ಪೈಲ್ವಾನ್ ಪೈರಸಿ ವಿಚಾರದ ಅಸಲೀ ಸತ್ಯ ಇಲ್ಲಿದೆ!

ಇಂದು ಸಿಸಿಬಿ ಪೊಲೀಸರು ರಾಕೇಶ್ ವಿರಾಟ್ ಎನ್ನುವ ದರ್ಶನ್ ಅಭಿಮಾನಿಯನ್ನು ಬಂಧಿಸಿದ್ದರ ಹಿನ್ನೆಲೆಯಲ್ಲಿ ಕನ್ನಡ ಚಿತ್ರರಂಗದಲ್ಲಿ ಭೂಕಂಪವಾಗುವಂತಾ ವಾತಾವರಣ ನಿರ್ಮಾಣವಾಗಿದೆ.
“ನಾನು ಹಾಗೂ ನನ್ನ ಸ್ನೇಹಿತರು ಕೈಗೆ ಹಾಕಿರುವುದು ಖಡಗ. ಬಳೆ ಅಲ್ಲ. ನನಗೆ ನನ್ನ ಸಿನಿಮಾ ಬಿಟ್ಟರೆ ಬೇರೇನೂ ಗೊತ್ತಿಲ್ಲ. ನನ್ನ ಮೌನ, ನನ್ನ ತಾಳ್ಮೆ, ಎರಡನ್ನೂ ಪರೀಕ್ಷಿಸಿದ್ದಾರೆ. ಸಂಪೂರ್ಣ ಪೈಲ್ವಾನ್ ತಂಡದ ಶ್ರಮವನ್ನು ಹಾಳುಮಾಡಲು ತಮ್ಮ ಶಕ್ತಿಯನ್ನು ಹಾಕಿದ್ದಾರೆ. ಇದರ ಹಿಂದಿರುವ ವ್ಯಕ್ತಿಗಳ ನೆಮ್ಮದಿಯ ನಿದ್ರೆ, ಇನ್ನು ಕೆಲವು ದಿನಗಳು ಮಾತ್ರ” ಅಂತಾ ಕಿಚ್ಚ ಸುದೀಪ ಟ್ವೀಟ್ ಮಾಡಿದ್ದಾರೆ. ಹಾಗೆಂದು ‘ಕಿಚ್ಚನ ಸಮರ ದರ್ಶನ್ ವಿರುದ್ಧ’ ಅಂತಾ ಒಂದೇ ಏಟಿಗೆ ಅರ್ಥ ಮಾಡಿಕೊಳ್ಳೋದು ತಪ್ಪು. ದರ್ಶನ್ ಅನುಭವೀ ನಟ, ಮೇಲಾಗಿ ಸೂಪರ್ ಸ್ಟಾರ್. ಬೇರೊಬ್ಬ ನಟನ ಸಿನಿಮಾವನ್ನು ಪೈರಸಿ ಮಾಡಿಸುವ ಹಂತಕ್ಕೆ ಯಾವ ಕಾರಣಕ್ಕೂ ಹೋಗುವವರಲ್ಲ. ಒಂದು ಸಿನಿಮಾ ತಯಾರಾಗಿ, ಅದು ಬಿಡುಗಡೆಯಾಗುವಷ್ಟರಲ್ಲಿ ಏನೆಲ್ಲಾ ಯಾತನೆ ಅನುಭವಿಸಬೇಕು ಅನ್ನೋದು ನೂರು ಕೋಟಿಯ ಒಡೆಯ, ಬಾಕ್ಸಾಫೀಸ್ ಸುಲ್ತಾನ್ಗೆ ಗೊತ್ತಿಲ್ಲದೇ ಇರುತ್ತದಾ? ಇಷ್ಟಕ್ಕೂ ಅಂತಾ ಕೀಳುಮಟ್ಟದ ಚಿಂತನೆಯನ್ನಾದರೂ ದರ್ಶನ್ ಯಾಕೆ ಮಾಡಿಯಾರು? ಮೇಲಾಗಿ ಇದೇ ದರ್ಶನ್ ಅವರ ಯಜಮಾನ ಸಿನಿಮಾ ಕೂಡಾ ಇದೇ ರೀತಿ ಪೈರಸಿಯಾಗಿದೆ.

