ಸಂದೀಪ್ ಜನಾರ್ಧನ್ ಫೇಸ್ ಟು ಫೇಸ್ ಚಿತ್ರ ನಿರ್ದೇಶನದ ಜೊತೆಗೆ ನಿರ್ಮಾಣದ ಭಾರವನ್ನೂ ಹೆಗಲಿಗೇರಿಸಿಕೊಂಡಿದ್ದಾರೆ. ಈ ಚಿತ್ರಕ್ಕೆ ಸಂದೀಪ್ ಅಮ್ಮ ಸುಮಿತ್ರಾ ಜನಾರ್ಧನ್ ಅವರೇ ನಿರ್ಮಾಪಕಿ. ಆದ್ದರಿಂದಲೇ ತನ್ನ ಕನಸಿಗೆ ಸಾಥ್ ನೀಡಿದ ಅಮ್ಮನ ಕೆಲಸವನ್ನು ತಾವೂ ಒಂದಷ್ಟು ಹೊತ್ತುಕೊಂಡಿದ್ದಾರೆ. ಹೀಗೆ ಎರಡೆರಡು ಜವಾಬ್ದಾರಿಯಿದ್ದರೂ ಅಂದುಕೊಂಡಂತೆಯೇ ರೂಪಿಸಿದ ಖುಷಿ ಅವರಲ್ಲಿದೆ. ಇದುವರೆಗೂ ಚಿತ್ರರಂಗದಲ್ಲಿ ಅವರು ಕಲಿತ ಪಾಠವೇ ಬೇರೆ. ಈ ಚಿತ್ರದಿಂದ ದಕ್ಕಿಸಿಕೊಂಡ ಅನುಭವಗಳೇ ಬೇರೆ. ಆದರೆ ಇದೆಲ್ಲದರಾಚೆಗೂ ಇಡೀ ಚಿತ್ರವನ್ನು ಅಂದುಕೊಂಡಂತೆಯೇ ನಿರ್ದೇಶನ ಮಾಡಿರೋ ತೃಪ್ತಿಯೊಂದು ಸಂದೀಪ್ ಅವರಲ್ಲಿದೆ.
ಸಾಮಾನ್ಯವಾಗಿ ಸ್ಕ್ರೀನ್ ಪ್ಲೇ ಪ್ರಧಾನ ಚಿತ್ರಗಳಲ್ಲಿ ಕಥೆಗೆ ಅಷ್ಟಾಗಿ ಒತ್ತು ಕೊಡೋದಿಲ್ಲ. ಆದ್ರೆ ಸಂದೀಪ್ ಕಂಟೆಂಟು ಹೊಂದಿರೋ ಮಜಬೂತಾದ ಕಥೆಯೊಂದಿಗೇ ಸ್ಕ್ರೀನ್ಪ್ಲೇ ಮ್ಯಾಜಿಕ್ ಮಾಡಿದ್ದಾರಂತೆ. ಅಡಿಗಡಿಗೂ ಅಚ್ಚರಿಗೀಡು ಮಾಡುತ್ತಾ, ನಿರೀಕ್ಷಿಸಲು ಸಾಧ್ಯವಾಗದ ತಿರುವುಗಳೊಂದಿಗೆ ಫೇಸ್ ಟು ಫೇಸ್ ಮೂಡಿ ಬಂದಿದೆಯಂತೆ. ಈ ಚಿತ್ರ ಇದೇ ಮಾರ್ಚ್ ೧೫ರಂದು ರಾಜ್ಯಾಧ್ಯಂತ ಬಿಡುಗಡೆಯಾಗಲಿದೆ.