ಕಾಮಿಡಿ ಜಾನರಿನ ಸಿನಿಮಾ ಮಾಡಿ ಗೆಲ್ಲುವುದು ಸಿಕ್ಕಾಪಟ್ಟೆ ಕಷ್ಟ. ಆದರೆ ಸಂಕಷ್ಟಕರ ಗಣಪತಿ ಸಿನಿಮಾದ ನಿರ್ದೇಶಕ ಮತ್ತು ಹೀರೋ ಸಲೀಸಾಗಿ ಅದನ್ನು ಸಾಧ್ಯವಾಗಿಸಿದ್ದರು. ಈಗ ಅದೇ ಯಶಸ್ವೀ ಜೋಡಿಯ ಮತ್ತೊಂದು ಚಿತ್ರ ತಯಾರಾಗುತ್ತಿದೆ. ಸಿನಿಮಾದ ಹೆಸರೇ ಫ್ಯಾಮಿಲಿ ಪ್ಯಾಕ್! ಈ ಚಿತ್ರವನ್ನು ಪುನೀತ್ ರಾಜ್ ಕುಮಾರ್ ಅವರ ಪಿ.ಆರ್.ಕೆ. ಸಂಸ್ಥೆ ನಿರ್ಮಿಸುತ್ತಿದೆ. ಅಶ್ವಿನಿ ಪುನೀತ್ ರಾಜಕುಮಾರ್, ಲಿಖಿತ್ ಶೆಟ್ಟಿ ಹಾಗೂ ದೇಶ್ ರಾಜ್ ರೈ ಈ ಚಿತ್ರದ ನಿರ್ಮಾಪಕರು.

ಈ ಹಿಂದೆ ಸಂಕಷ್ಟಕರ ಗಣಪತಿ ಚಿತ್ರವನ್ನು ನಿರ್ದೇಶಿಸಿದ್ದ ಅರ್ಜುನ್ ಕುಮಾರ್ ಎಸ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.  ಸಂಕಷ್ಟಕರ ಗಣಪತಿ ಚಿತ್ರದ ನಾಯಕ ಲಿಖಿತ್ ಶೆಟ್ಟಿ ಈ ಚಿತ್ರದಲ್ಲೂ ನಾಯಕನಾಗಿ ಅಭಿನಯಿಸುತ್ತಿದ್ದಾರೆ. ಅಮೃತ ಅಯ್ಯಂಗಾರ್ ನಾಯಕಿಯಾಗಿ ನಟಿಸಲಿರುವ ಈ ಚಿತ್ರದ ಚಿತ್ರೀಕರಣ ಸದ್ಯದಲ್ಲೇ ಆರಂಭವಾಗಲಿದೆ. ರಂಗಾಯಣ ರಘು, ಅಚ್ಯುತಕುಮಾರ್, ತಿಲಕ್, ಅಶ್ವಿನಿ ಗೌಡ, ನಾಗಭೂಷಣ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಗುರುಕಿರಣ್ ಈ ಚಿತ್ರಕ್ಕೆ ಸಂಗೀತ ನೀಡುತ್ತಿದ್ದು, ಕನ್ನಡದ ಹೆಸರಾಂತ ಡೈಲಾಗ್ ರೈಟರ್ ಮಾಸ್ತಿ ಸಂಭಾಷಣೆ ಬರೆಯುತ್ತಿದ್ದಾರೆ.

ಅರ್ಜುನ್ ಕುಮಾರ್ ಪ್ರತಿಭಾವಂತ ನಿರ್ದೇಶಕ ಅನ್ನೋದಕ್ಕೆ ಅವರ ಮೊದಲ ಸಿನಿಮಾ ಸಂಕಷ್ಟಕರ ಗಣಪತಿ ಚಿತ್ರ ಸಾಕ್ಷಿಯಾಗಿದೆ. ಈಗಾಗಲೇ ಆನ್‌ಲೈನ್’ನಲ್ಲೂ ಈ ಚಿತ್ರ ಬಿಡುಗಡೆಯಾಗಿದ್ದು, ಅಪಾರ ವೀಕ್ಷಕರನ್ನು ಪಡೆದಿದೆ. ಏಲಿಯನ್ ಹ್ಯಾಂಡ್ ಸಿಂಡ್ರೋಮ್ ಕುರಿತ ಈ ಚಿತ್ರದಲ್ಲಿ ಲಿಖಿತ್ ಕೂಡಾ ಅಷ್ಟೇ ತನ್ಮಯರಾಗಿ ನಟಿಸಿದ್ದರು. ಹೇಳಿದ ಮಾತು ಕೇಳದ ಎಡಗೈ, ಅದರಿಂದ ಸೃಷ್ಟಿಯಾಗುವ ಯಡವಟ್ಟುಗಳೇ ಆ ಚಿತ್ರದ ಕಥಾವಸ್ತುವಾಗಿತ್ತು. ಈ ಬಾರಿ ಫ್ಯಾಮಿಲಿ ಪ್ಯಾಕ್ ಕೂಡಾ ಚೆಂದದ ಕಥೆಯ ಜೊತೆಗೆ ಎಲ್ಲರನ್ನೂ ನಕ್ಕು ನಲಿಸುವ ಕಂಟೆಂಟ್ ಹೊಂದಿದೆ. ಈ ಚಿತ್ರದಲ್ಲಿ ಬರುವ ಒಂದೊಂದು ಪಾತ್ರದ್ದೂ ಒಂದೊಂದು ಕಥೆಯಂತೆ. ಈ ಚಿತ್ರದ ಮೂಲಕ ಲಿಖಿತ್ ಮತ್ತು ಅರ್ಜುನ್ ಎರಡನೇ ಬಾರಿಗೆ ಒಂದಾಗಿರುವುದು, ಪಿ.ಆರ್.ಕೆ. ಸಂಸ್ಥೆ ಕೈ ಜೋಡಿಸಿರುವುದು ಎಲ್ಲವೂ ಆರಂಭಿಕ ಗೆಲುವನ್ನು ಸೂಚಿಸುತ್ತಿದೆ.

CG ARUN

ಎಂಥಾ ಕಥೆಯ ಎಂಥಾ ಹಾಡು ಮಾರಾಯ!

Previous article

ಉಚ್ಚಾಟನೆಯ ಹುಚ್ಚಾಟ!

Next article

You may also like

Comments

Leave a reply

Your email address will not be published. Required fields are marked *