ಇವತ್ತು ದರ್ಶನ್ ಅಭಿಮಾನಿ ಎಂದು ಹೇಳಲಾಗುತ್ತಿರುವ ವಿರಾಟ್ ರಾಕೇಶ್ ಪೈರಸಿಯಾಗಿದ್ದ ಸಿನಿಮಾದ ಲಿಂಕ್’ಅನ್ನು ಫೇಸ್ಬುಕ್ ಇತ್ಯಾದಿ ಕಡೆ ಶೇರ್ ಮಾಡಿದ್ದಾನಷ್ಟೇ. ಅದು ಪೈರಸಿಗೆ ಕುಮ್ಮಕ್ಕು ನೀಡೋದರಿಂದ ಅಪರಾಧ ಅಂತಲೇ ಪರಿಗಣಿಸಬೇಕು. ಆದರೆ ಆತನೇ ಪೈರಸಿ ಮಾಡಿದ್ದಾನೆ ಎನ್ನುವಂತೆ ಹಬ್ಬುತ್ತಿರುವ ಸುದ್ದಿ ಮಾತ್ರ ಸುಳ್ಳು. ಈ ವಿಚಾರ ಕಿಚ್ಚ ಸುದೀಪ್’ಗೇನೂ ಗೊತ್ತಿಲ್ಲದೇ ಇಲ್ಲ. ಅವರು ಪೈರಸಿ ಮಾಡಿಸಿರುವ ದುಷ್ಟ ಶಕ್ತಿಗಳ ವಿರುದ್ಧ ಸಮರ ಸಾರುವ ಮಾತಾಡಿದ್ದಾರೆ ಹೊರತು ಅದು ದರ್ಶನ್ ಮತ್ತು ಅವರ ಬೆಂಬಲಿಗರ ಮೇಲೆ ಅನ್ನೋದು ತಪ್ಪು ಗ್ರಹಿಕೆ.

ರಾಕರ್ಸ್ ರಗಳೆ!
ಭಾರತದಲ್ಲಿ ಯಾವುದೇ ಸ್ಟಾರ್ ಸಿನಿಮಾ ರಿಲೀಸಾದರೂ ಅದು ಮೊದಲ ಶೋ ಮುಗಿಯೋಹೊತ್ತಿಗೆ ಪೈರಸಿ ಆಗಿ ಆನ್ಲೈನಿನಲ್ಲಿ ರಾರಾಜಿಸುತ್ತದೆ. ‘ತಮಿಳ್ ರಾಕರ್ಸ್’ ಎನ್ನುವ ಸಿನಿಮಾ ಭಯೋತ್ಪಾದಕರು ಸ್ಟಾರ್ ಸಿನಿಮಾಗಳು ಬಿಡುಗಡೆಯಾದ ತಕ್ಷಣ ಇಂಥಾ ಹೇಲು ತಿನ್ನುವ ಕೆಲಸ ಮಾಡಿ, ಕೋಟಿಗಟ್ಟಲೆ ಹಣ ಸುರಿದು ಸಿನಿಮಾ ಮಾಡಿದ ನಿರ್ಮಾಪಕರು, ಕನಸಿಟ್ಟು ನಿರ್ದೇಶಿಸಿದವರು, ಶ್ರಮಿಸಿದ ನಟರು, ತಂತ್ರಜ್ಞರ ಆದಿಯಾಗಿ ಇಡೀ ಚಿತ್ರರಂಗದ ಬಾಯಿಗೆ ಮಣ್ಣು ಹಾಕುವ ಕೆಲಸವನ್ನು ನಿಯತ್ತಿನಿಂದ ಮಾಡಿಕೊಂಡು ಬರುತ್ತಿದ್ದಾರೆ. ಕನ್ನಡದ ನಟಸಾರ್ವಭೌಮ, ಯಜಮಾನ, ಕೆ.ಜಿ.