ಈಗಾಗಲೇ ಆಗಸ್ಟ್ 9ರಂದು ಕುರುಕ್ಷೇತ್ರ ಬಿಡುಗಡೆಗೊಂಡು ಬಾಕ್ಸ್ ಆಫೀಸಿನಲ್ಲಿ ಕೊಳೆಹೊಡೆಯುತ್ತಿದೆ. ಮುಂದಿನ ತಿಂಗಳು ಪೈಲ್ವಾನ್ ಹಾಗೂ ಅವನೇ ಶ್ರೀಮನ್ನಾರಾಯಣ ಸಿನಿಮಾಗಳು ಬಿಡುಗಡೆಯಾಗುವ ಸಾಧ್ಯತೆ ಇದೆ. ಬಹುನಿರೀಕ್ಷಿತ ಸಿನಿಮಾಗಳ ಮಧ್ಯೆ ಸದ್ಯ ಹೊಸಬರ ಫ್ಯಾನ್ ಸಿನಿಮಾ ಬಿಡುಗಡೆಯಾಗಲಿದ್ದು, ಇತ್ತೀಚಿಗಷ್ಟೇ ಚಿತ್ರದ ಟೀಸರ್ ಬಿಡುಗಡೆ ಮಾಡಿಕೊಂಡಿದೆ.
ಇದೇ ವಿಚಾರವನ್ನೇ ಫೋಕಸ್ ಮಾಡಿ ಮಾತನಾಡಿದ ನಿರ್ದೇಶಕ ದರ್ಶಿತ್ ಭಟ್, ಆಗಸ್ಟ್ 24ರಂದು ಫ್ಯಾನ್ ಸಿನಿಮಾ ಬಿಡುಗಡೆಯಾಗಲಿದ್ದು, ಎರಡು ದೊಡ್ಡ ಸಿನಿಮಾಗಳ ನಡುವಿನಲ್ಲಿ ನಿಮ್ಮ ಚಿತ್ರವನ್ನು ಬಿಡುಗಡೆ ಮಾಡಲು ಹೋಗಬೇಡಿ. ನಿಮ್ಮ ಸಿನಿಮಾ ಕಳೆದುಹೋಗುವ ಸಾಧ್ಯತೆ ಇದೆ ಎಂದು ಕೆಲವರು ನಮ್ಮ ಬಳಿ ಎಚ್ಚರಿಕೆಯ ಮಾತು ಕೂಡ ಆಡಿದ್ದರು. ಆದರೂ, ತಮ್ಮ ಸಿನಿಮಾ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ ದರ್ಶಿತ್ ‘ಒಳ್ಳೆಯ ಹೂರಣದ ಸಿನಿಮಾಗಳನ್ನು ಕನ್ನಡದ ಜನ ಯಾವತ್ತೂ ಕೈಬಿಟ್ಟಿಲ್ಲ. ಬಾಹುಬಲಿಯಂತಹ ಅದ್ದೂರಿ ಚಿತ್ರ ತೆರೆಯ ಮೇಲಿದ್ದ ಸಮಯದಲ್ಲೇ, ರಂಗಿತರಂಗ ಸಿನಿಮಾವನ್ನು ಜನ ಗೆಲ್ಲಿಸಿದ್ದಾರೆ. ನಮ್ಮದು ಕೂಡ ಒಳ್ಳೆಯ ಹೂರಣ ಇರುವ ಚಿತ್ರ’ ಎಂದು ಭರವಸೆಯ ಮಾತುಗಳನ್ನಾಡಿದ್ದಾರೆ. ಆರ್ಯನ್ ಮತ್ತು ಅದ್ವಿತಿ ಶೆಟ್ಟಿ ಮುಖ್ಯ ಭೂಮಿಕೆಯಲ್ಲಿರುವ ಈ ಚಿತ್ರಕ್ಕೆ ಎಸ್ ಎಲ್ ಎನ್ ಸಿನಿಮಾಸ್ ಬ್ಯಾನರ್ ನಲ್ಲಿ ಶಶಿಕಿರಣ್ ಬಂಡವಾಳ ಹೂಡಿದ್ದಾರೆ.