ ರೋಚಕವಾಗಿಯೇ ಕಟ್ಟಿ ಕೊಡಲಾಗಿದೆ. ಒಟ್ಟಾರೆಯಾಗಿ ಮೊದಲ ಪ್ರಯತ್ನದಲ್ಲಿಯೇ ಸಂದೀಪ್ ಜನಾರ್ಧನ್ ನಿರ್ದೇಶಕನಾಗಿ ಗಮನ ಸೆಳೆದಿದ್ದಾರೆ. ನಾಯಕ ರೋಹಿತ್ ಭಾನುಪ್ರಕಾಶ್, ನಾಯಕಿಯರಾದ ಪೂರ್ವಿ ಜೋಶಿ, ದಿವ್ಯಾ ಉರುಡಗ ಸೇರಿದಂತೆ ಎಲ್ಲ ಪಾತ್ರ ವರ್ಗವೂ ಕಾಡುವಂತಿದೆ. ಒಂದೊಳ್ಳೆ ಅನುಭವಕ್ಕಾಗಿ ಒಂದು ಸಾರಿ ನೋಡಲೇಬೇಕಾದ ಚಿತ್ರ ಫೇಸ್ ಟು ಫೇಸ್.