ಅದೊಂದು ಫ್ಯಾಮಿಲಿ. ಗಂಡ, ಹೆಂಡತಿ, ಇಬ್ಬರು ಮಕ್ಕಳು. ಕೆಲಸ ಕಾರ್ಯ ಇಲ್ಲದೆ, ಹುಡುಗಿಯ ಹಿಂದೆ ತಿರುಗುವ ತಿರುಬೋಕಿ ಮಗ. ನೆಟ್ಟಗೆ ಇಂಗ್ಲಿಷು ಬರದಿದ್ದರೂ, ತಾನು ಮಾತಾಡಿದ್ದೇ ಭಾಷೆ ಅಂದುಕೊಂಡು ಕೆಲಸ ಹುಡುಕುವ ಮಗಳು. ಸಣ್ಣದೊಂದು ಹೊಟೇಲು ಆರಂಭಿಸುವ ಉದ್ದೇಶದಿಂದ ಹೆಣಗಾಡುವ ಕಿಲಾಡಿ ಮಮ್ಮಿ. ಈ ಮನೆಗೊಬ್ಬ ಕುಡುಕ ತಂದೆ. ಅಸಲಿಗೆ ಅವನು ಏನು ಕೆಲಸ ಮಾಡುತ್ತಿದ್ದಾನೆ ಅನ್ನೋದೇ ಉಳಿದ ಮೂವರಿಗೆ ಗೊತ್ತಿರೋದಿಲ್ಲ. ವಿಲಕ್ಷಣ, ವಿಚಿತ್ರ ಮತ್ತು ಸ್ವಾರ್ಥವನ್ನಷ್ಟೇ ಮುಖ್ಯವಾಗಿಸಿಕೊಂಡ ಕುಟುಂಬ. ಒಟ್ಟಾರೆಯಾಗಿ `ಕಿತ್ತೋದ ಫ್ಯಾಮಿಲಿ’ ಅನ್ನಿಸಿಕೊಳ್ಳುವ ಎಲ್ಲ ಲಕ್ಷಣವೂ ಅಲ್ಲಿರುತ್ತದೆ.
ತೀರಾ ಕೆಳ ಮಧ್ಯಮವರ್ಗದ ಕುಟುಂಬಗಳಲ್ಲಿ ವಿರಳವಾಗಿ ಇಂಥಾ ಕ್ಯಾರೆಕ್ಟರುಗಳು ಕಾಣಸಿಗುತ್ತವೆ. ಅವರವರ ಲಾಭ, ಹಣಗಳಿಕೆ ಅವರವರಿಗೆ ಮುಖ್ಯವಾಗಿರುತ್ತದೆ. ಫ್ಯಾಮಿಲಿ, ಸೆಂಟಿಮೆಂಟು ಅನ್ನೋದಕ್ಕೆ ಜಾಗವೇ ಇರೋದಿಲ್ಲ. ಏನಾದರೂ ಮಾಡಿ ಬದುಕು ರೂಪಿಸಿಕೊಳ್ಳಬೇಕು ಅಂತಷ್ಟೇ ಯೋಚಿಸಿ ಮಾಡಬಾರದ ಕೆಲಸಗಳಿಗೆ ಕೈಯಿಟ್ಟು, ಯಾತನೆ ಅನುಭವಿಸುತ್ತಾರೆ. ಫ್ಯಾಮಿಲಿ ಡ್ರಾಮ ಅಂಥದ್ದೊಂದು ಕಥೆಯನ್ನು ಡಾರ್ಕ್ ಕಾಮಿಡಿ ರೂಪದಲ್ಲಿ ಸವಿವರವಾಗಿ ಬಿಡಿಸಿಟ್ಟಿದೆ.