ಎಫ್. ಸೇರಿದಂತೆ ಸಾಕಷ್ಟು ಸಿನಿಮಾಗಳನ್ನು ಇದೇ ತಮಿಳ್ ರಾಕರ್ಸ್ ಮತ್ತು ತಿರುಟ್ಟು ವಿಸಿಡಿ ಡಾಟ್ ಕಾಮ್ ಪೈರಸಿ ಮಾಡಿ ಅಪ್ಲೋಡ್ ಮಾಡಿತ್ತು. ಈಗ ಕನ್ನಡ ಚಿತ್ರಗಳು ಸಹಾ ಪ್ಯಾನ್ ಇಂಡಿಯಾ ರಿಲೀಸಾಗುತ್ತಿರುವುದರಿಂದ ಪೈರಸಿ ವೆಬ್ ಸೈಟುಗಳು ಕಣ್ಣಿಟ್ಟಿವೆ. ಈ ಸಮಸ್ಯೆಯನ್ನು ತಮಿಳು, ಹಿಂದಿ ಮತ್ತು ತೆಲುಗು ಚಿತ್ರಗಳು ಬಹಳ ಹಿಂದಿನಿಂದ ಅನುಭವಿಸುತ್ತಲೇ ಇವೆ. ಥಿಯೇಟರುಗಳಲ್ಲಿ ಕದ್ದು ಮುಚ್ಚಿ ಸಿನಿಮಾಗಳನ್ನು ಚಿತ್ರೀಕರಿಸಿ ಅದರ ಡೇಟವನ್ನು ಡಂಪ್ ಮಾಡಿಸಿಕೊಂಡು ಮಲೇಶಿಯಾ, ಶ್ರೀಲಂಕಾ ಮುಂತಾದ ಕಡೆ ಕೂತು ಈ ತಮಿಳು ರ್ಯಾಕರ್ಸ್ ಸಿನಿಮಾಗಳನ್ನು ಅಪ್ ಲೋಡ್ ಮಾಡುತ್ತಾರೆ ಎನ್ನುವ ಮಾತಿದೆ. ತಮಿಳಿನಿ ಸೂರ್ಯ, ವಿಕ್ರಂ, ವಿಜಯ್, ಅಜಿತ್, ರಜನಿಕಾಂತ್ ಮತ್ತು ಕಮಲ್ ಹಾಸನ್ರ ಸಿನಿಮಾಗಳು ಬಿಡುಗಡೆಯಾಗಿ ಮೂರು ಗಂಟೆಯೊಳಗೆ ಈ ವೆಬ್ ಸೈಟುಗಳು ಲೈವ್ ಮಾಡಿಬಿಡುತ್ತವೆ. ಅಲ್ಲೂ ಕೆಲವೊಮ್ಮೆ ಹೀರೋಗಳ ಅಭಿಮಾನಿಗಳು ವಿರೋಧಿ ನಟನ ಮೇಲೆ ಆರೋಪ ಹೊರಿಸಿ ಬಡಿದಾಡಿದ್ದೂ ಇದೆ.

ಈ ಮಾಫಿಯಾದ ಹಿಂದೆ ಮುಂಬೈ ಅಂಡರ್ವರ್ಲ್ಡ್ನಿಂದ ಹಿಡಿದು ತಮಿಳುನಾಡಿನ ಭೂಗತ ಪಾತಕಿಗಳು, ರಾಜಕಾರಣಿಗಳ ತನಕ ಕೈವಾಡವಿದೆ ಎನ್ನುವ ಗುಮಾನಿಯಿದೆ. ಇನ್ನು ಕೆಲವರ ಪ್ರಕಾರ ಐಟಿ ಇಂಜಿನಿಯರುಗಳ ತಂಡವೊಂದು ಹೀಗೆ ಪೈರಸಿ ಸಿನಿಮಾಗಳನ್ನು ಅಪ್ಲೋಡ್ ಮಾಡುತ್ತವೆ. ಇದನ್ನು ಯಾರು ಎಲ್ಲಿಂದ ಅಪ್ಲೋಡ್ ಮಾಡಿದರು ಅಂತಾ ತಿಳಿಯೋದಕ್ಕೆ ಐಪಿ ಅಡ್ರಸ್ ಕೂಡಾ ಸಿಗೋದಿಲ್ಲವಂತೆ. ಭಾರತದ ಸೈಬರ್ ಕ್ರೈಂ ಪೊಲೀಸರು ಇದರ ಜಾಲವನ್ನು ಕಂಡುಹಿಡಿಯುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ.

