ಕನ್ನಡಕ್ಕೆ ಸೇರ್ಪಡೆಗೊಳ್ಳುತ್ತಿರೋ ಹೊಸಾ ಆಲೋಚನೆಗಳನ್ನ ಹೊತ್ತುಕೊಂಡೇ ಯುವ ಬಳಗವೊಂದು ಅಡಿಯಿರಿಸಿದೆ. ಉಪೇಂದ್ರ ಗರಡಿಯಲ್ಲಿ ಕಸುಬು ಕಲಿತಿರೋ ಸಂದೀಪ್ ಜನಾರ್ಧನ್ ನಿರ್ದೇಶನದ ಫೇಸ್ ಟು ಫೇಸ್ ಇದೀಗ ಹಾಡುಗಳ ಹಿಮ್ಮೇಳದಲ್ಲಿ, ಒಂದೊಂದೇ ವಿಶೇಷತೆಗಳನ್ನು ಬಿಚ್ಚಿಡುತ್ತಾ ಬಿಡುಗಡೆಯ ಹಂತಕ್ಕೆ ಬಂದು ನಿಂತಿದೆ.
ಫೇಸ್ ಟು ಫೇಸ್ ಮೂಲಕ ರೋಹಿತ್ ಭಾನುಪ್ರಕಾಶ್ ಪೂರ್ಣ ಪ್ರಮಾಣದ ನಾಯಕನಾಗಿ ಬಂದಿದ್ದಾರೆ. ಈ ಹಿಂದೆ ದೃಷ್ಯ ಚಿತ್ರದಲ್ಲಿ ನೆಗೆಟಿವ್ ರೋಲ್ ಸೇರಿದಂತೆ ಒಂದಷ್ಟು ಚಿತ್ರಗಳಲ್ಲಿ ನಟಿಸಿದ್ದ ಹುಡುಗ ರೋಹಿತ್. ಪೂರ್ವಿ ಜೋಶಿ ಮತ್ತು ಹುಲಿರಾಯ ಖ್ಯಾತಿಯ ದಿವ್ಯಾ ಉರುಡಗ ನಾಯಕಿಯರಾಗಿ ನಟಿಸಿದ್ದಾರೆ. ವಿ. ನಾಗೇಂದ್ರ ಪ್ರಸಾದ್ ಮತ್ತು ಜಯಂತ್ ಕಾಯ್ಕಿಣಿ ಸಾಹಿತ್ಯವಿರೋ ಹಾಡುಗಳು ಈಗಾಗಲೇ ಜನಮನ ಸೆಳೆದುಕೊಂಡಿವೆ.
ಓರ್ವ ಹುಡುಗನ ಸುತ್ತ ನಡೆಯೋ ಥ್ರಿಲ್ಲರ್ ಕಥೆ ಹೊಂದಿರೋ ಫೇಸ್ ಟು ಫೇಸ್ ಕುಟುಂಬ ಸಮೇತರಾಗಿ ನೋಡಿ ಎಂಜಾಯ್ ಮಾಡುವಂಥಾ ಚಿತ್ರ. ಪ್ರೀತಿ, ಕಾಮಿಡಿ, ರೋಚಕ ಟ್ವಿಸ್ಟುಗಳನ್ನು ಹೊಂದಿರೋ ಈ ಚಿತ್ರವನ್ನು ನಿರ್ದೇಶನ ಮಾಡಿರುವ ಸಂದೀಪ್ ಜನಾರ್ಧನ್ ರಿಯಲ್ ಸ್ಟಾರ್ ಉಪೇಂದ್ರರ ಶಿಷ್ಯ. ಸೂಪರ್, ಟೋಪಿವಾಲಾ, ಉಪ್ಪಿ ೨ ಮುಂತಾದ ಚಿತ್ರಗಳಿಗವರು ನಿರ್ದೇಶನ ವಿಭಾಗದಲ್ಲಿ ಸಾಥ್ ನೀಡಿದ್ದರು. ಅಂಥಾ ಅಗಾಧ ಅನುಭವಗಳೊಂದಿಗೆ ನವೀನ ಕಥೆಯೊಂದರ ಮೂಲಕ ಸಂದೀಪ್ ಸ್ವತಂತ್ರ ನಿರ್ದೇಶಕರಾಗಿದ್ದಾರೆ.
ಕಾಲೇಜು ದಿನಗಳಲ್ಲಿಯೇ ನಿರ್ದೇಶಕನಾಗ ಬೇಕೆಂಬ ಕನಸು ಹೊತ್ತುಕೊಂಡಿದ್ದವರು ಸಂದೀಪ್. ಆರಂಭದಲ್ಲಿಯೇ ಅವರನ್ನು ಸೆಳೆದಿದ್ದು, ರೋಲ್ ಮಾಡೆಲ್ ಅನ್ನಿಸಿದ್ದದ್ದು ರಿಯಲ್ ಸ್ಟಾರ್ ಉಪೇಂದ್ರ. ಹೇಗಾದರೂ ಮಾಡಿ ಉಪ್ಪಿ ಬಳಗ ಸೇರಿಕೊಂಡು ನಿರ್ದೇಶನದ ಕಲೆ ಕರಗತ ಮಾಡಿಕೊಳ್ಳಬೇಕೆಂಬ ಇರಾದೆ ಅವರದ್ದಾಗಿತ್ತು. ಹೇಗೋ ಹರಸಾಹಸ ಪಟ್ಟು ಅದರಲ್ಲಿ ಯಶ ಕಂಡ ಸಂದೀಪ್ ವರ್ಷಾಂತರಗಳ ಕಾಲ ಉಪೇಂದ್ರ ಜೊತೆಗೆ ಹಲವಾರು ಚಿತ್ರಗಳಿಗೆ ನಿರ್ದೇಶನ ವಿಭಾಗದಲ್ಲಿ ಕಾರ್ಯ ನಿರ್ವಹಿಸಿದ್ದರು.
ಈ ಚಿತ್ರಕ್ಕೆ ಸುಮಿತ್ರಾ ಜನಾರ್ಧನ್ ನಿರ್ಮಾಪಕಿಯಾಗಿದ್ದಾರೆ. ಇವರು ಸಂದೀಪ್ ಅವರ ತಾಯಿ. ಚುಇಕ್ಕಂದಿನಿಂದಲೂ ಮಗನ ಸಿನಿಮಾ ಪ್ರೀತಿಯನ್ನು ಕಂಡು ಪ್ರೋತ್ಸಾಹಿಸುತ್ತಾ ಬಂದಿದ್ದ ಸುಮಿತ್ರಾ ನಿರ್ಮಾಪಕಿಯಾಗೋ ಮೂಲಕ ಜೊತೆಯಾಗಿದ್ದಾರೆ. ಇಂಥಾ ಬೆಂಬಲ, ಉಪ್ಪಿ ಜೊತೆ ಕಲಿತ ಕೆಲಸಗಳ ಬಲದಿಂದಲೇ ಒಂದೊಳ್ಳೆ ಚಿತ್ರ ರೂಪಿಸಿರೋ ತೃತ್ಪಿ ಸಂದೀಪ್ ಜನಾರ್ಧನ್ ಅವರದ್ದು.
#
No Comment! Be the first one.