ಕಡುಗಷ್ಟವನ್ನೇ ಹೊದ್ದು ಮಲಗಿದ್ದ ಫ್ಯಾಮಿಲಿಯ ಮುಂದೆ ಒಬ್ಬ ಡಾನ್ ನನ್ನು ಮುಗಿಸುವ ಟಾಸ್ಕ್ ಏರ್ಪಡುತ್ತದೆ. ಅಪ್ಪ ನಡುಮಧ್ಯದಲ್ಲಿ ತೀರಿಕೊಂಡಿರುತ್ತಾನೆ. ಉಳಿದ ಮೂವರಲ್ಲಿ ಡಾನ್ ಅನ್ನು ಯಾರು ಮುಗಿಸುತ್ತಾರೆ? ಯಾರ ಕೈಗೆ ಹಣ ಸೇರುತ್ತದೆ? ಅಸಲಿಗೆ ಆ ಡಾನ್ ಯಾರು? ಮನೆಯ ಯಜಮಾನ ಯಾಕೆ ಸತ್ತಿರುತ್ತಾನೆ? ಎಂಬಿತ್ಯಾದಿಗಳೆಲ್ಲಾ ಪ್ರಶ್ನೆಗಳಿಗೆ ಉತ್ತರಿಸುವ ಚಿತ್ರ ಫ್ಯಾಮಿಲಿ ಡ್ರಾಮ!
ನಿರ್ದೇಶಕ ಆಕರ್ಷ್ ಏನು ಮಾಡಿದ್ದಾರೋ ಇಲ್ಲವೋ? ಪಾತ್ರಗಳ ಆಯ್ಕೆ ಮಾತ್ರ ಸೂಪರಾಗಿದೆ. ಒಬ್ಬರನ್ನು ಮೀರಿಸುವಂತೆ ಮತ್ತೊಬ್ಬರು ನಟಿಸಿದ್ದಾರೆ. ಅಭಯ್, ಅನನ್ಯಾ ಅಮರ್, ರೇಖಾ ಉತ್ತಮ ಅಭಿನಯ ನೀಡಿದ್ದಾರೆ. ಸಿಂಧು ಶ್ರೀನಿವಾಸ್ ಮೂರ್ತಿ ಎನ್ನುವ ನಟಿ ಕನ್ನಡಕ್ಕೆ ವರವಾಗುವ ಎಲ್ಲ ಸಾಧ್ಯತೆ ಇದೆ. ಪೂರ್ಣಚಂದ್ರ ಮೈಸೂರು ಪಾತ್ರನಿರ್ವಹಣೆ ನೋಡಿದರೆ ವಿಜಯ್ ಸೇತುಪತಿ ನೆನಪಾಗುತ್ತಾರೆ. ದ್ವಿತೀಯಾರ್ಧವನ್ನು ನೋಡಿಸಿಕೊಂಡು ಹೋಗುವಂತೆ ಕಟ್ಟಿರುವ ನಿರ್ದೇಶಕರು ಮೊದಲ ಭಾಗವನ್ನು ಯಾಕೆ ಅಷ್ಟು ಅಧ್ವಾನ ಮಾಡಿದ್ದಾರೋ ಗೊತ್ತಿಲ್ಲ.
ದ್ವಿತೀಯ ಭಾಗದಲ್ಲಿ ಪೂರ್ಣಚಂದ್ರ ಮೈಸೂರು ಎಂಟ್ರಿಕೊಟ್ಟ ನಂತರವಷ್ಟೇ ಕಥೆ ಒಂದಿಷ್ಟು ಟ್ವಿಸ್ಟು ಟರ್ನುಗಳನ್ನು ಕಾಣೋದು. ದ್ವಿತೀಯ ಭಾಗ ನಿಜಕ್ಕೂ ಒಂದಿಷ್ಟು ಮಜಾ ಕೊಡುವ ಸನ್ನಿವೇಷಗಳನ್ನು ಹೊಂದಿದೆ. ನಾಟಕೀಯತೆ, ತಮಾಷೆಯನ್ನೆ ಗಮನದಲ್ಲಿರಿಸಿಕೊಂಡು ರೂಪಿಸಿರುವ ಸಿನಿಮಾ ಇದಾಗಿರುವುದರಿಂದ ಲಾಜಿಕ್ಕು ಹುಡುಕಲು ಹೋಗಬಾರದು. ಲಘುಹಾಸ್ಯವನ್ನು ಇಷ್ಟಪಡುವ ಮಂದಿ ಕೂತು ನೋಡಬಹುದಾದ ಸಿನಿಮಾ ಫ್ಯಾಮಿಲಿ ಡ್ರಾಮಾ!
No Comment! Be the first one.