ಇವರ ಹಾವಳಿಯನ್ನು ತಪ್ಪಿಸಲು ಪಕ್ಕದ ರಾಜ್ಯಗಳ ಚಿತ್ರರಂಗದ ಘಟಾನುಘಟಿಗಳು ವರ್ಷಾನುಗಟ್ಟಲೆಯಿಂದ ತಲೆಕೆಡಿಸಿಕೊಂಡು ಕುಂತಿದ್ದರೆ, ಇಲ್ಲಿ ದರ್ಶನ್ನ ಕೆಲವು ಅಂಧಾಭಿಮಾನಿಗಳು ಪೈಲ್ವಾನ್ ಚಿತ್ರದ ಪೈರಸಿ ವಿಡಿಯೋದ ಲಿಂಕ್ ಅನ್ನು ಫೇಸ್ ಬುಕ್ಕಲ್ಲಿ ಹಾಕಿದರು ಅನ್ನೋ ಒಂದೇ ನೆಪವನ್ನಿಟ್ಟುಕೊಂಡು ಸುದೀಪ್ ಅಭಿಮಾನಿಗಳು ಇದು ದರ್ಶನ್ ಅಭಿಮಾನಿಗಳ ಕುತುಂತ್ರ ಅಂತಾ ಸುಖಾಸುಮ್ಮನೆ ಅರಚಾಡಿಬಿಟ್ಟಿದ್ದರು. ಸಿಸಿಬಿ ಪೊಲೀಸರು ಪೈರಸಿ ಲಿಂಕ್ ಶೇರ್ ಮಾಡಿದ ಅಪರಾಧದ ಮೇಲೆ ರಾಕೇಶ್ ವಿರಾಟ್ ಎಂಬ ಕಮಂಗಿಯನ್ನು ಬಂಧಿಸಿದ್ದಾರೆ. ಅವನು ಯಾರ ಅಭಿಮಾನಿಯೇ ಆಗಿದ್ದರೂ ರಾಕೇಶ ಮಾಡಿರೋದು ಮಣ್ಣು ತಿನ್ನುವ ಕೆಲಸವೇ. ಅದನ್ನು ಯಾರೂ ಕ್ಷಮಿಸಬಾರದು. ಒಂದು ವೇಳೆ ಆತ ದರ್ಶನ್ ಅಭಿಮಾನಿ ಸಂಘದ ಸದಸ್ಯನೇ ಆಗಿದ್ದರೂ ಆತನನ್ನು ಮಕ್ಕುಗಿದು ಹೊರಗಟ್ಟಬೇಕು.

ಅಭಿಮಾನಿಗಳಲ್ಲಿ ಮನವಿ!
ಎಲ್ಲೋ ಕೆಲವು ದರ್ಶನ್ ಅಭಿಮಾನಿಗಳು ತಿರಾ ದುಡುಕು ಕೆಲಸಕ್ಕೆ ಕೈಯಿಡುತ್ತಾರೆ. ನಾವೊಂದು ವರದಿ ಪ್ರಕಟಿಸಿದರೂ ಅದನ್ನು ಪೂರ್ಣ ಓದಿ, ಅರ್ಥ ಮಾಡಿಕೊಳ್ಳದ ಆತುರದ ಹುಡುಗರು ಅವಾಚ್ಯ ಶಬ್ದಗಳನ್ನು ಬಳಸಿ ಕಮೆಂಟು ಮಾಡುತ್ತಾರೆ. ಸೈಬರ್ ಪೊಲೀಸರಿಗೆ ದೂರು ನೀಡಿದರೆ ಗುಮ್ಮಿಸಿಕೊಳ್ಳಬೇಕು ಎನ್ನುವ ಕನಿಷ್ಠ ಜ್ಞಾನವೂ ಇವಕ್ಕಿಲ್ಲ. ಹಾಗಂತ ಎಲ್ಲರನ್ನೂ ಅದೇ ತಕ್ಕಡಿಗೆ ಹಾಕಲಾಗದು. ತೀರಾ ನಯ-ವಿನಯ, ಅಭಿಮಾನ, ಗೌರವ ಹೊಂದಿರುವ ಶಿಷ್ಠ ನಡವಳಿಕೆಯ ಎಣಿಸಲಾಗದಷ್ಟು ಹುಡುಗರು ದರ್ಶನ್ ಅಭಿಮಾನಿಗಳಾಗಿದ್ದಾರೆ. ಅಂಥವರ ಬಗ್ಗೆ ನಮಗೆ ಯಾವತ್ತಿಗೂ ಗೌರವವಿದೆ.
ಯಾವ ನಟನ ಅಭಿಮಾನಿಯೇ ಆಗಲಿ ಮಾಧ್ಯಮದ ವರದಿಗಳ ವಿರುದ್ಧ ಕೆಟ್ಟ ಪದಗಳನ್ನು ಬಳಸಿ ಮಾಡುವ ಪ್ರತಿಕ್ರಿಯೆ ತಪ್ಪು. ಅದು ದರ್ಶನ್ ಅಭಿಮಾನಿಗಳಾಗಿರಬಹುದು, ಕಿಚ್ಚನ ಫ್ಯಾನುಗಳಾಗಿರಬಹುದು. ಮತ್ಯಾರೇ ಆಗಿರಬಹುದು!